ಜಿಲ್ಲೆಯ ವಿದ್ಯಾರ್ಥಿ ನಿಲಯಗಳ ಆಹಾರದ ಗುಣಮಟ್ಟ ಪರಿಶೀಲನೆಗೆ ತಂಡ ರಚನೆ:ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್

 

 

 

 

ಚಿತ್ರದುರ್ಗ(ಕರ್ನಾಟಕ ವಾರ್ತೆ)ನ.04:

 

 

ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ವಿದ್ಯಾರ್ಥಿನಿಲಯಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಓ ಅನಿರೀಕ್ಷಿತ ಭೇಟಿ ನೀಡಬೇಕು. ವಿದ್ಯಾರ್ಥಿ ನಿಲಯಗಳಲ್ಲಿ ನೀಡುತ್ತಿರುವ ಆಹಾರದ ಗುಣಮಟ್ಟದ ಪರಿಶೀಲನೆಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆರೋಗ್ಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳನ್ನೊಳಗೊಂಡ ತಂಡ ರಚನೆ ಮಾಡುವಂತೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಪಂಚಾಯಿತಿ ಎರಡನೇ ಕೆ.ಡಿ.ಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ವಿದ್ಯಾರ್ಥಿ ನಿಲಯಗಳಲ್ಲಿ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿಲ್ಲ ಎಂದು ಸಾಕಷ್ಟು ದೂರುಗಳು ಬರುತ್ತಿವೆ. ಆಹಾರ ಯಾರು ಪೂರೈಕೆ ಮಾಡುತ್ತಾರೆ? ಎಂದು ಪ್ರಶ್ನಿಸಿದರು ಸಚಿವರು, ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಆಹಾರದ ಗುಣಮಟ್ಟ ಪರೀಕ್ಷೆ ಮಾಡಬೇಕು. ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ತಾಕೀತು ಮಾಡಿದರು.
ವಿಧಾನ ಪರಿಷತ್ ಸಸದ್ಯ ಕೆ.ಎಸ್.ನವೀನ್ ಮಾತನಾಡಿ, ವಿದ್ಯಾರ್ಥಿ ನಿಲಯಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಊಟ ಮಾಡಿ, ಆಹಾರದ ಗುಣಮಟ್ಟ ಪರೀಕ್ಷಿಸಲಾಗಿದೆಯೇ ಎಂದು ಪ್ರಶ್ನಿಸಿದ ಅವರು, ಸಮಾಜ ಕಲ್ಯಾಣ ಇಲಾಖೆ ನಡೆಸುತ್ತಿರುವ ವಿವಿಧ ವಿದ್ಯಾರ್ಥಿ ನಿಲಯಗಳಿಗೆ ಅಧಿಕಾರಿಗಳು ಊಟ ಮಾಡಬೇಕು ಎಂದು ದಾವಣಗೆರೆ ಜಿಲ್ಲೆಯಲ್ಲಿ ನಿಯಮ ಜಾರಿಗೆ ತರಲಾಗಿದ್ದು, ಇದರಂತೆ ಜಿಲ್ಲೆಯಲ್ಲಿಯೂ ಅಗತ್ಯ ಕ್ರಮವಹಿಸಬೇಕು. ವಿದ್ಯಾರ್ಥಿಗಳು ಏನು ಸೇವೆಸುತ್ತಾರೆ ಎಂಬ ವಿಷಯ ನಮ್ಮ ಅರಿವಿಗಿರಬೇಕು ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಮತಾ ಮಾತನಾಡಿ, ನಿತ್ಯವೂ ಒಂದು ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ, ಆಹಾರದ ಗುಣಮಟ್ಟದ ಪರೀಕ್ಷೆ ಮಾಡಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಅಕ್ರಮ ಮದ್ಯ ಮಾರಾಟ ತಡೆಗಟ್ಟಿ : ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಅವರು ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಸಣ್ಣ ಟೀ ಕ್ಯಾಂಟೀನ್‍ಗಳಲ್ಲೂ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ.  ಲೈಸೆನ್ಸ್ ಹೊಂದಿರುವ ಕೆಲವು ಮದ್ಯ ಮಾರಾಟ ಅಂಗಡಿಯವರೇ ಮದ್ಯವನ್ನು ಗ್ರಾಮೀಣ ಪ್ರದೇಶದ ಕ್ಯಾಂಟೀನ್ ಹಾಗೂ ಸಣ್ಣಪುಟ್ಟ ಅಂಗಡಿಗಳಿಗೆ ತಲುಪಿಸಿ ಮಾರಾಟ ಮಾಡಿಸುತ್ತಿದ್ದಾರೆ.  ಇದರಿಂದ ಅಪಘಾತ ಹಾಗೂ ಅನಗತ್ಯ ಗಲಾಟೆ ಸಂಘರ್ಷಗಳು ಸಂಭವಿಸುತ್ತಿವೆ ಎಂದು ಆರೋಪಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು,  ಅಬಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ನಿಯಮಿತವಾಗಿ ಅಂತಹ ಕ್ಯಾಂಟೀನ್ ಹಾಗೂ ಅಂಗಡಿಗಳಿಗೆ ಆಕಸ್ಮಿಕ ಭೇಟಿ ನೀಡಿ ಪರಿಶೀಲಿಸಬೇಕು,  ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.  ಉತ್ತರಿಸಿದ ಅಬಕಾರಿ ಉಪ ಆಯುಕ್ತೆ ಅಶ್ವಿನಿ ಅವರು, ಅಕ್ರಮವಾಗಿ ಮದ್ಯ ಮಾರಾಟ ನಿಯಂತ್ರಿಸುವ ನಿಟ್ಟಿನಲ್ಲಿ ತೀವ್ರ ಪರಿಶೀಲನೆ ನಡೆಸಲಾಗುತ್ತಿದ್ದು, ಕಳೆದ ಏಪ್ರಿಲ್‍ನಿಂದ ಈವರೆಗೆ ಇಂತಹ ಒಟ್ಟು 463 ಪ್ರಕರಣಗಳನ್ನು ಅಲ್ಲದೆ 17 ತೀವ್ರ ತರಹ ಅಪರಾಧದ ಪ್ರಕರಣ ದಾಖಲಿಸಿ, ಕ್ರಮ ಕೈಗೊಂಡಿದ್ದೇವೆ ಎಂದರು.  ಎಸ್‍ಪಿ ಪರಶುರಾಮ್ ಅವರು ಮಾತನಾಡಿ, ಪೊಲೀಸ್ ಇಲಾಖೆಯಿಂದಲೂ ಇಂತಹ 332 ಪ್ರಕರಣಗಳನ್ನು ದಾಖಲಿಸಿದ್ದೇವೆ ಎಂದರು.
99.28 ಕೋಟಿ ರೂ. ಬೆಳೆ ಹಾನಿ ಪರಿಹಾರ ಪಾವತಿ : ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಸೆಪ್ಟಂಬರ್ ಅಂತ್ಯದವರೆಗೆ 71158 ಹೆ. ಕೃಷಿ ಹಾನಿ ಸಂಭವಿಸಿತ್ತು.  ಇದಕ್ಕೆ ಸಂಬಂಧಿಸಿದಂತೆ ಈಗಾಗಲೆ 99.28 ಕೋಟಿ ರೂ. ಪರಿಹಾರವನ್ನು ರೈತರಿಗೆ ಪಾವತಿಸಲಾಗಿದೆ.  ಅಕ್ಟೋಬರ್ ತಿಂಗಳಿನಲ್ಲಿ ಒಟ್ಟು 69 ಸಾವಿರ ಹೆ. ಕೃಷಿ ಹಾನಿ ಸಂಭವಿಸಿದ್ದು, ಪರಿಹಾರ್ ತಂತ್ರಾಂಶದಲ್ಲಿ ದಾಖಲಿಸುವ ಕಾರ್ಯ ಆಗಿದ್ದು, ಇನ್ನೂ 90 ಕೋಟಿ ರೂ. ಪರಿಹಾರ ಹಣ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಂಟಿಕೃಷಿ ನಿರ್ದೇಶಕ ರಮೇಶ್‍ಕುಮಾರ್ ಹೇಳಿದರು.
 ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸೆಪ್ಟಂಬರ್ ಅಂತ್ಯದವರೆಗೆ ಆದ ನಷ್ಟಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದ ರೈತರ ಬ್ಯಾಂಕ್ ಖಾತೆಗೆ ಪರಿಹಾರ ಹಣವನ್ನು ತ್ವರಿತವಾಗಿ ಪಾವತಿಸಬೇಕು.  ಈ ದಿಸೆಯಲ್ಲಿ ಅಧಿಕಾರಿಗಳಿಗೆ ಇಚ್ಛಾಶಕ್ತಿ ಬೇಕು ಎಂದರು.
ಪ್ರಕರಣದ ಸ್ಥಿತಿಗತಿ ತಿಳಿಯಲು ಸಿಒಡಿಗೆ ಪತ್ರ ಬರೆಯಿರಿ: ಜಿಲ್ಲೆಯಲ್ಲಿ ನಕಲಿ ಜೈವಿಕ ಗೊಬ್ಬರ ಹಾಗೂ ಕೀಟನಾಶಕಗಳು ರೈತರಿಗೆ ಮಾರಾಟ ಆಗುತ್ತಿದ್ದು, ಬೂದಿ ಮಿಶ್ರಣ ಮಾಡಿ ಗೊಬ್ಬರ ಮಾರಾಟ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬರುತ್ತಿವೆ.  ನಕಲಿ ಗೊಬ್ಬರ ಮಾರಾಟ ಸಂಬಂಧ ದಾಖಲಾಗಿರುವ ಪ್ರಕರಣವನ್ನು ಈಗಾಗಲೆ ಸಿಒಡಿ ತನಿಖೆಗೆ ಒಪ್ಪಿಸಲಾಗಿದೆ ಎಂದು ತಿಳಿಸಿದ ಸಚಿವರು, ಈ ಪ್ರಕರಣದ ತನಿಖೆಯು ಯಾವ ಹಂತದಲ್ಲಿಯೇ ಎಂಬ ಕುರಿತು ಮಾಹಿತಿಗಾಗಿ ಸಿಇಡಿಗೆ ಪತ್ರ ಬರೆಯುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ನಕಲಿ ಗೊಬ್ಬರ ಹಾಗೂ ಕೀಟನಾಶಕ ಮಾರಾಟಗಾರರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಬೆಳೆ ವಿಮೆ ಪಾವತಿ ವಿಷಯದಲ್ಲಿಯೂ ಅಧಿಕಾರಿಗಳು ರೈತರ ಪರವಾಗಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಮಾತನಾಡಿ, ನಕಲಿ ಜೈವಿಕ ಗೊಬ್ಬರ ಹಾಗೂ ಕೀಟನಾಶಕ ಮಾರಾಟಗಾರರನ್ನು ಪತ್ತೆಹಚ್ಚಲು ವಿಶೇಷ ತಂಡ ರಚನೆ ಮಾಡಬೇಕು, ಅಗತ್ಯವಿದ್ದಲ್ಲಿ, ಇತರೆ ಇಲಾಖೆ ಅಧಿಕಾರಿಗಳನ್ನು ತಂಡಕ್ಕೆ ನೇಮಿಸಲಾಗುವುದು.  ರೈತರ ಹಿತ ಕಾಯುವುದು ಅಧಿಕಾರಿಗಳ ಕರ್ತವ್ಯವಾಗಿದ್ದು, ನಕಲಿ ಬೀಜ, ಗೊಬ್ಬರ ಮುಂತಾದ ಕಾರಣಗಳಿಂದ ರೈತರು ನಷ್ಟಕ್ಕೀಡಾಗಬಾರದು ಎಂದರು.
ಕೃಷಿ ಇಲಾಖೆ  ಜಂಟಿ ಕೃಷಿ ನಿರ್ದೇಶಕ ರಮೇಶ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಇಂತಹ 36 ಮಾದರಿ ಸಂಗ್ರಹಿಸಿದ್ದು ಈ ಪೈಕಿ 09- ಗೊಬ್ಬರ ಹಾಗೂ 05- ಕೀಟನಾಶಕ ನಕಲಿ ಪ್ರಕರಣಗಳು ಪತ್ತೆಯಾಗಿವೆ ಎಂದರು.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಪ್ರಮುಖ ಎಣ್ಣೆಕಾಳು ಬೆಳೆಯಾದ ಶೇಂಗಾ ಬೆಳೆಯಲ್ಲಿ ಉತ್ಪಾದನೆ ಹೆಚ್ಚಿಸಲು ಕದರಿ ಲೇಪಾಕ್ಷಿ ತಳಿಯನ್ನು ಹೊಸದಾಗಿ ರೈತರಿಗೆ ಪರಿಚಯಿಸಲಾಗಿದ್ದು, ಈ ಕದರಿ ಲೇಪಾಕ್ಷಿ ತಳಿಗೆ ಜಿಲ್ಲೆಯಲ್ಲಿ ಮಾರುಕಟ್ಟೆ ಸಮಸ್ಯೆ ಎದುರಾಗಿದ್ದು, ಈ ಶೇಂಗಾವನ್ನು ಕೇವಲ ತಿನ್ನುವುದಕ್ಕಾಗಿ ಬಳಸಲಾಗುತ್ತಿದೆ ಎಂದರು.
14980 ಹೆ. ಈರುಳ್ಳಿ ಹಾನಿಗೆ ಪರಿಹಾರ : ಜಿಲ್ಲೆಯಲ್ಲಿ ಮುಂಗಾರು ಅವಧಿಯಲ್ಲಿ ಸುರಿದ ಹೆಚ್ಚು ಮಳೆಯಿಂದಾಗಿ ಜಿಲ್ಲೆಯಲ್ಲಿ ಸುಮಾರು 20 ಸಾವಿರ ಹೆ. ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಈ ಪೈಕಿ 14980 ಹೆ. ಈರುಳ್ಳಿ ಬೆಳೆ ಹಾನಿಯಾಗಿದೆ.  ಸೆಪ್ಟಂಬರ್ ವರೆಗಿನ ಹಾನಿಗೆ ಸಂಬಂಧಿಸಿದಂತೆ 35 ಕೋಟಿ ರೂ. ಪರಿಹಾರ ರೈತರಿಗೆ ಪಾವತಿಸಲಾಗಿದೆ.  ವಿವಿ ಸಾಗರ ಹಿನ್ನೀರಿಗೆ ಸಂಬಂಧಿಸಿದಂತೆ 534 ಹೆ. ತೆಂಗು ಹಾಗೂ 330 ಹೆ. ಅಡಿಕೆ ಬೆಳೆ ಹಾನಿಗೀಡಾಗಿದೆ.  ಪರಿಹಾರ ವಿತರಣೆ ಸಂಬಂಧ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕಿ ಸವಿತ ಸಭೆಗೆ ಮಾಹಿತಿ ನೀಡಿದರು.  ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವರು,  ಪರಿಹಾರ ವಿತರಣೆ ಸಂಬಂಧ ಅಧಿಕಾರಿಗಳು ತ್ವರಿತವಾಗಿ ಕ್ರಮ ವಹಿಸಬೇಕು.  ಹಾನಿಗೀಡಾದ ಯಾವುದೇ ರೈತರಿಗೆ ಅನ್ಯಾಯವಾಗಬಾರದು ಎಂದು ಸೂಚನೆ ನೀಡಿದರು.
ಶಾಸಕರುಗಳಾದ ಜಿ.ಹೆಚ್. ತಿಪ್ಪಾರೆಡ್ಡಿ ಹಾಗೂ ರಘುಮೂರ್ತಿ ಅವರು ಮಾತನಾಡಿ, ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿದ್ದು, ಎಲ್ಲ ಕೆರೆಕಟ್ಟೆಗಳು ತುಂಬಿವೆ,  ಅಲ್ಲದೆ ಅಂತರ್ಜಲ ಹೆಚ್ಚಾಗಿದೆ.  ಆದರೆ ಅಡಿಕೆ ಬೆಳೆಗೆ ಜಿಲ್ಲೆಯಲ್ಲಿ ಹನಿ ನೀರಾವರಿಗೆ ಸಬ್ಸಿಡಿ ನೀಡಲು ಅವಕಾಶವಿಲ್ಲ.  ಹೀಗಾಗಿ ಜಿಲ್ಲೆಗೂ ಇದನ್ನು ವಿಸ್ತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.  ಇದಕ್ಕೆ ಸ್ಪಂದಿಸಿದ ಸಚಿವ ಬಿ.ಸಿ. ಪಾಟೀಲ್ ಅವರು, ಜಿಲ್ಲೆಯಲ್ಲಿ ಅಡಿಕೆ ಬೆಳೆಯ ವಿಸ್ತೀರ್ಣ, ಹಾಗೂ ರೈತರ ಬೇಡಿಕೆಯನ್ನು ಪರಿಶೀಲಿಸಿ, ತೋಟಗಾರಿಕೆ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅನುಪಾಲನೆ ಕುರಿತು ಸಭೆ :  ಕೆ.ಡಿ.ಪಿ. ಸಭೆಯಲ್ಲಿ ಚರ್ಚಿಸುವ ವಿಷಯಗಳು ಹಾಗೂ ನೀಡುವ ಸೂಚನೆಗಳ ಕುರಿತು ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಮುಖ್ಯಕಾರ್ಯನಿರ್ವಹಣಾ ಅಧಿಕಾರಿಗಳು  15 ದಿನಗಳಿಗೊಮ್ಮೆ ಅನುಪಾಲನಾ ಸಭೆಯನ್ನು ಜರುಗಿಸಬೇಕು. ಕೆ.ಡಿ.ಪಿ. ಸಭೆಯ ಅನುಪಾಲನಾ ವರದಿಯನ್ನು ಮುಂದಿನ ಕೆ.ಡಿ.ಪಿ. ಸಭೆಯಲ್ಲೇ ಚರ್ಚಿಸಿ ಬಗೆಹರಿಸುವಂತಾಗಬಾರದು ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಸಭೆಯಲ್ಲಿ ಶಾಸಕರು ಪ್ರಸ್ತಾವಿಸುವ ವಿಷಯಗಳ ಕುರಿತು, ಆಯಾ ತಾಲೂಕುವಾರು ಮಾಹಿತಿ ಸಂಗ್ರಹಿಸಿ ಶಾಸಕರಿಗೆ ನೀಡಬೇಕು. ಲೋಕೋಪಯೋಗಿ, ನಗರೋತ್ಥಾನ, ಜಿ.ಪಂ. ಹಾಗೂ ಪಂಚಾಯತ್ ರಾಜ್ ಮತ್ತು ಇಂಜಿನಿಯರಿಂಗ್ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿಗಳನ್ನು ತಿಂಗಳ ಒಳಗೆ ಪೂರ್ಣಗೊಳಿಸಬೇಕು. ಗುಣಮಟ್ಟದ ರಸ್ತೆ ನಿರ್ಮಿಸಬೇಕು. 3 ತಿಂಗಳಲ್ಲಿ ರಸ್ತೆಯಲ್ಲಿ ಗುಂಡಿ ಬಿದ್ದು ಸಾರ್ವಜನಿಕರು ಜನಪ್ರತಿನಿಧಿಗಳನ್ನು ಶಪಿಸುವಂತಾಗವಾರದು ಎಂದರು.
ಕ್ರೈಸ್ (ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ) ಅನುಷ್ಠಾನಗೊಳಿಸುತ್ತಿರುವ ಬಾಬು ಜಗಜೀವನ್ ರಾಂ ಭವನ, ಲಿಡ್ಕರ್ ಭವನ ಹಾಗೂ ಸಭಾಂಗಣವನ್ನು ಡಿಸೆಂಬರ್ ಅಂತ್ಯದ ಒಳಗೆ ಪೂರ್ಣಗೊಳಿಸಬೇಕು. 2016-17 ರಲ್ಲಿ ಅನುಮೋದನೆ ನೀಡಿದ ಕಾಮಗಾರಿಗಳು ಪೂರ್ಣಗೊಳಿಸುವಲ್ಲಿ ನಿರ್ಲಕ್ಷ್ಯ ತೋರಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ನೂತನ ಕಾಮಗಾರಿಗಳನ್ನು ಸಂಬಂಧಪಟ್ಟ ಶಾಸಕರ ಗಮನಕ್ಕೆ ತರದೇ ಅನುಷ್ಠಾನಕ್ಕೆ ಮುಂದಾಗಬಾರದು. ಇದು ಶಾಸಕರ ಹಕ್ಕುಚ್ಯುತಿಯಾಗುತ್ತದೆ. ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಸಕರಾದ ಜಿ.ಹೆಚ್.ತಿಪ್ಪಾರೆಡ್‍ಡಿ ಮಾತನಾಡಿ, ಪಿಎಂಇಜಿಪಿ ಯೋಜನೆಯಡಿ ನಿರುದ್ಯೋಗ ಯುವಕರು ಉದ್ಯೋಗ ಸೃಷ್ಠಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದರೆ ಕೆಲವು ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡುತ್ತಿಲ್ಲ. ಸಾಲ ಸೌಲಭ್ಯ ಪಡೆಯಲು ನಿರುದ್ಯೋಗ ಯುವಕರು ಪರದಾಡುವಂತಾಗಿದೆ. ಸೌಲ ಸೌಲಭ್ಯ ನೀಡಲು ಸ್ಪಂದಿಸಿದ ಬ್ಯಾಂಕ್‍ಗಳ ವಿರುದ್ಧ ಕ್ರಮವಹಿಸಿ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಚಂದ್ರಯ್ಯ ಬಿ.ಹೆಚ್. ಅವರಿಗೆ ಸೂಚಿಸಿದರು.
ಚಳ್ಳಕೆರೆ ಕ್ಷೇತ್ರ ವ್ಯಾಪ್ತಿಯಲ್ಲಿ ಬಾಬು ಜಗಜೀವನ್‍ರಾಮ್ ಹಾಗೂ ವಾಲ್ಮೀಕಿ ಭವನ ಪ್ರಗತಿಯಲ್ಲಿದ್ದು, ತ್ವರಿತವಾಗಿ ಸರ್ಕಾರ ಅನುದಾನ ಬಿಡುಗಡೆ ಮಾಡದ ಕಾರಣ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಹಾಗಾಗಿ ಸಚಿವರು ಗಮನಹರಿಸಬೇಕು ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು.
ಸಭೆಯಲ್ಲಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಗೂಳಿಹಟ್ಟಿ ಡಿ.ಶೇಖರ್, ಎಂ.ಚಂದ್ರಪ್ಪ, ಟಿ.ರಘುಮೂರ್ತಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಸ್.ದಿವಾಕರ್,  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.
[t4b-ticker]

You May Also Like

More From Author

+ There are no comments

Add yours