ಕೆ.ಸಿ.ವೀರೇಂದ್ರಪಪ್ಪಿ ಗೆದ್ದು ಎರಡು ತಿಂಗಳಾಯಿತು,ಇನ್ನು ಕ್ಷೇತ್ರದ ಜನರ ಕೈಗೆ ಸಿಗುತ್ತಿಲ್ಲ

 

 

 

 

ಚಿತ್ರದುರ್ಗ : ಪ್ರಜಾ ಪ್ರಭುತ್ವದಲ್ಲಿ ಪ್ರಜೆಗಳ ರಕ್ಷಣೆಗೆ ನವ ಪ್ರಜಾ ರಕ್ಷಣಾ ವೇದಿಕೆ ಗಮನ ಕೊಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಿಳಿಸಿದರು.

ತ.ರಾ.ಸು.ರಂಗಮಂದಿರದಲ್ಲಿ ಶನಿವಾರ ನವ ಪ್ರಜಾ ರಕ್ಷಣಾ ವೇದಿಕೆ ರಾಜ್ಯ ಸಮಿತಿ ಉದ್ಗಾಟಿಸಿ ಮಾತನಾಡಿದ ಸಚಿವರು ಮದಕರಿನಾಯಕ, ಒನಕೆ ಓಬವ್ವ ಆಳಿದಂತ ಐತಿಹಾಸಿಕ ಹಿನ್ನೆಲೆಯುಳ್ಳ ಚಿತ್ರದುರ್ಗದಲ್ಲಿ ಕಲೆಗಳು ಉಳಿಯಬೇಕಾಗಿರುವುದರಿಂದ ಜಿಲ್ಲೆಯ ಎಲ್ಲಾ ಕಲಾವಿದರನ್ನು ಗುರುತಿಸಿ ನವ ಪ್ರಜಾ ರಕ್ಷಣಾ ವೇದಿಕೆ ಸನ್ಮಾನಿಸುತ್ತಿರುವುದು ಅತ್ಯಂತ ಖುಷಿಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವರು ವಿಧಾನಸಭಾ ಚುನಾವಣಾ ಪೂರ್ವದಲ್ಲಿಯೇ ಕಾಂಗ್ರೆಸ್ ಪಕ್ಷ ಐದು ಗ್ಯಾರೆಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೂರು ಗ್ಯಾರೆಂಟಿಗಳನ್ನು ಈಡೇರಿಸಿದ್ದು, ಮುಂದಿನ ತಿಂಗಳು ಉಳಿದ ಎರಡು ಗ್ಯಾರೆಂಟಿಗಳನ್ನು ಜಾರಿಗೊಳಿಸಲಿದ್ದಾರೆಂದು ಹೇಳಿದರು.

ಮಧ್ಯ ಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆ ಅಭಿವೃದ್ದಿಯಾಗಬೇಕಾಗಿರುವುದರಿಂದ ಜಿಲ್ಲೆಯ ಎಲ್ಲಾ ಶಾಸಕರು ಸೇರಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದ ಸಚಿವ ಡಿ.ಸುಧಾಕರ್ ಕಲಾವಿದರು, ಕಲೆ ಉಳಿಯಬೇಕಾಗಿದೆ ಎಂದರು.

 

 

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ ನವ ಪ್ರಜಾ ರಕ್ಷಣಾ ವೇದಿಕೆ ಪ್ರಜೆಗಳ ರಕ್ಷಣೆಯ ಹೊಣೆ ಹೊರಬೇಕು. ಸಂವಿಧಾನದ ರಕ್ಷಣೆಯಾಗಬೇಕಿದೆ. ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನದ ಆಶಯಗಳಿಗೆ ಯಾರು ಧಕ್ಕೆ ತರುತ್ತಾರೋ ಅಂತಹವರು ವಿರುದ್ದ ವೇದಿಕೆ ಹೋರಾಡಿ ಸಂವಿಧಾನವನ್ನು ಉಳಿಸಬೇಕು. ಭದ್ರಾ ಮೇಲ್ದಂಡೆ ಯೋಜನೆ, ಚಿತ್ರದುರ್ಗಕ್ಕೆ ಮೆಡಿಕಲ್ ಕಾಲೇಜು ಸೇರಿದಂತೆ ಅನೇಕ ಅಭಿವೃದ್ದಿಗಳು ಆಗಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೆ ಮೂರು ಗ್ಯಾರೆಂಟಿಗಳನ್ನು ರಾಜ್ಯದ ಜನತೆಗೆ ನೀಡಿದ್ದಾರೆ. ಉಳಿದ ಎರಡು ಗ್ಯಾರೆಂಟಿಗಳು ಜಾರಿಯಾಗುತ್ತದೆ. ಜನ ನಿರೀಕ್ಷೆಯಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಠ ಬಹುಮತ ನೀಡಿರುವುದರಿಂದ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ನವ ಪ್ರಜಾ ರಕ್ಷಣಾ ವೇದಿಕೆ ಸಮಾಜಮುಖಿಯಾಗಿರಲಿ ಎಂದು ಹಾರೈಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡುತ್ತ ಸಿನಿಮ, ಟಿ.ವಿ. ಮೊಬೈಲ್ ಹಾವಳಿಯಲ್ಲಿ ಕಲಾವಿದರ ಬದುಕು ಅತಂತ್ರವಾಗಿದೆ. ಕಲೆ, ಕಲಾವಿದರನ್ನು ಉಳಿಸುವ ಕೆಲಸವಾಗಬೇಕು. ನವ ಪ್ರಜಾ ರಕ್ಷಣಾ ವೇದಿಕೆ ಕಲಾವಿದರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಉತ್ತೇಜನ ನೀಡಿದಂತಾಗುತ್ತದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕಲಾವಿದರಿಗೆ ತಲುಪಿಸುವ ನಿಟ್ಟಿನಲ್ಲಿ ವೇದಿಕೆ ಕೆಲಸ ಮಾಡಬೇಕು. ಕಲಾವಿದರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸುವಂತೆ ಮನವಿ ಮಾಡಿದರು.

ನವ ಪ್ರಜಾ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಹೆಚ್.ಏಕಾಂತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಒಂದು ತಿಂಗಳ ಮುಂಚೆಯೇ ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರಪಪ್ಪಿರವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೆ. ಆದರೂ ಬರಲಿಲ್ಲ ಎಂದರೆ ಕನ್ನಡದ ಬಗ್ಗೆ ಅವರಿಗೆ ಎಷ್ಟು ತಾತ್ಸಾರ ಇದೆ ಎನ್ನುವುದು ಗೊತ್ತಾಗುತ್ತದೆಂದು ನೊಂದು ನುಡಿದರು. ಕೆ.ಸಿ.ವೀರೇಂದ್ರಪಪ್ಪಿ ಗೆದ್ದು ಎರಡು ತಿಂಗಳಾಯಿತು. ಇನ್ನು ಕ್ಷೇತ್ರದ ಜನರ ಕೈಗೆ ಸಿಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಚಿತ್ರದುರ್ಗ ಅಭಿವೃದ್ದಿಯಾಗುವುದಾದರೂ ಹೇಗೆ ಎಂದು ಪ್ರಶ್ನಿಸಿದ ಹೆಚ್.ಏಕಾಂತಪ್ಪ ನಮಗೆ ಸಿಗುವ ಶಾಸಕರುಗಳೆಲ್ಲಾ ಇಂತವರೆ ನಮ್ಮ ಹಣೆಬರಹ ಏನು ಮಾಡಲು ಆಗಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಶಿವಮೂರ್ತಿ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಂಜುಳಗೌಡ, ಜಿಲ್ಲಾಧ್ಯಕ್ಷ ಪಿ.ಕೋದಂಡಸ್ವಾಮಿ, ರಾಜ್ಯ ಉಸ್ತುವಾರಿ ಸಂಚಾಲಕ ಎ.ಮಂಜುನಾಥ್, ರಾಜ್ಯ ಕಾರ್ಯಾಧ್ಯಕ್ಷ ಹೆಚ್.ಆನಂದ್ ಚದುರಗೊಳ್ಳ, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಡಾ.ಟಿಪ್ಪುಖಾಸಿಂ ಆಲಿ ಸೇರಿದಂತೆ ವೇದಿಕೆಯ ರಾಜ್ಯ ಹಾಗೂ ಜಿಲ್ಲಾ ಸಮಿತಿ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

[t4b-ticker]

You May Also Like

More From Author

+ There are no comments

Add yours