ಈ ವರ್ಷದಿಂದಲೇ ಮೆಡಿಕಲ್ ಕಾಲೇಜು ಪ್ರಾರಂಭಕ್ಕೆ ಕ್ರಮ- ಡಿ. ಸುಧಾಕರ್

 

 

 

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಜೂನ್.23:
ಚಿತ್ರದುರ್ಗದಲ್ಲಿ ಇದೇ ವರ್ಷದಿಂದಲೇ ಸರ್ಕಾರಿ ಮೆಡಿಕಲ್ ಕಾಲೇಜಿನ ಮೊದಲ ವರ್ಷದ ಬೋಧನಾ ಕಾರ್ಯ ಪ್ರಾರಂಭಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಸಿದ್ಧತಾ ಕ್ರಮಗಳನ್ನು ಪ್ರಾರಂಭಿಸುವಂತೆ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾದ ಈ ಸಾಲಿನ ಮೊದಲ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಿತ್ರದುರ್ಗದಲ್ಲಿ ಈ ವರ್ಷ ಮೆಡಿಕಲ್ ಕಾಲೇಜು ಪ್ರಾರಂಭಕ್ಕೆ ಅನುಮತಿ ದೊರೆತಿದ್ದು, ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಬೋಧನೆಗಾಗಿ ತಾತ್ಕಾಲಿಕವಾಗಿ ಸ್ಥಳಾವಕಾಶ ಬೇಕಾಗಿದೆ.  ಇದಕ್ಕಾಗಿ ಚಿತ್ರದುರ್ಗ ಬಳಿಯ ಜಿ.ಆರ್. ಹಳ್ಳಿ ಸಮೀಪದ ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿನ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಬೋಧನಾ ಕಾರ್ಯ ಪ್ರಾರಂಭಕ್ಕೆ ಅನುಮತಿ ಕೋರಲಾಗಿದ್ದು, ವಿವಿ ಕುಲಪತಿಗಳಿಂದ ಅನುಮತಿ ದೊರೆತಿಲ್ಲ.  ಮೆಡಿಕಲ್ ಕಾಲೇಜಿಗೆ ಕನಿಷ್ಟ 80 ತಜ್ಞ ವೈದ್ಯರು ಹಾಗೂ ಸಿಬ್ಬಂದಿ ನೇಮಕಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದು ಆರ್ಥಿಕ ಇಲಾಖೆಯಲ್ಲಿ ಉಳಿದಿದೆ, ಅಲ್ಲದೆ ಆಡಳಿತಾತ್ಮಕ ಕಾರ್ಯ ನಿರ್ವಹಣೆಗೂ ಅನುದಾನ ಸರ್ಕಾರದಿಂದ ಬಿಡುಗಡ ಆಗಬೇಕಿದೆ ಎಂದು ಮೆಡಿಕಲ್ ಕಾಲೇಜಿನ ವಿಶೇಷಾಧಿಕಾರಿ ಸಭೆಗೆ ಮಾಹಿತಿ ನೀಡಿದರು.  ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಉತ್ತರಿಸಿ, ವಿವಿ ಯ ಪಿ.ಜಿ. ಸೆಂಟರ್‍ನಲ್ಲಿ ಎರಡು ಬ್ಲಾಕ್ ಗಳಿದ್ದು, ಈ ಪೈಕಿ ವಿವಿ ಅವರು ಒಂದು ಬ್ಲಾಕ್ ಅನ್ನು ಒದಗಿಸಿದಲ್ಲಿ, ತಾತ್ಕಾಲಿಕವಾಗಿ ಇದೇ ಕಟ್ಟಡದಲ್ಲಿ ಮೊದಲ ವರ್ಷದ ಎಂಬಿಬಿಎಸ್ ಪ್ರಾರಂಭಕ್ಕೆ ಅನುಕೂಲವಾಗಲಿದೆ ಎಂದರು.  ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ವರ್ಷವೇ ಮೆಡಿಕಲ್ ಕಾಲೇಜು ಪ್ರಾರಂಭಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು.  ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆ ಸಚಿವರು ಹಾಗೂ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಮಾತನಾಡಿ, ಅಗತ್ಯ ಅನುಮತಿ ಹಾಗೂ ಅನುದಾನ ಬಿಡುಗಡೆಗೆ ಕ್ರಮ ವಹಿಸಲಾಗುವುದು.  ಒಟ್ಟಾರೆ ಇದೇ ವರ್ಷದಿಂದಲೇ ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭಕ್ಕೆ ಎಲ್ಲ ಯತ್ನ ಮಾಡಲಾಗುವುದು, ಅಧಿಕಾರಿಗಳು ಈ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.
ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು. ಅರ್ಹ ಬಡವರನ್ನು ಗುರುತಿಸಿ, ಸರ್ಕಾರದ ಯೋಜನೆಗಳನ್ನು ತಲುಪಿಸಬೇಕು. ಬಡವರ ಪರವಾದ ಕಾರ್ಯಕ್ರಮಗಳಿಗೆ ಸಹಕಾರ ಕೊಡಬೇಕು. ಯಾವುದೇ ಕಾರಣಕ್ಕೂ ಅಧಿಕಾರಿಗಳ ಅಸಡ್ಡೆ ಹಾಗೂ ಭ್ರಷ್ಠಾಚಾರ ಸಹಿಸುವುದಿಲ್ಲ.  ಜನರ ತೆರಿಗೆ ಹಣದಿಂದ ಸರ್ಕಾರದ ಸೌಲಭ್ಯ ಪಡೆಯುತ್ತಿದ್ದು, ಅದಕ್ಕೆ ನ್ಯಾಯ ಕೊಡುವ ಕೆಲಸ ಆಗಬೇಕು ಎಂದು ಸಚಿವರು ಸೂಚನೆ ನೀಡಿದರು.

 

 

[t4b-ticker]

You May Also Like

More From Author

+ There are no comments

Add yours