5 ಮಂದಿ ಬೇಕರಿ ಅಂಗಡಿ ಕೆಲಸಗಾರರಿಗೆ ಕೊರೊನಾ ಪಾಸಿಟಿವ್, ಬೇಕರಿ ಐಟಂ ತಿಂದವರಲ್ಲಿ ಹೆಚ್ಚಿದ ಆತಂಕ, ಸಾವಿನ ಸಂಖ್ಯೆ 5ಕ್ಕೆ ಏರಿಕೆ….

 

ಚಿತ್ರದುರ್ಗ:

ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಮತ್ತೆ 17 ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢ ಪಟ್ಟಿವೆ. ಈ ಪೈಕಿ 5 ಮಂದಿ ಬೇಕರಿ ಅಂಗಡಿ ಕೆಲಸಗಾರರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು ಬೇಕರಿ ಐಟಂ ಖರೀದಿ ಮಾಡಿದವರಲ್ಲಿ ಹೆಚ್ಚಿನ ಆತಂಕ ಸೃಷ್ಠಿಯಾಗಿದೆ. ಅಲ್ಲದೆ ದಿನೇ ದಿನೇ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದು 218 ಮಂದಿಗೆ ಸೋಂಕು ಹರಡಿದೆ. ಈ ಪೈಕಿ ಇಲ್ಲಿಯ ತನಕ 5 ಮಂದಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಚಿತ್ರದುರ್ಗ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 62 ವರ್ಷ ವೃದ್ಧರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ನಿಧನರಾಗಿದ್ದಾರೆ. ಇದಲ್ಲದೆ ಚಳ್ಳಕೆರೆಯ 68 ವರ್ಷದ ವರ್ತಕರೊಬ್ಬರು ಕೊರೊನಾ ಸೋಂಕಿನಿಂದಲೇ ಸಾವನ್ನಪ್ಪಿರಬಹುದೆಂದು ತಾಲೂಕು ಆಡಳಿತ ಶಂಕೆ ವ್ಯಕ್ತ ಪಡಿಸಿದೆ.

ಚಳ್ಳಕೆರೆ ನಗರದಲ್ಲಿ ಮೂರು ಮಂದಿಗೆ ಕೊರೊನಾ ಪಾಸಿಟಿವ್ ದೃಢ ಪಟ್ಟಿದ್ದು ತ್ಯಾಗರಾಜ ನಗರದ 45, ಅಂಬೇಡ್ಕರ್ ನಗರದ 55 ಮತ್ತು ಚಳ್ಳಕೆರೆ ನಗರದ 35 ವರ್ಷದ ಪುರುಷರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಕೇಂದ್ರ(ಡಿಆರ್ ಡಿಒ)ದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೂ ಕೋವಿಡ್ ಸೋಂಕು ದೃಢಪಟ್ಟಿದೆ.

ಹಿರಿಯೂರು ನಗರದಲ್ಲಿ ದಿನೇ ದಿನೇ ಕೋವಿಡ್ ಸೋಂಕು ಏರಿಕೆಯಾಗುತ್ತಿದ್ದು ಭಾನುವಾರವೂ 8 ಮಂದಿಗೆ ಕೋವಿಡ್ ಪಾಸಿಟಿವ್ ತಗುಲಿದ್ದು ಈ ಪೈಕಿ 5 ಮಂದಿ ಬೇಕರಿಯಲ್ಲಿ ಕೆಲಸ ಮಾಡುವ ಕಾರ್ಮಿಕರಾಗಿದ್ದಾರೆ. ಒಟ್ಟು ಹಿರಿಯೂರು ತಾಲೂಕಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 61ಕ್ಕೆ  ಏರಿಕೆಯಾಗಿದೆ. 

ಜಿಲ್ಲೆಯಾದ್ಯಂತ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದರಿಂದ 218ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಈ ಪೈಕಿ 112 ಮಂದಿ ಗುಣಮುಖರಾಗಿದ್ದಾರೆ. 103 ಸಕ್ರಿಯ ಕೋವಿಡ್ ಸೋಂಕಿತರಿದ್ದು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ 60 ಕಂಟೈನ್ಮೆಂಟ್ ವಲಯಗಳಾಗಿ ಪರಿವರ್ತನೆಯಾಗಿವೆ. 468 ಮಂದಿ ಗೃಹ ಕ್ವಾರಂಟೈನ್ ನಲ್ಲಿದ್ದಾರೆ. ಸಾರ್ವಜನಿಕರು ಅತಿ ಎಚ್ಚರಿಕೆ ವಹಿಸಬೇಕಾದ ಅಗತ್ಯ ಇದೆ. ಸಭೆ, ಸಮಾರಂಭ, ಸ್ನೇಹಿತರು ಕರೆದರೆಂದು ಬೇಕಾಬಿಟ್ಟಿಯಾಗಿ ಎಲ್ಲೂ, ಯಾವುದೇ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳದಿರುವುದು ಉತ್ತಮ. ಒಂದು ವೇಳೆ ಪಾಲ್ಗೊಂಡರೆ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಕನಿಷ್ಠ 2 ಮೀಟರ್ ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್ ಸೋಂಕಿನಿಂದ ಮುಕ್ತರಾಗಿರಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಮನವಿ ಮಾಡಿದ್ದಾರೆ.

[t4b-ticker]

You May Also Like

More From Author

+ There are no comments

Add yours