ಕಾಂಗ್ರೆಸ್ ಸೇರಿದ ಖ್ಯಾತ ನಿರ್ಮಾಪಕ ಎಸ್.ನಾರಾಯಣ್ ಅವರು ಹೇಳಿದ್ದೇನು.

 

ಬೆಂಗಳೂರು,ಮಾ.16-ಖ್ಯಾತ  ಚಲನಚಿತ್ರ ನಿರ್ಮಾಪಕ, ನಿರ್ದೇಶಕ, ನಟ ಎಸ್.ನಾರಾಯಣ್, ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಮಾಜಿ ರಾಜ್ಯಾಧ್ಯಕ್ಷ ತಿಮ್ಮಯ್ಯ ಪುರ್ಲೆ ಸೇರಿದಂತೆ ಅನೇಕ ನಾಯಕರು ಇಂದು ಕಾಂಗ್ರೆಸ್‍ಗೆ ಸೇರ್ಪಡೆಯಾದರು.

ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಖುದ್ದಾಗಿ ತಮ್ಮದೇ ಮೊಬೈಲ್‍ನಲ್ಲಿ ಎಸ್.ಆರ್.ನಾರಾಯಣ್ ಅವರಿಂದ ಸದಸ್ಯತ್ವ ನೋಂದಣಿ ಮಾಡಿಸಿ ಫೋಟೋ ತೆಗೆದು ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಿದರು.

ಈ ಸಂದರ್ಭದಲ್ಲಿ ನಾರಾಯಣ್ ಕುಟುಂಬ ಸದಸ್ಯರು ಹಾಜರಿದ್ದರು. ನಾರಾಯಣ ಅವರ ಫೋಟೋ ಎರಡೆರಡು ಬಾರಿ ತೆಗೆದ ಡಿ.ಕೆ.ಶಿವಕುಮಾರ್ ಅವರು ಇದು ದೆಹಲಿಗೆ ಹೋಗಬೇಕು ಸ್ವಲ್ಪ ನಗ್ರಿ ಎಂದು ಹೇಳಿದರು. ಅಪ್‍ಲೋಡ್ ಮಾಡಿದ ಫೋಟೋಗಳು ನಾರಾಯಣ್ ಅವರ ಪತ್ನಿಗೆ ತೋರಿಸಿ ನಿಮ್ಮ ಮನೆಯವರ ಫೋಟೋ ಕರೆಕ್ಟಾಗಿದೆಯಾ ಎಂದು ಹಾಸ್ಯ ಚಟಾಕಿ ಹಾರಿಸಿದರು.

ನೀವು ಕೂಡ ಸದಸ್ಯತ್ವ ನೋಂದಾಯಿಸಿ ಎಂದು ಅವರನ್ನು ಒತ್ತಾಯಿಸಿದರು. ನನ್ನ ಮೊಬೈಲ್‍ನಲ್ಲಿ ಮೊದಲ ಬಾರಿಗೆ ಸಿದ್ದರಾಮಯ್ಯನವರ ಸದಸ್ಯತ್ವವನ್ನು ನೊಂದಣಿ ಮಾಡಿ ಅಭಿಯಾನಕ್ಕೆ ಚಾಲನೆ ಮಾಡಿದೆ. 3ನೇ ಸದಸ್ಯರನ್ನಾಗಿ ನಾರಾಯಣ್ ಅವರನ್ನು ನಾನೇ ಖುದ್ದಾಗಿ ನೋಂದಣಿ ಮಾಡಿಸಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಈ ವೇಳೆ ಮಾತನಾಡಿದ ನಾರಾಯಣ್ ಅವರು, ಚಿತ್ರರಂಗ ನಮಗೆ ಒಳ್ಳೆಯ ಸ್ಥಾನ, ಗೌರವ, ಯಶಸ್ಸು ಎಲ್ಲವನ್ನೂ ಕೊಟ್ಟಿದೆ. ನಿರ್ದೇಶಕನಾಗಿ, ನಿಮಾರ್ಪಕನಾಗಿ, ನಟನಾಗಿ, ಹಂಚಿಕೆದಾರನಾಗಿ, ಬರಹಗಾರನಾಗಿ, ಪ್ರದರ್ಶಕನಾಗಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ. ಡಾ.ರಾಜ್‍ಕುಮಾರ್, ಡಾ.ವಿಷ್ಣುವರ್ಧನ್, ಡಾ.ಅಂಬರೀಶ್, ಡಾ.ಶಿವರಾಜ್‍ಕುಮಾರ್, ಡಾ.ಪುನೀತ್‍ರಾಜ್‍ಕುಮಾರ್ ಸೇರಿದಂತೆ ಚಿತ್ರರಂಗದ ಖ್ಯಾತ ನಾಯಕ ನಟರೊಂದಿಗೆ ಕೆಲಸ ಮಾಡಿದ ಹೆಗ್ಗಳಿಕೆ ನಮ್ಮದು.

ಮೂರು ದಶಕಗಳ ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿದ್ದೇನೆ. ನಿರೀಕ್ಷೆ ಮೀರಿ ಜನರು ನನ್ನನ್ನು ಗೆಲ್ಲಿಸಿದ್ದಾರೆ. ಇದಕ್ಕಾಗಿ ಚಿತ್ರರಂಗ ಹಾಗೂ ನಾಡಿನ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಈಗ ರಾಜಕೀಯಕ್ಕೆ ಏಕೆ ಪ್ರವೇಶ ಮಾಡಬೇಕು ಎಂಬ ಪ್ರಶ್ನೆಯನ್ನು ಹಲವರು ಕೇಳುತ್ತಿದ್ದಾರೆ. ಅದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

ಆದರೆ ಕಾಂಗ್ರೆಸ್ ಪಕ್ಷವನ್ನೇ ಏಕೆ ಸೇರಬೇಕಿತ್ತು ಎಂಬ ವಿಷಯಕ್ಕೆ ಬಂದರೆ ಭಾರತದ ಮಣ್ಣಿನಲ್ಲಿ ಹುಟ್ಟಿದ ಪ್ರತಿಯೊಬ್ಬರು ಕಾಂಗ್ರೆಸ್‍ಗೆ ಋಣಿಯಾಗಿರಬೇಕು. ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಪಕ್ಷ, ಬ್ರಿಟಿಷರು ಸ್ವಾತಂತ್ರ್ಯ ಕೊಟ್ಟು ಹೋಗುವಾಗ ನಮ್ಮೆಲ್ಲ ಸಂಪತ್ತನ್ನು ದೋಚಿಕೊಂಡು ಹೋಗಿದ್ದರು. ತಿನ್ನುವ ಅನ್ನಕ್ಕೂ ಕಷ್ಟ ಇತ್ತು. ಆ ವೇಳೆ ಆಡಳಿತ ನಡೆಸಿದ ಕಾಂಗ್ರೆಸ್ ಅನ್ನ ಕೊಟ್ಟು, ದುಡಿಯುವ ಕೈಗಳಿಗೆ ಕೆಲಸ ಕೊಟ್ಟು ಸದೃಢ ದೇಶವನ್ನು ಕಟ್ಟಿಕೊಟ್ಟಿದೆ.

ಐಕ್ಯತೆ, ಭದ್ರತೆ, ಜಾತ್ಯತೀತ ನಿಲುವುಗಳು ನನಗೆ ತುಂಬ ಇಷ್ಟ. ಅದಕ್ಕಾಗಿ ಈ ಪಕ್ಷ ಸೇರಿದ್ದೇನೆ. ಚಿತ್ರರಂಗದಲ್ಲಿ ಯಶಸ್ಸು ಸಾಧಿಸಿದ್ದರೂ ರಾಜಕೀಯ ಕ್ಷೇತ್ರದಲ್ಲಿ ನಾನು ವಿದ್ಯಾರ್ಥಿ. ಇಂದು ಪ್ರವೇಶ ಪಡೆದಿದ್ದೇನೆ. ಪ್ರಾಂಶುಪಾಲರು ಜೊತೆಯಲ್ಲಿದ್ದಾರೆ. ಹಲವರ ಆಶೀರ್ವಾದ ನನ್ನ ಮೇಲಿದೆ.

2023ರಲ್ಲಿ ಕಾಂಗ್ರೆಸ್ ಎಂಬ ಧ್ಯೇಯದೊಂದಿಗೆ ನಾವು ಹಗಲಿರುಳು ಪಕ್ಷಕ್ಕಾಗಿ ದುಡಿಯುತ್ತೇವೆ. ಶತಾಯಗತಾಯ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತುರುವುದೇ ನಮ್ಮ ಗುರಿ. ಈ ನಿಟ್ಟಿನಲ್ಲಿ ಯಾವುದೇ ಜವಾಬ್ದಾರಿ ವಹಿಸಿದರೂ ಪ್ರಾಮಾಣಿಕತೆಯಿಂದ ನಿಭಾಯಿಸುತ್ತೇನೆ. ಕಾಂಗ್ರೆಸ್ ಸೇರ್ಪಡೆಯಿಂದ ನನ್ನಲ್ಲಿ ಹೊಸ ಹುರುಪು ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಶಾಸಕ ಶರಣಗೌಡ ದರ್ಶನಪುರ, ಮೊದಲ ಬಾರಿಗೆ ಪಕ್ಷ ಸೇರ್ಪಡೆಯಾದ ತಿಮ್ಮಯ್ಯ ಪುರ್ಲೆ, ಸದಸ್ಯತ್ವ ಅಭಿಯಾನದ ಸಂಚಾಲಕ ಆರ್.ವಿ.ವೆಂಕಟೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. ನಾರಾಯಣ್ ಅವರಿಗೆ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಬಾವುಟ ನೀಡಿ ಸ್ವಾಗತಿಸಿದರು.

[t4b-ticker]

You May Also Like

More From Author

+ There are no comments

Add yours