ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದ ಕೆರೆ ಏರಿ ಬಿರುಕು, ತಜ್ಞರ ಸಲಹೆ ಪಡೆಯದಿದ್ದು ಶಾಸಕರ ದಡ್ಡತನ: ಮಾಜಿ ಸಚಿವ ಹೆಚ್.ಆಂಜನೇಯ ಆರೋಪ

 

 

 

 

 

*ಭರಮಣ್ಣ ನಾಯಕ, ಸಿರಿಗೆರೆ ಶ್ರೀ ಆಶಯಕ್ಕೆ ಧಕ್ಕೆ

ಭರಮಸಾಗರ: ಶತಮಾನದ ಹಿತದೃಷ್ಟಿಯುಳ್ಳ ಜನರ ರಾಜ ಬಿಚ್ಚುಗತ್ತಿ ಭರಮಣ್ಣ ನಾಯಕ ನಿರ್ಮಿಸಿದ ಕೆರೆ ಏರಿ ಬಿರುಕುಗೊಳ್ಳಲು ಏರಿ ಮೇಲಿನ ರಸ್ತೆ ಅಗಲೀಕರಣವೇ ಕಾರಣ ಎಂದು ಮಾಜಿ ಸಚಿವ ಎಚ್.ಆಂಜನೇಯ ಆರೋಪಿಸಿದ್ದಾರೆ.
ಕೆರೆ ಏರಿ ಬಿರುಕುಗೊಂಡು ಜನ ಆತಂಕಗೊಂಡಿರುವ ಹಿನ್ನೆಲೆಯಲ್ಲಿ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯರಿಗೆ ಆತ್ಮಸ್ಥೈರ್ಯ ಹೇಳಿದ ವೇಳೆ ಮಾತನಾಡಿದರು.
ಶತಮಾನಗಳ ಹಿಂದೆ ಅಂದಿನ ತಂತ್ರಜ್ಞಾನ, ಬುದ್ಧಿವಂತಿಕೆ ಬಳಸಿ ವಿಶಾಲ ಕೆರೆಯ ನಿರ್ಮಾಣಕ್ಕೆ ದುರ್ಗವನ್ನಾಳಿದ ಬಿಚ್ಚುಗತ್ತಿ ಭರಮಣ್ಣ ನಾಯಕನ ಜನಪಯೋಗಿ ಕಾಳಜಿಯೇ ಮುಖ್ಯ ಕಾರಣ.
ಇಂತಹ ಕೆರೆ ಹಲವು ವರ್ಷಗಳಿಂದ ನೀರಿಲ್ಲದೇ ಭಣಗುಡುತ್ತಿದ್ದು, ಇದನ್ನು ಕಂಡು ಕೆರೆಗೆ ಏತನೀರಾವರಿ ಯೋಜನೆ ಮೂಲಕ ನೀರು ತುಂಬಿಸುವ ಮಹತ್ವದ ಕೆಲಸವನ್ನು ತರಳಬಾಳು ಮಠದ ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾಡಿದ್ದಾರೆ. ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಈ ಮೂವರು ಮುಖ್ಯಮಂತ್ರಿಗಳು, ತಮ್ಮ ಅಧಿಕಾರದ ಅವಧಿಯಲ್ಲಿ ಭರಮಣ್ಣನಾಯಕನ ಕೆರೆಗೆ ನೀರು ಹರಿಸಬೇಕೆಂಬ ಸಿರಿಗೆರೆ ಶ್ರೀಗಳ ಆಶಯಕ್ಕೆ ಪೂರಕವಾಗಿ ಕೆಲಸ ಮಾಡಿದ್ದಾರೆ.
ಆದರೆ, ಇದರ ಪರಿಜ್ಞಾನ ಇಲ್ಲದ, ದುಡ್ಡು ಲಪಟಾಯಿಸುವ ಉದ್ದೇಶದಿಂದ ಕೆರೆ ಏರಿ ಮೇಲಿನ ರಸ್ತೆಯನ್ನು ಅಗಲೀಕರಣಗೊಳಿಸಿದ್ದು ಶಾಸಕರ ದಡ್ಡತನ, ಭ್ತಷ್ಟತನಕ್ಕೆ ಸಾಕ್ಷಿ ಆಗಿದೆ ಎಂದು ದೂರಿದರು.

ಕೆರೆ ಏರಿಯ ಮೇಲಿನ ರಸ್ತೆ ಅಗಲೀಕರಣವೇ ನನ್ನ ಸಾಧನೆ ಎಂದು ಬಿಂಬಿಸಿಕೊಳ್ಳುವ ಶಾಸಕರಿಗೆ, ಕೃಷಿಕರ ಬದುಕು, ಸುತ್ತಮುತ್ತಲಿನ ಜನರ ಹಿತ ಬೇಕಿಲ್ಲ. ಕಳಪೆ ಹಾಗೂ ತರಾತುರಿಯಲ್ಲಿ ಕಾಮಗಾರಿ ನಡೆಸಿ, ಹಣ ಲೂಟಿ ಮಾಡಲಾಗಿದೆ. ಅವೈಜ್ಞಾನಿಕವಾಗಿ ರಸ್ತೆ ಅಗಲೀಕರಣ, ಗುಣಮಟ್ಟವಲ್ಲದ ಮಣ್ಣು ಏರಿಗೆ ಬಳಸಿದ್ದರಿಂದ ಇಂದು ಏರಿ ಬಿರುಕು ಆಗಿದ್ದು ಸ್ಥಳೀಯರು ಆತಂಕಕ್ಕೆ ಸಿಲುಕಿದ್ದಾರೆ. ಇದಕ್ಕೆ ಶಾಸಕರು, ಅಧಿಕಾರಗಳೇ ನೇರ ಹೊಣೆ ಎಂದು ಆರೋಪಿಸಿದರು.

 

 

ಡ್ಯಾಮ್ ರೀತಿ ಅಭಿವೃದ್ಧಿಗೊಳ್ಳಲಿ:: ಬಹಳ ಹಳೇಯ ಕೆರೆ ಏರಿ ಮೇಲೆ ಹಣದ ದುರಾಸೆಗೆ ರಸ್ತೆ ಅಗಲೀಕರಣ ಮಾಡುವ ಮೂಲಕ ಕೆರೆ ಏರಿಯನ್ನು ಈಗಾಗಲೇ ಸಂಪೂರ್ಣ ದುರ್ಬಲಗೊಳಿಸಲಾಗಿದೆ. ಈಗ ಮತ್ತೊಮ್ಮೆ ಏರಿ ಭದ್ರಗೊಳಿಸಲು ಜೆಸಿಬಿ, ಸ್ಥಳೀಯವಾಗಿ ದೊರೆಯುವ ಕಳಪೆ ಮಣ್ಣು ಬಳಸುವುದು ಬಹಳ ಅಪಾಯ.
ಮುಂದೊಂದು ದಿನ ಕೆರೆ ಏರಿ ಒಡೆದು, ಊರುಗಳು, ಜಮೀನುಗಳು ಮುಳುಗಡೆ ಆಗುವ ಸಂಭವವೇ ಹೆಚ್ಚು ಎಂದು ಆಂಜನೇಯ ಆತಂಕ ವ್ಯಕ್ತಪಡಿಸಿರದರು.
ಆದ್ದರಿಂದ ಕೆರೆ ಅಭಿವೃದ್ಧಿಗೆ ಡ್ಯಾಮ್ ನಿರ್ಮಾಣದ ತಂತ್ರಜ್ಞಾನ ಬಳಸಬೇಕು. ಒಂದು ರೀತಿ ಚಿಕ್ಕ ಡ್ಯಾಮ್ ರೂಪ ಕೆರೆ ಪಡೆದುಕೊಳ್ಳಬೇಕು. ಇದರಿಂದ ಮಾತ್ರ ಶಾಶ್ವತ ಪರಿಹಾರ ಸಾಧ್ಯ.
ಈ ಸಂಬಂಧ ಬರುವ ಬಜೆಟ್ ನಲ್ಲಿ ಡ್ಯಾಮ್ ರೀತಿ ಕೆರೆ ಅಭಿವೃದ್ಧಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಣ ಮೀಸಲಿಡಬೇಕು. ಈ ಮೂಲಕ ಭರಮಣ್ಣ ನಾಯಕ ಹಾಗೂ ಸಿರಿಗೆರೆ ಶ್ರೀಗಳ ಆಶಯ, ಜನಪಯೋಗಿ ಕಾರ್ಯಕ್ಕೆ ಗೌರವ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಕೆರೆಯು ಡ್ಯಾಮ್ ರೂಪ ಪಡೆದುಕೊಳ್ಳಲು ಸರ್ಕಾರದ ಮೇಲೆ ಒತ್ತಡ ತರುವ ಅಗತ್ಯವಿದ್ದು. ಸಿರಿಗೆರೆ ಗುರುಗಳು ಈ ವಿಷಯದಲ್ಲಿ ಮುಂದಾಳತ್ವ ವಹಿಸಿದರೇ ಮಾತ್ರ, ಈ ಯೋಜನೆ ಕಾರ್ಯಸಾಧು ಆಗಲಿದೆ ಎಂದು ಅಭಿಪ್ರಾಯಪಟ್ಟರು.

ಸರ್ಕಾರಕ್ಕೆ ವರದಿ ಸಲ್ಲಿಸಿ: ಜಿಲ್ಲಾಧಿಕಾರಿ, ಎಸ್.ಪಿ. ನೀರಾವರಿ ಇಲಾಖೆ ಅಧಿಕಾರಿಗಳು, ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಶಾಶ್ವತ ಪರಿಹಾರ ಕ್ರಮಕ್ಕೆ ಯೋಜನೆ ರೂಪಿಸಬೇಕು. ಬರುವ ಬಜೆಟ್ ನಲ್ಲಿಯೇ ಕೆರೆ ಅಭಿವೃದ್ಧಿಗೆ ಹಣ ಮೀಸಲಿಡುವ ಅಗ್ಯತತೆ ಕುರಿತು ಸರ್ಕಾರಕ್ಕೆ ಶೀಘ್ರದಲ್ಲಿಯೇ ವರದಿ ಸಲ್ಲಿಸಬೇಕು. ಈ ಸಂಬಂಧ ಸಿರಿಗೆರೆ ಗುರುಗಳ ಮಾರ್ಗದರ್ಶನ ಪಡೆಯಬೇಕು ಎಂದು ಆಂಜನೇಯ ಒತ್ತಾಯಿಸಿದರು.

ತನಿಖೆ ಅಗತ್ಯ: ಕೆರೆ ಏರಿ ಮೇಲೆ ಅವೈಜ್ಞಾನಿಕವಾಗಿ ರಸ್ತೆ ಅಗಲೀಕರಣ ಆಗಿರುವ ಕುರಿತು ತನಿಖೆ ನಡೆಸಬೇಕು. ಈ ಸಂಬಂಧ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳದಳಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡರಾದ ಕೋಡಿ ರಂಗವನಹಳ್ಳಿ ಹನುಮಂತಣ್ಣ, ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಶಶಿ ಪಾಟೀಲ್, ರಾಜ್ಯ ಕಾಂಗ್ರೆಸ್ ಕಿಸಾನ್ ವಿಭಾಗದ ಪ್ರಧಾನ ಕಾರ್ಯದರ್ಶಿ ಶಮೀಮ್ ಪಾಷಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದುರ್ಗೆಶ್ ಪೂಜಾರ್, ತಾ.ಪಂ ಮಾಜಿ ಅಧ್ಯಕ್ಷ ವೆಂಕಟೇಶ್ ನಾಯ್ಕ್ ಕಾಂಗ್ರೆಸ್ ಮುಖಂಡರುಗಳಾದ ಕೆಟಿಸಿ ಮೌನೇಶ್, ಎಸ್.ಎಂ.ಎಲ್ ಪ್ರವೀಣ್ , ಗ್ರಾ.ಪಂ ಸದಸ್ಯರುಗಳಾದ ರಾಜಣ್ಣ, ರಾಮಣ್ಣ, ಶಿವಣ್ಣ ಸೇರಿದಂತೆ ನೀರಾವರಿ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.

[t4b-ticker]

You May Also Like

More From Author

+ There are no comments

Add yours