ಬಾಕಿ ಉಳಿದ 302 ಗ್ರಾಮಗಳಿಗೂ ಕುಡಿಯುವ ನೀರು ಪೂರೈಕೆಗೆ ಸರ್ಕಾರಕ್ಕೆ ಪ್ರಸ್ತಾವ.

 

 

 

 

ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆ
ಬಹುಗ್ರಾಮ ಯೋಜನೆಗಳ ಕಾಮಗಾರಿ: ಬಾಕಿ ಉಳಿದ 302 ಗ್ರಾಮಗಳಿಗೂ ಕುಡಿಯುವ ನೀರು ಪೂರೈಕೆಗೆ ಸರ್ಕಾರಕ್ಕೆ ಪ್ರಸ್ತಾವ
ಚಿತ್ರದುರ್ಗ, ಫೆಬ್ರವರಿ17:
 ಚಿತ್ರದುರ್ಗ ತಾಲ್ಲೂಕಿನ 171 ಗ್ರಾಮಗಳಿಗೆ ಶಾಂತಿ ಸಾಗರ ಜಲಮೂಲದಿಂದ ಬಹುಗ್ರಾಮ ಯೋಜನೆಯಡಿ ಕಾಮಗಾರಿ ಕೈಗೊಳ್ಳಲು ಹಾಗೂ ಹಿರಿಯೂರು ತಾಲ್ಲೂಕಿನ 131 ಗ್ರಾಮಗಳಿಗೆ ವಿ.ವಿ.ಸಾಗರ ಜಲಮೂಲದಿಂದ ಬಹುಗ್ರಾಮ ಯೋಜನೆಯಡಿ ಒಟ್ಟು 302 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಕಾಮಗಾರಿ ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆ ಅನುಮೋದನೆ ನೀಡಿತು.
  ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆ ನಡೆಯಿತು.
 ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯಲ್ಲಿರುವ 265 ಗ್ರಾಮಗಳ ಪೈಕಿ 35 ಗ್ರಾಮಗಳು  ಸಿರಿಗೆರೆ-ಭರಮಸಾಗರ ಬಹುಗ್ರಾಮ ಯೋಜನೆಯಡಿ, 59 ಗ್ರಾಮಗಳು ಪಾವಗಡ ಡಿಬಿಓಟಿ ಯೋಜನೆಯಡಿ ಆವರಿಸಿದ್ದು, ಬಾಕಿ ಉಳಿದ 171 ಜನವಸತಿಗಳನ್ನು ಶಾಂತಿಸಾಗರ ಜಲಮೂಲದಿಂದ ಬಹುಗ್ರಾಮ ಯೋಜನೆಯಡಿ ಕಾಮಗಾರಿ ಕೈಗೊಳ್ಳಲು ಸಭೆ ಅನುಮೋದನೆ ನೀಡಿತು.
   ಹಿರಿಯೂರು ತಾಲ್ಲೂಕು ವ್ಯಾಪ್ತಿಯಲ್ಲಿರುವ 284 ಗ್ರಾಮಗಳ ಪೈಕಿ 39 ಗ್ರಾಮಗಳು ಜವಗೊಂಡನಹಳ್ಳಿ ಬಹುಗ್ರಾಮ ಯೋಜನೆಯಡಿ ಆವರಿಸಿದ್ದು, 38 ಗ್ರಾಮಗಳು ಐಮಂಗಲ ಬಹುಗ್ರಾಮ ಯೋಜನೆ, 38 ಗ್ರಾಮಗಳು ಹರ್ತಿಕೋಟೆ ಯೋಜನೆ ಹಾಗೂ 38 ಗ್ರಾಮಗಳು ಐಮಂಗಲ ಭಾಗ-2 ಯೋಜನೆಯಡಿ ಆವರಿಸಿದ್ದು, ಬಾಕಿ ಉಳಿದ 131 ಜನವಸತಿಗಳನ್ನು ವಿವಿ ಸಾಗರ ಜಲಮೂಲದಿಂದ ಬಹುಗ್ರಾಮ ಯೋಜನೆಯಡಿ ಕಾಮಗಾರಿ ಕೈಗೊಳ್ಳಲು ಸಭೆ ಅನುಮೋದಿಸಿತು.
  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ ಮಾತನಾಡಿ,   ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ವತಿಯಿಂದ ಕೈಗೊಂಡಿರುವ ಬಹುಗ್ರಾಮ ಯೋಜನೆಗಳ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಿ, ಜನರಿಗೆ ಕುಡಿಯುವ ನೀರು ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಜ್ಞಾನೇಶ್ ಮಾತನಾಡಿ, ಜಿಲ್ಲೆಯಲ್ಲಿ ವಾಣಿವಿಲಾಸ ಮತ್ತು ಗಾಯಿತ್ರಿ ಜಲಾಶಯಗಳು ಇವೆ. ಈ ಜಲಾಶಯಗಳ ಮೂಲಕ  ಹಿರಿಯೂರು, ಚಿತ್ರದುರ್ಗ ಮತ್ತು ಚಳ್ಳಕೆರೆ ನಗರಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುತ್ತಿದೆ. ವಾಣಿವಿಲಾಸ ಸಾಗರದಿಂದ ಹಿರಿಯೂರಿನ 76 ಹಳ್ಳಿಗಳಿಗೆ ಬಹುಗ್ರಾಮ ಯೋಜನೆಯಡಿ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿವೆ. ಆದರೆ ಎಲ್ಲಾ ಗ್ರಾಮಗಳಿಗೂ ನೀರು ತಲುಪುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿ ತುಂಗಾಭದ್ರ ಜಲಾಶಯದಿಂದ ಚಳ್ಳಕೆರೆ, ಮೊಳಕಾಲ್ಮೂರು, ಮತ್ತು ಚಿತ್ರದುರ್ಗ ತಾಲ್ಲೂಕಿನ ಕೆಲವು ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಯೋಜನೆಯಡಿ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
  ಹೊಳಲ್ಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿರುವ 273 ಗ್ರಾಮಗಳ ಪೈಕಿ 273 ಗ್ರಾಮಗಳು ನಬಾರ್ಡ್ ಬಹುಗ್ರಾಮ ಯೋಜನೆಯಡಿ ಆವರಿಸಿದ್ದು, ಎಲ್ಲಾ ಗ್ರಾಮಗಳು ಬಹುಗ್ರಾಮ ಯೋಜನೆಯಡಿ ಆವರಿಸಿದ್ದು, ಯೋಜನೆಯ ವಿವರವಾದ ಯೋಜನಾ ವರದಿಯನ್ನು ತಯಾರಿಸಿ ಅನುಮೋದನೆಗಾಗಿ ಮೇಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಹೊಸದುರ್ಗ ತಾಲ್ಲೂಕು ವ್ಯಾಪ್ತಿಯಲ್ಲಿರುವ 346 ಗ್ರಾಮಗಳ ಪೈಕಿ 346 ಗ್ರಾಮಗಳು ಹೊಸದುರ್ಗ ಡಿಬಿಓಟಿ ಬಹುಗ್ರಾಮ ಯೋಜನೆಯಡಿಗೆ ಒಳಪಟ್ಟಿದ್ದು, ಎಲ್ಲಾ ಗ್ರಾಮಗಳು ಬಹುಗ್ರಾಮ ಯೋಜನೆಡಿಯಲ್ಲಿವೆ. ಯೋಜನೆಯ ವಿವರವಾದ ಯೋಜನಾ ವರದಿಯನ್ನು ತಯಾರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.
  ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿರುವ 345 ಗ್ರಾಮಗಳ ಪೈಕಿ 345 ಗ್ರಾಮಗಳು ಪಾವಗಡ ಡಿಬಿಓಟಿ ಯೋಜನೆಯಡಿಗೆ ಒಳಪಟ್ಟಿದ್ದು, ಕಾಮಗಾರಿಯು ಪ್ರಗತಿಯಲ್ಲಿದೆ. ಮೊಳಕಾಲ್ಮೂರು ತಾಲ್ಲೂಕು ವ್ಯಾಪ್ತಿಯಲ್ಲಿರುವ 134 ಗ್ರಾಮಗಳ ಪೈಕಿ 134 ಗ್ರಾಮಗಳೂ ಪಾವಗಡ ಡಿಬಿಓಟಿ ಯೋಜನೆಯಡಿಗೆ ಒಳಪಟ್ಟಿದ್ದು, ಕಾಮಗಾರಿಯು ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಜಲಜೀವನ್ ಜೀವನ್ ಮಿಷನ್; ಜಲಜೀವನ್ ಮಿಷನ್ ಯೋಜನೆಯಡಿ 100 ದಿನಗಳ ಸಾಧನೆಯಡಿ ಅಂಗನವಾಡಿ, ಶಾಲೆ, ಕಾಲೇಜು, ಹಾಸ್ಟೆಲ್‍ಗಳಿಗೆ ಕುಡಿಯುವ ನೀರಿನ ಒದಗಿಸಲಾಗುತ್ತಿದೆ. ಜಿಲ್ಲೆಯಲ್ಲಿನ ಅಂಗನವಾಡಿಗಳಿಗೆ ಕುಡಿಯುವ ನೀರು ಒದಗಿಸಲು ಒಟ್ಟು 1395 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಇದರಲ್ಲಿ 714 ಕಾಮಗಾರಿಗಳು ಪೂರ್ಣಗೊಂಡಿವೆ. 637 ಮುಗಿಯುವ ಹಂತದಲ್ಲಿದ್ದು 44 ಕಾಮಗಾರಿಗಳನ್ನು ಆರಂಭಿಸಲಾಗಿದೆ.
 ಶಾಲೆಗಳಿಗೆ ಕುಡಿಯುವ ನೀರು ಒದಗಿಸಲು 244 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದದೆ. ಇದರಲ್ಲಿ 107 ಮುಕ್ತಾಯವಾಗಿವೆ. 125 ಕಾಮಗಾರಿಗಳು ಮುಕ್ತಾಯದ ಹಂತ ಹಾಗೂ 12 ಆರಂಭವಾಗಬೇಕಾಗಿದೆ. 6 ಹಾಸ್ಟೆಲ್‍ಗಳಿಗೆ ನೀರು ಒದಗಿಸಲು ತೆಗೆದುಕೊಳ್ಳಲಾಗಿದ್ದು 5 ಮುಕ್ತಾಯದ ಹಂತದಲ್ಲಿವೆ ಮತ್ತು 13 ಪದವಿ ಪೂರ್ವ ಕಾಲೇಜುಗಳಿಗೆ ನೀರು ಒದಗಿಸಲು ಕಾಮಗಾರಿ ತೆಗೆದುಕೊಳ್ಳಲಾಗಿದೆ. ಜಲಜೀವನ್ ಮಿಷನ್ ರಡಿ ಸಂಪು, ಪಂಪು, ಸಿಂಟೆಕ್ಸ್ ಹಾಗೂ ನಲ್ಲಿ ಸಂಪರ್ಕವನ್ನು ಒದಗಿಸಲಾಗುತ್ತದೆ. ಎಲ್ಲಾ ಶಾಲೆ, ಅಂಗನವಾಡಿಗಳು ಹಾಗೂ ಕಾಲೇಜುಗಳಿಗೆ ನೀರು ಒದಗಿಸಲು ಮೊದಲ ಆದ್ಯತೆ ನೀಡಲಾಗಿದ್ದು ಆದಷ್ಟು ಬೇಗ ಎಲ್ಲಾ ಕಾಮಗಾರಿಗಳನ್ನು ಮುಕ್ತಾಯಗೊಳಿಸಲು ಸೂಚನೆ ನೀಡಿದರು.
 ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಜ್ಞಾನೇಶ್, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಭದ್ರಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. 

 

 

[t4b-ticker]

You May Also Like

More From Author

+ There are no comments

Add yours