ವರ್ಷಕ್ಕೊಮ್ಮೆ ಕಣ್ಣಿನ ಒತ್ತಡ ಪರೀಕ್ಷೆ ಮಾಡಿಸಿ ಗ್ಲಾಕೋಮದಿಂದ ರಕ್ಷಣೆ ಪಡೆಯಿರಿ : ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ

 

ಚಿತ್ರದುರ್ಗ, ಮಾರ್ಚ್ 11:
ಗ್ಲಾಕೋಮ ಕಾಯಿಲೆಯು ಕಣ್ಣಿನ ದೃಷ್ಟಿಗೆ ಸಂಬಂಧಿಸಿದ ನರಗಳಿಗೆ ಹಾನಿ ಮಾಡುವ ಕಾಯಿಲೆಯಾಗಿದೆ. ಗ್ಲಾಕೋಮ ಮಾರಣಾಂತಿಕ ರೋಗವಲ್ಲ ಚಿಕಿತ್ಸೆ ನೀಡದಿದ್ದಲ್ಲಿ ಅಂಧತ್ವಕ್ಕೆ ನಾಂದಿಯಾಡುತ್ತದೆ ಎಂದು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ತಿಳಿಸಿದರು.
ಬೆಳಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗೋನೂರು ಗ್ರಾದಲ್ಲಿರುವ ನಿರಾಶ್ರಿತರ ಕೇಂದ್ರದಲ್ಲಿ 40 ವರ್ಷ ಮೇಲ್ಪಟ್ಟವರ ಕಣ್ಣಿನ ಒತ್ತಡ ಪರೀಕ್ಷೆ ಮತ್ತು ದೃಷ್ಟಿ ದೋಷ ತಪಾಸಣೆ ನಡೆಸುವ ಮೂಲಕ ವಿಶ್ವ ಗ್ಲಾಕೋಮ ಸಪ್ತಾಹ ಕಾರ್ಯಕ್ರಮವನ್ನು ಜಿಲ್ಲಾ ಅಂಧತ್ವ ನಿವಾರಣ ಕಾರ್ಯಕ್ರಮದಡಿಯಲ್ಲಿ ಬೆಳಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದರು.
40 ವರ್ಷ ಮೇಲ್ಪಟ್ಟವರು ವರ್ಷಕ್ಕೆ ಒಮ್ಮೆಯಾದರೂ ಕಣ್ಣುಗಳ ಒತ್ತಡ ಪರೀಕ್ಷೆ ಮಾಡಿಸಿಕೊಳ್ಳಬೇಕು. ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಕೊಠಡಿ 51ರಲ್ಲಿ ಮಾರ್ಚ್ 06 ರಿಂದ 12 ರವರೆಗೆ ಉಚಿತವಾಗಿ ಕಣ್ಣಿನ ತಜ್ಞರು ಕಣ್ಣುಗಳ ತಪಾಸಣೆ ನಡೆಸುತ್ತಾರೆ. ನಿಮ್ಮ ಕಣ್ಣುಗಳನ್ನೊಮ್ಮೆ ಪರೀಕ್ಷೆ ಮಾಡಿಸುವಂತೆ ಸಲಹೆ ನೀಡಿದರು.
ಕುಟುಂಬದ ಪೋಷಕರು ಗ್ಲಾಕೋಮದಿಂದ ಬಳಲುತ್ತಿದ್ದರೆ, ಕುಟುಂಬದ ಇತರ ಸದಸ್ಯರು ಸಹ ಕಡ್ಡಾಯವಾಗಿ ಕಣ್ಣಿನ ಒತ್ತಡ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಿರಿ. ಚಿಕಿತ್ಸೆ ಪಡೆಯದಿದ್ದಲ್ಲಿ ಶಾಶ್ವತ ಅಂಧತ್ವ ಉಂಟಾಗಬಹುದು. ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ಪಡೆಯುವುದು ಅಗತ್ಯ.
ಪ್ರತಿ ವರ್ಷದಂತೆ ಈ ವರ್ಷವೂ ಸಹ ವಿಶ್ವ ಗ್ಲಾಕೋಮ ಸಪ್ತಾಹವನ್ನು   ಸರ್ಕಾರದ ಮಾರ್ಗಸೂಚಿಯಂತೆ ಒಂದುವಾರ ಕಣ್ಣುಗಳ ರಕ್ಷಣೆಗಾಗಿ ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮಗಳು,  ಕಣ್ಣಿನ ತಪಾಸಣಾ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಾತನಾಡಿ ಕ್ಷಯರೋಗ ಲಕ್ಷಣ, ತಪಾಸಣೆ ಯಾರು ಮಾಡಿಸಬೇಕು ಎಲ್ಲಿ ಮಾಡಿಸಿಕೊಳ್ಳಬೇಕು ಕ್ಷಯರೋಗ ನಿಯಂತ್ರಣಕ್ಕೆ ಸರ್ಕಾರ ನೀಡುವ ಸೇವಾ ಸೌಲಭ್ಯಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಒಟ್ಟು 297 ಜನರ ಕಣ್ಣಿನ ತಪಾಸಣೆ ನಡೆಸಿ, 27 ದೃಷ್ಟಿ ದೋಷವಿರುವವರನ್ನು ಪತ್ತೆ ಹಚ್ಚಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸಾ ಶಿಬಿರಕ್ಕೆ ಗುರುತಿಸಲಾಯಿತು.
ಕೆ.ಸಿ.ರಾಮು ನೇತ್ರಾಧಿಕಾರಿ ಮತ್ತು ತಂಡ, ಸಮುದಾಯ ಆರೋಗ್ಯಾಧಿಕಾರಿ ಮಂಜುಶ್ರೀ, ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್, ಯೋಗ ಶಿಕ್ಷಕರಾದ ರವಿ ಅಂಬೇಕರ್, ಲಲಿತಾ ಬೇಂದ್ರೆ ನಿರಾಶ್ರಿತರ ಕೇಂದ್ರದ ನಿರ್ವಾಹಕರಾದ ಮಹದೇವಪ್ಪ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours