ರೇಬಿಸ್ ರೋಗ ತಡೆಗೆ ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ

 

ಚಿತ್ರದುರ್ಗ,ಸೆಪ್ಟೆಂಬರ್28:
ರೇಬಿಸ್ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸಲಹೆ ನೀಡಿದರು.
ನಗರದ ಕೃಷಿ ಮಾರುಕಟ್ಟೆ ಆವರಣದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಹಾಗೂ ಜಿಲ್ಲಾ ಪ್ರಾಣಿ ದಯಾ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ರೇಬಿಸ್ ದಿನಾಚರಣೆ ಹಾಗೂ ಶ್ವಾನಗಳಿಗೆ ಉಚಿತ ರೇಬಿಸ್ ಲಸಿಕೆ ಮತ್ತು ಜಾಗೃತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ರೇಬಿಸ್ ರೋಗ ಹೆಚ್ಚಾಗಿ ಹಳ್ಳಿಗಳಲ್ಲಿ ಕಂಡುಬರುವುದರಿಂದ ಗ್ರಾಮೀಣ ಜನರಿಗೆ ರೇಬಿಸ್ ರೋಗ ಮತ್ತು ಅದಕ್ಕೆ ಸಂಬಂಧಿಸಿದ ಲಸಿಕೆ ಕುರಿತು ಜಾಗೃತಿ ಮೂಡಿಸುವುದರಲ್ಲಿ ಪಶುವೈದ್ಯರ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.
ಯಾವುದೇ ಕಾರಣಕ್ಕೂ ರೇಬಿಸ್ ರೋಗದ ಕುರಿತು ನಿರ್ಲಕ್ಷ್ಯೆ ಮಾಡಬಾರದು. ನಮ್ಮ ಆರೋಗ್ಯದ ಜೊತೆಗೆ ಪ್ರಾಣಿಗಳ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಪ್ರಾಣಿಗಳ ಆರೋಗ್ಯ ಸುರಕ್ಷತೆಗಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಾ. ರಂಗಸ್ವಾಮಿ ಮಾತನಾಡಿ, ಪಶುಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಪಶು ವೈದ್ಯರು ರೇಬಿಸ್ ರೋಗದ ಕುರಿತು ಜನರಿಗೆ ಅರಿವು ಮೂಡಿಸಬೇಕು. ರೇಬಿಸ್ ರೋಗ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಾಣುವಿನಿಂದ ಬರುವ ರೋಗ ಇದಾಗಿದ್ದು, ರೇಬಿಸ್ ರೋಗ ತಡೆಗಾಗಿ ಪ್ರಾಣಿಗಳಿಗೆ ಲಸಿಕೆ ಹಾಕಿಸುವಂತೆ ಮನವರಿಕೆ ಮಾಡಬೇಕು ಎಂದು ತಿಳಿಸಿದರು.
ಬೀದಿ ನಾಯಿಗಳ ವರ್ತನೆಯಲ್ಲಿ ಅಸಹಜ ಬದಲಾವಣೆಗಳು ಕಂಡುಬಂದಾಗ ಕೂಡಲೇ ಸ್ಥಳೀಯ ಸಂಸ್ಥೆಗಳಾದ ಪಟ್ಟಣ ಪಂಚಾಯತ್, ಪುರಸಭೆ, ಗ್ರಾಮ ಪಂಚಾಯತಿಗಳಿಗೆ ಅಥವಾ ಪಶುವೈದ್ಯರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಕೃಷ್ಣಪ್ಪ ಮಾತನಾಡಿ, ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳಲ್ಲಿ ರೇಬಿಸ್ ರೋಗಕ್ಕೆ ಸಂಬಂಧಿಸಿದಂತೆ ಜಾಗೃತಿ ಕಾರ್ಯಕ್ರಮಗಳ ಅಳವಡಿಸಿಕೊಳ್ಳಬೇಕು. ಈಗಾಗಲೇ ಬೇರೆ ಜಿಲ್ಲೆಗಳಲ್ಲಿ ಮತ್ತು ತಾಲ್ಲೂಕುಗಳಲ್ಲಿ ರೇಬಿಸ್ ರೋಗ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಇಂತಹ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿಯೂ ಆರಂಭಿಸಬೇಕು ಎಂದು ಸಲಹೆ ನೀಡಿದರು.
ರೇಬಿಸ್ ಕುರಿತಾಗಿ ವಿದ್ಯಾರ್ಥಿಗಳಿಗೆ ಭಾಷಣ, ಕ್ವಿಜ್ ಮತ್ತು ಇತರೆ ಚಟುವಟಿಕೆಗಳ ಮೂಲಕ ರೇಬಿಸ್ ರೋಗಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಶಿವಮೊಗ್ಗ ಪಶುವೈದ್ಯಕೀಯ ಕಾಲೇಜಿನ ಸೂಕ್ಷ್ಮಣುಜೀವಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಜೆ.ಎಸ್. ಅರುಣ್ ರೇಬಿಸ್ ರೋಗದ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಜಿ.ಎಂ. ಹನುಮಪ್ಪ, ಪಾಲಿ ಕ್ಲಿನಿಕ್ ಉಪನಿರ್ದೇಶಕ ಡಾ. ಪ್ರಸನ್ನ ಕುಮಾರ್. ಸಾರಿಗೆ ಇಲಾಖೆ ಅಧಿಕಾರಿ ಕರುಣಾಕರನ್ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಪಶುವೈದ್ಯರು ಇದ್ದರು.

=====

[t4b-ticker]

You May Also Like

More From Author

+ There are no comments

Add yours