ಡಿ.12 ರಂದು ಜಿಲ್ಲಾ ಮಟ್ಟದ ಯುವಜನೋತ್ಸವದ ಆಯ್ಕೆ ಸ್ಪರ್ಧೆ

 

 

 

 

ಚಿತ್ರದುರ್ಗ(ಕರ್ನಾಟಕ ವಾರ್ತೆ)
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಇದೇ ಡಿಸೆಂಬರ್ 12 ರಂದು ಚಿತ್ರದುರ್ಗ ನಗರದ ಜಿಲ್ಲಾ ಕ್ರೀಡಾಂಗಣದ ಆಡಿಟೋರಿಯಂನಲ್ಲಿ 2022-23ನೇ ಸಾಲಿನ ಚಿತ್ರದುರ್ಗ ಜಿಲ್ಲಾ ಮಟ್ಟದ ಯುವಜನೋತ್ಸವದ ಆಯ್ಕೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮವು ಅಂದು ಬೆಳಿಗ್ಗೆ 10.30 ರಿಂದ ಪ್ರಾರಂಭವಾಗಲಿರುವುದರಿಂದ ಸ್ಪರ್ಧಾಳುಗಳು ಬೆಳಿಗ್ಗೆ 10 ಗಂಟೆಯ ಒಳಗಾಗಿ ಜಿಲ್ಲಾ ಕ್ರೀಡಾಂಗಣದಲ್ಲಿರುವ ಆಡಿಟೋರಿಯಂನಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ.
ಯುವ ಜನೋತ್ಸವ ಸ್ಪರ್ಧೆಯಲ್ಲಿ ಭಾಗವಹಿಸುವವರು 15 ರಿಂದ 29 ವರ್ಷ ಒಳಗಿನವರಾಗಿದ್ದು, ಕಡ್ಡಾಯವಾಗಿ ಜನ್ಮ ದಿನಾಂಕ ದಾಖಲೆಯೊಂದಿಗೆ (ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಜನ್ಮ ದಿನಾಂಕ ದೃಢೀಕರಣ ಪತ್ರ ) ಭಾಗವಹಿಸಬಹುದು. ದಾಖಲೆಗಳನ್ನು ತರದೇ ಇರುವವರಿಗೆ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದಿಲ್ಲ ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ವಾಸವಾಗಿರುವವರು ಮಾತ್ರ ಭಾಗವಹಿಸಲು ಅವಕಾಶ ಇರುತ್ತದೆ. ಸ್ಪರ್ಧಿಗಳಿಗೆ ಪ್ರಯಾಣ ಭತ್ಯೆ ಹಾಗೂ ದಿನಭತ್ಯೆ ನೀಡಲಾಗುವುದು. ಇದಕ್ಕಾಗಿ ಬ್ಯಾಂಕ್ ಪಾಸ್‍ಪುಸ್ತಕದ ಜೆರಾಕ್ಸ್ ಪ್ರತಿಯನ್ನು ತಪ್ಪದೇ ತರಬೇಕು.  ಜಿಲ್ಲಾ ಮಟ್ಟದಲ್ಲಿ ವಿಜೇತರಾದವರು ರಾಜ್ಯ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ವಿಜೇತರಾದವರು ರಾಷ್ಟ್ರಮಟ್ಟದಲ್ಲಿ ಭಾಗವಹಿಸಬಹುದಾಗಿದೆ.
ಸ್ಪರ್ಧೆಗಳ ವಿವರ: ಜಾನಪದಗೀತೆ ಗಾಯನಕ್ಕೆ ಗರಿಷ್ಠ 4 ರಿಂದ 8 ಜನ ಭಾಗವಹಿಸಬಹದು. 7 ನಿಮಿಷ ಕಾಲವಧಿ ಇದೆ. ಭಾಷಾ ನಿರ್ಬಂಧವಿದಲ್ಲ. ಜಾನಪದ ನೃತ್ಯಕ್ಕೆ ಗರಿಷ್ಠ 4 ರಿಂದ 8 ಜನ ಭಾಗವಹಿಸಬಹದು, 10 ನಿಮಿಷ ಕಾಲವಕಾಶ. ಕನ್ನಡ, ಇಂಗ್ಲೀಷ್, ಹಿಂದಿ ಏಕಾಂಕ ನಾಟಕಕ್ಕೆ 5 ನಿಮಿಷ ಕಾಲವಕಾಶ. ಕರ್ನಾಟಕ ಹಾಗೂ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ವೈಯಕ್ತಿಕ ಸ್ಪರ್ಧೆಯಾಗಿದ್ದು, 15 ನಿಮಿಷ ಕಾಲಾವಕಾಶ. ಶಾಸ್ತ್ರೀಯ ವಾದ್ಯಗಳಾದ ತಬಲಾ, ಸಿತಾರ್, ಕೊಳಲು, ವೀಣೆ, ಮೃದಂಗ ಸ್ಪರ್ಧೆ, 10 ನಿಮಿಷ ಕಾಲಾವಕಾಶ. ಶಾಸ್ತ್ರೀಯ ನೃತ್ಯಗಳಾದ ಭರತನಾಟ್ಯ, ಮಣಿಪುರಿ, ಕೂಚಿಪುಡಿ, ಕಥಕ್, ಒಡಿಸ್ಸಿ ಸ್ಪರ್ಧೆ-10 ನಿಮಿಷ ಕಾಲಾವಕಾಶ. ಹಾರ್ಮೋನಿಯಂ, ಗಿಟಾರ್-ಗರಿಷ್ಟ 10 ನಿಮಿಷ, ಆಶುಭಾಷಣ (ಕನ್ನಡ, ಹಿಂದಿ ಅಥವಾ ಇಂಗ್ಲೀಷ್) ವೈಯಕ್ತಿಕ ಸ್ಪರ್ಧೆ-4 ನಿಮಿಷ ಕಾಲಾವಕಾಶ ಇದೆ.
ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಮಹಿಳಾ ಸಂಘ ಸಂಸ್ಥೆಗಳು, ಜಿಲ್ಲೆಯ ಎಲ್ಲಾ ತಾಲ್ಲೂಕಿನಿಂದ ಸ್ಪರ್ಧಾಳುಗಳು ಭಾಗವಹಿಸಿ ಈ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours