ನೀರು ಸರಬರಾಜು ಸಹಾಯಕ ಸೇರಿ ಇಬ್ಬರು ಹೊರಗುತ್ತಿಗೆ ನೌಕರರು  ಸಸ್ಪೆಂಡ್ , ಶಾಸಕರ ಭೇಟಿಗೆ ಪ್ರತಿಭಟನೆ 

 

 

 

 

ಚಿತ್ರದುರ್ಗ: ನಗರದ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ 3 ಮಂದಿ ಸಾವನ್ನಪ್ಪಿರುವ ಘಟನೆ ನಡೆದು 3 ದಿನ ಕಳೆದರು ಸೌಜನ್ಯಕ್ಕೂ ಶಾಸಕ ವೀರೇಂದ್ರ ಪಪ್ಪಿ ಬಾರದಿರುವ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.3 ಮಂದಿ ಸಾವನ್ನಪ್ಪಿದ್ದರೆ ಹಲವು ಮಂದಿ ಸಾವು ಬದುಕಿನ ಮಧ್ಯ ಹೋರಾಟ ಮಾಡುತ್ತಿದ್ದರೂ ಶಾಸಕ ವೀರೇಂದ್ರ ಪಪ್ಪಿ ಸೌಜನ್ಯಕ್ಕಾದರೂ ಬಂದು ಸಾಂತ್ವನ ಹೇಳಿಲ್ಲ. ಗೆದ್ದ 3 ತಿಂಗಳಿಗೆ ಶಾಸಕ ವೀರೇಂದ್ರ ಪಪ್ಪಿ ಬೇಜವಬ್ದಾರಿ ಪ್ರದರ್ಶನ ಮಾಡುತ್ತಿದ್ದು ಶಾಸಕರ ನಡೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.ನೂರಾರು ಮಂದಿ‌ ಅಸ್ವಸ್ಥರಾಗಿ ನರಳುತ್ತಿರುವ ಕವಾಡಿಗರಹಟ್ಟಿ ನಿವಾಸಿಗಳ ಸಮಸ್ಯೆ ಆಲಿಸದ ಶಾಸಕರು ಖಾಸಗಿ ಕಾರ್ಯಕ್ರಮಗಳಿಗೆ ಹೋಗುತ್ತಿರುವುದು ದುರಂತ ಎಂದು ಅಕ್ರೋಶ ಹೊರ ಹಾಕಿದ್ದಾರೆ.

 

ಇಂತಹ ದೊಡ್ಡ ಸಮಸ್ಯೆ ಜನರಿಗೆ ಎದುರಾಗಿದ್ದು ಈ‌ ಸಮಯದಲ್ಲಿ ಸಂತ್ರಸ್ತರ ಕುಟುಂಬಗಳ ಸ್ಥಳಕ್ಕೆ ಕೂಡಲೇ ಧಾವಿಸಿ ಬಡವರ ರಕ್ಷಣೆಗೆ ನಿಲ್ಲಬೇಕಿದ್ದ ಶಾಸಕರು ಪತ್ತೆ ಇಲ್ಲ. ಕಳೆದ ಮೂರು ದಿನಗಳಿಂದ ಗೋವಾ ಮತ್ತು ದೆಹಲಿಯದ್ದಾರೆಂದು ಆಪ್ತರು ಹೇಳುತ್ತಿದ್ದು ಶಾಸಕರ ನಡೆಗೆ ಕವಾಡಿಗರಹಟ್ಟಿ ಜನರು ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಬೆಳಗ್ಗೆ ಎಂಎಲ್ಎ ಮಿಸ್ಸಿಂಗ್ ಪೋಸ್ಟರ್
ಘಟನೆಯಾಗೆ ಮೂರು ದಿನವಾದ್ರೂ ಸ್ಥಳಕ್ಕೆ ಬಾರದ
ಚಿತ್ರದುರ್ಗ ಶಾಸಕ ಕೆಸಿ ವೀರೇಂದ್ರ ಪಪ್ಪಿ ವಿರುದ್ದ ವಿಜಯಸೇನೆ ಜಿಲ್ಲಾ ಅಧ್ಯಕ್ಷ ಕೆ.ಟಿ.ಶಿವಕುಮಾರ್ ನೇತೃತ್ವದಲ್ಲಿ ನೂರಾರು ಜನರು ಕವಾಡಿಗರಹಟ್ಟಿ ಬಳ ರಸ್ತೆ ತಡೆ ನಡೆಸಿ ಧಿಕ್ಕಾರ ಕೂಗಿದರು‌.‌

ಸಿಎಂ ಸಿದ್ದರಾಮಯ್ಯ ಟ್ವಿಟ್

ಕವಾಡಿಗರಹಟ್ಟಿ ಕಲುಷಿತ ನೀರು ಸೇವಿಸಿ 3 ಮಂದಿ ಸಾವಿನ ಪ್ರಕರಣ ನಡೆದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಘಟನೆ ಕುರಿತು ಕೂಡಲೇ ತನಿಖೆ ನಡೆಸುವಂತೆ ಸೂಚಿಸಿದ್ದೇನೆ.
ಜಿಲ್ಲಾಧಿಕಾರಿ ದಿವ್ಯಪ್ರಭು ಅವರ ಜೊತೆ ಮಾತನಾಡಿದ್ದೇನೆ. ಘಟನೆಯ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಘಟನೆಗೆ ಕಾರಣರಾದ ಯಾವುದೇ ಅಧಿಕಾರಿ ಇದ್ದರೂ ಕೂಡಲೇ ಅಮಾನತು ಮಾಡಿ ಎಂದು ಸೂಚಿಸಿದ್ದೇನೆ..ಉಪವಿಭಾಗಧಿಕಾರಿ ಕಾರ್ತಿಕ್ ಭೇಟಿ, ಮೃತರ ಕುಟುಂಬಕ್ಕೆ ಸಾಂತ್ವನ.

ಉಪ ವಿಭಾಗಧಿಕಾರಿ ಕಾರ್ತಿಕ್ ಭೇಟಿ ವೇಳೆ ಕಣ್ಣೀರಿಟ್ಟ ಮೃತ ರಘು ತಾಯಿ ವಿಮಲಮ್ಮ.

 

 

ಬೆಂಗಳೂರಿನಲ್ಲೇ ಇದ್ದರೆ ನನ್ನ ಮಗ ಬದುಕಿರುತ್ತಿದ್ದನು.
ಊರಿಗೆ ಬಂದು ಹೋಗಿದ್ದೇ ಜೀವಕ್ಕೆ ಕಂಟಕ ಆಯಿತೆಂದು ತಮ್ಮ ಮಗನ ಸಾವಿನ ಬಗ್ಗೆ ಉಪ ವಿಭಾಗಧಿಕಾರಿ ಬಳಿ‌ ಅಳಲು ತೋಡಿಕೊಂಡರು.

ಬಾಕ್ಸ್ : ಭಯ ಬೇಡ ಎಲ್ಲಾ ರೀತಿ ಸಹಕಾರ ನೀಡುತ್ತೇನೆ: ಕೆ.ಸಿ.ವೀರೇಂದ್ರ ಪಪ್ಪಿ  ಶಾಸಕರು ಚಿತ್ರದುರ್ಗ

ಚಿತ್ರದುರ್ಗ ನಗರದ ಕಾವಡಿಗರಹಟ್ಟಿ ಘಟನೆ ನಡೆದ ಮೂರು ದಿನಗಳ ನಂತರ ಇಂದು ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರು ಜಿಲ್ಲಾ ಆಸ್ಪತ್ರೆಗೆ , ಬಸವೇಶ್ವರ ಆಸ್ಪತ್ರೆ, ಕಾವಡಿಗರಹಟ್ಟಿಗೆ ತೆರಳಿ ಸಾಂತ್ವನ ಹೇಳುವ ಕೆಲಸ ಮಾಡಿದರು. ಜಿಲ್ಲಾ ಆಸ್ಪತ್ರೆ ಭೇಟಿ ವೇಳೆ ರೋಗಿಗಳು ನಮಗೆ ಪರಿಹಾರ ಬೇಕೆ ಬೇಕು. ನಮ್ಮ ಮಕ್ಕಳು ತೆರಳುವ ಅಂಗನವಾಡಿ, ವಾಟರ್ ಟ್ಯಾಂಕ್ ಮತ್ತು ನಮ್ಮ ಕಾಲೋನಿಗೆ ಸಿ‌.ಸಿ.ಕ್ಯಾಮರ ಬೇಕು. ಸೂಕ್ತ ಪರಿಹಾರ ದೊರಕಿಸಲೇಬೇಕು ಎಂದು ಪಟ್ಟು ಹಿಡಿದ ಘಟನೆ ಜಿಲ್ಲಾ ಆಸ್ಪತ್ರೆಯಲ್ಲಿ‌ ನಡೆಯಿತು. ಶಾಸಕರು ರೋಗಿಗಳ ಆರೋಗ್ಯ ವಿಚಾರಿಸಿ ನಿಮಗೆ ಏನಾದರೂ ಸಮಸ್ಯೆ ಇದೆಯೇ, ಉತ್ತಮವಾಗಿ ಚಿಕಿತ್ಸೆ ನೀಡುತ್ತಿದ್ದಾರಾ, ನೀರಿನ ಬಾಟಲಿ ಕೊಟ್ಟಿದ್ದಾರಾ ಎಂಬ ಮಾತುಗಳ ಮೂಲಕ ರೋಗಿಗಳನ್ನು ಸಂತೈಸಿದರು. ಸರ್ಕಾರದಿಂದ ಯಾರು ಪರಿಹಾರಕ್ಕೆ ಅರ್ಹರು ಎಂದು ಗುರುತಿಸಿ ಪರಿಹಾರ ಒದಗಿಸಲಾಗುತ್ತದೆ‌. ಒದಕ್ಕೆ ಜಾತಿ ವಿಷಯ ಬೇಡ ನಿಮ್ಮ ಜೊತೆ ನಾನಿದ್ದೇನೆ‌. ನೀವು ಚಿಂತೆ ಮಾಡಬೇಡಿ. ನಿಮ್ಮ‌ಕಾಲೋನಿಗೆ ಎಲ್ಲಾ ಸೌಲಭ್ಯ ಒದಗಿಸಲಾಗುತ್ತದೆ ಎಂದು ಸಮಾಧಾನಪಡಿಸಿದರು.ರೋಗಿಗಳು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಶಾಸಕರಿಗೆ ಒತ್ತಾಯಿಸಿದಾಗ ಎಂತಹ ದೊಡ್ಡವರಿದ್ದರು ಸಹ ಅವರನ್ನು ಕಾನೂನಿನ ಮೂಲಕ ಖಂಡಿತ ಶಿಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಅಭಯ ನೀಡಿದರು.

ನೀರು ಸರಬರಾಜು ಸಹಾಯಕ ಸಸ್ಪೆಂಡ್ ಹಾಗೂ ಇಬ್ಬರು ಹೊರಗುತ್ತಿಗೆ ನೌಕರರು ಸೇವೆಯಿಂದ ವಜಾ, ಇಬ್ಬರ ಅಮಾನತಿಗೆ ಶಿಫಾರಸ್ಸು :ಡಿಸಿ
***************
ಚಿತ್ರದುರ್ಗ ಆ. 03 : ಚಿತ್ರದುರ್ಗ ನಗರ ಸಮೀಪದ ಕವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಸಾರ್ವಜನಿಕರ ಮರಣ ಹಾಗೂ ಅಸ್ವಸ್ಥರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಇಂಜಿನಿಯರ್‍ಗಳನ್ನು ಕರ್ತವ್ಯ ನಿರ್ಲಕ್ಷ್ಯತೆ ಆರೋಪದ ಮೇಲೆ ಅಮಾನತುಗೊಳಿಸಲು ಶಿಫಾರಸು ಮಾಡಲಾಗಿದ್ದು, ಒಬ್ಬರು ನೀರು ಸರಬರಾಜು ಸಹಾಯಕರನ್ನು ಅಮಾನತುಗೊಳಿಸಲಾಗಿದೆ ಹಾಗೂ ಇಬ್ಬರು ಹೊರಮೂಲ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದ ವಾಲ್ವ್ ಮ್ಯಾನ್ ಗಳನ್ನು ಸೇವೆಯಿಂದ ತೆಗೆದುಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ತಿಳಿಸಿದ್ದಾರೆ.

ಕಳೆದ ಜು. 31 ರಂದು ಮಧ್ಯಾಹ್ನದ ನಂತರದಲ್ಲಿ ಕವಾಡಿಗರ ಹಟ್ಟಿಯ ಓವರ್ ಹೆಡ್ ಟ್ಯಾಂಕ್ ನಿಂದ ನೀರು ಸರಬರಾಜು ಆಗುವ ಪ್ರದೇಶದ ಕೆಲವು ನಿವಾಸಿಗಳು ಅಸ್ವಸ್ಥರಾಗಿದ್ದು, ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಮಂಜುಳ ಎಂಬುವವರು ಅಸ್ವಸ್ಥರಾಗಿ, ಆಗಸ್ಟ್ 01 ರಂದು ಬೆಳಿಗ್ಗೆ ಮೃತಪಟ್ಟಿರುತ್ತಾರೆ, ಇವರ ಹೆಣ್ಣು ಮಗು ಕೂಡ ಅಸ್ವಸ್ಥರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಜು. 31 ರಿಂದ ಆ. 01 ರವರೆಗೆ ಈ ಪ್ರದೇಶದ ಹಲವು ಸಾರ್ವಜನಿಕರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಮೃತ ಮಹಿಳೆಯ ಪತಿ ಈ ಕುರಿತು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿ ಪೊಲೀಸ್ ವಿಚಾರಣೆ ಹಂತದಲ್ಲಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳ ವರದಿಯಂತೆ ಜು. 31 ರಿಂದ ಆ. 02 ರವರೆಗೆ ಒಟ್ಟು 107 ಪ್ರಕರಣಗಳು ದಾಖಲಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ 65 ಮತ್ತು ಬಸವೇಶ್ವರ ವೈದ್ಯಕೀಯ ಆಸ್ಪತ್ರೆಯಲ್ಲಿ 42 ಅಸ್ವಸ್ಥರು ಚಿಕಿತ್ಸೆ ಪಡೆದಿದ್ದು, 07 ಜನರು ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ. ಮೂವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

ಪ್ರಕರಣ ಕುರಿತು ಸಮಗ್ರ ತನಿಖೆ ನಡೆಸುವ ಸಲುವಾಗಿ ಉಪವಿಭಾಗಾಧಿಕಾರಿಗಳು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯಪಾಲಕ ಇಂಜಿನಿಯರ್, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು, ಪರಿಸರ ಅಧಿಕಾರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರನ್ನು ಒಳಗೊಂಡ ಜಂಟಿ ಸಮಿತಿ ರಚಿಸಿದ್ದು, ವರದಿ ನೀಡಲು ಸೂಚಿಸಲಾಗಿದೆ.

ಶುದ್ಧ ಕುಡಿಯುವ ನೀರು ಸರಬರಾಜು ಕಾರ್ಯವು ನಗರಸಭೆಯ ಆದ್ಯ ಕರ್ತವ್ಯವಾಗಿದ್ದು, ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಮಾಡಬೇಕಾದ ಕರ್ತವ್ಯಗಳ ಬಗ್ಗೆ ಸರ್ಕಾರದಿಂದ ಹಾಗೂ ಪೌರಾಡಳಿತ ಇಲಾಖೆಯಿಂದ ಹಾಗೂ ಜಿಲ್ಲಾಧಿಕಾರಿಗಳಿಂದ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚನೆಗಳನ್ನು ಕಾಲಕಾಲಕ್ಕೆ ನೀಡಲಾಗಿರುತ್ತದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಸರಬರಾಜು ಮೂಲ, ಶುದ್ಧೀಕರಣ ಘಟಕ, ಓ.ಹೆಚ್.ಟಿ, ಕೊಳವೆ ಬಾವಿ ಹಾಗೂ ಬಳಕೆದಾರರ ಕೊನೆಯ ಪಾಯಿಂಟ್‍ನಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸಿ, ನೀರಿನ ಗುಣಮಟ್ಟದ ಪರೀಕ್ಷೆ ಮಾಡಿಸಿ, ನೀರು ಯೋಗ್ಯವಿರುವ ಬಗ್ಗೆ ಪರೀಕ್ಷಾ ವರದಿಗಳನ್ನು ಸಲ್ಲಿಸಲು ಸೂಚಿಸಲಾಗಿರುತ್ತದೆ. ಆದರೆ ಈವರೆಗೂ ವರದಿ ಸಲ್ಲಿಕೆಯಾಗಿಲ್ಲ.

ಜಿಲ್ಲಾ ಸರ್ವೇಕ್ಷಣಾ ಘಟಕವು ಕವಾಡಿಗರಹಟ್ಟಿ ಪ್ರದೇಶದಿಂದ ಸಂಗ್ರಹಿಸಿದ 05 ನೀರಿನ ಮಾದರಿಗಳನ್ನು ಸೂಕ್ಷ್ಮಾಣು ಜೀವಿ ಪರೀಕ್ಷೆಗೊಳಿಸಿದ್ದು, ಈ ಪೈಕಿ ನಾಲ್ಕು ಮಾದರಿಗಳಲ್ಲಿ ಹೆಚ್-2 ಎಸ್ ಪರೀಕ್ಷಾ ವಿಧಾನದಿಂದ ತಿಳಿದುಬಂದಂತೆ ಕುಡಿಯಲು ಯೋಗ್ಯವಾಗಿಲ್ಲ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಆ. 03 ರಂದು ವರದಿ ಸಲ್ಲಿಸಿರುತ್ತಾರೆ. ನಗರದ ಎಲ್ಲ ಕುಡಿಯುವ ನೀರಿನ ಸಂಗ್ರಹ ತೊಟ್ಟಿಗಳನ್ನು ಸ್ವಚ್ಛಗೊಳಿಸಿ, ನೀರಿನ ಲೀಕೇಜ್‍ಗಳನ್ನು ದುರಸ್ತಿಗೊಳಿಸಿ, ಕ್ಲೋರಿನೇಷನ್ ಮಾಡುವಂತೆ ಹಲವು ಬಾರಿ ತಿಳಿಸಲಾಗಿದ್ದರೂ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ ಆರ್ ಗಿರಡ್ಡಿ ಹಾಗೂ ಕಿರಿಯ ಅಭಿಯಂತರ ಎಸ್.ಆರ್. ಕಿರಣ್ ಕುಮಾರ್ ಅವರು ಸೂಚನೆಯನ್ವಯ ಕಾರ್ಯ ನಿರ್ವಹಿಸಿಲ್ಲ. ಹೀಗಾಗಿ ಕರ್ತವ್ಯ ನಿರ್ಲಕ್ಷ್ಯ ಎಸಗಿರುವ ಬಗ್ಗೆ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿತ್ತು. ಪೌರಾಯುಕ್ತರು ಹಾಗೂ ಕಿರಿಯ ಅಭಿಯಂತರ ಎಸ್.ಆರ್. ಕಿರಣ್ ಕುಮಾರ್ ಅವರು ತಮ್ಮ ಸಮಜಾಯಿಷಿ ನೀಡಿದ್ದು, ಸಹಾಯಕ ಕಾರ್ಯಪಾಲಕ ಅಭಿಯಂತರರು ನೋಟಿಸ್‍ಗೆ ಉತ್ತರವಾಗಿ ತಮ್ಮ ಸಮಜಾಯಿಷಿ ಸಲ್ಲಿಸುವ ಪ್ರಯತ್ನ ಸಹ ಮಾಡಿರುವುದಿಲ್ಲ. ಕಿರಿಯ ಅಭಿಯಂತರರು ತಮ್ಮ ಕರ್ತವ್ಯ ನಿರ್ಲಕ್ಷ್ಯತೆ ಬಗ್ಗೆ ಯಾವುದೇ ಸಮರ್ಥನೀಯ ಕಾರಣ ನೀಡಿರುವುದಿಲ್ಲ.
ನಾಲ್ಕು ನೀರಿನ ಮಾದರಿಗಳಲ್ಲಿ ಹೆಚ್-2 ಎಸ್ ಪರೀಕ್ಷಾ ವಿಧಾನದಿಂದ ತಿಳಿದುಬಂದಂತೆ ಕುಡಿಯಲು ನೀರು ಯೋಗ್ಯವಾಗಿಲ್ಲ ಎಂಬುದಾಗಿ ಜಿಲ್ಲಾ ಸರ್ವೇಕ್ಷಣಾ ಘಟಕ ವರದಿ ನೀಡಿದ್ದು, ಮೇಲ್ನೋಟಕ್ಕೆ ಚಿತ್ರದುರ್ಗ ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್ ಆರ್ ಗಿರಡ್ಡಿ ಹಾಗೂ ಕಿರಿಯ ಅಭಿಯಂತರ ಎಸ್.ಆರ್. ಕಿರಣ್ ಕುಮಾರ್ ಅವರ ಕರ್ತವ್ಯದಲ್ಲಿ ನಿರ್ಲಕ್ಷ್ಯತೆ ಕಂಡುಬಂದಿರುವುದರಿಂದ, ಇವರನ್ನು ಅಮಾನತುಗೊಳಿಸಿ, ಇಲಾಖಾ ವಿಚಾರಣೆಗೆ ಆದೇಶ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಕವಾಡಿಗರ ಹಟ್ಟಿ ಪ್ರದೇಶಕ್ಕೆ ಓವರ್ ಹೆಡ್ ಟ್ಯಾಂಕ್‍ನಿಂದ ವಾಲ್ವ್ ಆಪರೇಟ್ ಮಾಡಿ ಪೈಪ್‍ಲೈನ್‍ಗೆ ನೀರು ಬಿಡುವ ಆಪರೇಟರ್, ನೀರು ಸರಬರಾಜು ಸಹಾಯಕ ಸಿ.ಹೆಚ್. ಪ್ರಕಾಶ್ ಬಾಬು ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಹಾಗೂ ಇಬ್ಬರು ಹೊರಮೂಲ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದ ವಾಲ್ವ್ ಮ್ಯಾನ್‍ಗಳನ್ನು ಸೇವೆಯಿಂದ ತೆಗೆದುಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ತಿಳಿಸಿದ್ದಾರೆ.‌.

[t4b-ticker]

You May Also Like

More From Author

+ There are no comments

Add yours