ವಿಶ್ವ ರಕ್ತದಾನಿಗಳ ದಿನಾಚರಣೆ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ ಜೀವ ಉಳಿಸಿ : ಡಾ.ಸಿ.ಓ.ಸುಧಾ

 

 

 

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಜೂನ್ 16:
ಒಬ್ಬ ಮನುಷ್ಯ ರಕ್ತದಾನ ಮಾಡುವುದರಿಂದ ಮತ್ತೊಬ್ಬರ ಜೀವ ಉಳಿಸಬಹುದು. ತನ್ನ ರಕ್ತವನ್ನು ಇನ್ನೊಬ್ಬರ ಜೀವ ಉಳಿಸಲು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ ಎಂದು ಜಿಲ್ಲಾ ಕಾರ್ಯಕ್ರಮಾಧಿಕಾರಿಗಳು, ರಕ್ತ ಸುರಕ್ಷತೆ, ಏಡ್ಸ್ ನಿಯಂತ್ರಣ ಮತ್ತು ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ. ಸಿ.ಓ.ಸುಧಾ ತಿಳಿಸಿದರು.
ನಗರದ ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಡಾ.ಬಿ.ಆರ್. ಅಂಬೇಡ್ಕರ್  ಜ್ಞಾನ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆ ಘಟಕ, ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ರಾಷ್ಟ್ರೀಯ ಸೇವಾ ಯೋಜನೆ ಘಟಕ (1) ಮತ್ತು (2), ರೆಡ್ ರಿಬ್ಬನ್ ಕ್ಲಬ್, ಯುವ ರೆಡ್ ಕ್ರಾಸ್ ಘಟಕ ಚಿತ್ರದುರ್ಗ ಇವರ ಸಹಯೋಗದೊಂದಿಗೆ ರಕ್ತದಾನ ಮಾಡುವುದು ಒಗ್ಗಟ್ಟಿನ ಪ್ರಕ್ರಿಯೆ ಈ ಪ್ರಯತ್ನಕ್ಕೆ ಕೈ ಜೋಡಿಸಿ ಜೀವ ಉಳಿಸೋಣ ಎಂಬ ಘೋಷವಾಕ್ಯದೊಂದಿಗೆ “ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮೊಟ್ಟಮೊದಲ ಬಾರಿಗೆ ರಕ್ತದ ಗುಂಪು ಕಂಡು ಹಿಡಿದ ಕಾರ್ಲ್ ಲ್ಯಾಂಡ್‍ಸ್ಟೈನರ್ ಎಂಬ ವಿಜ್ಞಾನಿಯ ಹುಟ್ಟುಹಬ್ಬದ ನೆನಪಿಗಾಗಿ 2005 ರಿಂದ ವಿಶ್ವ ಆರೋಗ್ಯ ಸಂಸ್ಥೆ ರಕ್ತದಾನಿಗಳ ದಿನಾಚರಣೆಯನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.
ರಕ್ತಕ್ಕಾಗಿ ಯಾವಾಗಲು ಬೇಡಿಕೆ ಇದ್ದೆ ಇರುತ್ತದೆ. ಹಣ ತೆಗೆದುಕೊಳ್ಳದೆ ಸಮಾಜದ ಹಿತಕ್ಕಾಗಿ ಸಾಮಾಜಿಕ ಕಳಕಳಿಯಿಂದ ರಕ್ತದಾನ ಮಾಡಬೇಕು. ಅಪಘಾತ, ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ರಕ್ತ ಜೀವ ಉಳಿಸಲು ಅತಿ ಮುಖ್ಯವಾಗಿ ಬೇಕು. ಕ್ಯಾನ್ಸರ್ ರೋಗಿಗಳು, ಗರ್ಭಿಣಿಯರು, ತಲಸ್ಸೀಮಿಯ ಮುಂತಾದ ರೋಗಿಗಳು ರಕ್ತದಾನಿಗಳನ್ನೇ ಅವಲಂಬಿಸಿರುತ್ತಾರೆ. ಆದ್ದರಿಂದ ರಕ್ತದಾನ ಮಾಡುವುದು ಅತ್ಯಾಮೂಲ್ಯ. ರಕ್ತದಾನ ಮಾಡುವುದರಿಂದ ಯಾವುದೇ ರೀತಿಯ ತೊಂದರೆಯಾಲ್ಲ. ಆದರಿಂದ ನಮಗೆ ಅನುಕೂಲವೇ ಹೆಚ್ಚಿರುತ್ತದೆ ಎಂದರು.
ಜ್ಞಾನ ವಿಜ್ಞಾನ ಕೇಂದ್ರದ ಹೆಚ್‍ಕೆಎಸ್ ಸ್ವಾಮಿ ಮಾತನಾಡಿ, ಆರೋಗ್ಯ ಮತ್ತು ಪರಿಸರದ ಬಗ್ಗೆ ಬಹಳ ಕಾಳಜಿ ವಹಿಸಬೇಕು. ಯಾವುದನ್ನು ತಿರಸ್ಕರಿಸದೆ ನಮ್ಮ ಆರೋಗ್ಯದ ಬಗ್ಗೆ ಜಾಗೃತಿ ವಹಿಸಿ ಸಾಕಷ್ಟು ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಬೇಕು. ಬೈಕ್‍ನಲ್ಲಿ ಸಂಚರಿಸುವವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ನಮ್ಮ ಸಂರಕ್ಷಣೆ ಮಾಡಿಕೊಳ್ಳಿ ಎಂದು ತಿಳಿಸಿದರು.
ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲ ಡಾ.ಆರ್.ಶಿವಪ್ಪ ಮಾತನಾಡಿ, ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮ ಬಹಳಷ್ಟು ಅರ್ಥಪೂರ್ಣವಾದ ಕಾರ್ಯಕ್ರಮವಾಗಿದೆ. ನಾವು ನಮ್ಮ ಮೌಢ್ಯತೆಯನ್ನು ಬಿಟ್ಟು ರಕ್ತದಾನ ಮಾಡುವುದರಿಂದ ಜನರ ಜೀವ ಉಳಿಸಬಹುದು. ರಕ್ತದಾನ ಮಾಡಲು ಮುಂದಾಗಬೇಕು. ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮೂರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೆ ಎರಡು ಬಾರಿ ರಕ್ತದಾನವನ್ನು ಮಾಡಬೇಕು ಎಂದು ತಿಳಿಸಿದರು.
ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ಅಬ್ದುಲ್, ಮುರುಳೀಧರ್, ಚಂದ್ರು ಹಿರೇಮಠ್ ಅವರಿಗೆ ಸನ್ಮಾಸಿ ಹಾಗೂ ರಕ್ತದಾನದ ಬಗ್ಗೆ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಜಗದೀಶ್, ಚೇತನ, ಸೂರ್ಯ ಎಂಬ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತ್ರೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಹೆಚ್.ಜೆ. ಬಸವರಾಜಪ್ಪ, ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಶಿಕ್ಷಕ ಸಿಬ್ಬಂದಿ ಕಾರ್ಯದರ್ಶಿ ಪ್ರೊ. ಎಲ್.ನಾಗರಾಜಪ್ಪ, ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ), ರಾಷ್ಟ್ರೀಯ ಸೇವಾ ಯೋಜನಾ ಘಟಕ (1) ಪ್ರೊ. ರೇವಣ್ಣಸಿದ್ದಪ್ಪ, ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ), ಯುವ ರೆಡ್ ಕ್ರಾಸ್ ಸಂಚಾಲಕ ಡಾ.ಹೆಚ್.ಬಸವರಾಜ್, ಪ್ರೊ.ಹೆಚ್.ರಂಗಸ್ವಾಮಿ ಹಾಗೂ ವಿದ್ಯಾರ್ಥಿಗಳು ಇದ್ದರು.

 

 

[t4b-ticker]

You May Also Like

More From Author

+ There are no comments

Add yours