ದೇವದುರ್ಗ ಶಾಸಕಿ ಕರೆಮ್ಮ ನಾಯಕ ಜಾಗದಲ್ಲಿ ಕುಳಿತು ಅರೆಸ್ಟ್ ಆದ ಮೊಳಕಾಲ್ಮುರು ವಕೀಲ

 

 

 

 

ಬೆಂಗಳೂರು: ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸುತ್ತಿದ್ದ ಸಂದರ್ಭದಲ್ಲಿ, ದೇವದುರ್ಗ ಕ್ಷೇತ್ರದ ಶಾಸಕಿ ಕರೆಮ್ಮ ಜಿ. ನಾಯಕ ಅವರ ಕುರ್ಚಿಯಲ್ಲಿ ಕುಳಿತಿದ್ದ ಆರೋಪದಡಿ ವಕೀಲ ತಿಪ್ಪೇರುದ್ರಪ್ಪ (76) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚಿತ್ರದುರ್ಗದ ತಿಪ್ಪೇರುದ್ರಪ್ಪ, ಮೊಳಕಾಲ್ಮುರು ಕ್ಷೇತ್ರದ ಶಾಸಕ ಎಂದು ಹೇಳಿಕೊಂಡು ಒಳಗೆ ಪ್ರವೇಶಿಸಿದ್ದರು. ಅವರನ್ನು ಮಾರ್ಷಲ್‌ಗಳು ಹಿಡಿದು, ಠಾಣೆಗೆ ಒಪ್ಪಿಸಿದ್ದಾರೆ. ವಿಧಾನಸಭೆ ದಂಡನಾಯಕ ಎಚ್‌.ಎಲ್‌. ಜಯಕೃಷ್ಣ ನೀಡಿರುವ ದೂರು ಆಧರಿಸಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಿಪ್ಪೇರುದ್ರಪ್ಪ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿ ತಿಪ್ಪೇರುದ್ರಪ್ಪ, ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದಾರೆ. ‘ನಾನೊಬ್ಬ ಶಾಸಕ. ಸದ್ಯದಲ್ಲೇ ಸಚಿವ ಆಗುತ್ತೇನೆ’ ಎನ್ನುತ್ತಿದ್ದಾರೆ. ‘ನಾನು ವಕೀಲ’ ಎಂಬುದಾಗಿಯೂ ಆಗಾಗ ಹೇಳುತ್ತಿದ್ದಾರೆ. ಸಮಗ್ರ ವಿಚಾರಣೆ ನಡೆಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಮೂಲಗಳು ತಿಳಿಸಿವೆ.

 

 

ವೀಕ್ಷಕರ ಪಾಸ್ ಪಡೆದು ಪ್ರವೇಶ: ‘ವಿಧಾನಸೌಧಕ್ಕೆ ಬೆಳಿಗ್ಗೆ ಬಂದಿದ್ದ ತಿಪ್ಪೇರುದ್ರಪ್ಪ, ಸರದಿ ಸಾಲಿನಲ್ಲಿ ನಿಂತು ವೀಕ್ಷಕರ ಪಾಸ್ ಪಡೆದುಕೊಂಡಿದ್ದರು. ಮಧ್ಯಾಹ್ನ 12.10ರ ಸುಮಾರಿಗೆ ವೀಕ್ಷಕರ ಗ್ಯಾಲರಿಗೆ ಹೋಗುವ ಬದಲು, ಶಾಸಕರ ಪ್ರವೇಶ ದ್ವಾರದ ಬಳಿ ತೆರಳಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿಯನ್ನು ತಡೆದಿದ್ದ ಮಾರ್ಷಲ್‌ಗಳು, ‘ನೀವು ಯಾರು’ ಎಂದು ಪ್ರಶ್ನಿಸಿದ್ದರು. ‘ನಾನು ಮೊಳಕಾಲ್ಮುರು ಕ್ಷೇತ್ರದ ಶಾಸಕ. ಒಳಗೆ ಬಿಡಿ’ ಎಂಬುದಾಗಿ ಜೋರು ಧ್ವನಿಯಲ್ಲಿ ಹೇಳಿದ್ದರು. ಹೊಸ ಶಾಸಕ ಇರಬಹುದೆಂದು ತಿಳಿದ ಮಾರ್ಷಲ್‌ಗಳು ಆರೋಪಿಯನ್ನು ಒಳಗೆ ಬಿಟ್ಟಿದ್ದರು.’

‘ಶಾಸಕರ ಜೊತೆಗೆ ವಿಧಾನಸೌಧದೊಳಗೆ ಹೋಗಿದ್ದ ಆರೋಪಿ, ಶಾಸಕಿ ಕರೆಮ್ಮ ಜಿ. ನಾಯಕ ಕುರ್ಚಿ ಮೇಲೆ 15 ನಿಮಿಷ ಕುಳಿತಿದ್ದರು. ಆರೋಪಿಯನ್ನು ಗಮನಿಸಿ ಅನುಮಾನಗೊಂಡಿದ್ದ ಶಾಸಕರೊಬ್ಬರು ಸಭಾಧ್ಯಕ್ಷ ಯು.ಟಿ.ಖಾದರ್ ಬಳಿ ಹೋಗಿ ವಿಷಯ ತಿಳಿಸಿದ್ದರು. ಅಷ್ಟರಲ್ಲೇ ಆರೋಪಿಯನ್ನು ಮಾರ್ಷಲ್‌ಗಳು ಹಿಡಿದು ವಿಧಾನಸೌಧದಿಂದ ಹೊರಗೆ ಕರೆತಂದಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆರೋಪಿ, ವಕೀಲ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ವಿಧಾನಸೌಧ ಭದ್ರತಾ ಸಿಬ್ಬಂದಿ ಕರ್ತವ್ಯ ಲೋಪವೂ ಎದ್ದು ಕಾಣುತ್ತಿದೆ’ ಎಂದು ಹೇಳಿವೆ.

[t4b-ticker]

You May Also Like

More From Author

+ There are no comments

Add yours