ಜಲಜೀವನ್ ಮಿಷನ್: ಕಾಮಗಾರಿ ಪೂರ್ಣಗೊಳಿಸಲು ತಿಂಗಳ ಗಡುವು:ಸಚಿವ ಕೆ.ಎಸ್.ಈಶ್ವರಪ್ಪ

 

 

 

 

ಚಿತ್ರದುರ್ಗ, ಫೆಬ್ರವರಿ10:
ಜಲಜೀವನ್ ಮಿಷನ್ ಯೋಜನೆಯಡಿ ಮೊದಲ ಹಂತದಲ್ಲಿ ತೆಗೆದುಕೊಂಡ ಎಲ್ಲ ಕಾಮಗಾರಿಗಳನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿ ಮನೆಗೆ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸುವುದು ಜಲಜೀವನ್ ಮಿಷನ್ ಯೋಜನೆಯ ಉದ್ದೇಶವಾಗಿದ್ದು, ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಮೊದಲ ಹಂತದ ಕಾಮಗಾರಿಗಳನ್ನು ತಿಂಗಳೊಳಗೆ ಮುಕ್ತಾಯಗೊಳಿಸಬೇಕು ಎಂದು ತಾಕೀತು ಮಾಡಿದರು.
ಸಿಇಒ ಪರಿಶೀಲನೆಗೆ ಸೂಚನೆ: ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಸರಬರಾಜು ಕಾಮಗಾರಿಗಳ ಗುಣಮಟ್ಟ ಸೇರಿದಂತೆ ಸಾಧಕ-ಬಾಧಕಗಳ ಕುರಿತು ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯಿತಿಗಳಿಗೆ ಗ್ರಾಮ ಪಂಚಾಯಿತಿವಾರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸಚಿವರು ಸೂಚಿಸಿದರು.
ಗ್ರಾಮ ಪಂಚಾಯಿತಿವಾರು ಭೇಟಿ ನೀಡುವುದರಿಂದ ಆ ಗ್ರಾಮದಲ್ಲಿ ಸಮಸ್ಯೆಗಳು ತಿಳಿಯಲಿವೆ. ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಜಲಜೀವನ್ ಮಿಷನ್ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದರು.
ಅನುದಾನ ಸಂಪೂರ್ಣವಾಗಿ ಸದುಪಯೋಗವಾಗಲಿ: ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಜಿಲ್ಲೆಗೆ ಮಂಜೂರಾಗಿರುವ ಅನುದಾನ ಸಂಪೂರ್ಣವಾಗಿ ಸದುಪಯೋಗಬೇಕು. ನೀರು ಸೌಲಭ್ಯ ಕಲ್ಪಿಸುವ ಪೈಪ್‍ಲೈನ್‍ಗಳನ್ನು ಒಂದೆರಡು ಅಡಿ ಮೇಲ್ಭಾಗದಲ್ಲಿ ಅಳವಡಿಸಿದೇ ಕನಿಷ್ಠ 3 ಅಡಿ ಆಳದವರೆಗೆ ಪೈಪ್‍ಲೈನ್ ಅಳವಡಿಸಬೇಕು. ಇದರಿಂದ ಪೈಪ್‍ಲೈನ್ ದುರಸ್ತಿ ಸಮಸ್ಯೆಗಳು ಉದ್ಭವಿಸುವುದಿಲ್ಲ. ಈ ನಿಟ್ಟಿನಲ್ಲಿ ಇಂಜಿನಿಯರ್ ಮತ್ತು ಗುತ್ತಿಗೆದಾರರು ಅಗತ್ಯಕ್ರಮವಹಿಸಬೇಕು ಎಂದು ತಿಳಿಸಿದರು.
ನರೇಗಾ ಶೇ.100 ಪ್ರಗತಿ ಸಾಧಿಸಿ: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಬೇಕು ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲೆಯ ಚಿತ್ರದುರ್ಗ ಮತ್ತು ಹೊಳಲ್ಕೆರೆ ತಾಲ್ಲೂಕುಗಳಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಲಾಗಿಲ್ಲ. ಶೇ.100ರಷ್ಟು ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಬೇಕು. ಈ ತಾಲ್ಲೂಕುಗಳಲ್ಲಿ ಸಮುದಾಯ ಕಾಮಗಾರಿಗಳಿಗೆ ಬೇಡಿಕೆ ಇಲ್ಲದಿದ್ದ ಪಕ್ಷದಲ್ಲಿ ವೈಯಕ್ತಿಕ ಕಾಮಗಾರಿಗಳಿಗೆ ಅವಕಾಶವಿದೆ. ಮನೆ ಮನೆ ಸಮೀಕ್ಷೆ ಮಾಡಿ ಅವರ ಬೇಡಿಕೆಗಳನ್ನು ಗ್ರಾಮಸಭೆಯಲ್ಲಿ ಚರ್ಚಿಸಿ ಗುರಿ ನಿಗಧಿಪಡಿಸಿ ನರೇಗಾ ಯೋಜನೆಯಡಿಯಲ್ಲಿ ಕಾಮಗಾರಿಕೈಗೊಳ್ಳಲು ಅವಕಾಶ ನೀಡಿ ಎಂದು ಹೇಳಿದರು.
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಶೇ.60:40ರ ಅನುಪಾತದಲ್ಲಿ ಕಾಮಗಾರಿ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ನಿಯಮ ಮೀರದಂತೆ ಕಾಮಗಾರಿ ಕೈಗೊಳ್ಳಬೇಕು. ಕೂಲಿಕಾರರಿಗೆ ಸಮಯಕ್ಕೆ ಸರಿಯಾಗಿ ಕೂಲಿ ಹಣ ಪಾವತಿಯಾಗುವಂತೆ ನೋಡಿಕೊಂಡು ಅವರಲ್ಲಿ ಭರವಸೆ ಮೂಡಿಸಬೇಕು ಎಂದರು.
ನರೇಗಾ ಯೋಜನೆ ಯೋಜನೆಯಡಿ ರೂ.214 ಕೋಟಿ ಕೂಲಿ ನೀಡಬೇಕಾಗಿದ್ದು ಹಣವು ಶೇ.100ರಷ್ಟು ಪಾವತಿಯಾಗಿದೆ. ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ 57 ಲಕ್ಷ ಮಾನವ ದಿನಗಳನ್ನು ಸೃಜಿಸಿ ಗುರಿ ನಿಗಧಿಪಡಿಸಲಾಗಿತ್ತು. ಶೇ.100 ರಷ್ಟು ಪ್ರಗತಿ ಸಾಧಿಸಲಾಗಿದೆ. ಚಳ್ಳಕೆರೆ, ಮೊಳಕಾಲ್ಮುರು ಹಾಗೂ ಹೊಸದುರ್ಗದಲ್ಲಿ ಕಾರ್ಯಕ್ರಮಗಳು ಉತ್ತಮವಾಗಿವೆ. ಚಿತ್ರದುರ್ಗ ನಗರ ವ್ಯಾಪ್ತಿಗೆ ಹೊಂದಿಕೊಂಡಿರುವ ಸುಮಾರು ಏಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವುದರಿಂದ ನರೇಗಾ ಕೂಲಿಕೆಲಸಕ್ಕೆ ಬರುವುದು ಕಡಿಮೆಯಾಗಿದ್ದು, ಬೇರೆ ಕೆಲಸಗಳಿಗೆ ಹೋಗುತ್ತಿದ್ದಾರೆ. ಇದರಿಂದ ಚಿತ್ರದುರ್ಗ ತಾಲ್ಲೂಕಿನಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಲಾಗಿಲ್ಲ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸ್ವಚ್ಚ ಭಾರತ ಮಿಷನ್ ಯೋಜನೆಯಡಿ ಮರು ಸಮೀಕ್ಷೆ ಮಾಡಲು ಸಲಹೆ;
ಬಯಲು ಶೌಚಮುಕ್ತ ಭಾರತ ಮಾಡುವ ಉದ್ದೇಶದಿಂದ 2005 ರಿಂದಲೂ ವಿವಿಧ ಹೆಸರಿನಡಿ ಶೌಚಾಲಯ ನಿರ್ಮಾಣಕ್ಕೆ ಅನುದಾನವನ್ನು ನೀಡಲಾಗುತ್ತಿದೆ. ಆದರೆ ಈ ಹಿಂದೆ ರೂ.500 ಗಳಿಂದಲೂ ಸಹಾಯಧನವಾಗಿ ನೀಡಲಾಗುತ್ತಿದೆ. 2014 ರ ನಂತರ ಈ ಯೋಜನೆಯನ್ನು ಕುಟುಂಬಗಳ ಸಮೀಕ್ಷೆ ಮಾಡುವ ಮೂಲಕ ಬಯಲು ಶೌಚಮುಕ್ತ ಮಾಡಲು ಇದನ್ನು ಆಧರಿಸಿ ಶೌಚಾಲಯ ನಿರ್ಮಾಣಕ್ಕೆ ಅನುದಾನವನ್ನು ನೀಡಲಾಗುತ್ತಿದೆ. ಎಲ್ಲಾ ಮನೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡಿದ್ದು ಬಯಲು ಶೌಚಮುಕ್ತ ಗ್ರಾಮಗಳನ್ನಾಗಿ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದರೂ ಅನೇಕ ಮನೆಗಳಲ್ಲಿ ಶೌಚಾಲಯ ನಿರ್ಮಾಣವೇ ಆಗದಿರುವುದನ್ನು ಗಮನಿಸಲಾಗಿದೆ. ಈ ನಿಟ್ಟಿನಲ್ಲಿ ಮರು ಸಮೀಕ್ಷೆ ಮಾಡುವ ಮೂಲಕ ಶೇ 100 ರಷ್ಟು ಸಾಧನೆ ಮಾಡಲು ಸಚಿವರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಮಾತನಾಡಿ ಗ್ರಾಮ ಪಂಚಾಯಿತಿಗಳಲ್ಲಿ ಮನೆಗಳಿಂದ ಕಸವನ್ನು ಸಂಗ್ರಹಿಸಲು ಪ್ರತಿ ಮನೆಗೆ ಡಸ್ಟ್‍ಬಿನ್ ಪಂಚಾಯಿತಿಯಿಂದ ನೀಡಲು ಖರೀದಿಸಲಾಗಿದೆ. ಆದರೆ ದೊಡ್ಡ ಪಂಚಾಯಿತಿಗಳಲ್ಲಿ ಕಡಿಮೆ ಅನುದಾನ ಹಾಗೂ ಸಣ್ಣ ಪಂಚಾಯಿತಿಗಳಲ್ಲಿ ಹೆಚ್ಚು ಅನುದಾನ ವ್ಯಯ ಮಾಡಲಾಗಿದೆ, ಈ ತಾರತಮ್ಯ ಬೇಡ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ನಂದಿನಿದೇವಿ ಮಾತನಾಡಿ, ಜಿಲ್ಲೆಯಲ್ಲಿ 1362 ಹಳ್ಳಿಗಳಿದ್ದು, 3,51,186 ಮನೆಗಳಿವೆ. 2021 ರ ಏ.01 ರಂತೆ 1,30,134 ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. 2021-22ರಲ್ಲಿ 592 ಗ್ರಾಮಗಳನ್ನು ತೆಗೆದುಕೊಳ್ಳಲಾಗಿದ್ದು, 1,03,009 ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲು ಗುರಿ ಹೊಂದಲಾಗಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ 113 ಹಳ್ಳಿಗಳಿಗೆ ಕ್ರಿಯಾ ಯೋಜನೆ ತಯಾರಿಸಲಾಗಿದ್ದು, ಇದರಿಂದ 23318 ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲು ಗುರಿ ಹೊಂದಲಾಗಿದೆ ಎಂದರು.

 

 

ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಮೊದಲ ಹಂತದಲ್ಲಿ 29 ಕಾಮಗಾರಿಗಳಲ್ಲಿ 11 ಕಾಮಗಾರಿಗಳು ಪೂರ್ಣಗೊಂಡಿದ್ದು, ಬಿಡುಗಡೆಯಾದ 11 ಕೋಟಿಯಲ್ಲಿ 3.07 ಕೋಟಿ ವೆಚ್ಚ ಮಾಡಲಾಗಿದೆ. ಮುಂದಿನ ತಿಂಗಳೊಳಗೆ ಎಲ್ಲ ಕಾಮಗಾರಿಗಳು ಮುಕ್ತಾಯವಾಗಲಿವೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿಯು ಹೊರತಂದಿರುವ ಇ-ಮ್ಯಾಗ್ಘಿನ್ ಅನ್ನು ಸಚಿವ ಕೆ.ಎಸ್.ಈಶ್ವರಪ್ಪ ಬಿಡುಗಡೆಗೊಳಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಾದ ಶಿಲ್ಪಾ ನಾಗ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತರಾದ ಡಾ.ಹೆಚ್.ಎಸ್.ಪ್ರಕಾಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಮುಖ್ಯ ಯೋಜನಾಧಿಕಾರಿ ಗಾಯತ್ರಿ ಸೇರಿದಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಇದ್ದರು.
(ಫೋಟೋ ಕಳುಹಿಸಿದೆ)
=====

[t4b-ticker]

You May Also Like

More From Author

+ There are no comments

Add yours