ಚಿತ್ರದುರ್ಗ ಜಿಲ್ಲೆಯಲ್ಲಿನ ತೋಟಗಾರಿಕೆ ಅಭಿವೃದ್ಧಿ, ಕೋಲ್ಡ್ ಸ್ಟೋರೆಜ್, ಪುಡ್‍ಪಾರ್ಕ್ ಬಗ್ಗೆ ಗಮನಹರಿಸುವೆ: ಸಚಿವ ಎನ್.ಮುನಿರತ್ನ

 

 

 

 

ಚಿತ್ರದುರ್ಗ,ಜನವರಿ29:
ಚಿತ್ರದುರ್ಗ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ವಿಪುಲ ಅವಕಾಶಗಳಿದ್ದು, ಭದ್ರಾ ಮೇಲ್ದಂಡೆ ಯೋಜನೆಯಿಂದ ಇನ್ನಷ್ಟು ಹೆಚ್ಚಲಿದ್ದು, ತಾಳೆ ಬೆಳೆ ವಿಸ್ತರಣೆ ಸೇರಿದಂತೆ ಕೋಲ್ಡ್ ಸ್ಟೋರೇಜ್ ಮತ್ತು ಹಿರಿಯೂರಿನ ಅಕ್ಷಯ ಪುಡ್‍ಪಾರ್ಕ್ ಸಮಸ್ಯೆಗಳ ಬಗ್ಗೆ ಗಮನಹರಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತೋಟಗಾರಿಕೆ ಮತ್ತು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಎನ್. ಮುನಿರತ್ನ ಹೇಳಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತೋಟಗಾರಿಕೆ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಭದ್ರಾ ಮೇಲ್ದಂಡೆ ವಿವಿಸಾಗರಕ್ಕೆ ನೀರು ತುಂಬಿಸುವುದರಿಂದ ನದಿ ಪಾತ್ರದ ಮೂಲಕ ನೀರು ಹರಿಸಲಾಗಿದ್ದು, ಹಿರಿಯೂರು, ಚಳ್ಳಕೆರೆ ಹಾಗೂ ಮೊಳಕಾಲ್ಮರು ಭಾಗದಲ್ಲಿ ಅಂತರ್ಜಲ ಸಾಕಷ್ಟು ವೃದ್ಧಿಯಾಗಿದೆ. ಈ ಭಾಗದಲ್ಲಿ ತಾಳೆ ಬೆಳೆ ಸೇರಿದಂತೆ ಇನ್ನು ಅನೇಕ ತೋಟಗಾರಿಕೆ ಬೆಳೆಗಳ ವಿಸ್ತರಣೆಗೆ ಸಾಕಷ್ಟು ಅವಕಾಶವಿದೆ. ತೋಟಗಾರಿಕೆ ಬೆಳೆಗಳ ವಿಸ್ತರಣೆ ಹೆಚ್ಚಿಸುವುದರ ಮೂಲಕ ರೈತರ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಿದಂತಾಗುತ್ತದೆ. ಈ ಭಾಗದಲ್ಲಿ ಹಣ್ಣು, ತರಕಾರಿಗಳನ್ನು ಬೆಳೆಯಲಿದ್ದು, ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಸಂಗ್ರಹಕ್ಕೆ ಕೋಲ್ಡ್ ಸ್ಟೋರೇಜ್‍ಗಳ ಅವಶ್ಯಕತೆ ಇದ್ದು, ಜಿಲ್ಲೆಯ ರೈತರಿಗೆ ಅನುಕೂಲವಾಗುವ ಸ್ಥಳಗಳಲ್ಲಿ ಕೋಲ್ಡ್ ಸ್ಟೋರೇಜ್‍ಗಳ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದರು.
ಹಿರಿಯೂರಿನ ಅಕ್ಷಯ್ ಪುಡ್‍ಪಾರ್ಕ್‍ನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಆಹಾರ ಉತ್ಪಾದನಾ ಘಟಕಗಳ ಸ್ಥಾಪನೆ ಆಗುತ್ತಿಲ್ಲ. ಇಲ್ಲಿಯೂ ಕೋಲ್ಡ್ ಸ್ಟೋರೇಜ್‍ಗೆ ಅವಕಾಶವಿದ್ದು, ಸಂಬಂಧಿಸಿದವರು ಅಭಿವೃದ್ಧಿಗೆ ಸಹಕರಿಸುತ್ತಿಲ್ಲ. ಇದರ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯಸರ್ಕಾರದಿಂದ ಅನುದಾನ ನೀಡಲಾಗಿದೆ. ಆದರೂ ಉಪಯೋಗಕ್ಕೆ ಬಾರದಂತೆ ಆಗಿದೆ. ಇದರ ಸಂಪೂರ್ಣ ಕಡತ ಹಾಗೂ ವರದಿಯೊಂದಿಗೆ ಕಳುಹಿಸಿಕೊಡುವಂತೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿಗೆ ಅವರಿಗೆ ಸೂಚಿಸಿದ ಸಚಿವರು, ಜಿಲ್ಲೆಗೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಂದಿನ ಬಜೆಟ್‍ನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹಿರಿಯೂರು ಶಾಸಕರಾದ ಪೂರ್ಣಿಮಾ ಕೆ.ಶ್ರೀನಿವಾಸ್ ಮಾತನಾಡಿ, ಅಕ್ಷಯ್ ಪುಡ್‍ಪಾರ್ಕ್‍ಗೆ ರಸ್ತೆ ನಿರ್ಮಾಣದ ಅವಶ್ಯಕತೆ ಅಗತ್ಯವಾಗಿ ಬೇಕಾಗಿದೆ. ರಸ್ತೆ ನಿರ್ಮಾಣದ ನೆಪವೊಡ್ಡಿ ಪುಡ್‍ಪಾರ್ಕ್‍ನಲ್ಲಿ ಯಾವುದೇ ಕಾಮಗಾರಿಗಳು ಆಗುತ್ತಿಲ್ಲ. ಸಂಬಂಧಿಸಿದವರು ಯಾರು ಸಹ ಸರಿಯಾಗಿ ಸ್ಪಂದಿಸುತಿಲ್ಲ. ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಹಾಗಾಗಿ ಅಕ್ಷಯ್‍ಪುಡ್ ಪಾರ್ಕ್‍ಅನ್ನು ಸರ್ಕಾರ ಹಿಂಪಡೆಯಲಿ ಎಂದು ಸಲಹೆ ನೀಡಿದರು.
ಭದ್ರಾ ಮೇಲ್ದಂಡೆ ಯೋಜನೆ ಮೂಲಕ ವೇದಾವತಿ ನದಿ ಪಾತ್ರದ ಮೂಲಕ ನೀರು ಹರಿಸುವಿಕೆಯಿಂದ ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಳವಾಗಿದ್ದು, ತಾಳೆ ಬೆಳೆಯಲು ಯೋಗ್ಯವಾಗಿದ್ದು, ತಾಳೆ ಬೆಳೆ ವಿಸ್ತರಣೆ ಯೋಜನೆ ರೂಪಿಸಿ ತಾಳೆ ಬೆಳೆಗೆ ಪ್ರೋತ್ಸಾಹ ನೀಡಬೇಕು ಎಂದು ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ, ಮುಂದಿನ ಏಪ್ರಿಲ್ ಮಾಹೆಯಿಂದ ತಾಳೆ ಬೆಳೆಗೆ ಅನುಮತಿ ನೀಡಲಾಗುವುದು. ತಾಳೆ ಬೆಳೆ ವಿಸ್ತರಣೆಗೆ ತೋಟಗಾರಿಕೆ ಬೆಳೆಗಳ ವಿಸ್ತರಣಾ ಕಾರ್ಯಕ್ರಮ ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ಅವಕಾಶವಿದ್ದು, ಜಿಲ್ಲೆಯಲ್ಲಿ 580 ಹೆಕ್ಟೇರ್ ಪ್ರದೇಶದಲ್ಲಿ ತಾಳೆ ಬೆಳೆ ಬೆಳೆಯಲು ರೈತರು ಮುಂದೆ ಬಂದಿದ್ದಾರೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ,  ಜಿಲ್ಲೆಯಲ್ಲಿ ಬಾಳೆ, ಪಪ್ಪಾಯಿ ಬೆಳೆ ಬೆಳೆಯುತ್ತಿದ್ದು, ಸೋರೇಜ್ ಮಾಡಲು ಆಗುತ್ತಿಲ್ಲ. ಕೋಲ್ಡ್ ಸ್ಟೋರೇಜ್‍ನ ಅವಶ್ಯಕತೆ ಹೆಚ್ಚಾಗಿದೆ. ಕತ್ತಾಳೆ ಬೆಳೆಗೆ ಬೇಡಿಕೆ ಹೆಚ್ಚಾಗಿದ್ದು, ಈ ಕುರಿತು ತೋಟಗಾರಿಕೆ ಇಲಾಖೆ ಅಗತ್ಯ ಕ್ರಮವಹಿಸಬೇಕು ಎಂದರು.
ಶಾಸಕರ ಅಭಿವೃದ್ಧಿ ನಿಧಿ ಸಕಾಲದಲ್ಲಿ ಬಳಸಿ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ಪ್ರತಿ ಕ್ಷೇತ್ರಕ್ಕೆ ಈ ವರ್ಷ ರೂ.2 ಕೋಟಿ ನೀಡಲಾಗಿದೆ. ನಿಗಧಿತ ಅವಧಿಯೊಳಗೆ ಅನುದಾನ ಬಳಕೆಯಾಗದಿದ್ದಲ್ಲಿ ಅದನ್ನು ಪುನಃ ಬಳಕೆಗೆ ಅವಕಾಶ ಇರುವುದಿಲ್ಲ. ಆದ್ದರಿಂದ ಅನುಷ್ಠಾನ ಇಲಾಖೆಗಳು ನಿಗಧಿತ ಅವಧಿಯಲ್ಲೇ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಅಡಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು.
ಕೆಲವೊಂದು ಲೋಪದೋಷಗಳಿಂದ ಕಾಮಗಾರಿ ಮುಕ್ತಾಯವಾಗಿದ್ದರೂ ಅಪೂರ್ಣವಾಗಿದೆ ಹಾಗೂ ಹಣವಿನಿಯೋಗವಾಗಿರುವುದಿಲ್ಲ ಎಂದು ಸೂಚ್ಯಂಕದಲ್ಲಿರುತ್ತದೆ. ಹಾಗಾಗಿ ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ನಿಗಧಿತ ಅವಧಿಯಲ್ಲಿಯೇ ಸಂಪೂರ್ಣವಾದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಕಾಮಗಾರಿ ಅಂತಿಮ ಹಂತದವರೆಗೂ ಪ್ರತಿಯೊಂದು ಹಂತದ ಪ್ರಗತಿಯ ಬಗ್ಗೆ ದಿನಗಳನ್ನು ನಿಗಧಿಪಡಿಸಿ ಪ್ರತ್ಯೇಕ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಹೊರಡಿಸಲಾಗುತ್ತದೆ ಎಂದು ಹೇಳಿದರು.
ಸಾರ್ವನಿಕ ಸ್ಮಶಾನದಲ್ಲಿ ಎಲ್ಲರಿಗೂ ಅವಕಾಶ: ಪ್ರತಿಯೊಂದು ಗ್ರಾಮಕ್ಕೆ ಊರಿಗೊಂದು ಸ್ಮಶಾನ ಅಭಿವೃದ್ಧಿ ಪಡಿಸಿ ಇದಕ್ಕೆ ಬೇಕಾದ ಕಾಂಪೌಂಡ್, ರಸ್ತೆ, ಗೇಟ್‍ಗಳನ್ನು ನಿರ್ಮಾಣ ಯಾರೂ ಒತ್ತುವರಿ ಮಾಡಿಕೊಳ್ಳದಂತೆ ಹದ್ದುಬಸ್ತು ಮಾಡಿಕೊಳ್ಳಬೇಕು. ಈ ಸ್ಮಶಾನದಲ್ಲಿ ಯಾವುದೇ ಜಾತಿ, ನಿರ್ಧಿಷ್ಟ ಜನಾಂಗಕ್ಕೆ ಸೀಮಿತಗೊಳಿಸಿದೇ ಎಲ್ಲ ಜಾತಿ, ಜನಾಂಗದವರಿಗೂ ಒಂದೇ ಸ್ಮಶಾನ ಭೂಮಿಯಾಗಿರಬೇಕು. ಜನಸಂಖ್ಯೆ ಹಾಗೂ ಮುಂದಿನ ದಿನಮಾನಗಳನ್ನು ಅನುಸರಿಸಿ ಹೆಚ್ಚು ಸ್ಥಳಾವಕಾಶ ಹೊಂದಿರುವ ಸಾರ್ವಜನಿಕ ಸ್ಮಶಾನ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.

 

 

ಜನಪ್ರತಿನಿಧಿಗಳಿಗೆ ಪ್ರಥಮಾದ್ಯತೆ: ಸರ್ಕಾರದ ವತಿಯಿಂದ ಪರಿಹಾರ, ಸೌಲಭ್ಯ ವಿತರಣೆ ಮಾಡುವಾಗ ಕಡ್ಡಾಯವಾಗಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಜನಪ್ರತಿನಿಧಿಗಳ ಗಮನಕ್ಕೆ ತಂದು ಜನಪ್ರತಿನಿಧಿಗಳ ಮೂಲಕ ಸರ್ಕಾರದ ಪರಿಹಾರ ಸೌಲಭ್ಯ ವಿತರಣೆಗೆ ಕ್ರಮವಹಿಸಬೇಕು ಎಂದರು.
ಕೋವಿಡ್-19ನಿಂದ ಮೃತಪಟ್ಟ ವಾರಸುದಾರರ ಕುಟುಂಬಗಳಿಗೆ ಕೇಂದ್ರಸರ್ಕಾರದ ರೂ.50 ಸಾವಿರ ರಾಜ್ಯ ಸರ್ಕಾರದಿಂದ ರೂ.1ಲಕ್ಷ ಸೇರಿದಂತೆ ಒಟ್ಟು 1.50 ಲಕ್ಷ ಕೋವಿಡ್ ಪರಿಹಾರ ವಿತರಿಸಲಾಗುತ್ತಿದ್ದು, ಜನಪ್ರತಿನಿಧಿಗಳಿಂದ ಕೋವಿಡ್ ಪರಿಹಾರ ವಿತರಣೆ ಮಾಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಪೂರ್ಣಿಮಾ ಕೆ.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ನಂದಿನಿದೇವಿ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕುಮಟ್ಟದ ಅಧಿಕಾರಿಗಳು ಇದ್ದರು.

 

[t4b-ticker]

You May Also Like

More From Author

+ There are no comments

Add yours