ಒಂಭತ್ತು ಜಿಲ್ಲೆಗಳ 50 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರ: ದಿವ್ಯಪ್ರಭು ಜಿ.ಆರ್.ಜೆ

 

ಚಿತ್ರದುರ್ಗ ಮಾರ್ಚ್ 20  (ಕರ್ನಾಟಕ ವಾರ್ತೆ):  ತಾಂಡಾ, ಹಾಡಿ, ಹಟ್ಟಿ ಮುಂತಾದ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿಸಲಾಗಿದ್ದು, ಚಿತ್ರದುರ್ಗ ಸೇರಿದಂತೆ ರಾಜ್ಯ 09 ಜಿಲ್ಲೆಗಳ ಇಂತಹ ಗ್ರಾಮಗಳ ಸುಮಾರು 50 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಸಮಾರಂಭ ಚಿತ್ರದುರ್ಗ ಜಿಲ್ಲೆಯಲ್ಲಿ ಮಾ. 27 ರಂದು ಏರ್ಪಡಿಸಲಾಗಿದೆ.  ಎಲ್ಲ ಅಧಿಕಾರಿಗಳು ಸಮಾರಂಭವನ್ನು ಯಶಸ್ವಿಗೊಳಿಸಲು ಅಗತ್ಯ ಸಿದ್ಧತೆ ಪ್ರಾರಂಭಿಸುವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಸೂಚನೆ ನೀಡಿದರು.
      ವಿವಿಧ ಜಿಲ್ಲೆಗಳ ಫಲಾನುಭವಿಗಳಿಗೆ ಚಿತ್ರದುರ್ಗದಲ್ಲಿ ನಡೆಯುವ ಸಮಾರಂಭದಲ್ಲಿ ಹಕ್ಕುಪತ್ರ ವಿತರಣೆ ಮಾಡುವ ಕಾರ್ಯಕ್ರಮ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ ಪ್ರಾಥಮಿಕ ಹಂತದ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಂಡಾ, ಹಾಡಿ, ಗೊಲ್ಲರಹಟ್ಟಿ, ಹಟ್ಟಿ ಸೇರಿದಂತೆ ವಿವಿಧ ಜನವಸತಿ ಪ್ರದೇಶಗಳನ್ನು ಸರ್ಕಾರದಿಂದ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗಿದೆ.  ಚಿತ್ರದುರ್ಗ ಜಿಲ್ಲೆಯೂ ಸೇರಿದಂತೆ, ತುಮಕೂರು, ವಿಜಯನಗರ, ಹಾವೇರಿ, ಬಳ್ಳಾರಿ, ಶಿವಮೊಗ್ಗ, ದಾವಣಗೆರೆ, ಹಾಸನ ಹಾಗೂ ಚಿಕ್ಕಮಗಳೂರು ಸೇರಿದಂತೆ ಒಟ್ಟು 09 ಜಿಲ್ಲೆಗಳಲ್ಲಿರುವ ಇಂತಹ ಗ್ರಾಮಗಳಲ್ಲಿನ ಸುಮಾರು 50 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಸಮಾರಂಭವನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ಏರ್ಪಡಿಸಲು ಹಾಗೂ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಕಂದಾಯ ಸಚಿವರು ಸೂಚನೆ ನೀಡಿದ್ದಾರೆ.  ಈ ಪೈಕಿ ಚಿತ್ರದುರ್ಗ ಜಿಲ್ಲೆಯಲ್ಲಿಯೇ ಅತಿ ಹೆಚ್ಚು 12 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಇದ್ದಾರೆ.  ಕಾರ್ಯಕ್ರಮದಲ್ಲಿ ಹಕ್ಕುಪತ್ರ ಸ್ವೀಕರಿಸುವ ಫಲಾನುಭವಿಗಳು ಹಾಗೂ ವಿವಿಧ ಇಲಾಖೆಗಳ ಫಲಾನುಭವಿಗಳು ಸೇರಿದಂತೆ ಸುಮಾರು 01 ಲಕ್ಷ ಫಲಾನುಭವಿಗಳು ಪಾಲ್ಗೊಳ್ಳಲಿದ್ದಾರೆ.  ಸಮಾರಂಭವನ್ನು ಚಳ್ಳಕೆರೆ- ಹಿರಿಯೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಹರ್ತಿಕೋಟೆ ಗ್ರಾಮದ ಬಳಿ ಆಯೋಜಿಸಲು ಸ್ಥಳ ನಿಗದಿಪಡಿಸಲಾಗಿದ್ದು, ಈಗಾಗಲೆ ಸಮಾರಂಭ ಜರುಗುವ ಸ್ಥಳವನ್ನು ಸಮತಟ್ಟುಗೊಳಿಸುವ ಕಾರ್ಯ ಪ್ರಾರಂಭಗೊಂಡಿದೆ.  ಸಮಾರಂಭಕ್ಕೆ ಮುಖ್ಯಮಂತ್ರಿಗಳೂ ಸೇರಿದಂತೆ 09 ಜಿಲ್ಲೆಗಳ ಸಚಿವರುಗಳು, ಸಂಸದರು, ಶಾಸಕರುಗಳು, ಜಿಲ್ಲಾಧಿಕಾರಿಗಳು ಸೇರಿದಂತೆ ಗಣ್ಯಾತಿಗಣ್ಯರು ಭಾಗಿಯಾಗುವರು.  ಹೀಗಾಗಿ ಈ ಎಲ್ಲ ಜಿಲ್ಲೆಗಳ ಫಲಾನುಭವಿಗಳಿಗೆ, ಗಣ್ಯರಿಗೆ ಚಿತ್ರದುರ್ಗ ಜಿಲ್ಲೆ ಆತಿಥ್ಯ ನೀಡಬೇಕಿದೆ.  ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಓಬವ್ವ ಜಯಂತಿ, ಫಲಾನುಭವಿಗಳ ಸಮಾವೇಶ ಸೇರಿದಂತೆ ಹಲವು ಪ್ರಮುಖ ಸಮಾರಂಭಗಳು ಅಧಿಕಾರಿಗಳ ಶ್ರಮದ ಫಲವಾಗಿ ಯಶಸ್ವಿಗೊಂಡಿವೆ.  ಮಾ. 27 ರಂದು ಜರುಗುವ ಸಮಾರಂಭವನ್ನೂ ಕೂಡ ಯಶಸ್ವಿಗೊಳಿಸಲು ಅಧಿಕಾರಿಗಳು ಪ್ರಾಮಾಣಿಕ ಯತ್ನ ಮಾಡಬೇಕಿದೆ.  09 ಜಿಲ್ಲೆಗಳ ಫಲಾನುಭವಿಗಳು ಜಿಲ್ಲೆಗೆ ಆಗಮಿಸುವುದರಿಂದ, ಅವರಿಗೆ ಹಾಗೂ ಗಣ್ಯರಿಗೆ ಊಟೋಪಚಾರದಲ್ಲಿ ಯಾವುದೇ ಕಾರಣಕ್ಕೂ ಕೊರತೆಯಾಗಬಾರದು.  ಹೀಗಾಗಿ ಚಿತ್ರದುರ್ಗ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳನ್ನು ಪ್ರತಿ ಜಿಲ್ಲೆಗೂ ಒಬ್ಬರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗುವುದು.  ನೋಡಲ್ ಅಧಿಕಾರಿಗಳು ಆಯಾ ಜಿಲ್ಲೆಯ ಉನ್ನತ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ, ಅಲ್ಲಿನ ಫಲಾನುಭವಿಗಳ ಸಂಖ್ಯೆ, ಬಸ್‍ಗಳ ಸಂಖ್ಯೆ, ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಪ್ರವೇಶ, ನಿರ್ಗಮನ, ಆಯಾ ಜಿಲ್ಲೆವಾರು ಪಾರ್ಕಿಂಗ್ ಸ್ಥಳ ಹೀಗೆ ಎಲ್ಲ ಕಾರ್ಯಗಳ ಕುರಿತು ಯೋಜನೆ ಮಾಡಿಕೊಳ್ಳಬೇಕು.  ಫಲಾನುಭವಿಗಳನ್ನು ಕರೆತಂದು ಸುರಕ್ಷಿತವಾಗಿ ಕರೆದುಕೊಂಡು ಹೋಗಲು ಸುಮಾರು ಎರಡು ಸಾವಿರ ಬಸ್‍ಗಳ ವ್ಯವಸ್ಥೆ ಮಾಡಲಾಗುವುದು.  ಆಯಾ ಜಿಲ್ಲೆಯಿಂದ ಆಗಮಿಸುವ ಬಸ್‍ಗಳು, ಬಸ್‍ನ ಮುಂಭಾಗ ಹಾಗೂ ಹಿಂಭಾಗದಲ್ಲಿ ಜಿಲ್ಲೆಯ ಹೆಸರನ್ನು ದಪ್ಪಕ್ಷರಗಳಲ್ಲಿ ಕಾಣುವಂತೆ ಫಲಕ ಅಳವಡಿಸಿಕೊಳ್ಳಬೇಕು.  ಸಮಾರಂಭದ ಸಮೀಪದಲ್ಲಿ ಗಣ್ಯಾತಿಗಣ್ಯರಿಗಾಗಿ ಹೆಲಿಪ್ಯಾಡ್ ನಿರ್ಮಾಣ, ಸಾರ್ವಜನಿಕರಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ, ಉತ್ತಮ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಕೈಗೊಳ್ಳಬೇಕು. ಸಮಾರಂಭ ಸ್ಥಳದಲ್ಲಿ ಆರೋಗ್ಯ ಇಲಾಖೆಯಿಂದ ತಜ್ಞ ವೈದ್ಯರು, ಸಿಬ್ಬಂದಿಯೊಳಗೊಂಡ ವೈದ್ಯಕೀಯ ತಪಾಸಣೆ ಹಾಗೂ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆಯಬೇಕು.  ಅಧಿಕಾರಿಗಳು ಇದಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಕೂಡಲೆ ಪ್ರಾರಂಭಿಸಬೇಕು.  ಒಟ್ಟಾರೆ ಸಮಾರಂಭ ಯಾವ ಗೊಂದಲವೂ ಇಲ್ಲದಂತೆ ಅಚ್ಚುಕಟ್ಟಾಗಿ ಯಶಸ್ವಿಯಾಗಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಮಾತನಾಡಿ, ಹಕ್ಕುಪತ್ರ ವಿತರಣಾ ಸಮಾರಂಭವನ್ನು ಯಶಸ್ವಿಯಾಗಿ ಆಯೋಜಿಸುವಂತಾಗಲು, ವಿವಿಧ ಸಮಿತಿಗಳನ್ನು ರಚಿಸಲಾಗಿದೆ.  ವೇದಿಕೆ ಸಮಿತಿ, ಸ್ವಾಗತ ಸಮಿತಿ, ಆಹಾರ ಸಮಿತಿ, ಸಾರಿಗೆ ಸಮಿತಿ, ಹಕ್ಕುಪತ್ರ ವಿತರಣೆ ಸಮಿತಿ, ಸ್ವಚ್ಛತಾ ಸಮಿತಿ, ಭದ್ರತೆ ಸಮಿತಿ, ಸಾಂಸ್ಕøತಿಕ ಸಮಿತಿಗಳನ್ನು ರಚಿಸಲಾಗಿದೆ.  ಆಯಾ ಸಮಿತಿಯಲ್ಲಿನ ಅಧಿಕಾರಿಗಳು ತಮಗೆ ನೀಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಸಮಾರಂಭ ಯಶಸ್ವಿಗೊಳಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ದಿವಾಕರ್, ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪವಿಭಾಗಾಧಿಕಾರಿ ಚಂದ್ರಯ್ಯ, ಡಿಹೆಚ್‍ಒ ಡಾ. ರಂಗನಾಥ್, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿನಿರ್ದೇಶಕ ಆನಂದ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಸಿಲ್ದಾರರು ಭಾಗವಹಿಸಿದ್ದರು.
[t4b-ticker]

You May Also Like

More From Author

+ There are no comments

Add yours