ಉದ್ಯೋಗ ಖಾತ್ರಿ ನೆರವು ಪಡೆದು ವರ್ಷಕ್ಕೆ 10 ಲಕ್ಷ ದುಡಿಯುತ್ತಿರುವ ಯುವಕ

 

ರಾಯಚೂರು ಫೆಬ್ರವರಿ 4: ಜಿಲ್ಲೆಯ ಮಾನ್ವಿ ತಾಲೂಕಿನ ಗೋರ್ಕಲ್ ಗ್ರಾಮದ ಯುವಕ ಶರಣಬಸವ ಹೂಗಾರ ನರೇಗಾ ಯೋಜನೆಯ ನೆರವಿನಿಂದ ತಮ್ಮ ಜಮೀನಿನಲ್ಲಿ ಕುರಿ ಸಾಕಾಣಿಕೆ ಹಾಗೂ ಪೇರಲ ಹಣ್ಣಿನ ತೋಟಗಾರಿಕೆಯಲ್ಲಿ ಯಶಸ್ವಿಯಾಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಗೋರ್ಕಲ್ ಗ್ರಾಮವು ತುಂಗಭದ್ರಾ ನದಿಗೆ ಸಮೀಪ ಇರುವ ಕಾರಣ ಶರಣಬಸವ ಕುಟುಂಬಸ್ಥರು ಕೊಳವೆ ಬಾವಿಯಿಂದ ನೀರಿನ ಸೌಲಭ್ಯ ಪಡೆದು 7 ಎಕರೆ ಜಮೀನಿನಲ್ಲಿ ಮೆಣಸಿನ ಕಾಯಿ ಮತ್ತು ಹತ್ತಿ ಹೆಚ್ಚಾಗಿ ಬೆಳೆಯುತ್ತಿದ್ದರು.

ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಶರಣಬಸವ ಹೂಗಾರ ಕೆಲ ವರ್ಷಗಳ ಹಿಂದೆ ಸ್ವಗ್ರಾಮಕ್ಕೆ ಮರಳಿ ಸ್ವಯಂ ಉದ್ಯೋಗ ಕೈಗೊಳ್ಳಲು ನಿರ್ಧರಿಸಿದ್ದರು. ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ನರೇಗಾ ಯೋಜನೆಯ ಮಾಹಿತಿ ಪಡೆದು ಕುರಿ ಸಾಕಾಣಿಕೆಗೆ ಮುಂದಾಗಿದ್ದರು. 2019-20ನೇ ಸಾಲಿನಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಅಂದಾಜು ಮೊತ್ತ ₹43ಸಾವಿರ ವೆಚ್ಚದ ಕಾಮಗಾರಿ ಕೈಗೊಂಡು ಕುರಿ ಶೆಡ್ ನಿರ್ಮಿಸಿಕೊಂಡರು.

ಗ್ರಾಮ ಪಂಚಾಯಿತಿ ವತಿಯಿಂದ ಇಬ್ಬರು ಕೂಲಿಕಾರ್ಮಿಕರ ಕೆಲಸಕ್ಕಾಗಿ 48 ಮಾನವ ದಿನಗಳ ಸೃಜನೆ ಮಾಡಿ ₹12 ಸಾವಿರ ವೇತನ ಹಾಗೂ ₹31 ಸಾವಿರ ಸಾಮಗ್ರಿ ವೆಚ್ಚ ಪಾವತಿಸಲಾಗಿತ್ತು. ಪ್ರಸ್ತುತ ಕುರಿ ಶೆಡ್‌ನಲ್ಲಿ 34 ಕುರಿಗಳು ಇದ್ದು, ವಾರ್ಷಿಕ ₹2ರಿಂದ 3ಲಕ್ಷ ಆದಾಯ ಪಡೆಯುತ್ತಿರುವುದಾಗಿ ಅವರು ತಿಳಿಸಿದ್ದಾರೆ.

2020-21ರಲ್ಲಿ ತಮ್ಮ ಸ್ವಂತ 7 ಎಕರೆ ಜಮೀನಿನಲ್ಲಿ 1 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆಗೆ ಮುಂದಾದ ಅವರು, ನರೇಗಾ ನೆರವಿನಿಂದ 300 ಪೇರಲ ಸಸಿಗಳನ್ನು ಬೆಳೆಸಿ ಕೂಲಿ ವೇತನ ₹72,325 ಹಾಗೂ ಸಾಮಗ್ರಿ ವೆಚ್ವ ₹20,800 ಸೇರಿದಂತೆ ಒಟ್ಟು ₹93,125 ಪ್ರೋತ್ಸಾಹ ಧನ ಪಡೆದಿದ್ದರು.

ಪ್ರಸ್ತುತ ಪೇರಲ ಹಣ್ಣಿನ ತೋಟದಲ್ಲಿ ವರ್ಷಕ್ಕೆ ಎರಡು ಬೆಳೆ ಬೆಳೆದು ನಿವ್ವಳ ₹10 ಲಕ್ಷ ಆದಾಯ ಗಳಿಸುತ್ತಿರುವುದಾಗಿ ಶರಣ ಬಸವ ಹೂಗಾರ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours