ಕೋವಿಡ್ ಲಾಕ್ಡೌನ್ ಹಿನ್ನಲೆ
ಅಸಂಘಟಿತ ವರ್ಗ, ವೃತ್ತಿ ಕಾರ್ಮಿಕರಿಗೆ ಎರಡು ಸಾವಿರ ಪರಿಹಾರ,
ಚಿತ್ರದುರ್ಗ,ಜೂನ್09:
ಕೋವಿಡ್ ಎರಡನೇ ಅಲೆಯ ಲಾಕ್ ಹಿನ್ನಲೆಯಲ್ಲಿ ಅಸಂಘಟಿತ ವರ್ಗ ಹಾಗೂ ವೃತ್ತಿಯಲ್ಲಿ ತೊಡಗಿರುವ ಕಾರ್ಮಿಕರಿಗೆ ಸರ್ಕಾರ ಆರ್ಥಿಕ ಪರಿಹಾರವಾಗಿ ಎರಡು ಸಾವಿರ ರೂ.ಗಳನ್ನು ನೀಡುತ್ತಿದ್ದು ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಕೆಗೆ ಜುಲೈ 20 ಕೊನೆಯ ದಿನವಾಗಿದ್ದು ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.
ಅವರು ಜೂನ್ 9 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಾರ್ಮಿಕ ಅಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಸಂಘಟಿತ ಕಾರ್ಮಿಕರೆಂದರೆ 11 ವಿವಿಧ ವರ್ಗದವರು ಬರಲಿದ್ದು ಅಗಸರು, ಕ್ಷೌರಿಕರು, ಗೃಹ ಕಾರ್ಮಿಕರು, ಟೈಲರ್ಗಳು, ಮೆಕ್ಯಾನಿಕ್, ಚಿಂದಿ ಆಯುವವರು, ಹಮಾಲರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಹಾಗೂ ಮಂಡಕ್ಕಿ ಭಟ್ಟಿ ಕಾರ್ಮಿಕರು ಒಳಪಡಲಿದ್ದು ಇವರಿಗೆ ಪರಿಹಾರವಾಗಿ ಎರಡು ಸಾವಿರ ರೂ.ಗಳನ್ನು ನೀಡಲಾಗುತ್ತದೆ.
ಉದ್ಯೋಗ ಪ್ರಮಾಣ ಪತ್ರ ವಿತರಿಸುವ ಅಧಿಕಾರಿಗಳ ವಿವರ;
ಈ ವರ್ಗದ ಕಾರ್ಮಿಕರನ್ನು ಗುರುತಿಸಲು ಉದ್ಯೋಗ ದೃಢೀಕರಣ ನೀಡಬೇಕಾಗಿದ್ದು ಇದಕ್ಕಾಗಿ ಅಧಿಕಾರಿಗಳನ್ನು ಗುರುತಿಸಲಾಗಿದೆ. ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯ ಕಂದಾಯ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ತಹಶೀಲ್ದಾರರು, ಉಪ ತಹಶೀಲ್ದಾರರು, ಕಾರ್ಮಿಕ ಅಧಿಕಾರಿಗಳು, ನಿರೀಕ್ಷಕರು, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಕಾರ್ಯದರ್ಶಿ, ಪರಿಸರ ಮಾಲಿನ್ಯ ಅಧಿಕಾರಿಗಳು, ಹಮಾಲಿ ವೃತ್ತಿಯಲ್ಲಿ ತೊಡಗಿಕೊಂಡ ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವ ಇಲಾಖೆ, ಮಂಡಳಿ, ನಿಗಮದ ಅಧಿಕೃತ ಅಧಿಕಾರಿಗಳಿಂದ ಪ್ರಮಾಣ ಪತ್ರ ಪಡೆಯುವುದು ಹಾಗೂ ಯಾವುದೇ ಇಲಾಖೆಯ ಪತ್ರಾಂಕಿತ ಅಧಿಕಾರಿಗಳು ಉದ್ಯೋಗ ಪ್ರಮಾಣ ಪತ್ರಕ್ಕೆ ಸಹಿ ಮಾಡಬಹುದಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವವರಿಗೆ ಉದ್ಯೋಗ ಪ್ರಮಾಣ ಪತ್ರ ನೀಡಲು ಪಿಡಿಓಗಳು ಕೇಂದ್ರಸ್ಥಾನದಲ್ಲಿದ್ದು ಉದ್ಯೋಗ ಪ್ರಮಾಣ ಪತ್ರ ಸಕಾಲದಲ್ಲಿ ನೀಡಲು ಸೂಚಿಸಲಾಗುತ್ತದೆ ಮತ್ತು ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಪಡೆಯಲು ಆಯುಕ್ತರು, ಮುಖ್ಯಾಧಿಕಾರಿಗಳಿಗೂ ಸೂಚನೆ ನೀಡಲಾಗಿದೆ ಎಂದರು.
ನೆರವು ಪಡೆಯಲು ಅರ್ಹತೆ;
ಇಎಸ್ಐ, ಇಪಿಎಫ್ ಕಾಯ್ದೆಯಡಿ ನೊಂದಾಯಿತ ಫಲಾನುಭವಿಯಾಗಿರಬಾರದು. 18 ರಿಂದ 65 ವರ್ಷದೊಳಗಿರಬೇಕು. ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಪಡೆಯಲು ಅವಕಾಶ ಇರುತ್ತದೆ. ಬಿಪಿಎಲ್ ಕಾರ್ಡ್ ಹೊಂದಿರಬೇಕು. ಆಧಾರ್ ಸಂಖ್ಯೆ ಜೋಡಣೆಯಾಗಿರುವ ಬ್ಯಾಂಕ್ ಖಾತೆ ಹೊಂದಿರಬೇಕು.
ಅರ್ಜಿ ಸಲ್ಲಿಸುವ ವಿಧಾನ;
ಅರ್ಹ ಕಾರ್ಮಿಕರು ಸೇವಾಸಿಂಧು ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆಯಲ್ಲಿ ಮಾಹಿತಿ ಭರ್ತಿ ಮಾಡಬೇಕು. ವಿಳಾಸದ ದೃಢೀಕರಣ ಪತ್ರದ ದಾಖಲೆ ಅಪ್ಲೋಡ್ ಮಾಡಬೇಕು. ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ನಮೂದಿಸಬೇಕು. ಜನ್ಮ ದಿನಾಂಕದ ಪ್ರಮಾಣ ಪತ್ರ ಅಪ್ಲೋಡ್ ಮಾಡಬೇಕು. ಬಿ.ಪಿ.ಎಲ್.ಸಂಖ್ಯೆ ಅಪ್ಲೋಡ್ ಮಾಡಬೇಕು. ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಅಪ್ಲೋಡ್ ಮಾಡಬೇಕು. ಬ್ಯಾಂಕ್ ಖಾತೆ ಸಂಖ್ಯೆ, ಐಎಫ್ಎಸ್ಸಿ ಕೋಡ್, ಖಾತೆದಾರರ ಹೆಸರು, ಬ್ಯಾಂಕ್ ಹೆಸರು, ಶಾಖೆ, ಸ್ವಯಂ ಘೋಷಣೆ, ಉದ್ಯೋಗ ಪ್ರಮಾಣ ಪತ್ರ ಅಪ್ಲೋಡ್ ಮಾಡುವುದು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ; ಕೆ.ನಂದಿನಿದೇವಿ, ಕಾರ್ಮಿಕ ಅಧಿಕಾರಿ ವಿನುತ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಸತೀಶ್ರೆಡ್ಡಿ, ಪೌರಾಯುಕ್ತ ಹನುಮಂತರಾಜು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
[t4b-ticker]
+ There are no comments
Add yours