ಕೋವಿಡ್ ಭಯದ ಮಧ್ಯೆಯೇ ಬಣ್ಣದೋಕುಳಿ ; ಮನೆಯೆದುರಿಗೆ ರಂಗಿನಾಟ ಸೀಮಿತ.

 

 

 

 

ಚಿತ್ರದುರ್ಗ ಮಾ. ೨೯

ಕೋವಿಡ್ ಮಾರ್ಗಸೂಚಿಯ ಕಾರಣ ನಗರದಲ್ಲಿ ಹೋಳಿ ಹಬ್ಬದ ಸಂಭ್ರಮವಿರಲಿಲ್ಲ. ನಗರದಲ್ಲಿ ಈ ಬಾರಿ ಬಣ್ಣದ ಹಬ್ಬದ ಸಂಭ್ರಮಕ್ಕೆ ಕೋವಿಡ್ ಕರಿನೆರಳು ಬಿದ್ದಿತ್ತು.

ಹಿಂದಿನ ವರ್ಷಗಳಲ್ಲಿ ವಿವಿಧ ಬಡಾವಣೆ, ಗಲ್ಲಿಗಳಲ್ಲಿ ಯುವಕರು ಗುಂಪು ಕಟ್ಟಿಕೊಂಡು ಪೈಪೋಟಿಯಲ್ಲಿ ಬಣ್ಣ ಬಳಿದು ಸಂತಸದಿಂದ ಕುಣಿದಾಡಿ ನಲಿಯುತ್ತಿದ್ದರು. ಕೆಲವೆಡೆ ಬಳಿ ಬಳಿದುಕೊಂಡವರು ವಿವಿಧ ಹಾಡಿಗೆ ಹೆಜ್ಜೆ ಹಾಕಿ ಸಹ ಮಾಡುತ್ತಿದ್ದರು.ಹಬ್ಬದ ಹಿಂದಿನ ದಿನ ಮತ್ತು ಹಬ್ಬದ ದಿನ ನಗರದ ಮಾರುಕಟ್ಟೆಗಳಲ್ಲಿ ಅಲ್ಲಲ್ಲಿ ಬಣ್ಣದ ವ್ಯಾಪಾರ ಸಹ ಕಂಡು ಬರುತ್ತಿತ್ತು. ಆದರೆ ಈ ಯಾವ ಸಂಭ್ರಮ, ಚಿತ್ರಣಗಳು ಈ ಬಾರಿ ನಗರದಲ್ಲಿ ಕಾಣಲಿಲ್ಲ.

 

 

ಸಾರ್ವಜನಿಕರು ಗುಂಪುಗೂಡುವುದರ ಮೇಲೆ ಪೊಲೀಸರು ನಿರ್ಬಂಧ ಹೇರಿದ್ದರಿಂದ ಜನ ಅವರ ಓಣಿಗಳಲ್ಲಿ ಅವರ ಮನೆಗಳೆದುರಿಗೆ ಸೀಮಿತರಾಗಿ ಸೋಮವಾರ ರಂಗಿನಾಟವಾಡಿ ಸಂಭ್ರಮಿಸಿದರು. ಕೋವಿಡ್-೧೯ ವ್ಯಾಪಕವಾಗಿ ಹರಡುತ್ತಿರುವುದರಿಂದ ಈ ವರ್ಷ ಜಿಲ್ಲಾಡಳಿತವು, ಸಾರ್ವಜನಿಕರು ಗುಂಪುಗೂಡಿ ಬಣ್ಣದಾಟ ಆಡುವುದರ ಮೇಲೆ ನಿರ್ಬಂಧ ಹೇರಿತ್ತು.

ಆಯಾ ಬಡಾವಣೆಗಳಲ್ಲಿ ಜನ ಅವರ ಕುಟುಂಬ ಸದಸ್ಯರು, ನೆರೆ ಮನೆಯವರೊಂದಿಗೆ ಬಣ್ಣದಾಟವಾಡಿ ಬಣ್ಣದಲ್ಲಿ ಮಿಂದೆದ್ದರು. ಮಹಿಳೆಯರು, ಮಕ್ಕಳು, ಯುವಕ/ಯುವತಿಯರು ಸೇರಿದಂತೆ ಎಲ್ಲ ವಯೋಮಾನದವರು ರಂಗಿನಾಟವಾಡಿದರು. ಇನ್ನು, ಅಪಾರ್ಟ್‌ಮೆಂಟ್ ನಿವಾಸಿಗಳು ನೆಲ ಅಂತಸ್ತಿನ ವಾಹನ ನಿಲುಗಡೆ ಜಾಗದಲ್ಲಿ ಬಣ್ಣದೋಕುಳಿ ಆಡಿದರು. ಪರಸ್ಪರ ಬಣ್ಣ ಎರಚಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.

ಯುವಕರು ಬೈಕ್‌ನಲ್ಲಿ ಗೆಳೆಯರ ಮನೆಗೆ ತೆರಳಿ ಹೋಳಿ ಹಬ್ಬ ಆಚರಿಸಿದರು. ಪ್ರಮುಖ ರಸ್ತೆಗಳಲ್ಲಿ ಪೊಲೀಸರು ತಡೆಯುತ್ತಾರೆ ಎಂದರಿತ ಅವರು ಕಿರು ಬಡಾವಣೆಗಳ ಮೂಲಕವೇ ಓಡಾಡಿದರು. ಕೋವಿಡ್ ಕಾರಣಕ್ಕಾಗಿ ಹಿರಿಯ ನಾಗರಿಕರು ಹೆಚ್ಚಾಗಿ ಈ ಸಲ ಬಣ್ಣದಾಟ ಆಡಲಿಲ್ಲ. ಮನೆ ಮಂದಿಯೆಲ್ಲ ರಂಗಿನಾಟ ಆಡುತ್ತಿದ್ದರೆ, ಅದನ್ನು ನೋಡಿ ಅವರು ಸಂಭ್ರಮಿಸಿದರು. ಹಿರಿಯರು ಮಾತ್ರ ಬಣ್ಣ ಆಡಲು ನಿರಾಸಕ್ತಿ ವಹಿಸಿದಂತಿತ್ತು. ಆದರೂ ಕೂಡ ಕೆಲವೆಡೆ ಓಕುಳಿಯಾಟದ ಸಂಭ್ರಮ ಮನೆ ಮಾಡಿತ್ತು.

ಕಾಮದಹನ: ಭಾನುವಾರ ರಾತ್ರಿ ನಗರದ ಹಲವು ಬಡಾವಣೆಗಳಲ್ಲಿ ಕಾಮ ದಹನ ಮಾಡಲಾಯಿತು. ಆದರೆ, ಎಲ್ಲೂ ಹೆಚ್ಚಿನ ಜನ ಕಂಡು ಬರಲಿಲ್ಲ.. ಮತ್ತೆ ಕೆಲವರು ಜನ ಸೇರುವ ಪ್ರದೇಶಗಳಿಂದ ದೂರ ಉಳಿದು, ಅವರ ಮನೆಯೆದುರೇ ಸಣ್ಣ ಪ್ರಮಾಣದಲ್ಲಿ ಕಾಮದಹನ ಮಾಡಿದರು.

’ಕಾಮಣ್ಣ ಮಕ್ಕಳು.. ಕಳ್ಳ ಸುಳ್ಳ ಮಕ್ಕಳು, ಏನೇನು ಕದ್ದರು ಕಟಿಗಿ ಕುಳ್ಳು ಕದ್ದರು, ಯಾತಕ್ಕೆ ಕದ್ದರು, ಕಾಮಣ್ಣನ ಸುಡಾಕ ಕದ್ದರು..’ ಎಂದು ಹಾಡುತ್ತ ಯುವಕರು ಹಲಗೆ ಬಡಿಯುತ್ತ, ಬೀದಿಗಳಲ್ಲಿ ಬಣ್ಣ ಎರಚುತ್ತ ಸಂಚರಿಸಿದರು.

[t4b-ticker]

You May Also Like

More From Author

+ There are no comments

Add yours