ಗಣಿತ ವಿಷಯ ಬೋಧನೆ ಆಸಕ್ತಿದಾಯಕವಾಗಿರಲಿ -ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ  

 

 

 

 

ಚಿತ್ರದುರ್ಗ(ಕರ್ನಾಟಕ ವಾರ್ತೆ)ಜುಲೈ.26:
ಗಣಿತ ವಿಷಯದಲ್ಲಿ ನಿಖರತೆ ಹೆಚ್ಚು. ಯಾವುದೇ ಗೊಂದಲಗಳಿಗೆ ಅವಕಾಶ ನೀಡದೇ ವಿದ್ಯಾರ್ಥಿಗಳು ಉತ್ತರಿಸಬೇಕು. ಪ್ರೌಢ ಶಾಲಾ ಹಂತದ ಮಕ್ಕಳಿಗೆ ಗಣಿತ ವಿಷಯದಲ್ಲಿ ಆಸಕ್ತಿ ಮೂಡುವಂತೆ ಶಿಕ್ಷಕರು ಬೋಧನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಗರದ ತರಾಸು ರಂಗಮಂದಿರದಲ್ಲಿ ಬುಧವಾರ ಪ್ರೌಢಶಾಲಾ ಶಿಕ್ಷಕರಿಗಾಗಿ ಆಯೋಜಿಸಲಾಗಿದ್ದ ಗಣಿತ ಶಿಕ್ಷಕರ ಜಿಲ್ಲಾ ಮಟ್ಟದ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಗಣಿತ ವಿಷಯ ಕಾರ್ಯಗಾರವನ್ನು ಥಿಯೋಡರ್ ಸರ್ಕಲ್ ರಚನಾ ಕ್ರಮವನ್ನು ಪರಿಹರಿಸುವ ಮೂಲಕ ಹಾಗೂ ಪೈಥಾಗೋರಸ್ ಪ್ರಮೇಯದ ಪ್ರಾತ್ಯಕ್ಷತೆ ಕೈಗೊಳ್ಳುವ ಮೂಲಕ ಉದ್ಘಾಟಿಸಿರುವುದು ಹೆಚ್ಚು ಅರ್ಥಪೂರ್ಣವಾಗಿದೆ. ಕಳೆದ ವರ್ಷದಲ್ಲಿ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಗಣಿತ ವಿಷಯದಲ್ಲಿ ಚಿತ್ರದುರ್ಗ ಜಿಲ್ಲೆಯ ಮಕ್ಕಳು ಉತ್ತಮ ಸಾಧನೆ ತೋರಿದ್ದಾರೆ. ಇದರ ಫಲವಾಗಿ ಜಿಲ್ಲೆ ಗಣಿತ ವಿಷಯದಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಹಾಗೂ ಒಟ್ಟಾರೆ ಪಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಲಭಿಸಿದೆ. ಇದಕ್ಕೆ ಶ್ರಮಿಸಿದ ಎಲ್ಲಾ ಗಣಿತ ಹಾಗೂ ವಿಜ್ಞಾನ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು.
ಈ ಬಾರಿ ಗಣಿತ ಶಿಕ್ಷಕರು ಸವಾಲು ಸ್ವೀಕರಿಸಿ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಲು ಪ್ರಯತ್ನಿಸಬೇಕು. ಶಿಕ್ಷಣ ಇಲಾಖೆ ಅಧಿಕಾರಿಗಳೂ ಈ ಬಾರಿಯ ಫಲಿತಾಂಶದ ಬಗ್ಗೆ ಹೆಚ್ಚಿನ ಸಂತಸಪಟ್ಟು ಮೈಮರೆಯದೇ, ಮುಂದಿನ ಬಾರಿಯೂ ಉತ್ತಮ ಸಾಧನೆ ತೋರಲು ಸದಾ ಜಾಗೃತರಾಗಿ ಕಾರ್ಯ ನಿರ್ವಹಿಸಬೇಕು. ದೇಶದಲ್ಲಿ ಸಾಂಪ್ರದಾಯಕವಾಗಿ ಗಣಿತ ಬೋಧಿಸುವ ಕ್ರಮ ಬೆಳದು ಬಂದಿದೆ. ಇಲ್ಲಿನ ಮಕ್ಕಳು ಕ್ಯಾಲ್ಯುಕಲೇಟರ್‍ಗಳಿಗೆ ಅಂಟಿಕೊಳ್ಳದೇ ಗಣಿತ ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯ ಪಡೆದಿದ್ದಾರೆ. ಇಂದಿನ ತಂತ್ರಜ್ಞಾನವನ್ನು ಸಹ ಬಳಸಿ  ಗಣಿತ ಶಿಕ್ಷಣ ಬೋಧನೆಯನ್ನು ಇನ್ನಷ್ಟು ಪರಿಣಾಕಾರಿಯಾಗುವಂತೆ ಬೋಧಿಸಬೇಕು ಎಂದು ಹೇಳಿದರು.
ಕಾರ್ಯಗಾರದಲ್ಲಿ ಶಿಕ್ಷಣ ಇಲಾಖೆ ಹೊರತಂದಿರುವ ಸಂಭ್ರಮ, ಸುಪ್ರಭ ಹಾಗೂ ವಿನೋದ ಗಣಿತ ಕೈಪಿಡಿಗಳನ್ನು ಬಿಡುಗಡೆಗೊಳಿಸಲಾಯಿತು.  ಮೈಸೂರು ಜಿಲ್ಲೆಯಿಂದ ಆಗಮಿಸಿದ ಗಣಿತ ಶಿಕ್ಷಕರಾದ ಹರ್ಷ ಹಾಗೂ ಸತೀಶ್ ಗಣಿತ ಕಾರ್ಯಗಾರವನ್ನು ನಡೆಸಿಕೊಟ್ಟರು.
ಉದ್ಘಾಟನಾ ಸಮಾರಂಭದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ, ಹಿರಿಯೂರು ಕ್ಷೇತ್ರಶಿಕ್ಷಣಾಧಿಕಾರಿ ನಾಗಭೂಷಣ್, ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ, ತಿಪ್ಪೇಸ್ವಾಮಿ, ವಿಷಯ ಪರಿವೀಕ್ಷಕರಾದ ಸವಿತಾ, ಗೋವಿಂದ, ಚಂದ್ರು, ಬಸವಣ್ಣ ಓಲೆಕಾರ, ಶಿಕ್ಷಕರ ಸಂಘದ ಅಧ್ಯಕ್ಷ ಶಿವಣ್ಣ ಸೇರಿದಂತೆ ಇತರರು ಇದ್ದರು.
[t4b-ticker]

You May Also Like

More From Author

+ There are no comments

Add yours