ಭೋವಿ ಗುರುಪೀಠದಲ್ಲಿ ಅಂಬೇಡ್ಕರ್ ಜಯಂತಿ

 

 

 

 

ಭೋವಿ ಗುರುಪೀಠದಲ್ಲಿ ಅಂಬೇಡ್ಕರ್ ಜಯಂತಿ

ಚಿತ್ರದುರ್ಗ:  ಧರ್ಮವೆಂಬುದು ಪವಿತ್ರ ಹಾಗೂ ಪಾವನ ಮನಸ್ಸುಗಳಗನ್ನು ನೀಡುತ್ತದೆ. ಆದರೆ ಎಲ್ಲಾ ಕಾಲಗಳಂತೆ ಪ್ರಸ್ತುತ ದಿನಮಾನಗಳಲ್ಲಿ ಧರ್ಮದ ತಳಹದಿಯಲ್ಲಿ ಮಾನವ ಸಂಘರ್ಷದ ದಿನಗಳ ಮುನ್ನುಡಿ ಈಗಿನ ವಿದ್ಯಾಮಾನಗಳನ್ನು ಪ್ರತಿಬಿಂಬಿಸುತ್ತಿವೆ. ಆದರೆ ಎಲ್ಲಾ ಧರ್ಮಗಳ ಸಾರವನ್ನು ಹಿಡಿದಿಟ್ಟಿರುವುದು ಸರ್ವರ ಒಳಿತನ್ನೇ ಬಯಸುವ, ಸರ್ವರನ್ನು ಸಮಾನರೆಂದು ತೋರುವ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ
ಸರ್ವರ ಸರ್ವಾಂಗಿಣ ಅಭಿವೃದ್ಧಿಗೆ ಪಣತೊಟ್ಟಿರುವ ಭಾರತೀಯ ಧರ್ಮ. ಅದುವೇ ಸಂವಿಧಾನ. ನಮ್ಮ ಧರ್ಮ ಭಾರತೀಯ, ನಮ್ಮ ಧರ್ಮ ಗ್ರಂಥ ಸಂವಿಧಾನ. ಆಧುನಿಕ ಭಾರತದ ಧರ್ಮಗುರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಪ್ರತಿಪಾದಿಸಿದರು.

ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದ ಎಸ್.ಜೆ.ಎಸ್ ಸಮೂಹ ವಿದ್ಯಾಸಂಸ್ಥೆಗಳ ಅಡಿಯಲ್ಲಿ ಜರುಗಿದ ಅಂಬೇಡ್ಕರ್ ಜಯಂತಿಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಸಾಧನೆಯ ಉತ್ತುಂಗದ ಶಿಖರಕ್ಕೇರಿದ ಮಹಾನ್ ಸಾಧಕ ಡಾ. ಬಿ. ಆರ್. ಅಂಬೇಡ್ಕರ್. ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರು. ನಮ್ಮ ದೇಶದ ಪ್ರತಿಯೊಬ್ಬರ ಪಾಲಿನ ಪವಿತ್ರ ಗ್ರಂಥವಾದ ಸಂವಿಧಾನದ ಹಿಂದಿನ ದೊಡ್ಡ ಶಕ್ತಿ ಬಾಬಾ ಸಾಹೇಬ್ ಅಂಬೇಡ್ಕರ್. ಸಮಾನತೆ, ಪ್ರಗತಿಯ ಕನಸು ಕಂಡ ಮೇರು ನಾಯಕ ನಮ್ಮ ಹೆಮ್ಮೆಯ ಸಂವಿಧಾನ ಶಿಲ್ಪಿ. ಅಂಬೇಡ್ಕರ್ ಅವರ ಬದುಕು ಎಲ್ಲರಿಗೂ ಸ್ಫೂರ್ತಿ. ಇವರ ಆದರ್ಶ ಎಲ್ಲರ ಜೀವನಕ್ಕೆ ದಾರಿ. ಅವರ ವ್ಯಕ್ತಿತ್ವ ಆದರ್ಶಪ್ರಾಯ.

ಒಂದು ಪರಿಪಕ್ವ ದೂರದೃಷ್ಟಿಯುಳ್ಳ ಆಡಳಿತಾತ್ಮಕ ರೂಪುರೇಷೆಯನ್ನು ಹಾಕಿಕೊಟ್ಟ ಧೀಮಂತ. ಅವರಲ್ಲಿನ ಸಾಮಾಜಿಕ ಕಳಕಳಿ, ಉದಾತ್ತ ನಿಲುವಿನಿಂದ ಭಾರತೀಯರೆಲ್ಲರ ಮನದಲ್ಲಿ ನೆಲೆಯಾಗಿದ್ದಾರೆ. ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂದು ಹತ್ತನೇ ಶತಮಾನದಲ್ಲಿ ಮಹಾ ಕವಿ ಪಂಪ ಹೇಳಿದ ಮಾತನ್ನು ಸಾಕಾರಗೊಳಿಸಿ ಸಮಾನತಾ ಸಮಾಜವನ್ನು ನಿರ್ಮಿಸುವಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರು ರಚಿಸಿರುವ ಭಾರತದ ಸಂವಿಧಾನವು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದೆ. ಅವರ ಸಮ-ಸಮಾಜದ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಹೊತ್ತ ಭಾರತ ಸಂವಿಧಾನವನ್ನು ಇಂದು ಜಗತ್ತಿನ ಇತರೆ ದೇಶಗಳೂ ಅನುಕರಿಸುತ್ತಿವೆ ಹಾಗೂ ಅನುಸರಿಸುತ್ತಿವೆ. ಅಂಬೇಡ್ಕರ್ ಅವರ ಆರಾಧನೆ ಮಾಡಿದರೆ ಸಾಲದು, ಅವರ ವಿಚಾರಗಳನ್ನು ಮತ್ತು ಪ್ರಸ್ತುತತೆಯನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕಾಗಿದೆ. ನಮಗೆ ಅಗತ್ಯವಾಗಿರುವ ಜಾತ್ಯಾತೀತ ಮೌಲ್ಯಗಳುಳ್ಳ ಜೀವಂತ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ಬೇಕಾದ ಚಳುವಳಿಯ ವಿಸ್ತಾರವನ್ನು ಪಡೆಯಲು ಅವರ ಸಮಗ್ರ ಚಿಂತನೆಯ ಮರುಮಂಥನ ನಡೆಯಬೇಕಿದೆ. ಓರ್ವ ಪರಿಪಕ್ವ ಪರಿಪೂರ್ಣ ಚಿಂತಕನ ಜನ್ಮದಿನದಂದು ಸಮಸಮಾಜ ನಿರ್ಮಾತೃಗಳಾಗಲು ನಾವು ಪರಿಣಾಮಕಾರಿ ಪರಿವರ್ತನವಾದಿಗಳಾಗಬೇಕು ಎಂದು ತಿಳಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ಅದ್ಭುತ ಪರಿಪೂರ್ಣ ಜ್ಞಾನ ಸಂಸ್ಕಾರ ವೀವೇಕದಿಂದ ತಮ್ಮ ಕಾಲಮಾನವನ್ನು ಮೆಟ್ಟಿನಿಂತು ಗೋಪುರೋಪಮವಾಗಿ ಬೆಳೆದುನಿಂತ ಮಹಾಮಾನವರಲ್ಲಿ ಒಬ್ಬರು ರಾಷ್ಟ್ರೀಯತಾವಾದಿಯಾಗಿ, ಕಾನೂನು ತಜ್ಞರಿಂದ, ರಾಜಕೀಯ ನೇತಾರರಾಗಿ, ಕ್ರಿಯಾಶೀಲ ಸಾಮಾಜಿಕ ಕಾರ್ಯಕರ್ತರಾಗಿ, ಶ್ರೇಷ್ಠ ಇತಿಹಾಸಕಾರರಾಗಿ, ಮಹಾದಾರ್ಶನಿಕರಾಗಿ, ಅಪ್ರತಿಮ ಚಿಂತಕರಾಗಿ, ಮಾನವಶಾಸ್ತ್ರಜ್ಞರಾಗಿ, ಖ್ಯಾತ ಅರ್ಥಶಾಸ್ತ್ರಜ್ಞರಾಗಿ, ಸಮೃದ್ಧ ಬರಹಗಾರರಾಗಿ, ಕ್ರಾಂತಿಕಾರಿಯಾಗಿ, ಅಸಾಮಾನ್ಯ ವಾಕ್ಪಟುವಾಗಿ, ಭಾರತೀಯ ಸಂವಿಧಾನದ ಪ್ರಮುಖ ಶಿಲ್ಪಿಯ ಆಧುನಿಕ ಭಾರತ ಬಹುಮುಖ ಪ್ರತಿಭೆಯಾಗಿದ್ದಾರೆ.

ಎಲ್ಲಾ ದುರ್ಬಲ ವರ್ಗಗಳ ವಿಮೋಚನೆಯಾಗದ ಹೊರತು ದೇಶದ ಸ್ವಾತಂತ್ರ್ಯ ಅರ್ಥರಹಿತ ಎಂಬ ಮೂಲತತ್ವವನ್ನು ಪ್ರತಿಪಾದಿಸುತ್ತ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಸ್ಥಾಪನೆಗಾಗಿ ಹೋರಾಡಿದ ಹಠವಾದಿಗಳೆಂದು ಕುಂಚಿಟಿಗ ಗುರುಪೀಠದ ಜಗದ್ಗುರು ಶ್ರೀ ಡಾ.ಶಾಂತವೀರ ಸ್ವಾಮೀಜಿ ಹೇಳಿದರು.

 

 

ಅಂಬೇಡ್ಕರ್‌ ಶೋಷಿತ ಸಮುದಾಯದ ಧನಿಯಾಗಿದ್ದರು. ಅವರ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಅವರ ಕೆಲಸಗಳು ನಮ್ಮೆಲ್ಲರಿಗೂ ಆದರ್ಶ. ನಾವೆಲ್ಲ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಭಾವನೆಗಳನ್ನು ಎತ್ತಿಹಿಡಿಯಬೇಕು. ಜೊತೆಗೆ ಅವುಗಳನ್ನು ಮೈಗೂಡಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ಅಂಬೇಡ್ಕರ್‌ ಕಂಡ ಪ್ರಜಾಪ್ರಭುತ್ವದ ಕನಸು ನನಸಾಗಿಸಲು ಸಾಧ್ಯವೆಂದು ಮುದ್ದೇಬಿಹಾಳ ತಂಗಡಗಿಯ ಹಡಪದ ಗುರುಪೀಠದ ಅನ್ನದಾನಿ ಭಾರತೀ ಅಪ್ಪಣ್ಣ ಸ್ವಾಮೀಜಿ ಹೇಳಿದರು.

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಜೀವನದುದ್ದಕ್ಕೂ ದೀನ ದಲಿತರು, ಶೋಷಿತರ ಸಮಾನತೆಗಾಗಿ ಹೋರಾಡಿದರು. ಅಸ್ಪೃಶ್ಯತೆ ಮತ್ತು ಜಾತಿವಾದದ ವಿರುದ್ಧ ಸಮರ ಸಾರಿ, ಮಹಿಳಾ ಸಬಲೀಕರಣಕ್ಕೆ ಶಿಕ್ಷಣವೇ ಮದ್ದು ಎಂಬ ನಿಲುವು ಹೊಂದಿದ್ದರು. ಭಾರತದ ಇತಿಹಾಸದಲ್ಲಿ ಅವರ ಹೆಸರು ಅಜರಾಮರ. ಅವರ ಚಿಂತನೆಗಳು ಸದಾ ಪ್ರೇರಣಾದಾಯಿ ಎಂದು ಅಥಣಿ ತೆಲಸಂಗದ ಕುಂಬಾರ ಗುರುಪೀಠದ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ ಹೇಳಿದರು.

ಕಾನೂನಿನ ಮೂಲಕ ನೀಡಿರುವ ಸ್ವಾತಂತ್ರ್ಯ ಎಲ್ಲರಿಗೂ ದೊರಕಬೇಕಾದರೆ, ಸಾಮಾಜಿಕ ಸ್ವಾತಂತ್ರ್ಯ ಅತ್ಯಗತ್ಯ ಎಂದು ಒತ್ತಿ ಹೇಳುವ ಮೂಲಕ ಸಾಮಾಜಿಕ ಸಮಾನತೆಗಾಗಿ ಅಹರ್ನಿಶಿ ಶ್ರಮಿಸಿದ ಧೀಮಂತ ಚೇತನ, ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್. ಅವರ ದರ್ಶಗಳು ಸರ್ವಕಾಲಕ್ಕೂ ಸ್ಮರಣೀಯವಾದದ್ದುಎ ಎಂದು ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ ಹೇಳಿದರು.

ನಿಮಗೆ ಬಂದಿರುವ ಕಷ್ಟಕ್ಕೆ ಹಣೆಬರಹ ಅಥವಾ ದೇವರು ಕಾರಣ ಎಂದು ನಂಬಿ ಕೂರಬೇಡಿ ನೀವೇ ಸ್ವತಃ ಬಗೆಹರಿಸಿಕೊಳ್ಳಿ, ಎಂದು ಎಚ್ಚರಿಸಿದ – ಡಾ॥ ಬಿ.ಆರ್.ಅಂಬೇಡ್ಕರ್ ಮಾತು ಅಕ್ಷರಶಃ ಸತ್ಯವಾಗಿದೆ. ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ ಹಾಗೂ ನಮ್ಮ ದೇಶ ಕಂಡ ಮಹಾನ್ ವ್ಯಕ್ತಿಗಳಲ್ಲಿ ಪ್ರಮುಖರು. ಮಹಿಳೆಯರ ಪ್ರಗತಿ, ಸಮಾಜದ ಏಳಿಗೆಗಾಗಿ ಶ್ರಮಿಸಿ, ಅಸಮಾನತೆ-ಅಸ್ಪೃಶ್ಯತೆಯ ವಿರುದ್ಧ ದನಿ ಎತ್ತಿ ಸಮಾಜವನ್ನು ತಿದ್ದಿ, ಭವ್ಯ ಭಾರತದ ನಿರ್ಮಾಣಕ್ಕೆ ದಾರಿ ತೋರಿದವರು. ಅವರ ಆದರ್ಶ ಗುಣಗಳು, ಸರ್ವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆಯೆಂದು ಚಳ್ಳಕೆರೆಯ ಬಸವಕಿರಣ ಸ್ವಾಮೀಜಿ ಹೇಳಿದರು.

ಶ್ರೇಷ್ಠ ಮಾನವತಾವಾದಿ ಅಂಬೇಡ್ಕರ್‌ ಅವರು ಜಾತಿಪದ್ಧತಿ, ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಮಹಾನ್ ಚೇತನ. ಸರ್ವರಿಗೂ ಸಮಪಾಲು ಸಮಬಾಳು ಧ್ಯೇಯದೊಂದಿಗೆ ಜಗತ್ತಿನ ಅತಿದೊಡ್ಡ ಲಿಖಿತ ಸಂವಿಧಾನವನ್ನು ಭಾರತ ದೇಶಕ್ಕೆ ನೀಡಿದ ಅದಮ್ಯ ಚೇತನ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್ ಎಂದು ಹಾವೇರಿ ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.

ಈ ಸಂದರ್ಭದಲ್ಲಿ ಎಸ್.ಜಿ.ಎಸ್ ವಿದ್ಯಾಸಂಸ್ಥೆಗಳ ಸಿಬ್ಬಂದಿ ವರ್ಗ ಉಪಸ್ಥಿತಿಯಿದ್ದರು.

[t4b-ticker]

You May Also Like

More From Author

+ There are no comments

Add yours