ಇಂಗಳದಾಳ್ ಬಳಿಯ 92 ಏಕರೆ ಜಮೀನು ಮೆಡಿಕಲ್ ಕಾಲೇಜಿಗೆ ಹಸ್ತಾಂತರಿಸಿ: ಸಚಿವ ಎ.ನಾರಾಯಣಸ್ವಾಮಿ ಸೂಚನೆ

 

 

 

 

 

ಚಿತ್ರದುರ್ಗ ಡಿ. 28 (ಕರ್ನಾಟಕ ವಾರ್ತೆ) :
ಜಿಲ್ಲೆಯಲ್ಲಿ ಆದರ್ಶ ಗ್ರಾಮ ಯೋಜನೆಯಡಿ 97 ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನಗೊಂಡಿದ್ದು, ಉಳಿದಂತೆ ಈ ಗ್ರಾಮಗಳನ್ನು ಗುಡಿಸಲು ಮುಕ್ತವಾಗಿಸಿ, ಮಾದರಿ ಗ್ರಾಮಗಳನ್ನಾಗಿಸುವ ನಿಟ್ಟಿನಲ್ಲಿ ಕ್ರಿಯಾಯೋಜನೆ ರೂಪಿಸುವಂತೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರು ಮತ್ತು ಸಂಸದರಾದ ಎ. ನಾರಾಯಣಸ್ವಾಮಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೇಂದ್ರ ಪುರಸ್ಕøತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾದ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ 2016-17 ರಲ್ಲಿ 45 ಗ್ರಾಮಗಳು ಹಾಗೂ ನಂತರದಲ್ಲಿ 52 ಗ್ರಾಮಗಳು ಸೇರಿದಂತೆ ಒಟ್ಟು 97 ಗ್ರಾಮಗಳನ್ನು ಆದರ್ಶ ಗ್ರಾಮ ಯೋಜನೆಯಡಿ ಸೇರಿಸಿ ಅಭಿವೃದ್ಧಿ ಕೈಗೊಳ್ಳಲಾಗಿದೆ.  ಉಳಿದಂತೆ ಇನ್ನೂ ಎರಡು ಹಂತಗಳಲ್ಲಿ ಆದರ್ಶ ಗ್ರಾಮ ಯೋಜನೆಗಳಡಿ ಗ್ರಾಮಗಳನ್ನು ಆಯ್ಕೆಗೊಳಿಸಿ, ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ.  ಈಗಾಗಲೆ ಈ ಗ್ರಾಮಗಳಲ್ಲಿ ಮನೆ ರಹಿತರ ಸಮೀಕ್ಷೆ ನಡೆಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಮತಾ ಅವರು ಮಾಹಿತಿ ನೀಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಎ. ನಾರಾಯಣಸ್ವಾಮಿ ಮೊದಲ ಹಂತದ 97 ಗ್ರಾಮಗಳಲ್ಲಿ ಇನ್ನೂ ಕೂಡ ಗುಡಿಸಲುಗಳು ಇವೆ, ಕೆಲವೆಡೆ ಗ್ರಂಥಾಲಯಗಳು, ಸ್ತ್ರೀಶಕ್ತಿ ಸಂಘಗಳು, ಅಂಬೇಡ್ಕರ್ ಭವನ, ಬಾಬುಜಗಜೀವನರಾಂ ಭವನ ಸೇರಿದಂತೆ ಸಮುದಯ ಭವನಗಳು ಇಲ್ಲ.  ಆದರ್ಶ ಗ್ರಾಮಗಳನ್ನು ಗುಡಿಸಲು ಮುಕ್ತ ಗ್ರಾಮಗಳನ್ನಾಗಿಸಿ, ಮನೆ ರಹಿತರಿಗೆ ಮನೆ ಮಂಜೂರು ಮಾಡಲು ಹಾಗೂ ಗ್ರಂಥಾಲಯ, ಸಮುದಾಯ ಭವನಗಳ ಭವನಗಳನ್ನು ನಿರ್ಮಿಸಲು ಪಟ್ಟಿ ತಯಾರಿಸಿ, ಕ್ರಿಯಾ ಯೋಜನೆ ಸಲ್ಲಿಸಿದಲ್ಲಿ, ಕೇಂದ್ರ ಸರ್ಕಾರದಿಂದ ಅನುದಾನ ಒದಗಿಸಲಾಗುವುದು ಎಂದರು.

ವಿಶೇಷ ಶಿಬಿರ ಆಯೋಜಿಸಿ, ಬೂಸ್ಟರ್ ಲಸಿಕೆ ನೀಡಿ: ಜಿಲ್ಲೆಯಲ್ಲಿ ಮುಂಚೂಣಿ ಕಾರ್ಯಕರ್ತರು ಹಾಗೂ ಆರೋಗ್ಯ ಸೇವೆ ಕಾರ್ಯಕರ್ತರು ಬೂಸ್ಟರ್ ಡೋಸ್ ಪಡೆದ ಪ್ರಮಾಣ ಶೇ. 98 ಕ್ಕಿಂತ ಹೆಚ್ಚಿದ್ದು, ಆದರೆ ಸಾರ್ವಜನಿಕರಲ್ಲಿ ಇದರ ಪ್ರಮಾಣ ಕೇವಲ ಶೇ. 12 ರಷ್ಟು ಮಾತ್ರ ಇದೆ.  ಇದುವರೆಗೂ ಜಿಲ್ಲೆಯಲ್ಲಿ 10.40 ಲಕ್ಷ ಜನರು ಬೂಸ್ಟರ್ ಡೋಸ್ ಪಡೆಯಲು ಅರ್ಹರಾಗಿದ್ದು, ವಿಶೇಷ ಶಿಬಿರ ಆಯೋಜಿಸಿ, ಅರ್ಹರೆಲ್ಲರಿಗೂ ಬೂಸ್ಟರ್ ಡೋಸ್ ಲಸಿಕೆ ನೀಡಿಕೆಗೆ ಕ್ರಮವಹಿಸಬೇಕು ಎಂದು ಸಚಿವರು ಡಿಹೆಚ್‍ಓಗೆ ಸೂಚಿಸಿದರು.  ಡಿಚ್‍ಓ ಡಾ.ರಂಗನಾಥ್ ಮಾತನಾಡಿ, ಬೂಸ್ಟರ್ ಡೋಸ್‍ಗೆ ಗುರಿ ನಿಗಧಿಯಲ್ಲಿ ಶೇ.50 ರಷ್ಟು ಸಾಧನೆಯನ್ನು ಜನವರಿ ಮಾಹೆಯೊಳಗೆ ಮುಕ್ತಾಯಗೊಳಿಸಬೇಕು. ಬೂಸ್ಟರ್ ಡೋಸ್ ಗುರಿ ಪೂರ್ಣಗೊಳಿಸಲು ಈಗಾಗಲೇ ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದೆ. 37 ಸಾವಿರ ಡೋಸ್ ಕೋವ್ಯಾಕ್ಸಿನ್ ದಾಸ್ತಾನು ಇದೆ. ಕೋವಿಶಿಲ್ಡ್ ಲಸಿಕೆ ಶೀಘ್ರದಲ್ಲಿ ಸರಬರಾಜು ಆಗಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಕೋವಿಡ್-19ರ ಕುರಿತು ಅಗತ್ಯ ಮುಂಜಾಗ್ರತಾ ಕ್ರಮಗಳ ಕುರಿತು ವಿವಿಧ ಇಲಾಖೆಗಳೊಂದಿಗೆ ಈಗಾಗಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಕಳೆದ 14 ದಿನಗಳಿಂದ ಜಿಲ್ಲೆಯಲ್ಲಿ ಯಾವುದೇ ಕೋವಿಡ್ ಪ್ರಕರಣ ವರದಿಯಾಗಿಲ್ಲ. ಒಂದು ವೇಳೆ ಯಾವುದಾರೂ ಪ್ರಕರಣ ಪಾಸಿಟಿವ್ ಎಂದು ಕಂಡುಬಂದಲ್ಲಿ ಯಾವ ತಳಿ ಎಂದು ಪತ್ತೆಹಚ್ಚಲು ಕೇಂದ್ರ ಸರ್ಕಾರದ ನಿರ್ದೇಶನದಂತೆ ಜಿನೋಮ್ ಸೀಕ್ವೆನ್ಸ್‍ಗೆ ಕಳುಹಿಸಲಾಗುವುದು. ಕೋವಿಡ್-19ರ ಚಿಕಿತ್ಸೆಗೆ ಅಗತ್ಯ ಸಿದ್ಧತೆ  ಕೈಗೊಳ್ಳಲಾಗಿದೆ. ಎಲ್ಲಾ ತಾಲ್ಲೂಕು ಹಾಗೂ ಜಿಲ್ಲಾಮಟ್ಟದ ಆಸ್ಪತ್ರೆಗಳಲ್ಲಿ ಈಗಾಗಲೇ ಮಾಕ್ ಡ್ರಿಲ್ ಮಾಡಲಾಗಿದೆ ಎಂದು ಡಿಹೆಚ್‍ಓ ಡಾ.ರಂಗನಾಥ್ ತಿಳಿಸಿದರು.

ವೈಂಜಕ್ಷನ್ ಸಮಸ್ಯೆ ಇತ್ಯರ್ಥಪಡಿಸಲು ಸೂಚನೆ: ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ವೈಜಂಕ್ಷನ್ ಬಳಿ 1.9 ಕಿಮೀ ಸ್ಥಗಿತವಾಗಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯ ಕೆಲಸ ನಿರ್ವಹಿಸಲು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಗತ್ಯ ಸಹಕಾರ ನೀಡಬೇಕು. ಕೆಲವರು ಭೂ ಪರಿಹಾರ ಹಣ ಪಡೆದರೂ ಕೋರ್ಟ್ ಮೊರೆಹೋಗಿದ್ದಾರೆ. ಇದು  ಗಂಭೀರ ವಿಷಯವಾಗಿದ್ದು, ವೈಂಜಕ್ಷನ್ ಬಳಿಯ ಸಮಸ್ಯೆಯ ಇತ್ಯರ್ಥ ಪಡಿಸಬೇಕು ಎಂದು ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಕಳೆದ ಎರಡು ವರ್ಷಗಳಿಂದ ವೈಜಂಕ್ಷನ್ ಸಮಸ್ಯೆ ಇತ್ಯರ್ಥವಾಗುತ್ತಿಲ್ಲ. ವೈಂಜಕ್ಷನ್ ಸಮಸ್ಯೆ ಇತ್ಯರ್ಥವಾಗದಿದ್ದರೆ, ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾದರೂ ಬರದ ನಾಡಿಗೆ ಯಾವುದೇ ಉಪಯೋಗವಿಲ್ಲದಂತಾಗುತ್ತದೆ. ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗದಿದ್ದರೆ ಚಿತ್ರದುರ್ಗ ಜಿಲ್ಲೆಗೆ ನ್ಯಾಯ ಸಿಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಸಚಿವರು, ವೈಂಜಕ್ಷನ್ ಸಮಸ್ಯೆ ಇತ್ಯರ್ಥಕ್ಕೆ ಆ ಭಾಗದ ಜನರು ಕೇಳಿದಷ್ಟು ಹಣ ನೀಡಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು.

 

 

ಮೆಡಿಕಲ್ ಕಾಲೇಜು ವಿಳಂಬಕ್ಕೆ ಸಚಿವರು ಅಸಮಾಧಾನ: ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸಬೇಕು ಎಂಬುದು ಜಿಲ್ಲೆಯ ಬಹಳ ವರ್ಷಗಳ ಬೇಡಿಕೆಯೂ ಹೌದು. ಆದರೆ ವೈದ್ಯಕೀಯ ಕಾಲೇಜು ನಿರ್ಮಾಣ ವಿಚಾರದಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ ಏಕೆ? ಎಂದು ಸಚಿವರು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಹೆಚ್.ಬಸವರಾಜ್ ಅವರನ್ನು ಪ್ರಶ್ನಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ಡಾ.ಹೆಚ್.ಬಸವರಾಜ್, ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿಶೇಷಾಧಿಕಾರಿಯನ್ನು ನೇಮಿಸಲಾಗಿದೆ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ಗುರುತಿಸಲು ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.

ಚಿತ್ರದುರ್ಗದ ಇಂಗಳದಾಳ್ ಬಳಿ ಡಿಮ್ಡ್ ಫಾರೆಸ್ಟ್‍ನಲ್ಲಿ ಡಿನೋಟಿಪೈ ಆಗಿರುವ 92 ಎಕರೆ ಜಮೀನು ಇದ್ದು, ಈ ಜಾಗವನ್ನು ಮೆಡಿಕಲ್ ಕಾಲೇಜಿಗೆ ಹಸ್ತಾಂತರಿಸಲು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ ಅವರು, ತಾತ್ಕಾಲಿಕವಾಗಿ ಮೆಡಿಕಲ್ ಕಾಲೇಜು ಪ್ರಾರಂಭಿಸಲು ಸೂಕ್ತ ಸ್ಥಳ ನಿಗಧಿ ಮಾಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗೆ ಸಚಿವರು ತಾಕೀತು ಮಾಡಿದರು.
ನೇರ ರೈಲು ಮಾರ್ಗ ಭೂಸ್ವಾಧೀನ ಪ್ರಕ್ರಿಯೆಗೆ ವೇಗ: ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗದ ಭೂಸ್ವಾಧೀನ ಪ್ರಕ್ರಿಯೆಗೆ ವೇಗ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ದಾವಣಗೆರೆಯಿಂದ ಭರಮಸಾಗರದವರೆಗೆ ನೇರ ರೈಲು ಮಾರ್ಗಕ್ಕೆ ಅಗತ್ಯವಿರುವ ಭೂಮಿ ಹಸ್ತಾಂತರ ಪ್ರಕ್ರಿಯೆ ಮುಗಿದಿದ್ದು,  ಈಗಾಗಲೇ ಟೆಂಡರ್ ಪ್ರಕ್ರಿಯೆಯು ನಡೆದಿದೆ. ಟೆಂಡರ್ ಪ್ರಕ್ರಿಯೆ ನಂತರ ಕಾಮಗಾರಿ ಪ್ರಾರಂಭವಾಗಲಿದೆ. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ 131 ಕೋಟಿ ರೂ. ಅವಶ್ಯಕತೆ ಇದೆ.  ಈ ಪೈಕಿ  ಈಗಾಗಲೆ ರೂ.71 ಕೋಟಿ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಅಪಘಾತಗಳ ತಡೆಗೆ ಪರಿಹಾರ ರೂಪಿಸಿ : ಜಿಲ್ಲೆಯಲ್ಲಿ ಹಾದುಹೋಗಿರುವ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪದೇ ಪದೇ ಅಪಘಾತವಾಗುವ ಸ್ಥಳಗಳನ್ನು ಕಪ್ಪುಚುಕ್ಕೆ ವಲಯಗಳನ್ನಾಗಿ ಪೊಲೀಸ್ ಇಲಾಖೆ ಗುರುತಿಸಿದೆ,  ಅದೇ ರೀತಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರೂ ಕೂಡ ಇಂತಹ ವಲಯಗಳನ್ನು ಗುರುತಿಸಿವೆ.  ಆದರೆ ಈ ಸಂಖ್ಯೆಯಲ್ಲಿ ವ್ಯತ್ಯಾಸವಿದೆ.  ಪೊಲೀಸ್ ಇಲಾಖೆಯು ಅಪಘಾತಗಳ ಸಂಖ್ಯೆಗಳ ಆಧಾರದಲ್ಲಿ ಗುರುತಿಸಿರುವ ಕಪ್ಪುಚುಕ್ಕೆ ವಲಯಗಳಲ್ಲಿ ಅಪಘಾತ ತಡೆಗೆ ಕೆಲವು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಈ ಹಿಂದೆಯೂ ಕೂಡ ಸೂಚಿಸಲಾಗಿತ್ತು.

ಅಪಘಾತವಾಗಿ ಜನರ ಪ್ರಾಣ ಹೋದರೆ ತಂದುಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದ ಸಚಿವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಇವುಗಳಿಗೆ ಇದುವರೆಗೂ ಪರಿಹಾರ ಕಾರ್ಯ ಕೈಗೊಳ್ಳುವಲ್ಲಿ ವಿಫಲವಾಗಿದ್ದಾರೆ.  ಕೆಲವೆಡೆ ಗ್ರಾಮಸ್ಥರು ತಮ್ಮ ಗ್ರಾಮಗಳಿಗೆ ಕಿಲೋಮೀಟರ್‍ಗಟ್ಟಲೆ ಸುತ್ತಿಬಳಸಿ ಹೋಗುವ ಪರಿಸ್ಥಿತಿ ಇದೆ.  ಹೀಗಾಗಿ ಅಗತ್ಯ ಅಂಡರ್‍ಪಾಸ್‍ಗಳು, ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಸೂಚನೆ ನೀಡಲಾಗಿತ್ತು,  ಅಲ್ಲದೆ ಬೆಂಗಳೂರು ಕಡೆಯಿಂದ ಮತ್ತು ದಾವಣಗೆರೆಯಿಂದ ಚಿತ್ರದುರ್ಗ ನಗರಕ್ಕೆ ಪ್ರವೇಶ ಮಾಡಬೇಕಾದ ಕಡೆ ಹೆದ್ದಾರಿಯಲ್ಲಿ ಸೂಕ್ತ ಮಾರ್ಗಸೂಚಿ ಫಲಕವನ್ನು ಅಳವಡಿಸದೇ ಇರುವುದರಿಂದ, ವಾಹನ ಸವಾರರು ಮುಂದೆ ಬಹುದೂರ ಸಾಗಿ, ಪುನಃ ಹಿಂದಕ್ಕೆ ಬಂದು ನಗರ ಪ್ರವೇಶಿಸುವ ಪರಿಸ್ಥಿತಿ ಇದೆ.  ಇವೆಲ್ಲವನ್ನೂ ಪರಿಹರಿಸಲು ತಿಳಿಸಿದರೂ ಕ್ರಮ ಕೈಗೊಳ್ಳದಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಕಾರ್ಯವೈಖರಿಗೆ ಸಚಿವ ಎ. ನಾರಾಯಣಸ್ವಾಮಿ ಅವರು ತೀವ್ ಅಸಮಾಧಾನ ವ್ಯಕ್ತಪಡಿಸಿದರು.  ಅಪಘಾತಗಳನ್ನು ತಡೆಗಟ್ಟಲು ಕಪ್ಪುಚುಕ್ಕೆ ವಲಯದಲ್ಲಿ ಶಾಶ್ವತ ಪರಿಹಾರ ಕಾಮಗಾರಿ ಕೈಗೊಳ್ಳಬೇಕು, ಅಲ್ಲಿಯವರೆಗೂ ತಾತ್ಕಾಲಿಕ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು, ಸೂಕ್ತ ತೀರ್ಮಾನ ಕೈಗೊಳ್ಳುವ ಜವಾಬ್ದಾರಿಯುತ ಅಧಿಕಾರಿಗಳು ಸಭೆಗೆ ಬರುವುದಿಲ್ಲ, ಹೀಗಾಗಿ ಇಂತಹ ವಿಳಂಬಕ್ಕೆ ಕಾರಣವಾಗುತ್ತಿದೆ ಎಂದು ಸಚಿವರು ತೀವ್ರ ಬೇಸರ ವ್ಯಕ್ತಪಡಿಸಿದರು.  ಜಿಲ್ಲಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿಗಳ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್, ಜಿ.ಪಂ. ಉಪಕಾರ್ಯದರ್ಶಿ ಡಾ. ರಂಗಸ್ವಾಮಿ, ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟ ಹಾಗೂ ತಾಲ್ಲೂಕುಮಟ್ಟದ ಅಧಿಕಾರಿಗಳು ಇದ್ದರು.

[t4b-ticker]

You May Also Like

More From Author

+ There are no comments

Add yours