ಅಧಿಕಾರಿಗಳೇ ಏನ್ಮಾಡ್ತಾ ಇದೀರಾ? ಹಳ್ಳಿಗರ ಗೋಳು ಕೇಳುವರಾರು?ವೈದ್ಯರ ನಿರ್ಲಕ್ಷ್ಯದಿಂದ ತುಕ್ಕು ಹಿಡಿಯುತ್ತಿವೆ ಇಸಿಜಿ ಯಂತ್ರಗಳು

 

  1. ವರದಿ: ಸೋಮು ಚಿಕ್ಕಪ್ಪನಹಳ್ಳಿ

ಹೊಸದುರ್ಗ; ರಕ್ತದೊತ್ತಡ, ಸಕ್ಕರೆ ಕಾಯಿಲೆ ಇರುವ ಮತ್ತು ವಯಸ್ಸಾದ ವೃದ್ಧರು ಹೃದಯ ಸಂಬಂಧಿ ಕಾಯಿಲೆಗಳಿಗೆ ಅವಶ್ಯಕತೆ ಆಗಿರುವ ಇಸಿಜಿ ಯಂತ್ರಗಳು ಉಪಯೋಗಿಸದೇ ವೈದ್ಯರ ನಿರ್ಲಕ್ಷ್ಯದಿಂದ ತುಕ್ಕು ಹಿಡಿಯುತ್ತಿವೆ.

ಹೌದು,,ಸುಮಾರು 2 ವರ್ಷಗಳ ಹಿಂದೆ ತಾಲ್ಲೂಕಿನಲ್ಲಿ ಕೋರೋನಾ ಮಹಾಮಾರಿ ರಣಕೇಕೆ ಹಾಕುತ್ತಿದ್ದ ವೇಳೆ ಮಂಗಳೂರಿನ ಖಾಸಗಿ ಸಂಸ್ಥೆಯೊಂದು ತಾಲೂಕಿನ ಮತ್ತೋಡು, ಬಾಗೂರು, ಮಾಡದಕೆರೆ, ಮಲ್ಲಪ್ಪನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೃದಯ ಸಂಬಂಧಿ ಕಾಯಿಲೆಗಳನ್ನು ಪತ್ತೆ ಹಚ್ಚುವ ಸುಮಾರು 70 ಸಾವಿರ ಮೌಲ್ಯದ ಇಸಿಜಿ ಯಂತ್ರಗಳನ್ನು ದಾನವಾಗಿ ನೀಡಿತ್ತು. ಆದರೆ ಕೆಲ ಆಸ್ಪತ್ರೆಯಲ್ಲಿ ವೈದ್ಯರು ಇದುವರೆಗೂ ಸಾರ್ವಜನಿಕರಿಗೆ ಉಪಯೋಗವಾಗದಂತೆ ತುಕ್ಕು ಹಿಡಿಯುವಂತೆ ಮಾಡಿದ್ದಾರೆ.

ಇಸಿಜಿ ಬಾಕ್ಸ್ ಓಪನ್ನೇ ಮಾಡಿಲ್ಲ; ದೂರು

ತಾಲ್ಲೂಕಿನ ಕಂಚೀಪುರ, ಶ್ರೀರಾಂಪುರ ಮತ್ತು ಬೆಲಗೂರು ಆಸ್ಪತ್ರೆಗಳಲ್ಲೂ ಸಹ ಇಸಿಜಿ ಯಂತ್ರಗಳು ಲಭ್ಯವಿದ್ದು, ಎಲ್ಲಾ ಕಡೆ ಸರಿಯಾಗಿ ಉಪಯೋಗ ಆಗುತ್ತಿದೆ. ಆದರೆ ಮತ್ತೋಡಿನಲ್ಲಿ ಮಾತ್ರ ಇಸಿಜಿ ಬಾಕ್ಸ್ ಓಪನ್ ಮಾಡದೇ ಇರುವುದು ನಾಚಿಗೇಡಿನ ಸಂಗತಿ. ರೋಗಿಗಳು ಏನಾದರೂ ಆರೋಗ್ಯ ಸಮಸ್ಯೆಯೆಂದು ಹೋದಾಗ ಸರ್ಕಾರ ಅದು ನೀಡಿಲ್ಲ ಇದು ನೀಡಿಲ್ಲ ಎಂದು ಸಬೂಬು ನೀಡುವ ವೈದ್ಯರುಗಳು ಈ ರೀತಿ ಯಂತ್ರಗಳನ್ನು ದಾನವಾಗಿ ನೀಡಿದಾಗ ಉಪಯೋಗಿಸಲು ಮನಸ್ಸಿಲ್ಲದೆ ತುಕ್ಕು ಹಿಡಿಯುವಂತೆ ಮಾಡಿರುವುದು ಅತ್ಯಂತ ಶೋಚನೀಯ ಸಂಗತಿ ಎನ್ನುತ್ತಾರೆ ಮತ್ತೋಡಿನ ಗ್ರಾಮಸ್ಥರು.

ಹಳ್ಳಿಗರ ಗೋಳು ಕೇಳುವರಾರು;

ರಕ್ತದೊತ್ತಡ, ಸಕ್ಕರೆ ಕಾಯಿಲೆ, ವಯಸ್ಸಾದ ವೃದ್ಧರು ಹಾಗೂ ಹೃದಯ ಸಂಬಂಧಿ ಇನ್ನಿತರೆ ಕಾಯಿಲೆಗಳಿದ್ದರೆ ಇಸಿಜಿ ಯಂತ್ರದಿಂದ ಸ್ಥಳೀಯವಾಗಿ ಮತ್ತು ಬೇಗ ಪತ್ತೆಹಚ್ಚಬಹುದು. ಆದರೆ ಸ್ಥಳೀಯ ವೈದ್ಯರ ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಹಳ್ಳಿಗರ ಗೋಳು ಕೇಳುವವರೇ ಇಲ್ಲದಂತಾಗಿದೆ. ಇದುವರೆಗೂ ಸದರಿ ಯಂತ್ರಗಳನ್ನು ಉಪಯೋಗಿಸದೆ ಇರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ.

ಹೊಸದುರ್ಗ ಆಸ್ಪತ್ರೆಗೆ ಹೋಗಿ ಎನ್ನುತ್ತಾರೆ;

ಇದಲ್ಲದೇ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಕೋರೋನಾ ಸಮಯದಲ್ಲಿ ಆಕ್ಸಿಜನ್ ಸಾಂದ್ರಕಗಳನ್ನು ನೀಡಿದ್ದು, ಅವುಗಳ ಪರಿಸ್ಥಿತಿಯೂ ಇದೇ ಆಗುವ ಸಂಭವ ಎದುರಾಗಿದೆ. ಉಸಿರಾಟದ ಸಂಬಂಧಿಸಿದ ಕಾಯಿಲೆಗಳಿಗೆ, ಆಸ್ತಮಾ ರೋಗಿಗಳಿಗೆ ಹಾಗೂ ಕ್ಷಯ ರೋಗಿಗಳಿಗೆ ಆಮ್ಲಜನಕ ಅವಶ್ಯಕತೆ ಇದ್ದಾಗ ಸ್ಥಳೀಯ ಆಸ್ಪತ್ರೆಯಲ್ಲಿ ನೀಡಬಹುದಾಗಿದ್ದು ಆದರೂ ಸಹ ಇಲ್ಲಿನ ವೈದ್ಯರುಗಳು ಹೊಸದುರ್ಗ ಸಾರ್ವಜನಿಕ ಆಸ್ಪತ್ರೆಯ ಕಡೆ ಕಳಿಸುತ್ತಿರುವುದು ಅತ್ಯಂತ ಶೋಚನೀಯ ಸಂಗತಿಯಾಗಿರುತ್ತದೆ.

ಒಟ್ಟಾರೆಯಾಗಿ ಸಾರ್ವಜನಿಕರಿಗೆ ಅನುಕೂಲ ಆಗುವ ಯಂತ್ರಗಳನ್ನು ಸರಿಯಾಗಿ ಬಳಕೆ ಮಾಡಿಕೊಂಡರೆ ಗ್ರಾಮಾಂತರ ಪ್ರದೇಶದ ಬಡವರು, ವೃದ್ಧರು ಹಾಗೂ ತುರ್ತು ಚಿಕಿತ್ಸೆ ಅವಶ್ಯಕತೆ ಇರುವವರು ದೂರದ ಹೊಸದುರ್ಗಕ್ಕೆ ಹೋಗುವ ಕಷ್ಟ ತಪ್ಪುತ್ತದೆ. ಆದರೆ ವೈದ್ಯರು ಇದನ್ನೇ ಮುಂದುವರೆಸಿದರೆ ಸಾರ್ವಜನಿಕರು ಕಷ್ಟ ಅನುಭವಿಸುತ್ತಾರೆ. ಆದ್ದರಿಂದ ಹಿರಿಯ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಈ ವ್ಯವಸ್ಥೆಯನ್ನು ಸರಿಪಡಿಸುತ್ತಾರ ಕಾದು ನೋಡಬೇಕಿದೆ.

ಬಾಕ್ಸ್ 1-

ವೈದ್ಯರು ಕೆಲಸ ಮಾಡುವುದು ವೆಸ್ಟ್;

ಗ್ರಾಮಾಂತರ ಪ್ರದೇಶದ ಜನಗಳಿಗೆ ಅನುಕೂಲವಾಗುವಂತೆ ಯಾರೋ ಪುಣ್ಯಾತ್ಮರು ದಾನವಾಗಿ ನೀಡಿದ ಇಸಿಜಿ ಯಂತ್ರಗಳನ್ನು ಉಪಯೋಗಿಸದೇ ಮೂಲೆಗಿಟ್ಟು ತುಕ್ಕು ಹಿಡಿಯುವುದಂತೆ ಮಾಡಿರುವುದು ನಿಜಕ್ಕೂ ನಾಚಿಗೇಡಿನ ಸಂಗತಿ. ವಿವಿಧ ಕಾಯಿಲೆಗಳಿಗೆ ಸಂಬಂಧಿಸಿದಂತೆ ಟೆಸ್ಟ್ ಮಾಡಿಸಲು ಆಸ್ಪತ್ರೆಗೆ ಹೋದರೆ ಹೊಸದುರ್ಗದ ಸಾರ್ವಜನಿಕ ಆಸ್ಪತ್ರೆಗೆ ಹೋಗಿ ಎನ್ನುತ್ತಾರೆ. ನಾವೆಲ್ಲ ಹೊಸದುರ್ಗಕ್ಕೆ ಹೋಗುವುದಾದರೆ ಇಲ್ಲೇಕೆ ಬೇಕು ಆಸ್ಪತ್ರೆ ಎನ್ನುವ ಗ್ರಾಮಸ್ಥರು ಇಂಥಾ ವೈದ್ಯರು ಇಲ್ಲಿ ಕೆಲಸ ಮಾಡುವುದು ವೆಸ್ಟ್ ಎನ್ನುತ್ತಾರೆ ಹೆಸರು ಹೇಳಲಿಚ್ಛಿಹಿಸದ ಮತ್ತೋಡಿನ ನಾಗರೀಕ.

ಬಾಕ್ಸ್ 2

ಬಾಗೂರು ಮತ್ತು ಮತ್ತೋಡಿನ ಗ್ರಾಮಸ್ಥರಿಂದ ದೂರು;

ಸಾರ್ವಜನಿಕರಿಗೆ ಅನುಕೂಲವಾಗುವಂತೆ ತಾಲ್ಲೂಕಿನ ಮತ್ತೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾನವಾಗಿ ಬಂದ ಇಸಿಜಿ ಬಾಕ್ಸ್ ಓಪನ್ ಮಾಡದೇ ಮೂಲೆಯಲ್ಲೇ ತುಕ್ಕು ಹಿಡಿಯುವಂತೆ ಇಲ್ಲಿನ ವೈದ್ಯರು ಮಾಡಿದ್ದಾರೆ. ಆದರೆ ಬಾಗೂರಿನಲ್ಲಿ ಮಾತ್ರ ಒಂದೆರಡು ಬಾರಿ ಉಪಯೋಗಿಸಿ ಕೆಟ್ಟು ಹೋಗಿದೆ. ನಂತರ ಅದನ್ನು ಸರಿಮಾಡಿಸದೆ ನಿರ್ಲಕ್ಷ್ಯವಹಿಸಿ ಚಿಕಿತ್ಸೆಗೆ ಬಂದ ರೋಗಿಗಳನ್ನು ಹೊಸದುರ್ಗಕ್ಕೆ ಕಳುಹಿಸಿ ಕೊಡುತ್ತಾರೆ ಎಂಬ ದೂರು ಬಾಗೂರು ಮತ್ತು ಮತ್ತೋಡಿನ ಗ್ರಾಮಸ್ಥರಿಂದ ಕೇಳಿ ಬಂದಿದೆ.

 

 

ಕೋಟ್ 1- ಡಾ.ರಂಗನಾಥ್, ಡಿಹೆಚ್ಓ, ಚಿತ್ರದುರ್ಗ

ಆಸ್ಪತ್ರೆಯಲ್ಲಿ ಇಸಿಜಿ ಸೌಲಭ್ಯ ಇದ್ದರೂ ಅದನ್ನು ಉಪಯೋಗಿಸದೆ ಇರುವುದು ನನ್ನ ಗಮನಕ್ಕೆ ಬಂದಿರುವುದಿಲ್ಲ. ಮಾಧ್ಯಮದವರ ಮೂಲಕ ತಿಳಿದುಬಂದಿದ್ದು ತಕ್ಷಣವೇ ವೈದ್ಯರ ಬಳಿ ಚರ್ಚಿಸಿ, ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಸಿಜಿ ಟೆಸ್ಟ್ ಎಷ್ಟು ಮಾಡಿದ್ದಾರೆ ಎಂಬ ಮಾಹಿತಿ ಕಲೆ ಹಾಕಿ, ಅದರ ಆಧಾರದ ಮೇಲೆ ಸೂಕ್ತ ಕ್ರಮ ಜರುಗಿಸುತ್ತೇನೆ.

[t4b-ticker]

You May Also Like

More From Author

+ There are no comments

Add yours