ಮಕ್ಕಳಲ್ಲಿರುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಬಾಲವಿಕಾಸ ಅಕಾಡೆಮಿ ಕಾರ್ಯ ಉತ್ತಮ: ಭಾರತಿ ಆರ್ ಬಣಕಾರ್

 

ಚಿತ್ರದುರ್ಗ(ಕರ್ನಾಟಕ ವಾರ್ತೆ)ಫೆ.17:
ಮಕ್ಕಳಲ್ಲಿರುವ ಸೂಪ್ತ ಪ್ರತಿಭೆ ಹೊರಹಾಕುವ ನಿಟ್ಟಿನಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯು ಜಿಲ್ಲೆಯಲ್ಲಿರುವ ಪ್ರತಿಯೊಬ್ಬ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ವೇದಿಕೆ ನೀಡುವ ನಿಟ್ಟಿನಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಭಾರತಿ ಆರ್ ಬಣಕಾರ್ ಹೇಳಿದರು.
 ನಗರದ ಜಿಲ್ಲಾ ಬಾಲಭವನ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಮಕ್ಕಳ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿರುವ ಮಕ್ಕಳು ತಮ್ಮಲ್ಲಿರುವ ಪ್ರತಿಭೆಗಳಾದ ಚಿತ್ರಕಲೆ, ಕ್ಲೇ ಮಾಡ್ಲಿಂಗ್, ಕಥೆ, ಕವನ, ಮಕ್ಕಳ ಸಾಹಿತ್ಯ ಚಟುವಟಿಕೆಗಳು ಮತ್ತು ಪಾರಂಪರಿಕ ಕಲೆಗಳಾದ ಭರತನಾಟ್ಯ ಛದ್ಮವೇಷ ಮುಂತಾದ ಕಲಾಪ್ರಕಾರಗಳನ್ನು ಉಳಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಉತ್ತೇಜನ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ಮಕ್ಕಳಲ್ಲಿರುವ ಪ್ರತಿಭೆ ಅನಾವರಣಗೊಳಿಸುವುದು, ಪ್ರತಿಯೊಂದು ಮಗುವು ಪ್ರತಿಯೊಂದು ಕ್ಷೇತ್ರದಲ್ಲಿ ವಿಶೇಷತೆ ಹೊಂದಿರುತ್ತದೆ. ಆ ವಿಶೇಷತೆಯನ್ನು ಗುರುತಿಸಿ ವೇದಿಕೆಯನ್ನು ಕಲ್ಪಿಸಿ ಆ ಮಗುವಿಗೆ ಉತ್ತಮ ಸಂಸ್ಕಾರ ನೀಡುವ ನಿಟ್ಟಿನಲ್ಲಿ ಈ ಮಕ್ಕಳ ಹಬ್ಬವು ಪೂರಕವಾಗಿದೆ. ಜಿಲ್ಲೆಯ ಮಕ್ಕಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉತ್ತಮ ಹೆಸರು ಗಳಿಸಬೇಕು. ರಿಯಾಲಿಟಿ ಶೋಗಳಲ್ಲಿ ಅವಕಾಶ ದೊರೆತಿಲ್ಲ ಎಂದು ತಮ್ಮಲ್ಲಿರುವ ಕಲೆ ಮರೆಮಾಚದೆ ಇಂತಹ ವೇದಿಕೆಗಳಲ್ಲಿ ತಮ್ಮ ಕಲೆ ಪ್ರದರ್ಶನಗೊಳಿಸಿದರೆ ತಮಗೆ ಸ್ಪೂರ್ತಿಯಾಗುತ್ತದೆ. ಅದೇ ರೀತಿಯಾಗಿ ಇದೇ ಫೆ. 28ರಂದು  ನಗರದ ತ.ರಾ.ಸು ರಂಗಮಂದಿರದಲ್ಲಿ ಕಲಾತಂಡಗಳ ಪ್ರದರ್ಶನ ಹಾಗೂ ಮಕ್ಕಳಿಗೆ ಪ್ರಮಾಣ ಪತ್ರವನ್ನೂ ಸಹ ವಿತರಿಸಲಾಗುತ್ತದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪವಿತ್ರ  ಮಾತನಾಡಿ, ಇಲಾಖೆ ವತಿಯಿಂದ ಮಕ್ಕಳಿಗೆ ಬೇಸಿಗೆ ಸಂದರ್ಭದಲ್ಲಿ ವಿವಿಧ ಸೃಜನಾತ್ಮಕ ಚಟುವಟಿಕೆಗಳನ್ನೂ ಸಹ ಹಮ್ಮಿಕೊಂಡಿರುತ್ತೇವೆ. ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರಹಾಕುವ ನಿಟ್ಟಿನಲ್ಲಿ ಅನೇಕ ಕೆಲಸಗಳನ್ನು ಮಾಡುತ್ತಿದ್ದೇವೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ಮಕ್ಕಳು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಜ್ಞಾನಾರ್ಜನೆಗೆ ಪೂರಕವಾಗುತ್ತದೆ ಎಂದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ, ಶಿಕ್ಷಕರಾದ ಸುನಂದಮ್ಮ, ವಸಂತಕುಮಾರಿ ಕಾರ್ಯಕ್ರಮ ಕುರಿತು ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ಡಿ.ಶ್ರೀ ಕುಮಾರ್ ಇದ್ದರು.
[t4b-ticker]

You May Also Like

More From Author

+ There are no comments

Add yours