ಮಲ್ಲಿಕಾರ್ಜುನ್ ಖರ್ಗೆ ಅವರಿಂದ ಮೇಕೆದಾಟು‌ ಪಾದಯಾತ್ರೆಗೆ ಚಾಲನೆ

 

 

 

 

ರಾಮನಗರ/ಬೆಂಗಳೂರು: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್​​ ಪಕ್ಷ ಹಮ್ಮಿಕೊಂಡಿರುವ ಪಾದಯಾತ್ರೆಗೆ ಚಾಲನೆ ದೊರಕಿದೆ. ಕಾಂಗ್ರೆಸ್​ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಯಾತ್ರೆಗೆ ಚಾಲನೆ ನೀಡಿದರು. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಂಗಮದಿಂದ ಆರಂಭವಾಗಿರುವ ಪಾದಯಾತ್ರೆ 10 ದಿನಗಳವರೆಗೆ ನಡೆಯಲಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ. ಈ ಪಾದಯಾತ್ರೆಯಲ್ಲಿ ಕಾಂಗ್ರೆಸ್​ ಪಕ್ಷದ ಶಾಸಕರು, ಸಂಸದರು, ಎಂಎಲ್ಸಿಗಳು, ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದಾರೆ.

 

 

ಪಾದಯಾತ್ರೆಗೆ ತಾರಾಮೆರಗು
ಕಾಂಗ್ರೆಸ್​ ಮೇಕೆದಾಟು ಪಾದಯಾತ್ರೆಯಲ್ಲಿ ಸಿನಿಮಾ ಕಲಾವಿದರು ಸಹ ಭಾಗಿಯಾಗಿದ್ದಾರೆ. ನಟ ದುನಿಯಾ ವಿಜಯ್​, ಸಾಧುಕೋಕಿಲ, ಹಂಸಲೇಖ, ಜಯಮಾಲಾ, ಉಮಾಶ್ರೀ ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ.

ಮೊದಲ ದಿನ 15 ಕಿ.ಮೀ ಪಾದಯಾತ್ರೆ ನಡೆಯಲಿದೆ. ಸಂಗಮದಿಂದ ದೊಡ್ಡ ಆಲಹಳ್ಳಿಯವರೆಗೂ ನಡೆಯಲಿದೆ. ಆದರೆ, ಪಾದಯಾತ್ರೆ ಸರ್ಕಾರ ಈಗಾಗಲೇ ಅನುಮತಿ ನಿರಾಕರಿಸಿದೆ. ಕರೊನಾ ಹಿನ್ನೆಲೆಯಲ್ಲಿ ಕೆಲವು ನಿರ್ಬಂಧಗಳನ್ನು ಸರ್ಕಾರ ಹೇರಿದೆ. ರಾಮನಗರ ಜಿಲ್ಲೆಯಾದ್ಯಂತ 144ನೇ ಸೆಕ್ಷನ್ ಸಹ ಜಾರಿಗೊಳಿಸಲಾಗಿದೆ. ಒಂದು ವೇಳೆ ಪಾದಯಾತ್ರೆ ನಡೆಸಿದ್ದೇ ಆದಲ್ಲಿ ಕ್ರಮ ಕೈಗೊಳ್ಳುವುದಾಗಿ ಈಗಾಗಲೇ ರಾಮನಗರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಗಿರೀಶ್​ ತಿಳಿಸಿದ್ದಾರೆ.

ಸರ್ಕಾರ ನಿರಾಕರಣೆ ಹಾಗೂ ಕರೊನಾ ನಿರ್ಬಂಧಗಳನ್ನು ಲೆಕ್ಕಿಸದೇ ಕಾಂಗ್ರೆಸ್​ ಪಾದಯಾತ್ರೆಯನ್ನು ಆರಂಭಿಸಿದೆ. ಇಂದು (ಜ.09) ಬೆಳಗ್ಗೆ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಡಿಕೆಶಿ, ವಿಶೇಷ ಪೂಜೆ ಸಲ್ಲಿಸಿದರು. ನಿನ್ನೆ ರಾತ್ರಿಯೇ ಸ್ವಲ್ಪಕಾಲ ಸಂಗಮದಲ್ಲಿ ಸುತ್ತಾಡಿ ಅಲ್ಲಿಯೇ ಉಳಿದರು. ಪಾದಯಾತ್ರೆ ಚಾಲನೆ ಸಮಾರಂಭವನ್ನು ಯಶಸ್ವಿಗೊಳಿಸುವ ಸಲುವಾಗಿ ಸ್ಥಳೀಯ ಮುಖಂಡರ ಜತೆ ನಿನ್ನೆಯೇ ಸಭೆ ನಡೆಸಿದ್ದಾರೆ. ಪಾದಯಾತ್ರೆ ನಿರ್ವಿಘ್ನವಾಗಿ ನೆರವೇರಲಿ ಎಂದು ಆಶಿಸಿ ನಿನ್ನೆ ಡಿ.ಕೆ ಶಿವಕುಮಾರ್ ಕುಟುಂಬ ಸಮೇತರಾಗಿ ಕನಕಪುರದ ದೇವಾಲಯ, ಮಸೀದಿ ಹಾಗು ಚರ್ಚ್‌ಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours