ಜಿಲ್ಲಾ ಮಟ್ಟದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸೀಟು ಹಂಚಿಕೆ:ಸಚಿವ ಬಿ.ಸಿ.ಪಾಟೀಲ್

 

 

 

 

 

ಚಿತ್ರದುರ್ಗ(ಕರ್ನಾಟಕ ವಾರ್ತೆ).ಏ.24: ಜಿಲ್ಲೆಯನ್ನು ಕೇಂದ್ರವಾಗಿರಿಸಿಕೊಂಡು ಜಿಲ್ಲಾ ಮಟ್ಟದಲ್ಲಿಯೇ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಆಯ್ಕೆಯಾದ ಮಕ್ಕಳಿಗೆ ಸೀಟು ಹಂಚಿಕೆ ಮಾಡಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಹಿರಿಯೂರು ತಾಲ್ಲೂಕು ಯಲ್ಲದಕೆರೆ ಗ್ರಾಮದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 18 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಮೊರಾರ್ಜಿ ದೇಸಾಯಿ ವಸತಿ ಶಾಲೆ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಈ ಹಿಂದೆ ರಾಜ್ಯ ಮಟ್ಟದಲ್ಲಿ ಮೊರಾರ್ಜಿ ವಸತಿ ಶಾಲೆಯ ಪ್ರವೇಶಕ್ಕೆ ಪರೀಕ್ಷೆ ನಡೆಸಿ, ಆಯ್ಕೆಯಾದ ಮಕ್ಕಳಿಗೆ ದೂರದ ಊರುಗಳಲ್ಲಿರುವ ವಸತಿ ಶಾಲೆಗಳಲ್ಲಿ ಪ್ರವೇಶ ನೀಡಲಾಗುತ್ತಿತ್ತು. ಇದರಿಂದ ಮಕ್ಕಳಿಗೆ ಹಾಗೂ ಪೋಷಕರಿಗೆ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡ ಸರ್ಕಾರ ವಸತಿ ಶಾಲೆಗಳ ಸೀಟು ಹಂಚಿಕೆಯನ್ನು ಜಿಲ್ಲೆಯ ಒಳಗೆ ನೀಡಲು ಕ್ರಮವಹಿಸಿದೆ. ಉತ್ತಮ ಪರಿಸರದಲ್ಲಿ ಯಲ್ಲದಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ನೂತನ ಕಟ್ಟಡ ನಿರ್ಮಿಸಲಾಗಿದೆ.

ಸಂತೋಷದಿಂದ ಶಾಲೆ ಉದ್ಘಾಟನೆ ಮಾಡಿದ್ದೇನೆ. ಭವ್ಯ ಕಟ್ಟದ ಜೊತೆಗೆ ಇತರೆ ಎಲ್ಲಾ ಮೂಲಭೂತ ಸೌಲಭ್ಯ ನೀಡಲು ಸರ್ಕಾರ ಬದ್ದವಾಗಿದೆ. ಶಾಸಕಿ ಸಹೋದರಿ ಪೂರ್ಣಿಮಾ ಕೆ.ಶ್ರೀನಿವಾಸ್ ಅವರು ಅಚಲ ಪ್ರಯತ್ನದಿಂದಾಗಿ ವಸತಿ ಶಾಲೆ ನಿರ್ಮಾಣಕ್ಕೆ ಜಾಗ ಲಭಿಸಿದೆ. ಹೃದಯ ಶ್ರೀಮಂತಿಕೆ ಇರುವ ಶಾಸಕಿಯಾಗಿದ್ದಾರೆ. ಕ್ಷೇತ್ರದ ಜನರೊಂದಿಗೆ ಒಡನಾಟಕ್ಕಾಗಿ ಹಿರಿಯೂರಿನಲ್ಲಿ ಮನೆ ನಿರ್ಮಿಸಿಕೊಂಡು ಇದ್ದಾರೆ. ಸರ್ಕಾರ 90 ಕೋಟಿ ವೆಚ್ಚದ ಧರ್ಮಪುರ ನೀರಾವರಿ ಯೋಜನೆ ಮಂಜೂರಾತಿ ನೀಡಿದೆ. ವಾಣಿ ವಿಲಾಸ ಸಾಗರ ಅಣೆಕಟ್ಟಿಗೆ ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ನೀಡಲಾಗಿದೆ. ಇದರಿಂದ ಈ ಭಾಗದ ಕೃಷಿ ಚಟುವಟಿಕೆಗೆ ಸಹಕಾರಿಯಾಗಿದೆ. ರೈತರು ಕೃಷಿ ಸಮಗ್ರ ಪದ್ದತಿ ಅಳವಡಿಕೊಳ್ಳಬೇಕು. ಒಂದು‌ ಎಕರೆಯಲ್ಲಿ ಹಲವು ಬೆಳೆ ಬೆಳೆಯುವುದರೊಂದಿಗೆ, ಉಪಕಸುಬು, ಪಶುಸಂಗೋಪನೆ ಕೈಗೊಳ್ಳಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ವಸತಿ ಶಾಲೆ ನಿರ್ಮಾಣದಿಂದ ಈ ಭಾಗದ ಮಕ್ಕಳ ಜೀವನ ಉಜ್ವಲವಾಗಿದೆ. ಉಡುವಳ್ಳಿ ನವೋದಯಶಾಲೆ ಮಾದರಿಯಲ್ಲಿಯೇ ಮೊರಾರ್ಜಿ ವಸತಿ ಶಾಲೆಯಲ್ಲೂ ಉತ್ತಮ ಶಿಕ್ಷಣ ದೊರಕುವುದು. ದಟ್ಟಕಾಡು, ವಾಣಿ ವಿಲಾಸ ಸಾಗರದ ಹಿನ್ನೀರಿನ ಪರಿಸರ ಇರುವ ಪ್ರಕೃತಿ ಮಧ್ಯೆ ಶಾಲೆಯಿದೆ. ಕ್ರೈಸ್ ಸಂಸ್ಥೆ ಶಾಲೆಯ ಕಟ್ಟಡದ ಜೊತೆಗೆ ಇತರೆ ಮೂಲಭೂತ ಸೌಕರ್ಯಗಳನ್ನು ಸಂಪೂರ್ಣವಾಗಿ ನೀಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯೂರು ಶಾಸಕಿ ಪೂರ್ಣಿಮಾ ಕೆ.ಶ್ರೀನಿವಾಸ್, ಜವಗೊಂಡನಹಳ್ಳಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ, ವರ್ಗ ಹಾಗೂ ಇತರೆ ಹಿಂದುಳಿದ ವರ್ಗದವರು ಹೆಚ್ಚಿನ ಜನಸಂಖ್ಯೆಯಲ್ಲಿದ್ದಾರೆ. ಹೋಬಳಿ ವ್ಯಾಪ್ತಿಯಲ್ಲಿ 25 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಯಲ್ಲದಕೆರೆ ಪಂಚಾಯತಿ‌ ವ್ಯಾಪ್ತಿಯಲ್ಲಿ 28 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳ‌ನ್ನು ಮಾಡಲಾಗಿದೆ. ಅಲೆಮಾರಿ ಕುಟುಂಬಗಳಿಗೆ 400 ಮನೆಗಳನ್ನು ಮಂಜೂರ ಮಾಡಲಾಗಿದೆ. ಪರಿಶಿಷ್ಟ ಜಾತಿ ವರ್ಗದ ಕುಟುಂಬಗಳಿಗೆ 50 ಮನೆಗಳನ್ನು ನೀಡಲಾಗಿದೆ. 1.50 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ಅಭಿವೃದ್ಧಿ ಮಾಡಲಾಗಿದೆ. ಬಹುಗ್ರಾಮ ಯೋಜನೆಯಡಿ ಈ ಭಾಗದ 131 ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಕೇಂದ್ರ ಸರ್ಕಾರ 131 ಕೋಟಿ ವೆಚ್ಚದಲ್ಲಿ ಹಿರಿಯೂರು ಹುಳಿಯಾರ ರಸ್ತೆ ಮೇಲ್ದರ್ಜೆಗೆ ಏರಿಸಲಿದೆ. ಶಾಸಕಿಯಾಗಿ ಕ್ಷೇತ್ರದ ನೀರಾವರಿ, ಶಾಲೆ , ಆಸ್ಪತ್ರೆಗಳ ಅಭಿವೃದ್ಧಿ ಒತ್ತು ನೀಡುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಯಲ್ಲದಕೆರೆ ಗ್ರಾ.ಪಂ.ಅಧ್ಯಕ್ಷೆ ಸುನಂದಮ್ಮ ಚಿಕ್ಕರಂಗಪ್ಪ, ಉಪಾಧ್ಯಕ್ಷ ಜಯಣ್ಣ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳು ಸಂಘದ ಅಧೀಕ್ಷಕ ಅಭಿಯಂತರ ಹೆಚ್.ಎಲ್.ವೆಂಕಟೇಶ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ನಾಗೇಂದ್ರ ನಾಯ್ಕ್ ಟಿ.ಹೆಚ್. ಹಿರಿಯೂರು ತಹಶೀಲ್ದಾರ ಎನ್ ಶಿವಕುಮಾರ್ , ತಾ.ಪಂ.ಇಓ ಬಿ.ಎಲ್.ಈಶ್ವರ್ ಪ್ರಸಾದ್, ಕ್ಷೇತ್ರಶಿಕ್ಷಣಾಧಿಕಾರಿ ನಾಗಭೂಷಣ್ ಸೇರಿದಂತೆ ಇತರೆ ಗ್ರಾ.ಪಂ. ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

 

 

*ವಸತಿ ಶಾಲೆ ಕಟ್ಟಡದ ವಿಷೇಶತೆಗಳು*

ಹಿರಿಯೂರು ತಾಲೂಕು ಯಲ್ಲದಕೆರೆ ಗ್ರಾಮದ‌ 8 ಎಕರೆ ಜಾಗದಲ್ಲಿ, 18 ಕೋಟಿ ವೆಚ್ಚದಲ್ಲಿ ನೂತನ ವಸತಿ ಶಾಲೆ ಸಂಕೀರ್ಣ ನಿರ್ಮಿಸಲಾಗಿದೆ. 10 ಅಕ್ಟೋಬರ್ 2019‌ ರಲ್ಲಿ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗಿದೆ. 08 ಮಾರ್ಚ್ 2021 ರಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಬೆಂಗಳೂರಿನ ರಾಮಕೃಷ್ಣ ಇಫ್ರಾಸ್ಟಕ್ಚರ್ ಸಂಸ್ಥೆ ನಿರ್ಮಾಣ ಕಾಮಗಾರಿ ಕೈಗೊಂಡಿದೆ. 250 ಮಕ್ಕಳಿಗೆ 6 ರಿಂದ 10 ತರಗತಿಯವರೆಗೆ ವಸತಿ ಸಹಿತ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತದೆ. ಇದಕ್ಕಾಗಿ ಜಿ+2 ಅಂತಸ್ತಿನ 1505 ಚದರ ಮೀಟರ್ ವಿಸ್ತೀರ್ಣದ ಶಾಲಾ ಸಂಕೀರ್ಣ, 402 ಚದರ ಮೀಟರ್ ವಿಸ್ತೀರ್ಣದ ಅಡುಗೆ ಮನೆ, ಜಿ+1 ಅಂತಸ್ತಿನ 1281 ಚದರ ಮೀಟರ್ ವಿಸ್ತೀರ್ಣದ ಬಾಲಕರ ಹಾಗೂ ಬಾಲಕಿಯರ ಪ್ರತ್ಯೇಕ ವಸತಿ ನಿಲಯ, 536 ಚದರ ಮೀಟರ್ ವಿಸ್ತೀರ್ಣದ ವೇದಿಕೆ ಮತ್ತು ಸಭಾಂಗಣ,
ಪಾಂಶುಪಾಲರು, ಬೋಧಕ ಮತ್ತು ಬೋಧಕತೇರ ಸಿಬ್ಬಂದಿ ವಸತಿ ನಿಲಯ ನಿರ್ಮಿಸಲಾಗಿದೆ. ಕೊಳವೆ ಬಾವಿ, ನೀರಿನ ತೊಟ್ಟಿ, ಓಳಚರಂಡಿ, ಸೆಪ್ಟಿಕ್ ಟ್ಯಾಂಕ್, ವಿದ್ಯುತ್ ಸಂಪರ್ಕ, ಭದ್ರತಾ ಸಿಬ್ಬಂದಿ ಕೊಠಡಿ, ಸೋಲಾರ್ ಹೀಟರ್ ವಾಟರ್, ಸೋಲಾರ್ ಬೀದಿ ದೀಪಗಳು, ಸುಸಜ್ಜಿತ ರಸ್ತೆ, ಆವರಣದಗೋಡೆ ಆಟದ ಮೈದಾನ ಸೇರಿದಂತೆ ಇತರ ಮೂಲಭೂತ ಸೌಕರ್ಯಗಳ ಕಲ್ಪಿಸಲಾಗಿದೆ.

*ಬಾಕ್ಸ್ 1*

*ಹಳೆಯ ನೆನಪು ಸ್ಮರಿಸಿದ ಸಚಿವರು*

ಕಾರ್ಯಕ್ರಮದಲ್ಲಿ ಮಾತನಾಡುವಾಗ ಹಿರಿಯೂರಿನೊಂದಿಗೆ ಇರುವ ಹಳೆಯ ಬಾಂಧವ್ಯವನ್ನು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಸ್ಮರಿಸಿದರು. ಹಿರಿಯೂರು ಪಟ್ಟಣದಲ್ಲಿ ಪೊಲೀಸ್ ಇನ್ಸ್ಪೆಕ್ಟರ್‌ ಆಗಿ ಕರ್ತವ್ಯ ನಿರ್ವಹಿಸಿದ್ದೆ. ಇಂದು ಜನರ ಆರ್ಶೀವಾದದಿಂದ ಜಿಲ್ಲಾ ಉಸ್ತುವಾರಿ ಸಚಿವನಾಗಿ ಆಗಮಿಸಿದ್ದೇನೆ. ಕೆಲಸ ನಿರ್ವಹಿಸುವಾಗ ಅಭಿನಯಿಸಿದ ಟಿಪ್ಪು ಸುಲ್ತಾನ್, ಕುರುಕ್ಷೇತ್ರ ನಾಟಕ‌ಗಳನ್ನು ಹಿರಿಯೂರಿನ ಜನ ಬಹಳ ಮೆಚ್ಚಿದ್ದರು. ಇದರಿಂದ ಸಿನಿಮಾ ರಂಗದಲ್ಲಿ ಅವಕಾಶ ದೊರೆತು, ನಂತರ ರಾಜಕೀಯ ರಂಗ ಪ್ರವೇಶಿಸಿ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದೇನೆ. ಹಿರಿಯೂರು ನನ್ನ ತವರು ಮನೆಯಾಗಿದೆ ಎಂದರು.

*ಬಾಕ್ಸ್ 2*

*ಪಿ.ಎಸ್.ಐ.ನೇಮಕಾತಿ ಅಕ್ರಮ ದುರದೃಷ್ಟಕರ*

ವಸತಿ ಶಾಲೆ ಉದ್ಘಾಟನೆಗೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್ ಪಿ.ಎಸ್.ಐ.ನೇಮಕಾತಿ ಅಕ್ರಮವಾಗಿರುವುದು ದುರದೃಷ್ಟಕರ ಸಂಗತಿ. ಸರ್ಕಾರ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ತಪ್ಪಿತಸ್ಥರು‌ ಯಾವುದೇ ರಾಜಕೀಯ ಹಿನ್ನಲೆ ಹೊಂದಿದ್ದರು, ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಅಕ್ರಮದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಅನ್ಯಾಯವಾಗುತ್ತದೆ ಎಂದರು.

[t4b-ticker]

You May Also Like

More From Author

+ There are no comments

Add yours