*********** ನಗರದಾದ್ಯಂತ ಒಳಚರಂಡಿ ಕಾಮಗಾರಿ (ಯುಜಿಡಿ) ಕೈಗೊಂಡಿದ್ದು, ಆದರೆ ರಸ್ತೆಗಳನ್ನು ಮೊದಲಿನ ಸ್ಥಿತಿಗೆ ತರದೆ, ಅಲ್ಲಲ್ಲಿ ಉಬ್ಬು, ತಗ್ಗುಗಳು ನಿರ್ಮಾಣವಾಗಿವೆ, ಕೆಲವೆಡೆ ರಸ್ತೆ ಮಟ್ಟದಿಂದ 01 ಅಡಿ ಮೇಲೆ ಬಂದಿವೆ. ನಗರದಲ್ಲಿ ಇಂತಹ 182 ಉಬ್ಬು ತಗ್ಗುಗಳನ್ನು ಗುರುತಿಸಲಾಗಿದ್ದು, ಇದರಿಂದ ವಾಹನ ಸವಾರರು ತೊಂದರೆ ಎದುರಿಸುತ್ತಿದ್ದಾರೆ ಎಂದು ಸಂಚಾರ ಠಾಣೆ ಪೊಲೀಸ್ ಅಧಿಕಾರಿ ರಾಜು ಅವರು ಸಭೆಯ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೂಡಲೆ ನಗರದಾದ್ಯಂತ ರಸ್ತೆಗಳನ್ನು ಪರಿಶೀಲಿಸಿ, ಯುಜಿಡಿ ಕಾಮಗಾರಿಯಿಂದ ರಸ್ತೆಯಲ್ಲಿ ಆಗಿರುವ ಉಬ್ಬು ತಗ್ಗು ಗಳನ್ನು ಒಂದು ತಿಂಗಳ ಒಳಗಾಗಿ ಸರಿಪಡಿಸುವಂತೆ ಸೂಚನೆ ನೀಡಿದರು.
ಆಟೋ ಸ್ಟ್ಯಾಂಡ್ ನಿರ್ಮಾಣ :
*******ನಗರದಲ್ಲಿ ಈ ಹಿಂದೆ ಒಟ್ಟು 31 ಆಟೋ ನಿಲ್ದಾಣಗಳನ್ನು ಗುರುತಿಸಲಾಗಿತ್ತು. ಆದರೆ ಈಗ ಸ್ಥಳ ಪರಿಶೀಲಿಸಿದ ಸಂದರ್ಭದಲ್ಲಿ ಕೇವಲ 13 ಕಡೆ ಮಾತ್ರ ಆಟೋ ಸ್ಟ್ಯಾಂಡ್ ಉಳಿದಿವೆ. ಆಟೋ ಚಾಲಕರು, ತಮಗೆ ಅನುಕೂಲವಾಗುವ ಕಡೆಗಳಲ್ಲಿ ತಾವೇ ಜಾಗ ಗುರುತಿಸಿಕೊಂಡು, ಅಲ್ಲಿ ನಿಲ್ಲಿಸಿಕೊಳ್ಳುತ್ತಿದ್ದಾರೆ. ಆಟೋ ಸ್ಟ್ಯಾಂಡ್ ಸ್ಥಳ ನಿಗದಿ ಮಾಡುವಂತೆ ಆಟೋ ಚಾಲಕರು ಇತ್ತೀಚೆಗೆ ಬೇಡಿಕೆ ಸಲ್ಲಿಸಿದ್ದರು ಎಂದು ಸಂಚಾರ ಠಾಣೆ ಪೊಲೀಸ್ ಅಧಿಕಾರಿ ರಾಜು ಅವರು ಹೇಳಿದರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ನಗರದಲ್ಲಿ ಬಸ್ ತಂಗುದಾಣ, ಪಾರ್ಕಿಂಗ್ ವ್ಯವಸ್ಥೆ ಹಾಗೂ ಆಟೋ ಸ್ಟ್ಯಾಂಡ್ ಬಹುಮುಖ್ಯ ವಿಷಯವಾಗಿದ್ದು, ಈ ಬಗ್ಗೆ ಲೋಕೋಪಯೋಗಿ ಇಲಾಖೆ, ಪೊಲೀಸ್ ಹಾಗೂ ನಗರಸಭೆ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲಿಸಿ, ಸೂಕ್ತ ಸ್ಥಳಗಳ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಅಪಘಾತಕ್ಕೊಳಗಾದವರಿಗೆ ಸೂಕ್ತ ಚಿಕಿತ್ಸೆ ನೀಡಿ :
********** ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಹಲವು ಕಾರಣಗಳಿಂದಾಗಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ವರ್ಷ 373 ತೀವ್ರ ಅಪಘಾತ ಪ್ರಕರಣಗಳಾಗಿ 398 ಜನ ಸಾವನ್ನಪ್ಪಿದ್ದರು. ಈ ವರ್ಷ ಇದುವರೆಗೆ 396 ತೀವ್ರ ಅಪಘಾತಗಳಾಗಿದ್ದು, 415 ಸಾವು ಸಂಭವಿಸಿದೆ. ಹೀಗಾಗಿ ಕಳೆದ ವರ್ಷಕ್ಕೆ ಹೋಲಿಸಿದಾಗ 17 ಸಾವು ಹೆಚ್ಚು ಸಂಭವಿಸಿವೆ. ಅಪಘಾತ ಸಂಭವಿಸಿದ ಸಂದರ್ಭದಲ್ಲಿ 108 ಆಂಬುಲೆನ್ಸ್ಗಳು ತ್ವರಿತವಾಗಿ ಲಭ್ಯವಾದಲ್ಲಿ, ಹಾಗೂ ಆಸ್ಪತ್ರೆಗಳಲ್ಲಿ ವೈದ್ಯರು ಕಾಳಜಿ ವಹಿಸಿ ಚಿಕಿತ್ಸೆ ನೀಡಿದಲ್ಲಿ ಸಾವಿನ ಸಂಖ್ಯೆ ಕಡಿಮೆ ಮಾಡಬಹುದು. ರಾಷ್ಟ್ರೀಯ ಹೆದ್ದಾರಿಯಲ್ಲಿನ ಭರಮಸಾಗರ, ಐಮಂಗಲ, ಜವಗೊಂಡನಹಳ್ಳಿ ಬಳಿಯ ಆಸ್ಪತ್ರೆಗಳಲ್ಲಿ 108 ಆಂಬುಲೆನ್ಸ್ಗಳು ಸದಾ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಅಪಘಾತ ಸಂಭವಿಸಿದಾಗ, ತ್ವರಿತವಾಗಿ ಸ್ಪಂದನೆಯಾಗಬೇಕು, ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ತುಸು ಹೆಚ್ಚಿನ ಕಾಳಜಿ ವಹಿಸಿ ಚಿಕಿತ್ಸೆ ಕೊಡಲು ವೈದ್ಯರು, ಶುಶ್ರೂಷಕರು ಮುಂದಾಗಬೇಕು, ಸಮಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರುವುದರಿಂದ, ಸಾಮಾನ್ಯ ರೋಗಿಗಳ ರೀತಿಯಲ್ಲಿಯೇ ಗಾಯಗೊಂಡವರನ್ನು ಕೂಡ ಪರಿಗಣಿಸದೆ, ಕೇವಲ ಬೇರೆ ಆಸ್ಪತ್ರೆಗೆ ಸಾಗ ಹಾಕುವ ಧೋರಣೆಯನ್ನು ಕೈಬಿಟ್ಟು, ತುರ್ತು ಸಂದರ್ಭವೆಂದು ಪರಿಗಣಿಸಿ, ಉತ್ತಮವಾಗಿ ಚಿಕಿತ್ಸೆ ನೀಡಿದಲ್ಲಿ, ಬಹಳಷ್ಟು ಪ್ರಾಣಗಳನ್ನು ರಕ್ಷಿಸಬಹುದು ಎಂದು ಹೇಳಿದರು. ಇದಕ್ಕೆ ದನಿಗೂಡಿಸಿದ ಜಿಲ್ಲಾಧಿಕಾರಿಗಳು, ಆಸ್ಪತ್ರೆಗಳಲ್ಲಿ ಅಪಘಾತದ ಗಾಯಾಳುಗಳಿಗೆ ಹೆಚ್ಚಿನ ಕಾಳಜಿ ನೀಡಿ, ಜೀವ ಉಳಿಸುವ ಪುಣ್ಯದ ಕೆಲಸವನ್ನು ವೈದ್ಯರು, ನರ್ಸ್ಗಳು ಮಾಡಬೇಕು, ಆರೋಗ್ಯ ಇಲಾಖೆ ಈ ದಿಸೆಯಲ್ಲಿ ಅವರಿಗೆ ಸೂಕ್ತ ತರಬೇತಿ ನೀಡಬೇಕು ಎಂದರು.
ಸಭೆಗೆ ಗೈರುಹಾಜರಾದ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸಮಿತಿಯಿಂದ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿಗಳು ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಸಮಿತಿಯ ಸದಸ್ಯ ಕಾರ್ಯದರ್ಶಿಯೂ ಆದ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಟಿ.ಎಸ್.ಮಲ್ಲಿಕಾರ್ಜುನ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಮುತೇಶ್, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಸತೀಶ್ ರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸೋಮಶೇಖರ್, ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.
+ There are no comments
Add yours