ಶಿಕ್ಷಣ, ಆರೋಗ್ಯ ಹಾಗೂ ಮಹಿಳೆಯರ ಅಭಿವೃದ್ಧಿಗೆ ಹೆಚ್ಚಿನ ಒತ್ತು:ಡಿಸಿ ದಿವ್ಯಾ ಪ್ರಭು

 

 

 

 

ಶಿಕ್ಷಣ, ಆರೋಗ್ಯ ಹಾಗೂ ಮಹಿಳೆಯರ ಅಭಿವೃದ್ಧಿಗೆ ಹೆಚ್ಚಿನ ಒತ್ತು-
-ನೂತನ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ
********************************
ಕರ್ನಾಟಕ ವಾರ್ತೆ (ಚಿತ್ರದುರ್ಗ).ಅ.28:
ಜಿಲ್ಲೆಯ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿನ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವುದಲ್ಲದೆ, ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲು ಶ್ರಮಿಸುವುದಾಗಿ ನೂತನ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ಪತ್ರಕರ್ತರೊಂದಿಗೆ ಪರಿಚಯಾತ್ಮ ಭೇಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
2014ರಲ್ಲಿ ಭಾರತೀಯ ಆಡಳಿತ ಸೇವೆಗೆ ಸೇರಿ, ಮೊದಲಿಗೆ ರಾಯಚೂರು ಜಿಲ್ಲೆಯ ಲಿಂಗಸುಗೂರು ವಿಭಾಗಧಿಕಾರಿ, ಬಳ್ಳಾರಿ ಮಹಾನಗರಪಾಲಿಕೆ ಆಯುಕ್ತರು, ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು, ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಪರೀಕ್ಷೆ ನಿಯಂತ್ರಕರು, ಮಂಡ್ಯ ಜಿಲ್ಲೆ ಜಿ.ಪಂ. ಸಿಇಓ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹೀಗೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ, ಇದೀಗ ಮೊದಲ ಬಾರಿಗೆ ಜಿಲ್ಲೆಯೊಂದರ ಜಿಲ್ಲಾಧಿಕಾರಿಯಾಗಿ ಆಗಮಿಸಿದ್ದೇನೆ. ಐತಿಹಾಸಿಕವಾಗಿ ಪ್ರಸಿದ್ಧಿ ಹೊಂದಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಯತ್ನಿಸಲಾಗುವುದು. ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಗಮನ ಹೆಚ್ಚಿನ ಹರಿಸುತ್ತೇನೆ. ಆರೋಗ್ಯ ಸೇವೆ ಅತಿ ಮುಖ್ಯವಾಗಿದ್ದು, ಜನರಿಗೆ ಸಕಾಲದಲ್ಲಿ ಗುಣಮಟ್ಟದ ಚಿಕಿತ್ಸೆ ಹಾಗೂ ಶುಷ್ರೂಶೆ ಲಭಿಸಬೇಕು. ಜಿಲ್ಲೆಯಲ್ಲಿ ಶಿಶು ಮರಣ ಹಾಗೂ ತಾಯಿ ಮರಣ ಪ್ರಮಾಣ ತಗ್ಗಬೇಕು. ಅಪೌಷ್ಠಿಕ ಮಕ್ಕಳ ಪ್ರಮಾಣ ಇಳಿಕೆಯಾಗಬೇಕು, ಬಾಲ್ಯ ವಿವಾಹ ಹಾಗೂ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಆಗಬೇಕು. ಮಹಿಳೆಯರ ಆರ್ಥಿಕ ಹಾಗೂ ಸಾಮಾಜಿಕ ಸಬಲತೆ ನಿಟ್ಟಿನಲ್ಲಿ ಸಂಬಂಧಪಟ್ಟ  ಇಲಾಖೆಯಿಂದ ಅಗತ್ಯ ಪಡೆದು, ಇದರ ಸುಧಾರಣೆಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗುವುದು.
ಕೋವಿಡ್ ಸಂದರ್ಭದಲ್ಲಿ ಮಂಡ್ಯ ಜಿ.ಪಂ. ಸಿಇಒ ಆಗಿ ಕೆಲಸ ನಿರ್ವಹಿಸಿದ ಅನುಭವಿದೆ. ಆ ಸಂದರ್ಭದಲ್ಲಿ ಶಾಲಾ ಕಾಲೇಜುಗಳು ಮುಚ್ಚಿದ್ದರಿಂದ ಮಕ್ಕಳ ಶಿಕ್ಷಣಕ್ಕೆ ತೊಡಕಾಗಿತ್ತು. ಇದನ್ನು ನಿವಾರಿಸಲು ಮಂಡ್ಯ ಜಿಲ್ಲೆಯ 233 ಗ್ರಾಮ ಪಂಚಾಯತಿಗಳಲ್ಲಿನ ಗ್ರಂಥಾಲಯಗಳನ್ನು ಕೇವಲ 04 ತಿಂಗಳ ಅವಧಿಯೊಳಗೆ ಡಿಜಿಟಲೀಕರಣ ಗೊಳಿಸಲಾಯಿತು.  ಗ್ರಾಮೀಣ ಜನರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚಿನ ಉದ್ಯೋಗ ಸೇರಿದಂತೆ ವಿವಿಧ ಸೇವೆಗಳನ್ನು ತಲುಪಿಸಲು  ಸಾಧ್ಯವಾಯಿತು. ಈ ಕಾರ್ಯ ನನಗೆ ಅತ್ಯಂತ ತೃಪ್ರಿ ತಂದಿದೆ.  ಇದೇ ಮಾದರಿಯಲ್ಲಿ ಚಿತ್ರದುರ್ಗ ಜಿಲ್ಲೆಗೆ ಬರುವ ಅನುದಾನವನ್ನು ಅಭಿವೃದ್ಧಿಗಾಗಿ ಸಮರ್ಪಕವಾಗಿ ವ್ಯಯಿಸಲಾಗುವುದು.  ಜಿಲ್ಲಾಧಿಕಾರಿಗಳ ಕಚೇರಿಗೆ ತಮ್ಮ ಕೆಲಸಕ್ಕಾಗಿ ಜನರು ಪ್ರತಿನಿತ್ಯ ಅಲೆಯುವಂತಾಗಬಾರದು. ನಿಗದಿತ ಕಾಲ ಮಿತಿಯಲ್ಲಿ ಕಚೇರಿಯಲ್ಲಿ ಕಡತ ವಿಲೇವಾರಿಯಾಗುವಂತೆ ಕ್ರಮ ಕೈಗೊಳ್ಳಲಾಗುವುದು.  ಜಿಲ್ಲಾಧಿಕಾರಿಯಾಗಿ ಕಚೇರಿಗೆ ಮಾತ್ರ ಸೀಮಿತವಾಗದೇ, ಗ್ರಾಮಗಳಿಗೆ ತೆರಳಿ, ಅಲ್ಲಿನ ಜನರಿಂದಲೇ ಮಾಹಿತಿ ಪಡೆಯಲು ಬಯಸುತ್ತೇನೆ.  ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಸ್ಥಳದಲ್ಲಿಯೇ ಸಾರ್ವಜನಿಕರ ಸಮಸ್ಯೆಗಳಿಗೆ ಸಾಧ್ಯವಾದಷ್ಟು ಮಟ್ಟಿಗೆ ಪರಿಹಾರ ಒದಗಿಸಲು ಶ್ರಮಿಸುವ ಮೂಲಕ ಜನಸ್ನೇಹಿ ಆಡಳಿತ ನೀಡುವುದಾಗಿ ನೂತನ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಾರ್ತಾಧಿಕಾರಿ ಬಿ.ವಿ. ತುಕಾರಾಂರಾವ್ ಸೇರಿದಂತೆ ಜಿಲ್ಲಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ವಿವಿಧ ಮಾಧ್ಯಮಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
[t4b-ticker]

You May Also Like

More From Author

+ There are no comments

Add yours