ಹವಾಮಾನ ಬದಲಾವಣೆ ಕಾರ್ಯಾಗಾರ
ಜಾಗೃತರಾಗಿ ಹವಾಮಾನ ವೈಪರಿತ್ಯ ತಡೆಗಟ್ಟಿ: ವಿಜ್ಞಾನಿ ಓಂಕಾರಪ್ಪ

 

 

 

 

ಚಿತ್ರದುರ್ಗ,ಮಾರ್ಚ್29:
ಹವಾಮಾನ ವೈಪರಿತ್ಯದಿಂದಾಗಿ ಬೆಳೆಗಳನ್ನು ಉತ್ಪನ್ನ ಮಾಡಲು ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ನಾವೆಲ್ಲರೂ ಜಾಗೃತರಾದಾಗ ಮಾತ್ರ ಹವಾಮಾನ ವೈಪರಿತ್ಯ ತಡೆಗಟ್ಟಲು ಸಾಧ್ಯವಿದೆ ಎಂದು ಹಿರಿಯೂರಿನ ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಓಂಕಾರಪ್ಪ ಸಲಹೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ  ಸೋಮವಾರ ಆಯೋಜಿಸಿದ್ದ ಹವಾಮಾನ ಬದಲಾವಣೆ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ಹವಾಮಾನವನ್ನು ನಾವು ದಿನನಿತ್ಯ ಹಾಳುಮಾಡುತ್ತಿದ್ದೇವೆ. ವಾಯುಮಾಲಿನ್ಯದಿಂದ ಬರುವ ಹೊಗೆ, ಭೂಮಿಯ ದುರ್ಬಳಕೆಯಿಂದ ಹವಾಮಾನ ಬದಲಾವಣೆ ಎದುರಿಸಲಾಗುತ್ತಿದೆ. ಕೈಗಾರಿಕೀಕರಣ, ನಗರೀಕರಣ ಪರಿಸರ ಹಾಳು ಮಾಡುವುದಕ್ಕೆ ಮುಖ್ಯ ಕಾರಣವಾಗಿದೆ. ಅರಣ್ಯನಾಶವಾದರೆ ಹವಾಮಾನ ವೈಪರಿತ್ಯದಲ್ಲಿ ಸಹಜವಾಗಿ ಏರುಪೇರು ಉಂಟಾಗುತ್ತದೆ ಎಂದು ಹೇಳಿದರು.
 ಮಳೆ ಆಧಾರಿತ ಬೆಳೆಗಳಿಗೆ ಮುಂದಿನ ದಿನಗಳಲ್ಲಿ ರೈತರು ಹೆಚ್ಚಿನ ಒತ್ತು ನೀಡಬೇಕು.  ರೈತರು ಒಂದೇ ಬೆಳೆಗೆ ಸೀಮಿತವಾಗದೇ ವೈವಿಧ್ಯಮಯವಾದ ಬೆಳೆ ಬೆಳೆಯುವುದರ ಮೂಲಕ ಮುಂದಿನ ದಿನಗಳಲ್ಲಿ ಉಂಟಾಗುವ  ಹವಾಮಾನ ವೈಪರೀತ್ಯ ನಿಲ್ಲಿಸಬಹುದು ಎಂದು ತಿಳಿಸಿದರು.
ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಸದಾಶಿವ ಮಾತನಾಡಿ, ಹವಾಮಾನವು ಒಂದೇ  ಸಮಯದಲ್ಲಿ ಸ್ಥಳದಿಂದ ಸ್ಥಳಕ್ಕೆ ಹಾಗೂ ಒಂದು ಸಮಯದಿಂದ ಸಮಯಕ್ಕೆ ವ್ಯತ್ಯಸವಾಗುತ್ತದೆ.
ನಿರ್ದಿಷ್ಟವಾದ ಸಮಯದಲ್ಲಿ ಪ್ರದೇಶದಲ್ಲಿ ಅಲ್ಪ ಸಮಯದ ವಾತಾವರಣದ ಭೌತಿಕ ಸ್ಥಿತಿಗೆ ಹವಾಮಾನ ಎಂದು ಹೇಳಬಹುದು. ದಿನದಿಂದ ದಿನಕ್ಕೂ ಮಾಸದಿಂದ ಮಾಸಕ್ಕೂ ಹಂಗಾಮಿನಿಂದ ಹಂಗಾಮಿಗೂ ವರ್ಷದಿಂದ ವರ್ಷಕ್ಕೂ ಹವಾಮಾನದಲ್ಲಿ ವೈವಿದ್ಯತೆ ಇರುತ್ತದೆ ಎಂದರು.
ಹವಾಮಾನದಲ್ಲಿ ಏರಿಳಿತಗಳು ಹಾಗೂ ಬದಲಾವಣೆಗಳು ಕೃಷಿ ಮೇಲೆ ಬಹುವಿಧದ ಪ್ರಭಾವಶಾಲಿ ಪರಿಣಾಮ ಬೀರುತ್ತದೆ. ಸರಿಯಾದ ಸಮಯಕ್ಕೆ ಮಳೆಯಾಗದಿರುವುದು, ಹೆಚ್ಚಾಗಿ ಮಳೆಯಾಗುವುದು, ಚಳಿಗಾಲದಲ್ಲಿ ಅತಿಯಾಗಿ ಚಳಿಯಾಗುವುದು, ಬೇಸಿಗೆಯಲ್ಲಿ ಹೆಚ್ಚಿನ ತಪಾಮಾನ ಉಂಟಾಗುವುದು ಮುಂತಾದ ಪ್ರತಿಕೂಲದಿಂದ ಹವಾಮಾನ ವೈಪರೀತ್ಯಕ್ಕೆ ಕಾರಣ ಎಂದು ಹೇಳಿದರು.
ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ. ಕೃಷ್ಣಪ್ಪ ಮಾತನಾಡಿ, ಜಾನುವಾರುಗಳು ಗ್ರಾಮೀಣ ಪ್ರದೇಶಗಳ ಕುಟುಂಬಗಳಿಗೆ ಆರ್ಥಿಕವಾಗಿ ಪ್ರಮುಖ ಪಾತ್ರ ವಹಿಸುತ್ತವೆ. ಜಾನುವಾರುಗಳು ಸಣ್ಣ ರೈತರ ಹಾಗೂ ಕೃಷಿ ಕಾರ್ಮಿಕರ ಸಂಪನ್ಮೂಲಗಳಾಗಿವೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಹೆಚ್ಚು ಜಾನುವಾರು ಸಂಪನ್ಮೂಲಗಳು ಇವೆ. ಜಿಲ್ಲೆಯಲ್ಲಿ ಒಟ್ಟು 20.68.000 ಸಾವಿರ ಜಾನುವಾರುಗಳು ಇವೆ. ರಾಜ್ಯದಲ್ಲಿ ಕುರಿ, ಮೇಕೆ ಸಂಖ್ಯೆ ಅತಿ ಹೆಚ್ಚಾಗಿ ಇದೆ. ಜಿಲ್ಲೆಯಲ್ಲಿ 158 ಪಶು ಆಸ್ಪತ್ರೆಗಳಿಂದ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.  
ಜಿಲ್ಲೆಗೆ ಬರವೇ ಹವಾಮಾನ ವೈಪರೀತ್ಯವಾಗಿರುವುದರಿಂದ ಬರದ ಸಂದರ್ಭದಲ್ಲಿ ಜಾನುವಾರುಗಳಿಗೆ ಮೇವಿನ  ಕೊರತೆ ಅತಿ ಮುಖ್ಯವಾಗಿ ಕಂಡುಬರುತ್ತದೆ ಮತ್ತು ಇದರಿಂದಾಗಿ ಜಾನುವಾರುಗಳಲ್ಲಿ ರೋಗಗಳು ಕಾಣಿಸಿಕೊಳ್ಳುತ್ತವೆ ಎಂದು ಹವಾಮಾನ ವೈಪರೀತ್ಯದಿಂದ ಜಾನುವಾರುಗಳಿಗೆ ಆಗುವ ಪರಿಣಾಮಗಳ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ನಬಾರ್ಡ್ ಜಿಲ್ಲಾ ವ್ಯವಸ್ಥಾಪಕಿ ಕವಿತಾ ಶಶಿಧರ್, ಸಂಪನ್ಮೂಲ ವ್ಯಕ್ತಿಗಳಾದ ಗುರುದಕ್ಷಿತ್, ಮಹಾವೀರ್ ಜೈನ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥತರಿದ್ದರು.

 

 

[t4b-ticker]

You May Also Like

More From Author

+ There are no comments

Add yours