ತಂಬಾಕು ಮುಕ್ತ ಗ್ರಾಮಗಳನ್ನಾಗಿಸೋಣ: ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಆಗಸ್ಟ್ 24:
ತಂಬಾಕು ಮುಕ್ತ ಗ್ರಾಮಗಳನ್ನಾಗಿ ಮಾಡಲು ಚಿತ್ರದುರ್ಗ ತಾಲ್ಲೂಕಿನ ಮಳಲಿ ಮತ್ತು ಕಲ್ಲೇನಹಳ್ಳಿ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಈ ಗ್ರಾಮಗಳನ್ನು ತಂಬಾಕು ಮುಕ್ತವನ್ನಾಗಿಸೋಣ ಎಂದು ಚಿತ್ರದುರ್ಗ ತಾಲ್ಲೂಕು ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ ತಿಳಿಸಿದರು.

ನಗರದ  ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ನಡೆದ  ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ತಾಲ್ಲೂಕು ಮಟ್ಟದ ತಂಬಾಕು ನಿಯಂತ್ರಣ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.
ವಾರಕ್ಕೊಮ್ಮೆ ಅಂದರೆ 1 ತಿಂಗಳಿಗೆ 4 ಬಾರಿ ತಂಬಾಕು ದಾಳಿ ಮಾಡಬೇಕು. ತಂಬಾಕು ದಾಳಿ ಮಾಡುವಾಗ ಸದಸ್ಯರು ಗುಂಪು ಗುಂಪಾಗಿ ಹೋಗಿ ದಾಳಿ ನಡೆಸಬೇಕು. ಒಬ್ಬರು ಇಬ್ಬರು ಹೋಗುವುದರಿಂದ ಯಾವುದೇ ಪ್ರಯೋಜನಾಗುವುದಿಲ್ಲ. ತಂಬಾಕು ಮುಕ್ತದ ಬಗ್ಗೆ ಮೊದಲು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಗ್ರಾಮಗಳನ್ನು ತಂಬಾಕು ಮುಕ್ತ ಮಾಡಬೇಕು ಎಂಬುದು ಮೊದಲು ಜನರ ಮನಸ್ಸಿನಲ್ಲಿ ಬರಬೇಕು ಎಂದು ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಬಿ.ವಿ.ಗಿರೀಶ್, ತಾಲ್ಲೂಕಿನಾದ್ಯಂತ ತಂಬಾಕು ದಾಳಿ ನಡೆದ ಪ್ರಕರಣ ನಡೆದ ವರದಿಯನ್ನು ಸಭೆಗೆ ಮಂಡಿಸುತ್ತಾ ತಾಲ್ಲೂಕಿನಲ್ಲಿ ಒಟ್ಟು ಏಪ್ರಿಲ್‍ನಿಂದ ಜುಲೈವರೆಗೆ 22 ಪ್ರಕರಣಗಳನ್ನು ದಾಖಲಿಸಿ ರೂ.2,250/- ದಂಡ ವಸೂಲಿ ಮಾಡಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂದರು. ತಂಬಾಕು ದಾಳಿ ನಡೆಯುವ ಸಮಯದಲ್ಲಿ ತಾಲ್ಲೂಕು ಮಟ್ಟದ ಎಲ್ಲಾ  ಸದಸ್ಯರು ಭಾಗವಹಿಸುವಂತೆ ತಿಳಿಸಿದರು.
ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ.ಪ್ರಭುದೇವ್ ಸಭೆಗೆ ಮಾಹಿತಿ ನೀಡುತ್ತಾ ತಂಬಾಕು ಮುಕ್ತ ಹಳ್ಳಿಗಳನ್ನಾಗಿಸಲು ಗ್ರಾಮಗಳಲ್ಲಿನ ಗ್ರಾಮಸ್ಥರಿಗೆ, ಅಂಗಡಿಯವರಿಗೆ ಅರಿವು ಮೂಡಿಸಬೇಕು. ನಿರಂತರವಾಗಿ ಕಾರ್ಯಕ್ರಮಗಳ ಮಾಡುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬಹುದು. ಮನೆ ಮನೆಗೆ ಹೋಗಿ ಮಾಹಿತಿ ನೀಡಿ, ಜಾಗೃತಿ ಕರಪತ್ರಗಳನ್ನು ನೀಡುವುದರ ಮೂಲಕ ಮನವೊಲಿಸಬೇಕು. ತಂಬಾಕು ಮುಕ್ತ ಗ್ರಾಮದ ಚಟುವಟಿಕೆಗಳ ಬಗ್ಗೆ ಮೇಲ್ವಿಚಾರಣೆ ಮಾಡಲು ಮತ್ತು ಸುಸ್ಥಿರಗೊಳಿಸಲು 10 ಸದಸ್ಯರನ್ನೊಳಗೊಂಡ ತಂಬಾಕು ನಿಯಂತ್ರಣ ಸಮಿತಿ ರಚಿಸಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕ  ಸ್ಥಳಗಳಲ್ಲಿ  ಧೂಮಪಾನ ಮಾಡದಂತೆ ನಿಯಂತ್ರಿಸಲು ಎಲ್ಲಾ ಅಂಗಡಿಗಳ ಮುಂದೆ ಬೋರ್ಡ್‍ಗಳನ್ನು ಹಾಕಲು ಸೂಚಿಸಲಾಗಿದೆ. ಒಂದು ವೇಳೆ ಬೋರ್ಡ್ ಹಾಕಿಲ್ಲದ ಪಕ್ಷದಲ್ಲಿ ರೂ. 100 ರಿಂದ ರೂ.200 ರವರೆಗೆ ದಂಡ ವಿಧಿಸಲಾಗುವುದು. ಹಾಗೇ ತಂಬಾಕು  ಉತ್ಪನ್ನಗಳ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಜಾಹೀರಾತು ಮಾಡುವ ಹಾಗಿಲ್ಲ. ಜಾಹೀರಾತು ಮಾಡಿದರೆ ಎಫ್‍ಐಆರ್ ಹಾಕಲಾಗುವುದು ಎಂದು ತಿಳಿಸಿದರು.
ತಂಬಾಕು ಉತ್ಪನ್ನಗಳು ಅಪ್ರಾಪ್ತ ವಯಸ್ಕರಿಗೆ ಸಿಗದಂತೆ ನಿಯಂತ್ರಿಸಬೇಕು ಮತ್ತು 18 ವರ್ಷದೊಳಗಿನವರಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ ಎಂಬ ಬೋರ್ಡ್ ಹಾಕುವಂತೆ ಸೂಚಿಸಲಾಗಿದೆ. ಬೋರ್ಡ್ ಹಾಕದಿದ್ದಲ್ಲಿ ರೂ.200 ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ 100 ಗಜದ ಒಳಗೆ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ. ಒಂದು ವೇಳೆ ಮಾರಾಟ ಮಾಡಿದರೆ ರೂ.200 ದಂಡ ವಿಧಿಸಲಾಗುವುದು. ಶಿಕ್ಷಣ ಸಂಸ್ಥೆಗಳ 100 ಯಾರ್ಡ್ ಒಳಗಡೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಶಿಕ್ಷಣ ಸಂಸ್ಥೆಗಳು ನಿಯಂತ್ರಣ ಮಾಡಬೇಕು. ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಮೇಲೆ ನಿರ್ದಿಷ್ಟವಾದ ಆರೋಗ್ಯ ಎಚ್ಚರಿಕೆಗಳ ಸಂದೇಶಗಳಿಲ್ಲದೆ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಕೇಂದ್ರ ಸರ್ಕಾರ ಪ್ರತಿ 2 ವರ್ಷಕೊಮ್ಮೆ ಚಿತ್ರವನ್ನು ಬದಲಾವಣೆ ಮಾಡುತ್ತದೆ. ಅದೇ ಸಂದೇಶವಿರುವ ಚಿತ್ರವನ್ನು ಉತ್ಪನ್ನಗಳ ಮೇಲೆ ಹಾಕಬೇಕು ಎಂದು ತಿಳಿಸಿದರು.
ತಂಬಾಕು ತನಿಖಾ ದಳವು 2022ರ ಏಪ್ರಿಲ್‍ನಿಂದ ಜುಲೈವರೆಗೆ  ಚಿತ್ರದುರ್ಗ ನಗರದಲ್ಲಿ 35 ಪ್ರಕರಣಗಳನ್ನು ದಾಖಲಿಸಿ ರೂ.3750 ದಂಡವನ್ನು ವಿಧಿಸಲಾಗಿದೆ ಹಾಗೂ 12 ಶಾಲಾ-ಕಾಲೇಜುಗಳಲ್ಲಿ  ತಂಬಾಕು ನಿಯಂತ್ರಣ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್,  ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್, ತಾಲ್ಲೂಕು ಯೋಜನಾಧಿಕಾರಿ ರಾಘವೇಂದ್ರ,  ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಸಮಾಜ ಸೇವಕ ಕೆ.ಎಂ.ತಿಪ್ಪೇಸ್ವಾಮಿ, ಸಹಾಯಕ ಶಿಕ್ಷಣಾಧಿಕಾರಿ ಇನಾಯತ್, ಎಎಸ್‍ಐ ದಯಾನಂದ ರೆಡ್ಡಿ, ಕಾರ್ಮಿಕ ನಿರೀಕ್ಷಕರಾದ ಡಿ. ರಾಜಣ್ಣ, ಸಿಡಿಪಿಒ ಕಚೇರಿಯ ಮೇಲ್ವಿಚಾರಕಾರದ ರೂಪಲಕ್ಷ್ಮೀ ಇದ್ದರು.

[t4b-ticker]

You May Also Like

More From Author

+ There are no comments

Add yours