ಮಹಿಳೆ ಸ್ವಾವಲಂಬಿಯಾಗಿ ತನ್ನ ಬದುಕು ಕಟ್ಟಿಕೊಳ್ಳಬೇಕು: ಎನ್‌.ಸುಧಾ

 

ಚಿತ್ರದುರ್ಗ: ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಎರಡನೆ ಸ್ಥಾನ ನೀಡಲಾಗಿದೆ ಎಂದು ಇನ್ನೊಬ್ಬರನ್ನು ದೂಷಿಸುವ ಬದಲು ಮಹಿಳೆ ಸ್ವಾವಲಂಭಿಯಾಗಿ ಬದುಕುವ ಮೂಲಕ ತನ್ನ ಏಳಿಗೆಯನ್ನು ತಾನೆ ಕಂಡುಕೊಳ್ಳಬೇಕು ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ಎನ್‌. ಸುಧಾ  ಕರೆ ನೀಡಿದರು.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬಜ್ ಇಂಡಿಯಾ ಸಂಸ್ಥೆ ವತಿಯಿಂದ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಬಜ್ ಹಬ್ಬ ಹಾಗೂ ಗೆಳತಿಯರ ಸಮಾಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸ್ವ-ಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ಅನೇಕ ರೀತಿಯ ತರಬೇತಿಗಳನ್ನು ನೀಡಿ ಸ್ವ-ಉದ್ಯೋಗ ಕಲ್ಪಿಸಲಾಗುತ್ತಿದೆ. ಮಹಿಳಾ ಸಬಲೀಕರಣವೆಂದು ಬೊಬ್ಬೆ ಹಾಕುವ ಬದಲು ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗುವ ಮೂಲಕ ಮಹಿಳೆ ಕೂಡ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸಾಮಾಜಿಕ ಪಿಡುಗುಗಳು ಮಹಿಳೆಯರ ಅಭಿವೃದ್ದಿಗೆ ಅಡ್ಡಿಯಾಗುತ್ತಿವೆ. ಎಲ್ಲವನ್ನು ನಿವಾರಿಸಿಕೊಂಡು ಮಹಿಳೆ ಮುಂದೆ ಬರಬೇಕು. ಬಜ್ ಇಂಡಿಯಾ ಸಂಸ್ಥೆ ಮಹಿಳೆಯರ ಸರ್ವತೋಮುಖ ಅಭಿವೃದ್ದಿಯಲ್ಲಿ ತೊಡಗಿಕೊಂಡಿರುವುದು ಸಂತೋಷದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಮಾಜಿಕ ಕಾರ್ಯಕರ್ತೆ ಶಶಿಕಲ ರವಿಶಂಕರ್ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡುತ್ತ ಮಹಿಳೆ ತಾಯಿಯಾಗಿ, ಸಹೋದರಿಯಾಗಿ, ಪತ್ನಿಯಾಗಿ, ಸ್ನೇಹಿತೆಯಾಗಿ ನಿಜ ಜೀವನದಲ್ಲಿ ಎಲ್ಲಾ ರೀತಿಯ ಜವಾಬ್ದಾರಿಗಳನ್ನು ಹೊರುತ್ತಾಳೆ. ಹೆಣ್ಣು-ಗಂಡೆಂಬ ತಾರತಮ್ಯವಿಲ್ಲದೆ ಇಬ್ಬರು ಸಮಾನವಾಗಿ ದುಡಿದಾಗ ಮಾತ್ರ ಅಭಿವೃದ್ದಿ ಹೊಂದಲು ಸಾಧ್ಯ ಎಂದು ಹೇಳಿದರು.
ಕೆನರಾ ಬ್ಯಾಂಕ್‍ನ ಫೈನಾನ್ಷಿಯಲ್ ಕೌನ್ಸಲರ್ ತಿಪ್ಪೇಸ್ವಾಮಿ ಮಾತನಾಡಿ ಪ್ರತಿ ಮಹಿಳೆಯು ತನ್ನ ದುಡಿಮೆಯಲ್ಲಿ ಇಂತಿಷ್ಟು ಹಣವನ್ನು ಉಳಿತಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಅತಿಯಾಗಿ ದುಂದು ವೆಚ್ಚಗಳನ್ನು ಮಾಡುವ ಬದಲು ಬ್ಯಾಂಕಿನಲ್ಲಿಟ್ಟು ಉಳಿತಾಯ ಮಾಡಿದಾಗ ಕಷ್ಟ ಕಾಲಕ್ಕೆ ಉಪಯೋಗವಾಗಲಿದೆ. ಬ್ಯಾಂಕಿನಲ್ಲಿ ಸಿಗುವ ಸಾಮಾನ್ಯ ಯೋಜನೆಗಳು, ಉತ್ಪಾದಕ ಸಾಲಗಳು, ವಿಮೆ, ಪಿಂಚಣಿ ಹಾಗೂ ಇನ್ನಿತರೆ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ವಿಂಡ್ ವಲ್ರ್ಡ್ ಲಿಮಿಟೆಡ್‍ನ ಡಿ.ಜಿ.ಎಂ. ರಾಘವೇಂದ್ರ ಮಾತನಾಡುತ್ತ ಗಂಡು ಮತ್ತು ಹೆಣ್ಣು ಬೇರೆಯಲ್ಲ. ಇಬ್ಬರು ಸಮಾನರು. ದುಡಿಮೆಯಲ್ಲಿ ಬರುವ ಆದಾಯದಲ್ಲಿ ಖರ್ಚುಗಳನ್ನು ನಿಭಾಯಿಸಿ ಹೆಚ್ಚಿನ ಪ್ರಮಾಣದಲ್ಲಿ ಉಳಿತಾಯ ಮಾಡಬೇಕು ಎಂದು ತಿಳಿಸಿದರು.
ಎಲ್ ಅಂಡ್ ಡಿ ಮ್ಯಾನೇಜರ್ ಬಜ್ ವುಮೆನ್ ಬೆಂಗಳೂರಿನ ಸಿದ್ದಾರೂಢ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಗೆಳತಿಯರು ಪ್ರತಿದಿನವೂ ತಮ್ಮ ತಮ್ಮ ಹಳ್ಳಿಗಳಲ್ಲಿ ಬಜ್ ಸಂಸ್ಥೆಯಿಂದ ನಡೆಯುವ ವೃತ್ತ ಸಭೆ, ಸ್ಪೂರ್ತಿ ಸಭೆ, ಜೇನುಗೂಡು ಸಭೆ, ಹಸಿರು ತರಬೇತಿಗಳು, ವ್ಯಾಪಾರ ತರಬೇತಿಗಳಲ್ಲಿ ಪಾಲ್ಗೊಂಡು ಮಾಹಿತಿ ಪಡೆದುಕೊಂಡು ಸ್ವ-ಉದ್ಯೋಗದ ಮೂಲಕ ಬದುಕು ಕಟ್ಟಿಕೊಳ್ಳುವಂತೆ ಹೇಳಿದರು.
ಬಜ್ ಇಂಡಿಯಾ ಸಂಸ್ಥೆ ಚಿತ್ರದುರ್ಗ ಜಿಲ್ಲಾ ಕಾರ್ಯಾಚರಣೆ ವ್ಯವಸ್ಥಾಪಕ ನಾಗಭೂಷಣ್ ಎಂ. ಹಾಗೂ ಸಿಬ್ಬಂದಿಗಳು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಗೆಳತಿಯರ ಸಮಾಗಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶ್ರೀಮತಿ ಸುಧಾ ಮತ್ತು ಶಿವಲಿಂಗಮ್ಮ ಪ್ರಾರ್ಥಿಸಿದರು. ಸುಧಾ ಡಿ. ಸ್ವಾಗತಿಸಿದರು. ಕು.ಪವಿತ್ರ ವಂದಿಸಿದರು. ಕು.ಮಮತ ಕೆ. ನಿರೂಪಿಸಿದರು.

[t4b-ticker]

You May Also Like

More From Author

+ There are no comments

Add yours