ಮಕ್ಕಳ  ಸಹಾಯವಾಣಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ

 

 

 

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಮೇ 17:
ಮಕ್ಕಳ ಸಹಾಯವಾಣಿ-1098 ರಾಷ್ಟ್ರ ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿರುವ ಉಚಿತ ಮಕ್ಕಳ ರಕ್ಷಣಾ ಸೇವೆಯಾಗಿದ್ದು, ಪಾಲನೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳಿಗೆ ತುರ್ತು ಸೇವೆಯನ್ನು ಒದಗಿಸಲು ಈ ಸಂಖ್ಯೆಗೆ ಕರೆ ಮಾಡುವ ಮೂಲಕ ನೆರವು ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಕ್ಕಳ ಸಹಾಯವಾಣಿ-1098 ದಿನಾಚರಣೆ ಹಾಗೂ ಮೇ ತಿಂಗಳನ್ನು ಮಕ್ಕಳ ಸಹಾಯವಾಣಿ-1098 ಮಾಸಾಚರಣೆ ಅಂಗವಾಗಿ ಜಾಥಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.
ಮಕ್ಕಳ ಸಹಾಯವಾಣಿ-1098 ಸಂಖ್ಯೆಯು ಉಚಿತ ದೂರವಾಣಿಯಾಗಿದ್ದು, ಮಕ್ಕಳಾಗಲಿ ಅಥವಾ ಸಾರ್ವಜನಿಕರಾಗಲಿ ಕರೆ ಮಾಡುವ ಮೂಲಕ ತುರ್ತು ನೆರವು ಅಗತ್ಯವಿರುವ ಮಕ್ಕಳಿಗೆ ರಕ್ಷಣೆಯನ್ನು ಒದಗಿಸಬಹುದಾಗಿದೆ. ಮಕ್ಕಳಿಗೆ ಮನೆ, ಶಾಲೆ, ಹಾಸ್ಟೆಲ್‍ಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ದೌರ್ಜನ್ಯ, ತೊಂದರೆಗಳಿಗೆ ಒಳಗಾದರೆ ಉಚಿತವಾಗಿ ಮಕ್ಕಳ ಸಹಾಯವಾಣಿ 1098 ಸಂಖ್ಯೆಗೆ ಕರೆ ಮಾಡಿದರೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮಕ್ಕಳ ಸಹಾಯವಾಣಿ ತುಂಬಾ ಪ್ರಚಲಿತವಾಗಿದೆ. ಎಲ್ಲರೂ ಸುಲಭವಾಗಿ ನೆನಪಿಟ್ಟುಕೊಳ್ಳುವಂತೆ 1098  ಎಂದು ತುಂಬಾ ಸರಳವಾಗಿ ನಂಬರ್ ನೀಡಿದ್ದಾರೆ.  ಮಕ್ಕಳು ಮುಂದಿನ ಪ್ರಜೆಗಳು, ದೇಶದ ಶಕ್ತಿ ಹಾಗಾಗಿ ಮಕ್ಕಳು ಸುರಕ್ಷಿತವಾಗಿದ್ದರೆ ಈ ನಾಡು ಸುರಕ್ಷಿತವಾಗಿರುತ್ತದೆ. ಶಾಲೆ, ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳ ಸಹಾಯವಾಣಿಯ ಬಗ್ಗೆ ಪ್ರಚಾರ ಮಾಡಿ, ಮಕ್ಕಳು ಯಾವಾಗಲೂ ಸುರಕ್ಷಿತವಾಗಿರಬೇಕು ಎಂದು ತಿಳಿಸಿದರು.
ಮಕ್ಕಳ ಸಹಾಯವಾಣಿ ಜಾಗೃತಿ ಜಾಥಾವು ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಜಿಲ್ಲಾಸ್ಪತ್ರೆಯವರೆಗೂ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಲೋಕೇಶ್ವರಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ, ಡಿವೈಎಸ್‍ಪಿ ಪಾಂಡುರಂಗಪ್ಪ, ಸಂಜೀವಿನಿ ಜೀವ ರಕ್ಷಕ ಟ್ರಸ್ಟ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ಸೌಮ್ಯ ಮಂಜುನಾಥ್, ಜಿಲ್ಲಾಧ್ಯಕ್ಷ ರಂಗಸ್ವಾಮಿ, ಎನ್‍ಜಿಓ ಸಂಸ್ಥೆಗಳು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾಶಾಖೆಯ ಪದಾಧಿಕಾರಿಗಳು ಇದ್ದರು.

 

 

[t4b-ticker]

You May Also Like

More From Author

+ There are no comments

Add yours