ವಿವಿಧ ಗ್ರಾಮಗಳಿಗೆ ಡಿಸಿ ಭೇಟಿ : ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪರಿಶೀಲನೆ

 

 

 

 

ಚಿತ್ರದುರ್ಗ ಡಿ. 06 (ಕರ್ನಾಟಕ ವಾರ್ತೆ) :
ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲ್ಲೂಕಿನ ವಿವಿಧ ಗ್ರಾಮಗಳ ಮತಗಟ್ಟೆಗಳಿಗೆ ಮಂಗಳವಾರದಂದು ಆಕಸ್ಮಿಕ ಭೇಟಿ ನೀಡಿದ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು, ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯದ ಕುರಿತು ಪರಿಶೀಲನೆ ನಡೆಸಿದರು.
ಜಂಬಯ್ಯನಹಟ್ಟಿ ಹಾಗೂ ಕೆರೆಯಾಗಳಹಳ್ಳಿ ಗ್ರಾಮದ ಮತಗಟ್ಟೆಯ ಬೂತ್ ಮಟ್ಟದ ಅಧಿಕಾರಿಗಳೊಂದಿಗೆ (ಬಿಎಲ್‍ಒ) ಮಾತನಾಡಿದ ಜಿಲ್ಲಾಧಿಕಾರಿಗಳು, ಗ್ರಾಮಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಕುರಿತು ಮಾಹಿತಿ ಪಡೆದರು.  ಮನೆ ಮನೆ ಭೇಟಿ ಸಮೀಕ್ಷೆ ಕಾರ್ಯದ ವಿವರಗಳನ್ನು ಪಡೆದರು.  ನಿಗದಿತ ಸಮಯದಲ್ಲಿ ಮನೆ ಮನೆ ಭೇಟಿ ಕಾರ್ಯ ಪೂರ್ಣಗೊಳಿಸಬೇಕು.  ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮ ಡಿ. 08 ರವರೆಗೂ ಜರುಗಲಿದ್ದು, ಎಲ್ಲ ಅರ್ಹ ಯುವಜನರು ತಪ್ಪದೆ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಅರ್ಹರಿರುವ ಎಲ್ಲ ಯುವ ಜನರಿಂದ ನಮೂನೆ-06 ಅನ್ನು ಪಡೆದು, ದಾಖಲಿಸಬೇಕು.  ಮನೆ ಮನೆ ಭೇಟಿ ಕಾರ್ಯ ಅಪೂರ್ಣವಾಗಿದ್ದಲ್ಲಿ, ಕೂಡಲೆ ಅದನ್ನು ಪೂರ್ಣಗೊಳಿಸಬೇಕು.  ಬಿಎಲ್‍ಒ ಗಳು ಮತದಾರರ ಕರಡು ಪಟ್ಟಿ ಪ್ರಕಟವಾಗಿರುವ ಕುರಿತು ಹಾಗೂ ಸಾರ್ವಜನಿಕರು ಪಟ್ಟಿಯನ್ನು ಪರಿಶೀಲಿಸಿಕೊಳ್ಳಲು ಜಾಗೃತಿ ಮೂಡಿಸಬೇಕು. 17 ವರ್ಷ ವಯಸ್ಸು ಆದವರ ಅರ್ಜಿಯನ್ನೂ ಕೂಡ ಪಡೆಯಬಹುದಾಗಿದ್ದು, ಅಂತಹವರ ಅರ್ಜಿಯನ್ನು ಪಡೆದು, ಅವರಿಗೆ 18 ವರ್ಷ ಪೂರ್ಣಗೊಂಡ ಬಳಿಕ ಅಂತಹವರ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಬೇಕು, ಮತದಾನದ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸಿ, ಅಕ್ಕಪಕ್ಕದ ಮನೆಗಳ ಯುವ ಮತದಾರರ ನೊಂದಣಿಗೆ ಕರೆ ನೀಡಲು ಸಾರ್ವಜನಿಕರಲ್ಲಿ ಮನವಿ ಮಾಡಬೇಕು, ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಸೂಚನೆ ನೀಡಿದರು.
ಮೊಳಕಾಲ್ಮೂರು ಪ್ರಭಾರ ತಹಸಿಲ್ದಾರ್ ಎನ್‌. ರಘುಮೂರ್ತಿ ಸೇರಿದಂತೆ ನೋಡಲ್ ಅಧಿಕಾರಿಗಳು, ಬಿಎಲ್‍ಒ ಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
[t4b-ticker]

You May Also Like

More From Author

+ There are no comments

Add yours