ಸಹಕಾರ ಸಂಘವನ್ನು ಕಟ್ಟುವುದು ಸುಲಭವಲ್ಲ: ಎಂಎಲ್ಸಿ ಕೆ.ಎಸ್.ನವೀನ್

 

 

 

 

ಚಿತ್ರದುರ್ಗ: ಸಹಕಾರ ಸಂಘವನ್ನು ಕಟ್ಟುವುದು ಸುಲಭವಲ್ಲ. ಶಿಸ್ತಿನಿಂದ ಬೆಳೆಸಿಕೊಂಡು ಹೋದಾಗ ಮಾತ್ರ ಅಭಿವೃದ್ದಿ ಕಾಣಲು ಸಾಧ್ಯ ಎಂದು ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.

 

 

ತಿರುಮಲ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
1912 ರಲ್ಲಿ ತಿರುಮಲಾಚಾರ್ ಸ್ಥಾಪಿಸಿದ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಗೆ ನೂರು ವರ್ಷಗಳಾಗಿರುವುದು ದೊಡ್ಡ ಸಾಧನೆ. ಆಗ ಹಣಕಾಸಿನ ಪರಿಸ್ಥಿತಿ ಕಷ್ಟವಾಗಿತ್ತು. ಈಗ ದಾಖಲೆ ನೀಡಿದರೆ ಒಂದೆ ದಿನದಲ್ಲಿ ಒಂದು ಕೋಟಿ ರೂ.ಸಾಲ ನೀಡುವ ವ್ಯವಸ್ಥೆಯಿದೆ. ಹದಿನೆಂಟು ವರ್ಷಗಳ ಹಿಂದೆ ಈ ಸೊಸೈಟಿಯಲ್ಲಿ ಸಿಬ್ಬಂದಿಗಳಿಗೆ ಸಂಬಳ ಕೊಡಲು ಆಗುತ್ತಿರಲಿಲ್ಲ. ನಿಶಾನಿ ಜಯಣ್ಣ ಅಧ್ಯಕ್ಷರಾದ ಮೇಲೆ ಬಹಳಷ್ಟು ಸುಧಾರಣೆಯಾಗಿದ್ದು, ತಿಂಗಳಿಗೆ ನಾಲ್ಕೈದು ಲಕ್ಷ ರೂ.ಬಾಡಿಗೆ ಬರುವಷ್ವರ ಮಟ್ಟಿಗೆ ಬೆಳೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಸಚಿವ ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಡಿ.ಸುಧಾಕರ್ ಮಾತನಾಡಿ ನಿಸ್ವಾರ್ಥ ಸೇವೆ ಮಾಡಿದಾಗ ಮಾತ್ರ ಸಹಕಾರ ಸಂಘಗಳು ಉದ್ದಾರವಾಗುತ್ತದೆ. ಈ ನಿಟ್ಟಿನಲ್ಲಿ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಸುಲಭದ ಮಾತಲ್ಲ. ಅನೇಕ ಮಹನೀಯರು ಇದನ್ನು ಕಟ್ಟಿ ಬೆಳೆಸಿ ಬುನಾದಿ ಹಾಕಿ ಹೋಗಿದ್ದಾರೆಂದು ಗುಣಗಾನ ಮಾಡಿದರು.
ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡುತ್ತ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಗ್ರಾಹಕರ ಹಿತ ಕಾಪಾಡುವುದಲ್ಲದೆ ಎಲ್ಲರ ಮನಸ್ಸಿನಲ್ಲಿ ಉಳಿಯುವ ರೀತಿಯಲ್ಲಿ ಸೇವೆ ಸಲ್ಲಿಸಿಕೊಂಡು ಬರುತ್ತಿದೆ. ನೂರು ವರ್ಷ ದಾಟಿರುವುದು ಕಮ್ಮಿ ಸಾಧನೆಯಲ್ಲ. ಅನೇಕ ಹಿರಿಯರು ಕಟ್ಟಿ ಬೆಳೆಸಿರುವ ಸೊಸೈಟಿ ಇದು. ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸುವುದು ಒಳ್ಳೆ ಬೆಳವಣಿಗೆ. ಸಹಕಾರಿ ಸಂಘಗಳು ಈಗ ಎಲ್ಲಾ ಕಡೆ ಪೈಪೋಟಿಯಲ್ಲಿವೆ. ಹಣಕಾಸಿನ ಇಕ್ಕಟ್ಟಿನ ಪರಿಸ್ಥಿತಿಯನ್ನು ನಿಭಾಯಿಸಿಕೊಂಡು ಮುಂದೆ ಸಾಗುತ್ತಿದೆ. ಸಾಲ ನೀಡುವುದು ಹಾಗೂ ವಸೂಲಾತಿ ಮಾಡುವುದು ಬಹಳ ಮುಖ್ಯ. ಆಗ ಮಾತ್ರ ಸಹಕಾರ ಸಂಘಗಳು ಉಳಿಯುತ್ತವೆ ಎಂದು ಹೇಳಿದರು.
ಡಿ.ಸಿ.ಸಿ.ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್‍ಉಲ್ಲಾ ಷರೀಫ್ ಮಾತನಾಡಿ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ನಿಜಕ್ಕೂ ಮೈಲುಗಲ್ಲು. ರಾಷ್ಟ್ರದ ಸಹಕಾರ ಚಳುವಳಿಗೆ 118 ವರ್ಷಗಳ ಇತಿಹಾಸವಿದೆ. ಸಾಮಾಜಿಕ ಹೊಣೆಗಾರಿಕೆ ಸಹಕಾರಿ ಸಂಘಗಳಿಗೆ ಇರಬೇಕು. ರಾಜ್ಯದ ಗದಗ ಜಿಲ್ಲೆ ಕಣಜನಹಳ್ಳಿಯಲ್ಲಿ ಮೊದಲು ಸಹಕಾರ ಸಂಘ ಸ್ಥಾಪನೆಯಾಯಿತು. ವಿಶ್ವದಲ್ಲಿ 33 ಲಕ್ಷ ಸಹಕಾರ ಸಂಘಗಳಿವೆ. ದೇಶದಲ್ಲಿ 8.50 ಲಕ್ಷ ಸಹಕಾರ ಸಂಘಗಳಿದ್ದು, 2 ಕೋಟಿ 32 ಲಕ್ಷ ಸದಸ್ಯರಿದ್ದಾರೆ. ಡಿ.ಸಿ.ಸಿ.ಬ್ಯಾಂಕ್‍ನಿಂದ ಜಿಲ್ಲೆಯ 69 ಸಾವಿರ ರೈತರಿಗೆ 680 ಕೋಟಿ ರೂ.ಕೃಷಿ ಸಾಲ ನೀಡಲಾಗಿದೆ ಎಂದು ವಿವರಿಸಿದರು.
ಚಿತ್ರದುರ್ಗ ಟೌನ್‍ಕೋ-ಆಪರೇಟಿವ್ ಸೊಸೈಟಿ 3 ಕೋಟಿ ರೂ.ಸಾಲ ನೀಡಿದೆ. ಲಾಕರ್ ವ್ಯವಸ್ಥೆಯನ್ನು ಕಲ್ಪಿಸಿದ್ದು, ಗೋಲ್ಡ್ ಲೋನ್ ಸಹ ನೀಡುತ್ತಿದೆ. ಜಿಲ್ಲೆಯಲ್ಲಿ 730 ಸಹಕಾರ ಸಂಘಗಳಿದ್ದು, ಬಡತನ, ನಿರುದ್ಯೋಗ ನಿವಾರಣೆ, ಸದಸ್ಯರ ಹಿತರಕ್ಷಣೆ, ಅಭಿವೃದ್ದಿ ಸಹಕಾರ ಸಂಘದ ಮುಖ್ಯ ಉದ್ದೇಶ ಎಂದು ತಿಳಿಸಿದರು.
ಶತಮಾನೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ನಿಶಾನಿ ಜಯಣ್ಣ ಮಾತನಾಡುತ್ತ 110 ವರ್ಷಗಳ ಇತಿಹಾಸವಿರುವ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯ ಶತಮಾನೋತ್ಸವ ಯಾವಾಗಲೋ ಆಗಬೇಕಿತ್ತು. ಕಾರಣಾಂತರಗಳಿಂದ ಕಾಲ ಕೂಡಿ ಬಂದಿರಲಿಲ್ಲ. 190 ಸದಸ್ಯರುಗಳಿಂದ 4850 ರೂ.ಬಂಡವಾಳದೊಂದಿಗೆ ಆರಂಭಗೊಂಡ ಸೊಸೈಟಿ ಈಗ ಹೆಮ್ಮರವಾಗಿ ಬೆಳೆದು ನೂರಾರು ಕೋಟಿ ರೂ.ಗಳ ಆಸ್ತಿ ಹೊಂದಿದೆ. ಹದಿನೆಂಟು ವರ್ಷಗಳ ಹಿಂದೆ ನಾನು ಸೊಸೈಟಿ ಅಧ್ಯಕ್ಷನಾದಾಗ ಹಣಕಾಸಿನ ಪರಿಸ್ಥಿತಿ ತೊಂದರೆಯಲ್ಲಿತ್ತು. ಎಲ್ಲವನ್ನು ನಿಭಾಯಿಸಿಕೊಂಡು ಬಂದಿದ್ದೇನೆ ಎಂದು ಸೊಸೈಟಿ ನಡೆದು ಬಂದ ಹಾದಿಯನ್ನು ಮೆಲುಕು ಹಾಕಿದರು.
ದಿ.ಮರ್ಚೆಂಟ್ಸ್ ಸೌಹಾರ್ಧ ಸಹಕಾರ ಬ್ಯಾಂಕಿನ ಅಧ್ಯಕ್ಷ ಎಸ್.ಆರ್.ಲಕ್ಷ್ಮಿಕಾಂತರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ, ಸಹಕಾರ ಸಂಘಗಳ ಉಪನಿಬಂಧಕ ಹೆಚ್.ಮೂರ್ತಿ, ಸಹಾಯಕ ನಿಬಂಧಕ ಟಿ.ಮಧು ಶ್ರೀನಿವಾಸ್, ಸೊಸೈಟಿ ಉಪಾಧ್ಯಕ್ಷ ಸಿ.ಹೆಚ್.ಸೂರ್ಯಪ್ರಕಾಶ್, ನಿರ್ದೇಶಕರುಗಳಾದ ಡಾ.ರಹಮತ್‍ವುಲ್ಲಾ, ಬಿ.ವಿ.ಶ್ರೀನಿವಾಸ್‍ಮೂರ್ತಿ, ಬಿ.ಎಂ.ನಾಗರಾಜ್‍ಬೇದ್ರೆ, ಸೈಯದ್ ನೂರುಲ್ಲಾ, ಕೆ.ಚಿಕ್ಕಣ್ಣ, ಎಸ್.ವಿ.ಪ್ರಸನ್ನ, ಚಂದ್ರಪ್ಪ, ಕೆ.ಪ್ರಕಾಶ್, ಶ್ರೀಮತಿ ಎ.ಚಂಪಕಾ, ಶ್ರೀಮತಿ ಎನ್.ಎಂ.ಪುಷ್ಪವಲ್ಲಿ ವೇದಿಕೆಯಲ್ಲಿದ್ದರು.
ವ್ಯವಸ್ಥಾಪಕ ಮಹಮದ್ ನಯೀಮ್ ಹಾಗೂ ಸಿಬ್ಬಂದಿಯವರು ಮತ್ತು ಶೇರುದಾರ ಸದಸ್ಯರುಗಳು ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.
ಹಿರಿಯರಾದ ಜೈನುಲ್ಲಾಬ್ದಿನ್, ಡಾ.ರಹಮತ್‍ವುಲ್ಲಾ, ನಾಗರಾಜ್, ಹಾಜಿ ಅನ್ವರ್‍ಸಾಬ್, ರಾಜಗೋಪಾಲಾಚಾರ್, ನಾಗರಾಜ್‍ಬೇದ್ರೆ ಇವರುಗಳನ್ನು ಸನ್ಮಾನಿಸಲಾಯಿತು.

[t4b-ticker]

You May Also Like

More From Author

+ There are no comments

Add yours