ಬೆಂಗಳೂರು ಅ.8: ವೈದ್ಯಕೀಯ ಚಿಕಿತ್ಸೆಗೆ ಬಂದಿದ್ದ ಯುವತಿಗೆ ವೈದ್ಯ ಲೈಂಗಿಕ ಕಿರುಕುಳ ನೀಡಿರುವ ಘಟನೆ ಚಂದ್ರಾಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 19 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಚಂದ್ರಾಲೇಔಟ್ನ ಅರುಂಧತಿ ನಗರದ ‘ಇಂಡಿಯನ್ ಕ್ಲಿನಿಕ್’ನ ವೈದ್ಯ ಉಬೇದುಲ್ಲಾ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ಇದನ್ನು ಅರಿತ ವೈದ್ಯ ತಲೆಮರೆಸಿಕೊಂಡಿದ್ದು ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವತಿ ಸೆ.28ರಂದು ತಾಯಿಯ ಜತೆಗೆ ‘ಇಂಡಿಯನ್ ಕ್ಲಿನಿಕ್’ಗೆ ಹೋಗಿದ್ದಳು. ತಪಾಸಣೆ ಮಾಡಿದ ವೈದ್ಯ ಉಬೇದುಲ್ಲಾ ಗ್ಲೂಕೋಸ್ ಹಾಕಿದ್ದಾನೆ. ಈ ವೇಳೆ ಯುವತಿಯ ಕೈ ಹಾಗೂ ಕೆನ್ನೆ ಮುಟ್ಟಿ ಅಸಹ್ಯವಾಗಿ ವರ್ತಿಸಿದ್ದಾನೆ. ಹೊಟ್ಟೆನೋವಿಂದ ಸುಸ್ತಾಗಿದ್ದ ಯುವತಿ ಯಾವುದೇ ಪ್ರತಿರೋಧ ತೋರದೆ ಮನೆಗೆ ಹೋಗಿದ್ದಾಳೆ. ಸೆ.29ರಂದು ಕ್ಲಿನಿಕ್ಗೆ ಬಂದಾಗಲೂ ವೈದ್ಯ ಅಸಭ್ಯವಾಗಿ ವರ್ತಿಸಿದ್ದಾನೆ. ಆದರೂ ಯುವತಿ ಹೆದರಿ ಯಾರಿಗೂ ಹೇಳದೆ ಮನೆಗೆ ಹೋಗಿದ್ದಾಳೆ.
ಸೆ.30ರಂದು ಅಜ್ಜಿ ಮತ್ತು ಸಹೋದರ ಜತೆ ಕ್ಲಿನಿಕ್ ಬಂದಾಗ, ವೈದ್ಯ ಉಬೇದುಲ್ಲಾ ಗ್ಲೂಕೋಸ್ ಹಾಕಿದ್ದಾನೆ. ಈ ವೇಳೆ ಜತೆಯಲ್ಲಿದ್ದ ಯುವತಿಯ ಸಹೋದರ ಮತ್ತು ಅಜ್ಜಿಯನ್ನು ಹೊರಗೆ ಕಳುಹಿಸಿದ್ದಾನೆ. ಬಳಿಕ ಯುವತಿಯ ಜತೆ ಮಾತು ಆರಂಭಿಸಿ ಖಾಸಗಿ ಅಂಗಾಂಗ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವೇಳೆ ಯುವತಿ ಪ್ರತಿರೋಧವೊಡ್ಡಲು ಮುಂದಾದಾಗ, ಕೈ ಅಲುಗಾಡಿಸಿದರೆ, ಗ್ಲೂಕೋಸ್ ಪೈಪ್ನಲ್ಲಿ ರಕ್ತ ಬರಲಿದೆ ಎಂದು ಹೆದರಿಸಿದ್ದಾನೆ.
ಈ ಘಟನೆಯನ್ನು ಯಾರಿಗೂ ಹೇಳಬೇಡ ಎಂದು ಯುವತಿಗೆ ತಾಕೀತು ಮಾಡಿದ್ದಾನೆ. ಬಳಿಕ ಯುವತಿ ಮನೆಗೆ ಹೋಗಿದ್ದಾಳೆ. ಎರಡು ದಿನದ ಬಳಿಕ ಮನೆಯವರು ಮತ್ತೆ ಕ್ಲಿನಿಕ್ ಕರೆದೊಯ್ಯಲು ಮುಂದಾದಾಗ, ವೈದ್ಯನ ದೌರ್ಜನ್ಯದ ಬಗ್ಗೆ ಸಹೋದರರ ಬಳಿ ಯುವತಿ ಹೇಳಿಕೊಂಡಿದ್ದಾಳೆ. ಇದರಿಂದ ಅಕ್ರೋಶಗೊಂಡ ಸಹೋದರರು ಕ್ಲಿನಿಕ್ ಬಳಿ ಬಂದು ಗಲಾಟೆ ಮಾಡಿದ್ದಾರೆ. ಈ ಸಂಬಂಧ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ವೈದ್ಯನ ಬಂಧನಕ್ಕೆ ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
[t4b-ticker]
+ There are no comments
Add yours