ಜಿಲ್ಲೆಯ ಅಭಿವೃದ್ದಿಗೆ ಎಲ್ಲಾರೂ ಒಟ್ಟಾಗಿ ಶ್ರಮಿಸೋಣ:ಸಚಿವ ಡಿ.ಸುಧಾಕರ್

 

 

 

 

ಚಿತ್ರದುರ್ಗ : ಚಿತ್ರದುರ್ಗಕ್ಕೆ ಮೆಡಿಕಲ್ ಕಾಲೇಜು, ಜಿಲ್ಲೆಗೆ ಅಪ್ಪರ್‍ ಭದ್ರಾ  ಯೋಜನೆ ಸೇರಿದಂತೆ ವಿವಿಧ ಅಭಿವೃದ್ದಿಗೆ ಎಲ್ಲರೂ ಒಟ್ಟಿಗೆ ಸೇರಿ ದುಡಿಯೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ಜಿಲ್ಲಾ ನಾಯಕ ಸಮಾಜದ ವತಿಯಿಂದ ತುರುವನೂರು ರಸ್ತೆಯಲ್ಲಿರುವ ರೆಡ್ಡಿ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮೆಡಿಕಲ್ ಕಾಲೇಜು, ಅಪ್ಪರ್‍ಭದ್ರಾ ಯೋಜನೆ ಮುಗಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ. ರಾಜ್ಯದ ಜನ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷೆಯಿಟ್ಟು ಕಾಂಗ್ರೆಸ್‍ಗೆ ಸ್ಪಷ್ಠ ಬಹುಮತ ನೀಡಿದ್ದಾರೆ. ನುಡಿದಂತೆ ನಡೆಯುವ ಪಕ್ಷ ನಮ್ಮದು. ಆರ್ಥಿಕ ಇಲಾಖೆಯಿಂದ ಅಪ್ರೂವಲ್ ಸಿಕ್ಕ ಕೂಡಲೆ ಮೆಡಿಕಲ್ ಕಾಲೇಜು ಆರಂಭಿಸಲಾಗುವುದೆಂದು ಭರವಸೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎರಡು ತಿಂಗಳಲ್ಲಿ ಐದು ಗ್ಯಾರೆಂಟಿಗಳನ್ನು ಜನತೆಗೆ ನೀಡಿ ಮೂರು ಲಕ್ಷ ಕೋಟಿಗೂ ಅಧಿಕ ಬಜೆಟ್ ಮಂಡಿಸಿದ್ದಾರೆಂದರು.
ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ, ರಾಜಣ್ಣ ಹಾಗೂ ವಾಲ್ಮೀಕಿ ಸಮುದಾಯದ ಎಲ್ಲರನ್ನು ಕರೆಸಿ ವಾಲ್ಮೀಕಿ ಭವನ ಉದ್ಘಾಟಿಸೋಣ. ನಾಯಕ ಸಮುದಾಯದ ಶಕ್ತಿ ಕೇಂದ್ರವಾಗಿರುವ ವಾಲ್ಮೀಕಿ ಭವನಕ್ಕೆ ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಹಣ ಮಂಜೂರು ಮಾಡಿ ಮದಕರಿನಾಯಕನ ಪ್ರತಿಮೆ ಎದುರಿಗಿದ್ದ ಹಳೆ ನಗರಸಭೆ ಕಟ್ಟಡವನ್ನು ಕೆಡವಿ ಅಲ್ಲಿ ವಾಲ್ಮೀಕಿ ಭವನ ನಿರ್ಮಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದ್ದರಿಂದ ಅದ್ಬುತವಾಗಿ ಮೂಡಿಬಂದಿದೆ. ಚಿತ್ರದುರ್ಗ ಮೆಡಿಕಲ್ ಕಾಲೇಜಿಗೆ ಮದಕರಿನಾಯಕನ ಹೆಸರಿಡಲು ನನ್ನ ಸಹಮತವಿದೆ. ಹಂಪಿ ಮಾದರಿಯಲ್ಲಿ ಪ್ರತಿ ವರ್ಷವೂ ದುರ್ಗೋತ್ಸವ ವಿಜೃಂಭಣೆಯಿಂದ ಆಚರಿಸೋಣ. ಮದಕರಿನಾಯಕ ಥೀಂ ಪಾರ್ಕ್ ಕೂಡ ಕಾಂಗ್ರೆಸ್ ಸರ್ಕಾರದಲ್ಲಿ ಆಗುತ್ತದೆ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರ ಆಶಯದಂತೆ ಶಿಕ್ಷಣ, ಸಂಘಟನೆ, ಹೋರಾಟ ಮುಖ್ಯ. ಜಿಲ್ಲೆಯ ಅಭಿವೃದ್ದಿಗಾಗಿ ಮುಖ್ಯಮಂತ್ರಿ ಬಳಿ ನಿಯೋಗ ಹೋಗೋಣ ಎಂದು ಹೇಳಿದರು.
ಮೊಳಕಾಲ್ಮುರು ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡುತ್ತ ಚಿತ್ರದುರ್ಗ ಜಿಲ್ಲೆಗೆ ಅಪ್ಪರ್‍ಭದ್ರಾ ಯೋಜನೆ ತಂದು ಚಳ್ಳಕೆರೆ ಮೂಲಕ ಮೊಳಕಾಲ್ಮುರುವಿಗೂ ನೀರು ಹರಿಸಬೇಕಿದೆ. ಮಧ್ಯಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆ ಹಿಂದುಳಿದಿದ್ದು, ಆರ್ಥಿಕವಾಗಿ ಸಬಲವಾಗಬೇಕಾದರೆ ನೀರಾವರಿಯೊಂದೆ ದಾರಿ. ಎಲ್ಲರೂ ಒಟ್ಟಾಗಿ ಹೋರಾಡಿದಾಗ ಮಾತ್ರ ನೀರು ಬರಲು ಸಾಧ್ಯ. ಜಿಲ್ಲೆಯಲ್ಲಿರುವ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದೆಂದು ನಾಯಕ ಸಮುದಾಯಕ್ಕೆ ಭರವಸೆ ನೀಡಿದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನ ಕಾಂಗ್ರೆಸ್ ಮೇಲೆ ನಂಬಿಕೆಯಿಟ್ಟು ಸ್ಪಷ್ಟ ಬಹುಮತ ನೀಡಿದ್ದರಿಂದ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಲು ಕಾರಣವಾಯಿತು. ಸರ್ಕಾರದ ಮೇಲೆ ಜನ ಇಟ್ಟಿರುವ ಭರವಸೆಗೆ ಚ್ಯುತಿ ಬಾರದಂತೆ ಅಭಿವೃದ್ದಿ ಕೆಲಸಗಳಾಗುತ್ತದೆ. ಅಧಿಕಾರ ಸುಖದ ಸುಪ್ಪತ್ತಿಗೆಯಲ್ಲ. ಮುಳ್ಳಿನ ಹಾಸಿಗೆಯಿದ್ದಂತೆ. ರಾಜ್ಯದಲ್ಲೀಗ ಅಭಿವೃದ್ದಿ ಪರ್ವ ಆರಂಭವಾಗಿದೆ ಎಂದರು.
ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಮಾತನಾಡುತ್ತ ಹಿರಿಯರ ಸಲಹೆ ಸಹಕಾರ ಸೂಚನೆಗಳಂತೆ ಅಭಿವೃದ್ದಿ ಕಾರ್ಯ ನಡೆಯುತ್ತದೆ. ಐತಿಹಾಸಿಕ ಚಿತ್ರದುರ್ಗದ ಕೋಟೆಗೆ ನೇರ ರಸ್ತೆ ಆದೆ ಆಗುತ್ತದೆ. ವಿದೇಶಿ ಪ್ರವಾಸಿಗರು ಸೇರಿ ಎಲ್ಲರೂ ಬಂದು ನಮ್ಮ ದುರ್ಗದ ಕೋಟೆಯನ್ನು ವೀಕ್ಷಿಸುವಂತೆ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದೆಂದು ಹೇಳಿದರು.
ಚಿತ್ರದುರ್ಗದಲ್ಲಿ ಆರಂಭಗೊಳ್ಳಲಿರುವ ಮೆಡಿಕಲ್ ಕಾಲೇಜಿಗೆ ರಾಜ ವೀರ ಮದಕರಿನಾಯಕ ಹೆಸರಿಡುವುದು ಸೂಕ್ತವಾಗಿದೆ. ಇದರಿಂದ ಗಂಡು ಮೆಟ್ಟಿನ ನಾಡು ಐತಿಹಾಸಿಕ ಚಿತ್ರದುರ್ಗಕ್ಕೆ ಕೀರ್ತಿ ಬಂದಂತಾಗುತ್ತದೆಂದರು.
ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷ ಬಿ.ಕಾಂತರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ ಇಲ್ಲಿಯವರೆವಿಗೂ ನಮ್ಮ ಸಮುದಾಯಕ್ಕೆ ಯಾವುದೇ ಗುರುತರವಾದ ಕೆಲಸ ಆಗಿಲ್ಲ. ಕಳೆದ ಮೂವತ್ತು ವರ್ಷಗಳಿಂದ ಚಿತ್ರದುರ್ಗವನ್ನು ಆಳಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿಯಿಂದಲೂ ಊರಿಗೆ, ನಮ್ಮ ಜನಾಂಗಕ್ಕೆ ಕಿಂಚಿತ್ತೂ ಸಹಾಯವಾಗಿಲ್ಲ. ಚಿತ್ರದುರ್ಗ ಕೋಟೆಗೆ ಹೋಗಲು ನೇರವಾದ ರಸ್ತೆಯಿಲ್ಲ. ನಮ್ಮ ಜನಾಂಗದ ಯಾರೊಬ್ಬರಿಗೂ ಮಾಹಿತಿ ನೀಡದೆ ವಾಲ್ಮೀಕಿ ಭವನವನ್ನು ನೆಪ ಮಾತ್ರಕ್ಕೆ ಉದ್ಗಾಟಿಸಲಾಗಿದೆ. ಹಿಂದಿನ ಬಿಜೆಪಿ.ಸರ್ಕಾರ ಬರೀ ಸುಳ್ಳು ಆಶ್ವಾಸನೆಗಳನ್ನು ನೀಡುವುದರಲ್ಲಿಯೇ ಕಾಲ ಕಳೆಯಿತು. ನಾಯಕ ಸಮಾಜಕ್ಕೆ ತುಂಬಾ ಅನ್ಯಾಯವಾಗಿದೆ. ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜು ಆರಂಭವಾದರೆ ಮದಕರಿನಾಯಕ ಹೆಸರಿಡುವಂತೆ ವೇದಿಕೆಯಲ್ಲಿದ್ದ ಎಲ್ಲಾ ಮುಖಂಡರುಗಳಲ್ಲಿ ಮನವಿ ಮಾಡಿದರು.

 

 

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ ಸಮಾಜದ ಜನರು ಸನ್ಮಾನಿಸುವ ಮೂಲಕ ನಮ್ಮ ಮೇಲಿನ ಜವಬ್ದಾರಿ ಹೆಚ್ಚಿಸಿದೆ. ಸರ್ಕಾರದ ಮೂಲಕ ಕ್ಷೇತ್ರದ ಜನರ ಮತ್ತು ಜನಾಂಗದವ ಕೆಲಸವನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.

 

ವದಿಗೆರೆ ರಮೇಶ್ ಇವರುಗಳು ಮಾತನಾಡಿದರು.
ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ಮದಕರಿನಾಯಕ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಸಂದೀಪ್, ತಿಪ್ಪೇಸ್ವಾಮಿ ಕಲ್ಲವ್ವನಾಗತಿಹಳ್ಳಿ, ನಾಗರಾಜ್ ಜಾನ್ಹವಿ, ಮದಕರಿನಾಯಕ, ಸಿರುವಲ್ಲಪ್ಪ, ಶೇಖರಪ್ಪ, ಜೆ.ಎನ್.ಕೋಟೆ ಗುರುಸಿದ್ದಪ್ಪ, ರತ್ನಮ್ಮ, ಸರ್ವೆಬೋರಣ್ಣ, ಲೋಹಿತ್ ಸೇರಿದಂತೆ ನಾಯಕ ಸಮಾಜದ ಅನೇಕರು ವೇದಿಕೆಯಲ್ಲಿದ್ದರು.
ಶೈಲೇಂದ್ರ ಪ್ರಾರ್ಥಿಸಿದರು. ಹೆಚ್.ಅಂಜಿನಪ್ಪ ಸ್ವಾಗತಿಸಿದರು. ಡಿ.ಗೋಪಾಲಸ್ವಾಮಿ ನಾಯಕ ನಿರೂಪಿಸಿದರು.

[t4b-ticker]

You May Also Like

More From Author

+ There are no comments

Add yours