ಹಳ್ಳಿ ಮೇಷ್ಟ್ರಿಗೆ ದಿಲ್ಲಿ ಗೌರವ, ಸೃಜನಶೀಲ ಶಿಕ್ಷಕ ತೊಡರನಾಳ್ ಉಮೇಶ್ ಸಾಧನೆಗೆ ಒಲಿಯಿತು ರಾಷ್ಟ್ರಪ್ರಶಸ್ತಿ

 

 

 

 

*ಹಳ್ಳಿ ಮೇಷ್ಟ್ರಿಗೆ ದಿಲ್ಲಿ ಗೌರವ* _________________ (ಸೃಜನಶೀಲ ಶಿಕ್ಷಕ ತೊಡರನಾಳ್ ಉಮೇಶ್ ಸಾಧನೆಗೆ ಒಲಿಯಿತು ರಾಷ್ಟ್ರಪ್ರಶಸ್ತಿ. ದೆಹಲಿಯಲ್ಲಿ ಇಂದು ರಾಷ್ಟ್ರಪತಿಗಳಿಂದ ಪ್ರಧಾನ. ತರಳಬಾಳು ಶ್ರೀಗಳ ಹರ್ಷ ) _________________
ಚಿತ್ರದುರ್ಗ :
ಹೊಳಲ್ಕೆರೆ ತಾಲ್ಲೂಕಿನ ಅಮೃತಪುರ ಗ್ರಾಮದಲ್ಲಿ ಹೈಟೆಕ್ ಶಾಲೆ ನಿರ್ಮಿಸಿ, ಮಕ್ಕಳ ಪ್ರಗತಿಗೆ ಸಂಪೂರ್ಣ ಅರ್ಪಿಸಿಕೊಂಡಿರುವ ಶಿಕ್ಷಕ ಟಿಪಿ ಉಮೇಶ್ ಸಾಧನೆ ಅಪಾರವಾದುದು. ಅವರ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯು 2022 ರ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಆಯ್ಕೆಮಾಡಿದೆ. ಹೊಳಲ್ಕೆರೆ ತಾಲ್ಲೂಕಿನ ತೊಡರನಾಳ್ ಗ್ರಾಮ ವಾಸಿಯಾದ ಉಮೇಶ್ ಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪ್ರಕಟವಾದ ಸುದ್ದಿಯನ್ನು ತಿಳಿದ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಅಪಾರ ಹರ್ಷ ವ್ಯಕ್ತಪಡಿಸಿದ್ದಾರೆ.

ಅಮೆರಿಕಾ ಮೂಲದ ಓಸಾಟ್ ( One School at a time) ಮತ್ತು ರೋಟರಿ ಕ್ಲಬ್ ನ ಸಹಯೋಗದೊಂದಿಗೆ 30 ಲಕ್ಷಗಳಷ್ಟು ಮೌಲ್ಯದ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣದಲ್ಲಿ ಶಿಕ್ಷಕ ಉಮೇಶ್ ರ ಪಾತ್ರ ಮಹತ್ತರವಾದುದಾಗಿದೆ. ದಾನಿಗಳ ನೆರವಿನಿಂದ ಮೂರು ಲ್ಯಾಪ್ಟಾಪ್ ಗಳು, ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ , ಅತ್ಯಾಧುನಿಕ ಪೀಠೋಪಕರಣ- ಪಾಠೋಪಕರಣ ಗಳಿಂದ ಸರ್ಕಾರಿ ಶಾಲೆ ಮಾದರಿ ಶಾಲೆಯಾಗಿ ರೂಪುಗೊಂಡಿದೆ. ಕೊರೊನ ಕಾಲದ ಲಾಕ್ ಡೌನ್ ಸಂದರ್ಭದಲ್ಲಿ “ಮಿಸ್ ಕಾಲ್ ಮಾಡಿ ಪಾಠ ಕೇಳಿ” ಎಂಬ ಯೋಜನೆ ರೂಪಿಸಿ, ಮಕ್ಕಳ ಕಲಿಕೆಗೆ ಪೂರಕ ವಾತಾವರಣ ರೂಪಿಸಿದ್ದರು.

ಅಮೃತಾಪುರ ಮೂಲಭೂತ ಸೌಲಭ್ಯಗಳಿಂದ ವಂಚಿತವಾದ, ಹಿಂದುಳಿದ ವರ್ಗದ ಕೂಲಿ ಕಾರ್ಮಿಕರೇ ಹೆಚ್ಚಾಗಿ ವಾಸಿಸುವ ಕುಗ್ರಾಮ.ಇಲ್ಲಿ ಮಕ್ಕಳ ಮನೆ ಮತ್ತು 1 ರಿಂದ 5 ನೆಯ ತರಗತಿವರೆಗಿನ ಎಂಬತ್ತಕ್ಕೂ ಹೆಚ್ಚಿನ ಮಕ್ಕಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ನಗರದ ಕಾನ್ವೆಂಟ್ ಗಳಿಗಿಂತಲೂ ಉತ್ತಮ ಸೌಲಭ್ಯ ಒದಗಿಸಿ, ಪ್ರತಿಯೊಂದು ಮಗುವು ಉಲ್ಲಾಸ ಮತ್ತು ಸಂತೋಷದ ವಾತಾವರಣದಲ್ಲಿ ಕಲಿಯಲು ಉಮೇಶ್ ಸಾಕಷ್ಟು ಶ್ರಮಿಸಿದ್ದಾರೆ.

 

 

ಸಿರಿಗೆರೆ ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಉಮೇಶ್ 1998-99 ರ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಒಂಬತ್ತನೆಯ ರ್ಯಾಂಕ್ ಪಡೆದಿದ್ದರು. ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿ, ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರಿಂದ ಬಂಗಾರದ ಪದಕಕ್ಕೂ ಪಾತ್ರರಾಗಿದ್ದರು.

ಸಿರಿಗೆರೆಯ ಶ್ರೀಗಳ ಆಶೀರ್ವಾದ ಮತ್ತು ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ವಾತಾವರಣವೇ ನನ್ನೆಲ್ಲ ಸಾಧನೆಗೆ ಪ್ರೇರಣೆ ಎನ್ನುತ್ತಾರೆ ಟಿಪಿ ಉಮೇಶ್. “ಉಮೇಶ ಪ್ರಿಯ ಶಿವಮೂರ್ತಿ ಪ್ರಭುವೇ” ಎಂಬ ಅಂಕಿತದಲ್ಲಿ ವಚನಗಳನ್ನು ರಚಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಇವರ ಲೇಖನಿಯಿಂದ ಮಕ್ಕಳ ಕಥೆ, ಕವಿತೆ ಸೇರಿದಂತೆ ಈಗಾಗಲೇ ಆರು ಕೃತಿಗಳು ಹೊರಬಂದಿವೆ. ಮೈಸೂರು ದಸರಾ ಕವಿಗೋಷ್ಠಿ ಜೊತೆಗೆ ರಾಜ್ಯ ಮಟ್ಟದ ಅನೇಕ ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ. ಆಕಾಶವಾಣಿಯಲ್ಲಿ ಮಕ್ಕಳ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ. ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಶೈಕ್ಷಣಿಕ ಕಾರ್ಯಾಗಾರಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ ನೀಡಿದ್ದಾರೆ.

ಕ್ರಿಯಾಶೀಲ ಶಿಕ್ಷಕ, ಸೃಜನಶೀಲ ಬರಹಗಾರ, ಸಂಘಟನಾ ಚತುರನಾದ ಉಮೇಶ್ ಸದಾ ಹೊಸತನಕ್ಕೆ ತುಡಿಯುವವರು. ಏನನ್ನಾದರೂ ಸಾಧಿಸಬೇಕೆಂಬ ಹಂಬಲದಿಂದ ತನ್ನ ವೃತ್ತಿಯಲ್ಲಿ ಸಾರ್ಥಕತೆ ಕಂಡವರು. ರೋಟರಿ ಸಂಸ್ಥೆ ಕೊಡಲ್ಪಡುವ “ನೇಷನ್ ಬಿಲ್ಡರ್ ಅವಾರ್ಡ್” ಮತ್ತು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿರುವ ಉಮೇಶ್ ಗೆ ಇಂದು ದೆಹಲಿಯಲ್ಲಿ ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳಿಂದ ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನವಾಗುತ್ತಿದೆ.

[t4b-ticker]

You May Also Like

More From Author

+ There are no comments

Add yours