ಅಪಘಾತ ವಲಯಗಳಲ್ಲಿ ಪರಿಹಾರ ಕಾರ್ಯ ತ್ವರಿತವಾಗಿ ಕೈಗೊಳ್ಳಲು ಸೂಚನೆ: ಡಿಸಿ ದಿವ್ಯಪ್ರಭು ಜಿ.ಆರ್.ಜೆ

 

ಚಿತ್ರದುರ್ಗ(ಕರ್ನಾಟಕ ವಾರ್ತೆ) ಜ. 30:
 ಜಿಲ್ಲೆಯಲ್ಲಿನ ಅಪಘಾತ ವಲಯಗಳಲ್ಲಿ, ಅಪಘಾತಗಳನ್ನು ತಡೆಗಟ್ಟಲು ಪರಿಹಾರ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾನಾಡಿದರು.
ಜಿಲ್ಲೆಯಾದ್ಯಂತ ಪದೇ ಪದೇ ಜರುಗುವ ಅಪಘಾತ ವಲಯಗಳಲ್ಲಿ ಅಪಘಾತ ನಿಯಂತ್ರಣಕ್ಕಾಗಿ ಕೆಲವೆಡೆ ತಾತ್ಕಾಲಿಕ ಕಾರ್ಯ ಹಾಗೂ ಇನ್ನು ಕೆಲವು ಕಡೆಗಳಲ್ಲಿ ಶಾಶ್ವತ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆಯನ್ನು ಈ ಹಿಂದೆ ನೀಡಲಾಗಿತ್ತು.  ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ತಮ್ಮ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವಲ್ಲಿಯೇ ಕಾಲಹರಣ ಮಾಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ತಾತ್ಕಾಲಿಕ ಕಾರ್ಯಗಳನ್ನು ಕೈಗೊಳ್ಳುವುದಕ್ಕೇ 09 ತಿಂಗಳು ತೆಗೆದುಕೊಳ್ಳುತ್ತಿರುವ ನೀವು, ಇನ್ನು ಶಾಶ್ವತ ಪರಿಹಾರ ಕಾರ್ಯಗಳನ್ನು ಯಾವಾಗ ಕೈಗೊಳ್ಳುತ್ತೀರಿ ಎಂದು ಎನ್.ಹೆಚ್. ಪ್ರಾಧಿಕಾರದ ಅಧಿಕಾರಿಗಳನ್ನು ಪ್ರಶ್ನಿಸಿದರು.
  ಜೆಎಂಐಟಿ ವೃತ್ತ, ಬಸವೇಶ್ವರ ಆಸ್ಪತ್ರೆ, ಡಾನ್‍ಬೋಸ್ಕೊ ಶಾಲೆ ಮುಂತಾದ ಕಡೆಗಳಲ್ಲಿ ಅಪಘಾತ ವಲಯ ಎಂದು ಗುರುತಿಸಲಾಗಿದ್ದು, ಇವುಗಳಿಗೆ ಇದುವರೆಗೂ ಪರಿಹಾರ ಕಾರ್ಯ ಕೈಗೊಳ್ಳದೇ ಇರುವುದಕ್ಕೆ ಜಿಲ್ಲಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.   ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಮಾತನಾಡಿ, ಜೆಎಂಐಟಿ ವೃತ್ತ ಬಳಿ ಕಾಲೇಜು ವಿದ್ಯಾರ್ಥಿಗಳು ಪ್ರಮುಖ ಹೆದ್ದಾರಿಯಲ್ಲಿ ಸಣ್ಣ ಜಾಗ ಮಾಡಿಕೊಂಡು, ಅಲ್ಲಿಂದಲೇ ರಸ್ತೆ ದಾಟುತ್ತಿದ್ದಾರೆ. ಇದು ಅಪಘಾತಕ್ಕೆ ಕಾರಣವಾಗುತ್ತದೆ.  ಹೀಗಾಗಿ ಇಲ್ಲಿ ವೃತ್ತ ಅಭಿವೃದ್ಧಿಪಡಿಸಿ ಸಿಗ್ನಲ್ ಲೈಟ್ ಅಳವಡಿಸಬೇಕಿದೆ.  ಈಗಾಗಲೆ ರಾ.ಹೆ. 04 ರಲ್ಲಿ ಬೈಪಾಸ್ ನಿರ್ಮಿಸಿರುವುದರಿಂದ ಬಹುತೇಕ ದೊಡ್ಡ ದೊಡ್ಡ ವಾಹನಗಳು ಬೈಪಾಸ್‍ನಲ್ಲಿ ಸಂಚರಿಸುತ್ತಿವೆ.  ಹೀಗಾಗಿ ಜೆಎಂಐಟಿ ವೃತ್ತದಿಂದ ಚಳ್ಳಕೆರೆ ಗೇಟ್ ವರೆಗೆ ನಗರದಲ್ಲಿ ಹಾದುಹೋಗಿರುವ ಹೆದ್ದಾರಿಯ ನಿರ್ವಹಣೆ ಹಾಗೂ ಪರಿಹಾರ ಕಾರ್ಯದ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದರು.  ಎನ್.ಹೆಚ್. ಪ್ರಾಧಿಕಾರದ ಅಧಿಕಾರಿ ರವಿತೇಜ ಪ್ರತಿಕ್ರಿಯಿಸಿ, ಬೈಪಾಸ್ ನಿರ್ಮಾಣವಾಗಿರುವುದರಿಂದ, ನಗರದಲ್ಲಿನ ಎನ್.ಹೆಚ್. ರಸ್ತೆಯನ್ನು ಡಿನೋಟಿಫೈ ಮಾಡಿ, ನಗರ ಸ್ಥಳೀಯ ಸಂಸ್ಥೆಗೆ ಹಸ್ತಾಂತರಿಸಲಾಗುತ್ತದೆ ಎಂದರು.  ಜಿಲ್ಲಾಧಿಕಾರಿಗಳು ಮಾತನಾಡಿ, ರಸ್ತೆ ಇನ್ನೂ ಸ್ಥಳೀಯ ಸಂಸ್ಥೆಗೆ ಹಸ್ತಾಂತರವಾಗಿಲ್ಲ, ಅಲ್ಲಿಯವರೆಗೂ ಈ ಮಾರ್ಗದಲ್ಲಿನ ಅಪಘಾತ ವಲಯ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ರಾ.ಹೆ. ಪ್ರಾಧಿಕಾರದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಯುಜಿಡಿ ಯಿಂದ ರಸ್ತೆಗಳಲ್ಲಿ ಉಬ್ಬು ತಗ್ಗುಗಳು :
*********** ನಗರದಾದ್ಯಂತ ಒಳಚರಂಡಿ ಕಾಮಗಾರಿ (ಯುಜಿಡಿ) ಕೈಗೊಂಡಿದ್ದು, ಆದರೆ ರಸ್ತೆಗಳನ್ನು ಮೊದಲಿನ ಸ್ಥಿತಿಗೆ ತರದೆ, ಅಲ್ಲಲ್ಲಿ ಉಬ್ಬು, ತಗ್ಗುಗಳು ನಿರ್ಮಾಣವಾಗಿವೆ, ಕೆಲವೆಡೆ ರಸ್ತೆ ಮಟ್ಟದಿಂದ 01 ಅಡಿ ಮೇಲೆ ಬಂದಿವೆ.  ನಗರದಲ್ಲಿ ಇಂತಹ 182 ಉಬ್ಬು ತಗ್ಗುಗಳನ್ನು ಗುರುತಿಸಲಾಗಿದ್ದು, ಇದರಿಂದ ವಾಹನ ಸವಾರರು ತೊಂದರೆ ಎದುರಿಸುತ್ತಿದ್ದಾರೆ ಎಂದು ಸಂಚಾರ ಠಾಣೆ ಪೊಲೀಸ್ ಅಧಿಕಾರಿ ರಾಜು ಅವರು ಸಭೆಯ ಗಮನಕ್ಕೆ ತಂದರು.  ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೂಡಲೆ ನಗರದಾದ್ಯಂತ ರಸ್ತೆಗಳನ್ನು ಪರಿಶೀಲಿಸಿ, ಯುಜಿಡಿ ಕಾಮಗಾರಿಯಿಂದ ರಸ್ತೆಯಲ್ಲಿ ಆಗಿರುವ ಉಬ್ಬು ತಗ್ಗು ಗಳನ್ನು ಒಂದು ತಿಂಗಳ ಒಳಗಾಗಿ ಸರಿಪಡಿಸುವಂತೆ ಸೂಚನೆ ನೀಡಿದರು.

ಆಟೋ ಸ್ಟ್ಯಾಂಡ್ ನಿರ್ಮಾಣ :
*******ನಗರದಲ್ಲಿ ಈ ಹಿಂದೆ ಒಟ್ಟು 31 ಆಟೋ ನಿಲ್ದಾಣಗಳನ್ನು ಗುರುತಿಸಲಾಗಿತ್ತು.  ಆದರೆ ಈಗ ಸ್ಥಳ ಪರಿಶೀಲಿಸಿದ ಸಂದರ್ಭದಲ್ಲಿ ಕೇವಲ 13 ಕಡೆ ಮಾತ್ರ ಆಟೋ ಸ್ಟ್ಯಾಂಡ್ ಉಳಿದಿವೆ.  ಆಟೋ ಚಾಲಕರು, ತಮಗೆ ಅನುಕೂಲವಾಗುವ ಕಡೆಗಳಲ್ಲಿ ತಾವೇ ಜಾಗ ಗುರುತಿಸಿಕೊಂಡು, ಅಲ್ಲಿ ನಿಲ್ಲಿಸಿಕೊಳ್ಳುತ್ತಿದ್ದಾರೆ.  ಆಟೋ ಸ್ಟ್ಯಾಂಡ್ ಸ್ಥಳ ನಿಗದಿ ಮಾಡುವಂತೆ ಆಟೋ ಚಾಲಕರು ಇತ್ತೀಚೆಗೆ ಬೇಡಿಕೆ ಸಲ್ಲಿಸಿದ್ದರು ಎಂದು ಸಂಚಾರ ಠಾಣೆ ಪೊಲೀಸ್ ಅಧಿಕಾರಿ ರಾಜು ಅವರು ಹೇಳಿದರು.  ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ನಗರದಲ್ಲಿ ಬಸ್ ತಂಗುದಾಣ, ಪಾರ್ಕಿಂಗ್ ವ್ಯವಸ್ಥೆ ಹಾಗೂ ಆಟೋ ಸ್ಟ್ಯಾಂಡ್ ಬಹುಮುಖ್ಯ ವಿಷಯವಾಗಿದ್ದು, ಈ ಬಗ್ಗೆ ಲೋಕೋಪಯೋಗಿ ಇಲಾಖೆ, ಪೊಲೀಸ್ ಹಾಗೂ ನಗರಸಭೆ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲಿಸಿ, ಸೂಕ್ತ ಸ್ಥಳಗಳ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಅಪಘಾತಕ್ಕೊಳಗಾದವರಿಗೆ ಸೂಕ್ತ ಚಿಕಿತ್ಸೆ ನೀಡಿ :
********** ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಹಲವು ಕಾರಣಗಳಿಂದಾಗಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ.  ಕಳೆದ ವರ್ಷ 373 ತೀವ್ರ ಅಪಘಾತ ಪ್ರಕರಣಗಳಾಗಿ 398 ಜನ ಸಾವನ್ನಪ್ಪಿದ್ದರು. ಈ ವರ್ಷ ಇದುವರೆಗೆ 396 ತೀವ್ರ ಅಪಘಾತಗಳಾಗಿದ್ದು, 415 ಸಾವು ಸಂಭವಿಸಿದೆ.  ಹೀಗಾಗಿ ಕಳೆದ ವರ್ಷಕ್ಕೆ ಹೋಲಿಸಿದಾಗ 17 ಸಾವು ಹೆಚ್ಚು ಸಂಭವಿಸಿವೆ.  ಅಪಘಾತ ಸಂಭವಿಸಿದ ಸಂದರ್ಭದಲ್ಲಿ 108 ಆಂಬುಲೆನ್ಸ್‍ಗಳು ತ್ವರಿತವಾಗಿ ಲಭ್ಯವಾದಲ್ಲಿ, ಹಾಗೂ ಆಸ್ಪತ್ರೆಗಳಲ್ಲಿ ವೈದ್ಯರು ಕಾಳಜಿ ವಹಿಸಿ ಚಿಕಿತ್ಸೆ ನೀಡಿದಲ್ಲಿ ಸಾವಿನ ಸಂಖ್ಯೆ ಕಡಿಮೆ ಮಾಡಬಹುದು.  ರಾಷ್ಟ್ರೀಯ ಹೆದ್ದಾರಿಯಲ್ಲಿನ ಭರಮಸಾಗರ, ಐಮಂಗಲ, ಜವಗೊಂಡನಹಳ್ಳಿ ಬಳಿಯ ಆಸ್ಪತ್ರೆಗಳಲ್ಲಿ 108 ಆಂಬುಲೆನ್ಸ್‍ಗಳು ಸದಾ ಲಭ್ಯವಿರುವಂತೆ ನೋಡಿಕೊಳ್ಳಬೇಕು.  ಅಪಘಾತ ಸಂಭವಿಸಿದಾಗ, ತ್ವರಿತವಾಗಿ ಸ್ಪಂದನೆಯಾಗಬೇಕು, ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ತುಸು ಹೆಚ್ಚಿನ ಕಾಳಜಿ ವಹಿಸಿ ಚಿಕಿತ್ಸೆ ಕೊಡಲು ವೈದ್ಯರು, ಶುಶ್ರೂಷಕರು ಮುಂದಾಗಬೇಕು, ಸಮಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರುವುದರಿಂದ, ಸಾಮಾನ್ಯ ರೋಗಿಗಳ ರೀತಿಯಲ್ಲಿಯೇ ಗಾಯಗೊಂಡವರನ್ನು ಕೂಡ ಪರಿಗಣಿಸದೆ, ಕೇವಲ ಬೇರೆ ಆಸ್ಪತ್ರೆಗೆ ಸಾಗ ಹಾಕುವ ಧೋರಣೆಯನ್ನು ಕೈಬಿಟ್ಟು, ತುರ್ತು ಸಂದರ್ಭವೆಂದು ಪರಿಗಣಿಸಿ, ಉತ್ತಮವಾಗಿ ಚಿಕಿತ್ಸೆ ನೀಡಿದಲ್ಲಿ, ಬಹಳಷ್ಟು ಪ್ರಾಣಗಳನ್ನು ರಕ್ಷಿಸಬಹುದು ಎಂದು ಹೇಳಿದರು.  ಇದಕ್ಕೆ ದನಿಗೂಡಿಸಿದ ಜಿಲ್ಲಾಧಿಕಾರಿಗಳು, ಆಸ್ಪತ್ರೆಗಳಲ್ಲಿ ಅಪಘಾತದ ಗಾಯಾಳುಗಳಿಗೆ ಹೆಚ್ಚಿನ ಕಾಳಜಿ ನೀಡಿ, ಜೀವ ಉಳಿಸುವ ಪುಣ್ಯದ ಕೆಲಸವನ್ನು ವೈದ್ಯರು, ನರ್ಸ್‍ಗಳು ಮಾಡಬೇಕು, ಆರೋಗ್ಯ ಇಲಾಖೆ ಈ ದಿಸೆಯಲ್ಲಿ ಅವರಿಗೆ ಸೂಕ್ತ ತರಬೇತಿ ನೀಡಬೇಕು ಎಂದರು.
ಸಭೆಗೆ ಗೈರುಹಾಜರಾದ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸಮಿತಿಯಿಂದ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿಗಳು ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಸಮಿತಿಯ ಸದಸ್ಯ ಕಾರ್ಯದರ್ಶಿಯೂ ಆದ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಟಿ.ಎಸ್.ಮಲ್ಲಿಕಾರ್ಜುನ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಮುತೇಶ್, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಸತೀಶ್ ರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸೋಮಶೇಖರ್, ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours