ಬಹುಗ್ರಾಮ ಕುಡಿಯುವ ನೀರು ಯೋಜನೆ: ಕಾಮಗಾರಿಗಳ ತನಿಖೆಗೆ ಸೂಚನೆ:ಸಿಇಒ ಡಾ.ಕೆ.ನಂದಿನಿದೇವಿ.

 

 

 

 

ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ನಂದಿನಿದೇವಿ
ಬಹುಗ್ರಾಮ ಕುಡಿಯುವ ನೀರು ಯೋಜನೆ: ಕಾಮಗಾರಿಗಳ ತನಿಖೆಗೆ ಸೂಚನೆ
ಚಿತ್ರದುರ್ಗ,ನವೆಂಬರ್11:
ಬಹುಗ್ರಾಮ ಕುಡಿಯುವ ನೀರು ಯೋಜನೆ ಸೇರಿದಂತೆ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಕುಡಿಯುವ ನೀರು ಸರಬರಾಜು ಕಾಮಗಾರಿಗಳನ್ನು ಗ್ರಾಮ ಪಂಚಾಯಿತಿವಾರು ಪರಿಶೀಲಿಸಿ, ತನಿಖೆ ಮಾಡಿ ವರದಿ ನೀಡಲು ಅಧಿಕಾರಿಗಳ ತಂಡ ನೇಮಕಕ್ಕೆ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆ ಒಪ್ಪಿಗೆ ನೀಡಿತು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಬಹುಗ್ರಾಮ ಕುಡಿಯುವ ನೀರು ಯೋಜನೆ ಹಾಗೂ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಸರಬರಾಜು ಕಾಮಗಾರಿಗಳ ಗುಣಮಟ್ಟ ಸೇರಿದಂತೆ ಸಾಧಕ-ಬಾಧಕಗಳ ಕುರಿತು ಕುಲಂಕೂಷವಾದ ವರದಿ ನೀಡಬೇಕು. ಅಧಿಕಾರಿಗಳ ತಂಡದಲ್ಲಿ ಜಿಲ್ಲಾಮಟ್ಟದ  ಅಧಿಕಾರಿಗಳು, ಇಂಜಿನಿಯರ್‍ಗಳು, ಪಿಡಿಒಗಳನ್ನೊಳಗೊಂಡ ತಂಡ ರಚನೆ ಮಾಡಿ 15ದಿನಗಳೊಳಗೆ ತನಿಖೆ ಮಾಡಬೇಕು ವರದಿ ಸಲ್ಲಿಸಬೇಕು. ಅಧಿಕಾರಿಗಳು ಸಲ್ಲಿಸಿದ ವರದಿಯನ್ನು ಸರ್ಕಾರಕ್ಕೆ ಕಳಿಸಲಾಗುವುದು. ಕಳಪೆ ಕಾಮಗಾರಿ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಬಿಟ್ಟು ಹೋದ ಹಾಗೂ ಉಳಿದ ಜನವಸತಿಗಳನ್ನು ಸೇರ್ಪಡೆಗೊಳಿಸುವ ಸಲುವಾಗಿ ಹಾಗೂ ಎರಡನೇ ಹಂತದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಗ್ರಾಮಗಳಿಗೂ ಹೆಚ್ಚುವರಿಯಾಗಿ ಕ್ರಿಯಾಯೋಜನೆ ತಯಾರಿಸಬೇಕು. ಜಿಲ್ಲೆಯ ಯಾವ ಶಾಲೆ, ಅಂಗನವಾಡಿಗಳಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲವೊ ಅಂತಹ ಶಾಲೆ, ಅಂಗನವಾಡಿಗಳ ವರದಿ ನೀಡಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಲಜೀವನ್ ಮಿಷನ್: ಜಲಜೀವನ್ ಮಿಷನ್ ಯೋಜನೆಯಡಿ ಅಂಗನವಾಡಿ, ಶಾಲೆ, ಕಾಲೇಜು, ಹಾಸ್ಟೆಲ್‍ಗಳಿಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ. ಜಿಲ್ಲೆಯಲ್ಲಿನ ಶಾಲೆಗಳಿಗೆ ಕುಡಿಯುವ ನೀರು ಒದಗಿಸಲು ಚಿತ್ರದುರ್ಗ ತಾಲ್ಲೂಕಿನಲ್ಲಿ 52 ಕಾಮಗಾರಿಗಳು, ಚಳ್ಳಕೆರೆ 56, ಹಿರಿಯೂರು 47, ಹೊಳಲ್ಕೆರೆ 18, ಹೊಸದುರ್ಗ 38 ಹಾಗೂ ಮೊಳಕಾಲ್ಮರು ತಾಲ್ಲೂಕಿನಲ್ಲಿ 20 ಕಾಮಗಾರಿಗಳು ಸೇರಿದಂತೆ ಒಟ್ಟು 231 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಅಂಗನವಾಡಿಗಳಿಗೆ ಕುಡಿಯುವ ನೀರು ಒದಗಿಸಲು ಚಿತ್ರದುರ್ಗ ತಾಲ್ಲೂಕಿನಲ್ಲಿ 220 ಕಾಮಗಾರಿಗಳು, ಚಳ್ಳಕೆರೆ 276, ಹಿರಿಯೂರು 242, ಹೊಳಲ್ಕೆರೆ 190, ಹೊಸದುರ್ಗ 221 ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 171 ಕಾಮಗಾರಿಗಳು ಸೇರಿದಂತೆ ಒಟ್ಟು 1320 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಜಿಲ್ಲೆಯ 189 ಗ್ರಾಮ ಪಂಚಾಯಿತಿಗಳಿಗೆ ಒಟ್ಟು ರೂ.35340641 ಮೊತ್ತ ಬಿಡುಗಡೆಯಾಗಿದ್ದು, ರೂ.36124481 ಮೊತ್ತ ಬಾಕಿ ಪಾವತಿಸಬೇಕಾಗಿದೆ.
ಜಲಜೀವನ್ ಮಿಷನ್ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ ಚಿತ್ರದುರ್ಗ ತಾಲ್ಲೂಕಿನ ಓಬವ್ವ ನಾಗ್ತಿಹಳ್ಳಿ, ಆರ್ಲಘಟ್ಟ, ಚಿಕ್ಕಬೆನ್ನೂರು, ಬ್ಯಾಲಹಾಳ್, ಲಿಂಗವ್ವನಾಗ್ತಿಹಳ್ಳಿ, ಹಿರೇಬೆನ್ನೂರು, ಹನುಮನಹಳ್ಳಿ, ಹಳುವುದರ ಲಂಬಾಣಿಹಟ್ಟಿ, ಪಳಿಕೆಹಳ್ಳಿ ಸೇರಿದಂತೆ 22 ಜನವಸತಿಗಳು ಹಾಗೂ ಹೊಳಲ್ಕೆರೆ ತಾಲ್ಲೂಕಿನ ಕುಟುವಿಹಳ್ಳಿ, ದೊಡ್ಡಿಗನಾಳ್, ತಣಿಗೆಹಳ್ಳಿ, ಕಾಗಳಗೆರೆ, ಮುತ್ತಗದೂರು ಸೇರಿದಂತೆ 07 ಜನವಸತಿಗಳ ಒಟ್ಟು 6865 ಮನೆಗಳಿಗೆ ಅಂದಾಜು ಮೊತ್ತ ರೂ.11.14 ಕೋಟಿ ವೆಚ್ಚದಲ್ಲಿ ಕಾರ್ಯತ್ಮಕ ನಳ ಸಂಪರ್ಕ ಕಲ್ಪಿಸಲು ಅವಕಾಶ ಕಲ್ಪಿಸಿಕೊಳ್ಳಲಾಗಿದೆ. ಕಾಮಗಾರಿಗಳನ್ನು ಟೆಂಡರ್ ಕರಾರು ಪ್ರಕಾರ ಗುತ್ತಿಗೆದಾರರುಗಳಿಗೆ ವಹಿಸಲಾಗಿದ್ದು, ಈವರೆಗೆ ಒಟ್ಟು 06 ಜನವಸತಿಗಳಲ್ಲಿನ ನಳ ಸಂಪರ್ಕ ಪೂರ್ಣಗೊಂಡಿರುತ್ತದೆ. ಉಳಿದ ಕಾಮಗಾರಿಗಳಲ್ಲಿ 03 ಜನವಸತಿಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, ಉಳಿದ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ ಎಂದು ಜಿಲ್ಲಾ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಸಿಇಒ, ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿಲ್ಲ ಎಂದು ಸಾರ್ವಜನಿಕರು ಆಕ್ಷೇಪಣೆ ಮಾಡುತ್ತಿದ್ದಾರೆ. ನೀರು ಸೌಲಭ್ಯ ಕಲ್ಪಿಸುವ ಪೈಪ್‍ಲೈನ್‍ಗಳನ್ನು ರಸ್ತೆಯ ಮೇಲ್ಭಾಗದಲ್ಲಿ ಅಳವಡಿಸಿದ್ದಾರೆ ಎಂಬ ದೂರುಗಳು ಬರುತ್ತಿದ್ದು, ಈ ಕುರಿತು ಪರಿಶೀಲನೆ ನಡೆಸಿ ವರದಿ ನೀಡಬೇಕು ಎಂದು ಹೇಳಿದರು.
ಬಹುಗ್ರಾಮ ಕುಡಿಯುವ ನೀರು ಯೋಜನೆ: ಹಿರಿಯೂರು ತಾಲ್ಲೂಕು ವ್ಯಾಪ್ತಿಯ ಐಮಂಗಲ ಹಾಗೂ ಇತರೆ 37 ಗ್ರಾಮಗಳು ಐಮಂಗಳ ಬಹುಗ್ರಾಮ ಕುಡಿಯುವ ನೀರು ಯೋಜನೆ ಹಾಗೂ ಜವನಗೊಂಡನಹಳ್ಳಿ ಹಾಗೂ ಇತರೆ 38 ಗ್ರಾಮಗಳಿಗೆ  ಜವನಗೊಂಡನಹಳ್ಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕಾಮಗಾರಿಗಳು ನಡೆಯುತ್ತಿವೆ.
ಹೊಸದುರ್ಗ ಪಟ್ಟಣ ಹಾಗೂ ಇತರೆ 27 ಗ್ರಾಮಗಳು ಹಾಗೂ ಹೊಸದುರ್ಗ ಪಟ್ಟಣ ಹಾಗೂ ಇತರೆ 65 ಗ್ರಾಮಗಳಿಗೆ ಬಹುಗ್ರಾಮ ಯೋಜನೆಯಡಿಯಲ್ಲಿ ಕುಡಿಯುವ ನೀರು ಸರಬರಾಜು ಕಾಮಗಾರಿಗಳು ನಡೆಯುತ್ತಿವೆ.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಾ; ರಂಗಸ್ವಾಮಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಜ್ಞಾನೇಶ್, ಸಮಿತಿ ಸದಸ್ಯರಾದ ಕೃಷಿ ಉಪನಿರ್ದೇಶಕರಾದ ಹುಲಿರಾಜ್, ವಾರ್ತಾಧಿಕಾರಿ ಧನಂಜಯ, ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ಮಂಜುನಾಥ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

 

 

[t4b-ticker]

You May Also Like

More From Author

+ There are no comments

Add yours