ತೃತೀಯ ಲಿಂಗಿಗಳು, ವಿಕಲಚೇತನರು ಹಾಗೂ ವಿದ್ಯಾರ್ಥಿಗಳ ನೊಂದಣಿಗೆ ವಿಶೇಷ ಅಭಿಯಾನ -ಜಿಲ್ಲಾಧಿಕಾರಿ ದಿವ್ಯಪ್ರಭು

 

 

 

 

ಚಿತ್ರದುರ್ಗ ನ. 17 (ಕರ್ನಾಟಕ ವಾರ್ತೆ) :
ಚುನಾವಣಾ ಆಯೋಗದ ಸೂಚನೆಯಂತೆ ಈಗಾಗಲೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮ ಜಿಲ್ಲೆಯಲ್ಲಿ ಭರದಿಂದ ಸಾಗಿದ್ದು, ತೃತೀಯ ಲಿಂಗಿಗಳು, ವಿಕಲಚೇತನರು, ದಮನಿತ ಮಹಿಳೆಯರು ಸೇರಿದಂತೆ ಸಮಾಜದ ಮುಖ್ಯ ವಾಹಿನಿಯಿಂದ ಹೊರಗಿರುವವರು ಅಲ್ಲದೆ ಕಾಲೇಜು ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಜಿಲ್ಲೆಯಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿ ಮಾಡಿಸಿ, ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಮನವಿ ಮಾಡಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂದರ್ಭದಲ್ಲಿ ಮನೆ ಮನೆ ಸಮೀಕ್ಷೆ ಕಾರ್ಯವನ್ನು ಪರಿಣಾಮಕಾರಿಯಾಗಿ ಕೈಗೊಂಡು, ಎಲ್ಲ ಅರ್ಹರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಕಾರ್ಯದಲ್ಲಿ ಬಿಎಲ್‍ಒ ಗಳ ಪಾತ್ರ ಮಹತ್ವದ್ದಾಗಿದೆ.  ಹೀಗಾಗಿ ಜಾಗೃತಿ ಮೂಡಿಸಲು ಈಗಾಗಲೆ ಎಲ್ಲ ತಾಲ್ಲೂಕು ಮಟ್ಟದಲ್ಲಿ ತರಬೇತಿ ನಡೆಸುವಂತೆ ಸೂಚನೆ ನೀಡಲಾಗಿದೆ,  ಮಂಗಳಮುಖಿಯರು, ವಿಕಲಚೇತನರು  ನೊಂದಣಿಗೆ ಬರಲು ಹಿಂದೇಟು ಹಾಕುವ ಸಾಧ್ಯತೆಗಳಿರುವುದರಿಂದ, ಇವರಿರುವ ಸ್ಥಳಕ್ಕೇ ತೆರಳಿ ವಿಶೇಷವಾಗಿ ನೋಂದಣಿ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.  ಇದರ ಜೊತೆಗೆ ಅರ್ಹ ಯಾವುದೇ ವ್ಯಕ್ತಿಗಳು ಮತದಾನದಿಂದ ಹೊರಗುಳಿಯಬಾರದು, ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಅರ್ಹರಿರುವ ಎಲ್ಲರನ್ನೂ ನೊಂದಣಿ ಮಾಡಿಸಬೇಕು ಎಂಬ ಧ್ಯೇಯದೊಂದಿಗೆ, ತೃತೀಯ ಲಿಂಗಿಗಳು, ವಿಕಲಚೇತನರು, ಲಿಂಗ ಪರಿವರ್ತಿತರು ದಮನಿತ ಮಹಿಳೆಯರು (ಲೈಂಗಿಕ ಕಾರ್ಯಕರ್ತರು), ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳು ಮುಂತಾದ ಸಮಾಜದ ಮುಖ್ಯವಾಹಿನಿಯಿಂದ ಹೊರಗಿರುವವರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ನಿರ್ಧರಿಸಲಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುವುದು.  ಇದೇ ನ. 21 ರಂದು ನಗರದಲ್ಲಿರುವ ಬಾಲಭವನದಲ್ಲಿ ತೃತೀಯ ಲಿಂಗಿಗಳಿಗೆ ಈ ಕುರಿತು ಜಾಗೃತಿ ಮೂಡಿಸಿ, ಅರ್ಹರಾಗಿರುವವರನ್ನು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.  ಹೀಗಾಗಿ ತೃತೀಯ ಲಿಂಗಿಗಳೊಂದಿಗೆ ಸಂಪರ್ಕದಲ್ಲಿರುವ ಸೌಖ್ಯ ಸಮುದಾಯ ಸಂಸ್ಥೆಯ ನೆರವಿನೊಂದಿಗೆ ಅಭಿಯಾನ ನಡೆಸಲು ಈಗಾಗಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಹಾಗೂ ಉಪವಿಭಾಗಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.  18 ವರ್ಷ ವಯಸ್ಸು ಪೂರ್ಣಗೊಂಡವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಅವಕಾಶ ಕಲ್ಪಿಸಲಾಗಿದೆ.  ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ನ. 20, ಡಿ. 03 ಹಾಗೂ ಡಿ. 04 ರಂದು ಬೂತ್ ಮಟ್ಟದ ಅಧಿಕಾರಿಗಳಿಂದ ಮನೆ ಮನೆ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಎಲ್ಲ ಅರ್ಹರೂ ಕೂಡ ತಪ್ಪದೆ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆಗೊಳಿಲು ಮುಂದಾಗುವ ಮೂಲಕ, ಈ ವಿಶೇಷ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಎಲ್ಲ ಅರ್ಹ ಯುವ ಜನರನ್ನು ಮತದಾರರ ಪಟ್ಟಿ ಸೇರ್ಪಡೆಗೂ ಕೂಡ ವಿಶೇಷ ಅಭಿಯಾನ ಪ್ರಾರಂಭಿಸಿದ್ದು, 17 ವರ್ಷ ಮೇಲ್ಪಟ್ಟು ವಯೋಮಿತಿಯ ವಿದ್ಯಾರ್ಥಿಗಳಿರುವ ಎಲ್ಲ ಕಾಲೇಜು, ಐಟಿಐ, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಸೇರಿದಂತೆ ಎಲ್ಲ ಅರ್ಹ ವಿದ್ಯಾರ್ಥಿಗಳಿಂದ ಆಯಾ ಕಾಲೇಜುಗಳಲ್ಲಿಯೇ ದಾಖಲೆಗಳನ್ನು ಪಡೆದು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ವಿಶೇಷ ಕ್ರಮ ಕೈಗೊಳ್ಳಬೇಕೆಂದು ಈಗಾಗಲೆ ಆಯಾ ಕಾಲೇಜು ಪ್ರಾಚಾರ್ಯರುಗಳಿಗೆ ಸೂಚನೆ ನೀಡಲಾಗಿದೆ.  ವಿದ್ಯಾರ್ಥಿಗಳು ತಮ್ಮ ಆಧಾರ್ ಕಾರ್ಡ್, ಫೋಟೋ, ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ ಒದಗಿಸಿದಲ್ಲಿ, ಇಲ್ಲಿ ಸಂಗ್ರಹಿಸಲಾಗುವ ದಾಖಲೆಗಳನ್ನು ಸಂಬಂಧಪಟ್ಟ ಬಿಎಲ್‍ಒ ಗಳಿಗೆ ಕಳುಹಿಸಿ, ಆಯಾ ಮತಗಟ್ಟೆಯ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು.  ಇದಕ್ಕೆ ಸಂಬಂಧಿಸಿದಂತೆ ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ ಅವರು ಎಲ್ಲ ಕಾಲೇಜುಗಳ ಪ್ರಾಚಾರ್ಯರೊಂದಿಗೆ ನ. 19 ರಂದು ಸಭೆ ನಡೆಸಿ, ನಿರ್ದೇಶನ ಹಾಗೂ ಜಾಗೃತಿ ಮೂಡಿಸುವರು.  ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಆನ್‍ಲೈನ್ ಮೂಲಕವೂ ವೋಟರ್ ಹೆಲ್ಪ್‍ಲೈನ್ ಆ್ಯಪ್  (VHA App)  ಅಥವಾ ಗರುಡ ಆ್ಯಪ್ ಅನ್ನು ಮೊಬೈಲ್‍ನಲ್ಲಿ ಡೌನ್‍ಲೋಡ್ ಮಾಡಿಕೊಂಡು ಹೆಸರು ಸೇರ್ಪಡೆ, ತಿದ್ದುಪಡಿ ಮುಂತಾದ ಪರಿಷ್ಕರಣೆ ಕಾರ್ಯ ಕೈಗೊಳ್ಳಬಹುದು. ಇದೀಗ ಜ. 01 ರ ಜೊತೆಗೆ 01ನೇ ಏಪ್ರಿಲ್, 01ನೇ ಜುಲೈ ಹಾಗೂ 01 ನೇ ಅಕ್ಟೋಬರ್ ದಿನಾಂಕವನ್ನು ಅರ್ಹತಾ ದಿನಾಂಕವನ್ನಾಗಿ ನಿಗದಿಪಡಿಸಲಾಗಿದೆ.  ಹೀಗಾಗಿ ನಿಗದಿತ ದಿನಾಂಕಕ್ಕೆ 18 ವರ್ಷ ಪೂರ್ಣಗೊಂಡವರು, ಅಥವಾ 17 ವರ್ಷ ವಯೋಮಿತಿಯವರು ಕೂಡ ಪಟ್ಟಿ ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಯಾವುದೇ ಗೊಂದಲ ಅಥವಾ ಸಂದೇಹಗಳ ನಿವಾರಣೆಗಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 08194-222176 ಸಹಾಯವಾಣಿ ಸ್ಥಾಪಿಸಲಾಗಿದೆ. ಅಥವಾ ಟೋಲ್ ಫ್ರೀ ಸಂಖ್ಯೆ 1950 ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ತಿಳಿಸಿದ್ದಾರೆ.
[t4b-ticker]

You May Also Like

More From Author

+ There are no comments

Add yours