ಆಗಸ್ಟ್ 11 ರಿಂದ 17 ರವರೆಗೆ “ಹರ್ ಘರ್ ತಿರಂಗಾ” ಅಭಿಯಾನ, ಪ್ರತಿ ಮನೆ-ಮನೆಯಲ್ಲಿಯೂ ರಾಷ್ಟ್ರ ಧ್ವಜಾರೋಹಣ

 

 

 

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಜುಲೈ 07:
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ “ಹರ್ ಘರ್ ತಿರಂಗಾ” ಕಾರ್ಯಕ್ರಮವನ್ನು ಆಗಸ್ಟ್ 11 ರಿಂದ 17 ರವರೆಗೆ ಹಮ್ಮಿಕೊಂಡಿದ್ದು, ಈ ಅಭಿಯಾನದಡಿ ಪ್ರತಿ ಮನೆ-ಮನೆಯಲ್ಲಿಯೂ ರಾಷ್ಟ್ರಧ್ವಜ ಹಾರಿಸಿ, ರಾಷ್ಟ್ರಪ್ರೇಮ ಅಭಿವ್ಯಕ್ತಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ “ಹರ್ ಘರ್ ತಿರಂಗಾ” ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ಬಾವುಟಕ್ಕೆ ಅಗೌರವ ತೋರಬಾರದು. ಕಡ್ಡಾಯವಾಗಿ ಧ್ವಜ ಸಂಹಿತೆಯನ್ನು ಪಾಲಿಸಬೇಕು. ಗ್ರಾಮ ಪಂಚಾಯಿತಿ, ಅಂಗನವಾಡಿ ಕೇಂದ್ರ, ಶಾಲಾ-ಕಾಲೇಜು, ಸರ್ಕಾರಿ ಕಚೇರಿ, ನ್ಯಾಯಬೆಲೆ ಅಂಗಡಿ, ಸಂಘ-ಸಂಸ್ಥೆಗಳು, ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು. ಸ್ವಾತಂತ್ರ್ಯ ಹೋರಾಟ, ತ್ಯಾಗ, ಬಲಿದಾನಗಳನ್ನು ಮಾಡಿದ ಎಲ್ಲರನ್ನೂ ಸ್ಮರಿಸಬೇಕು ಎಂದರು.
ರಾಷ್ಟ್ರಧ್ವಜ ಹಾರಿಸುವ ಸಂದರ್ಭದಲ್ಲಿ ಯಾವುದೇ ರೀತಿಯ ಆಡಚಣೆಗಳು ಉಂಟಾಗದಂತೆ ಕ್ರಮ ವಹಿಸಬೇಕು. ಧ್ವಜಾರೋಹಣ ಮಾಡುವ ಬಗ್ಗೆ ಹಾಗೂ ಅದರ ನಿಯಮಗಳ ಬಗ್ಗೆ ಇಲಾಖೆಗಳ ಮುಖ್ಯಸ್ಥರು ಜಾಗೃತಿ ಮೂಡಿಸಿ, ಜನರಲ್ಲಿ ತಿಳಿವಳಿಕೆ ಮೂಡಿಸಬೇಕು ಎಂದು ಸೂಚನೆ ನೀಡಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಧನಂಜಯ ಮಾತನಾಡಿ, ಭಾರತ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದ್ದು, ಆಗಸ್ಟ್ 11 ರಿಂದ 17 ರವರೆಗೆ ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ಪ್ರತಿ ಮನೆ-ಮನೆಗಳಲ್ಲಿಯೂ, ಶಾಲಾ-ಕಾಲೇಜು, ಸಂಘ-ಸಂಸ್ಥೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಬೇಕಿದೆ ಎಂದರು.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಹೋರಾಟ, ತ್ಯಾಗ, ಬಲಿದಾನಗಳ ಕಾರಣದಿಂದ, ದಾಸ್ಯದ ಸಂಕೋಲೆಯಿಂದ ಬಿಡುಗಡೆಯಾದ ಭಾರತಾಂಭೆಗೆ ಇದೀಗ ಅಮೃತ ಮಹೋತ್ಸವದ ಸಂಭ್ರಮವಾಗಿದ್ದು, ಇದಕ್ಕೆ ಕಾರಣರಾದ ಎಲ್ಲರನ್ನೂ ಸ್ಮರಿಸುವುದು, ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಹರ್ ಘರ್ ತಿರಂಗಾ ಎಂಬ ಘೋಷವಾಕ್ಯದೊಂದಿಗೆ, ಆಗಸ್ಟ್ 11 ರಿಂದ 17 ರವರೆಗೆ ದೇಶದ ಪ್ರತಿ ಮನೆ-ಮನೆಯಲ್ಲಿಯೂ ರಾಷ್ಟ್ರಧ್ವಜ ಹಾರಿಸಿ, ದೇಶಭಕ್ತಿ ಬಿಂಬಿಸುವ ಮೂಲಕ ರಾಷ್ಟ್ರಪ್ರೇಮ ಅಭಿವ್ಯಕ್ತಗೊಳಿಸಲು ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಹರ್ ಘರ್ ತಿರಂಗಾ ಅಭಿಯಾನ ಅನುಷ್ಠಾನಗೊಳಿಸಲು ಸರ್ಕಾರಿ, ಅರೆ ಸರ್ಕಾರಿ, ನಿಗಮ ಮಂಡಳಿಗಳು, ಸಾರ್ವಜನಿಕ ಉದ್ದಿಮೆಗಳು, ಸ್ವಯ-ಸಹಾಯ ಗುಂಪುಗಳು, ಶಾಲಾ-ಕಾಲೇಜು, ಸಾರ್ವಜನಿಕರು, ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಪರ ಸಂಘಟನೆಗಳು, ರೆಡ್ ಕ್ರಾಸ್, ರೋಟರಿ ಕ್ಲಬ್ ಸೇರಿದಂತೆ ಎಲ್ಲ ಸಂಘ-ಸಂಸ್ಥೆಗಳು ಸ್ವತಃ ತಾವೇ ಕ್ರಿಯಾಶೀಲರಾಗಿ ಭಾಗವಹಿಸಬೇಕು ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ಮಾಜಿ ಅಧ್ಯಕ್ಷರಾದ ಕೆ.ಎಂ.ವಿರೇಶ್, ಡಾ.ದೊಡ್ಡಮಲ್ಲಯ್ಯ, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಜನ ಅಧಿಕಾರಿ ಸುಹಾಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿಬಾಯಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ಮಹೇಂದ್ರನಾಥ್, ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

 

 

[t4b-ticker]

You May Also Like

More From Author

+ There are no comments

Add yours