ತುರ್ತು ಸಂದರ್ಭದ ಜೀವರಕ್ಷಣೆ ಕೌಶಲ್ಯಗಳ ತಿಳುವಳಿಕೆ ಅಗತ್ಯ :ಡಿಸಿ ದಿವ್ಯಪ್ರಭು ಜಿ.ಆರ್.ಜೆ

 

 

 

 

ಚಿತ್ರದುರ್ಗ(ಕರ್ನಾಟಕ ವಾರ್ತೆ)ಜೂನ್.7:
ವಿಪತ್ತು ಹಾಗೂ ತುರ್ತು ಸಂದರ್ಭದ ಜೀವರಕ್ಷಣೆ ಕೌಶಲ್ಯಗಳನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಹೇಳಿದರು.
ನಗರದ ಚಂದ್ರವಳ್ಳಿ ಕೆರೆಯಲ್ಲಿ ಬುಧವಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಿ ಹಾಗೂ ಜಿಲ್ಲಾ ಅಗ್ನಿಶಾಮಕದಳ ವತಿಯಿಂದ ಹಮ್ಮಿಕೊಂಡಿದ್ದ ಪ್ರವಾಹ ರಕ್ಷಣೆ ಕುರಿತು ಅಣಕು ಕಾರ್ಯಾಚರಣೆ ವೀಕ್ಷಿಸಿ ಅವರು ಮಾತನಾಡಿದರು.
ಅತಿವೃಷ್ಠಿ ಸಂಭವಿಸಿ ಜನರು ನೀರಿನಲ್ಲಿ ಮುಳುಗಿದ ಸಂದರ್ಭದಲ್ಲಿ ಯಾವ ರೀತಿ ಜೀವ ರಕ್ಷಣೆ ಮಾಡಲಾಗುತ್ತದೆ. ಆಳವಾದ ನೀರಿನಲ್ಲಿ ಮುಳುಗಿದವರನ್ನು ಯಾವ ರೀತಿ ಮೇಲೆತ್ತಿ, ಸೂಕ್ತ ಚಿಕಿತ್ಸೆ ನೀಡಿ ಆಸ್ಪತ್ರೆಗೆ ರವಾಸಬೇಕು ಎಂಬುದನ್ನು ಎನ್.ಡಿ.ಆರ್.ಎಫ್ ಅವರು ಅಣಕು ಕಾರ್ಯಾಚರಣೆ ಜನಸಾಮಾನ್ಯರಿಗೆ ಅರ್ಥವಾಗುವಂತೆ ತೋರಿಸಿಕೊಟ್ಟಿದ್ದಾರೆ. ಇದು ನಮ್ಮೆಲ್ಲರಿಗೂ ನಿತ್ಯಜೀವನದ ಪಾಠವಾಗಬೇಕು. ಪ್ರವಾಹ ಸಂದರ್ಭದಲ್ಲಿ ಈ ಕೌಶಲ್ಯಗಳು ಉಪಯೋಗಕ್ಕೆ ಬರಲಿವೆ. ಕಾರ್ಯಾಚರಣೆಗೆ ಸಹಕರಿಸಿದ ಎನ್.ಡಿ.ಆರ್.ಎಫ್, ಅಗ್ನಿಶಾಮಕ, ಅರೋಗ್ಯ ಹಾಗೂ ನಗರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅಭಿನಂದನೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎನ್.ಡಿ.ಆರ್.ಎಫ್ ಟೀಮ್ ಕಮಾಂಡರ್ ಹರಿಶ್ಚಂದ್ರ ಪಾಂಡೆ ನೈಸರ್ಗಿಕ, ರಾಸಾಯನಿಕ, ಅಣು ವಿಪತ್ತು, ಕಟ್ಟಡ ಹಾಗೂ ರೈಲು ದುರಂತ ಸೇರಿದಂತೆ ದೊಡ್ಡ ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ಕಾರ್ಯನಿರ್ವಹಿಸಿ ಜನರ ಪ್ರಾಣಗಳನ್ನು ರಕ್ಷಿಸುವ ಕೆಲಸ ಎನ್.ಡಿ.ಆರ್.ಎಫ್  ಮಾಡುತ್ತದೆ. ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಎನ್.ಡಿ.ಆರ್.ಎಫ್ ಪ್ರಾದೇಶೀಕ ಕೇಂದ್ರ ಬೆಂಗಳೂರಿನಲ್ಲಿದೆ. ರಾಜ್ಯದ ಯಾವುದೇ ಮೂಲೆಯಲ್ಲಿ ಅವಘಡ ಸಂಭಂವಿಸಿದರೂ ತುರ್ತಾಗಿ ಸ್ಪಂದಿಸಲಾಗುತ್ತದೆ. ಪ್ರವಾಹ ಸಂದರ್ಭದಲ್ಲಿ ಅದನ್ನು ಹೇಗೆ ಎದುರಿಸಬೇಕು ಎನ್ನುವ ಕುರಿತು ಚಿತ್ರದುರ್ಗ ಜಿಲ್ಲೆಯಲ್ಲಿ ಅಣಕು ಕಾರ್ಯಾಚರಣೆ ನಡೆಸಲಾಗುತ್ತಿದೆ. ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ಅಗ್ನಿಶಾಮಕ ಹಾಗೂ ತುರ್ತುಸೇವೆ, ರಾಜ್ಯ ವಿಪತ್ತು ನಿರ್ವಹಣೆ ತಂಡ ಹಾಗೂ ಸಮುದಾಯದಲ್ಲಿ ತರಬೇತಿ ಹೊಂದಿದ ವ್ಯಕ್ತಿಗಳು ಮೊದಲು ಕಾರ್ಯನಿರತರಾಗುತ್ತಾರೆ. ಇವರಿಗೆ ಪ್ರವಾಹ ಸಂದರ್ಭದಲ್ಲಿ ಜನರ ಜೀವ ಹೇಗೆ ರಕ್ಷಿಸಬೇಕು ಎಂಬುದನ್ನು ಅಣಕು ಪ್ರದರ್ಶನದ ಮೂಲಕ ತಿಳಿಸಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿಭಿನ್ನ ರೀತಿಯ ಪ್ರಕೃತಿ ವಿಕೋಪಗಳು ಸಂಭವಿಸುತ್ತವೆ. ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುವ ಸಂಭವ ಕಡಿಮೆಯಿದೆ. ಆದರೂ ಅತಿವೃಷ್ಠಿಯಿಂದ ಯಾವ ಸಂದರ್ಭದಲ್ಲಿ ಕೆರೆ ಕಟ್ಟೆಗಳು ತುಂಬಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ ಎಂದು ಹೇಳುವುದು ಕಷ್ಟ. ಕೆಲವು ಸಂದರ್ಭದಲ್ಲಿ ಪ್ರವಾಸಿಗರು ಸಹ ಸಂಕಷ್ಟಕ್ಕೆ ಸಿಲುಕುವ ಸಂಭವವಿರುತ್ತದೆ. ಅಪಾಯ ಸಿಲುಕಿದ ವ್ಯಕ್ತಿಯ ಜೀವ ಉಳಿಸುವುದು ಸವಾಲಿನ ಕೆಲಸವಾಗಿದೆ. ಇದನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಬೇಕು. ಮುಂಗಾರು ಮಳೆ ಆರಂಭವಾಗುವ ಹಿನ್ನಲೆಯಲ್ಲಿ ರಾಜ್ಯದ ಬೆಳಗಾವಿ, ರಾಯಚೂರು, ಕೊಡಗು ಹಾಗೂ ಮಂಗಳೂರು ಜಿಲ್ಲೆಯಲ್ಲಿ ಎನ್.ಡಿ.ಆರ್.ಎಫ್ ತಂಡಗಳನ್ನು ನಿಯೋಜಿಸಲಾಗಿದೆ ಎಂದರು.
ಗಮನ ಸೆಳೆದ ಅಣಕು ಕಾರ್ಯಾಚರಣೆ: ಆಂಧ್ರಪ್ರದೇಶದ ವಿಜಯವಾಡ ಕೇಂದ್ರಸ್ಥಾನ ಹೊಂದಿರುವ ಎನ್.ಡಿ.ಆರ್.ಎಫ್ ಹತ್ತನೇ ಬೆಟಾಲಿಯನ್ ಯೋಧರು ಪ್ರವಾಹದಂತಹ ಸಂದರ್ಭದಲ್ಲಿ ನದಿ-ಕೆರೆ-ಹಳ್ಳಗಳ ನೀರಿನಲ್ಲಿ ಕೊಚ್ಚಿ ಹೋಗುವ, ಮುಳುಗುವ ವ್ಯಕ್ತಿಗಳ ರಕ್ಷಣಾ ಕ್ರಮಗಳ ಕುರಿತಂತೆ, ಚಿತ್ರದುರ್ಗ ನಗರದ ಚಂದ್ರವಳ್ಳಿ ಕೆರೆಯಲ್ಲಿ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯ ಪ್ರಾಯೋಗಿಕ ಅಣಕು ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ಸತತ ಒಂದು ತಾಸು ಅವಧಿಯ ಅಣಕು ಪ್ರದರ್ಶನದಲ್ಲಿ ಆಧುನಿಕ ವಿಪತ್ತು ಉಪಕರಣಗಳು ಹಾಗೂ ಸ್ಥಳೀಯವಾಗಿ ದೊರಕುವ ವಸ್ತುಗಳನ್ನು ಬಳಸಿ ಜೀವ ರಕ್ಷಣೆ ಮಾಡಿಕೊಳ್ಳುವ ಕುರಿತಂತೆ ಜನರಿಗೆ ಪ್ರಾಯೋಗಿಕ ಪ್ರದರ್ಶನದ ಮೂಲಕ ಮಾಹಿತಿ ನೀಡಿದರು.
ಎನ್‍ಡಿಆರ್‍ಎಫ್‍ನ ಎರಡು ಬೋಟ್ ಹಾಗೂ ಜಿಲ್ಲಾ ಅಗ್ನಿಶಾಮಕ ದಳದ ಒಂದು ಬೋಟ್ ಬಳಸಿ ಕೆರೆಯಲ್ಲಿ ವಿವಿಧ ಬಗೆಯ ಕಾರ್ಯಾಚರಣೆ ನಡೆಸಲಾಯಿತು. ನೀರಿನಲ್ಲಿ ಮುಳುಗಿ ಹೋಗುತ್ತಿರುವ ವ್ಯಕ್ತಿಯ ರಕ್ಷಣೆ ಜೊತೆಗೆ, ತುರ್ತು ವೈದ್ಯಕೀಯ ಸೌಲಭ್ಯ ಒದಗಿಸುವುದು, ತ್ವರಿತ ಮಾಹಿತಿ ವಿನಿಮಯ, ಸಮನ್ವಯತೆ, ಕಾರ್ಯಾಚರಣೆ ಕ್ರಮಗಳ ಕುರಿತಂತೆ ರಾಷ್ಟ್ರೀಯ ವಿಪತ್ತು ನಿರ್ವಹಣೆಯ ಮಾರ್ಗಸೂಚಿಯ ಹಲವು ವಿಧಾನಗಳ ಪರಿಚಯಿಸಿದರು.
ಪ್ರವಾಹದಂತಹ ಸಂದರ್ಭದಲ್ಲಿ ಆಧುನಿಕ ವಿಪತ್ತು ರಕ್ಷಣಾ ಉಪಕರಣಗಳ ಬಳಕೆ ಜೊತೆಗೆ ಸ್ಥಳೀಯವಾಗಿ ದೊರಕುವ ಬಾಟಲ್, ಒಣ ತೆಂಗಿನ ಕಾಯಿಗಳನ್ನು ಬಳಸಿ ರಕ್ಷಿಸಿಕೊಳ್ಳುವ ವಿಧಾನಗಳು, ಆಳವಾದ ನೀರಿನಲ್ಲಿ ಮುಳುಗಿದ ವ್ಯಕ್ತಿಯ ಸ್ಥಳದ ಪತ್ತೆಗಾಗಿ ಅನುಸರಿಸಬೇಕಾದ ಕಾರ್ಯಾಚರಣೆ ಕ್ರಮಗಳು, ಸ್ಕೂಪ್ ಡೈವಿಂಗ್ ಮೂಲಕ ರಕ್ಷಣೆ, ರಕ್ಷಿಸಿದ ವ್ಯಕ್ತಿಯನ್ನು ನೀರಿನಿಂದ ಹೊರತರುವ ಕ್ರಮ, ನೀರಿನಲ್ಲಿ ಮುಳುಗಿದವರಿಗೆ ಸಿಪಿಆರ್ ಮಾಡುವ ಕುರಿತು ಪ್ರಾಯೋಗಿಕವಾಗಿ ಪ್ರದರ್ಶನ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಎಂ.ಎಸ್.ದಿವಾಕರ, ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಜೆ.ಕುಮಾರಸ್ವಾಮಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಆರ್.ರಂಗನಾಥ, ಜಿಲ್ಲಾ ಅಗ್ನಿಶಾಮಕ ಹಾಗೂ ತುರ್ತುಸೇವೆಗಳ ಅಧಿಕಾರಿ ಪುಟ್ಟಸ್ವಾಮಿ, ನಗರಸಭೆ ಆಯುಕ್ತ ಶ್ರೀನಿವಾಸ, ಗ್ರೇಡ್-2 ತಹಶೀಲ್ದಾgರ್ ಫಾತೀಮಾ ಬಿಬಿ, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ಹೆಚ್.ಎನ್.ಸಮರ್ಥ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
[t4b-ticker]

You May Also Like

More From Author

+ There are no comments

Add yours