ರಸ್ತೆ ಮೇಲೆ ಮ್ಯಾನ್ ಹೋಲ್ ನೀರು..! ಸಾರ್ವಜನಿಕರಿಂದ ದುರ್ವಾಸನೆಗೆ ಕಿಡಿಕಿಡಿ

 

 

 

 

 

ವರದಿ-ಎಚ್.ಸಿ.ಗಿರೀಶ್, ಹರಿಯಬ್ಬೆ

ಚಿತ್ರದುರ್ಗ:

ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ರಸ್ತೆ ಒಂದು ಕಡೆಯಾದರೆ ನೂರಾರು ಗಣ್ಯ ಮಾನ್ಯರು ನಿತ್ಯ ಓಡಾಡುವ ರಸ್ತೆ ಬೇರೆ, ಸಾಲದಕ್ಕೆ ವಿಜ್ಞಾನ, ಕಲಾ ಕಾಲೇಜ್ ಗಳ ವಿದ್ಯಾರ್ಥಿಗಳು, ಹತ್ತಾರು ಹಾಸ್ಟೆಲ್ ಗಳ ವಿದ್ಯಾರ್ಥಿಗಳು, ಸಾವಿರಾರು ಸಂಖ್ಯೆಯಲ್ಲಿ ಓಡಾಡುವ ಸಾರ್ವಜನಿಕರು ಇಂತಹ ಜನನಿಬಿಡು ರಸ್ತೆಯಲ್ಲೇ ಮ್ಯಾನ್ ಹೋಲ್(ಚರಂಡಿ ಕೊಚ್ಚೆ) ನೀರು ರಸ್ತೆ ಮೇಲೆ ಹರಿಯುತ್ತಿದೆ.

ಆದರೂ ಸಾರ್ವಜನಿಕರ ದೂರು ದುಮ್ಮಾನಗಳಿಗೆ ನಗರಸಭೆ, ಜಲಮಂಡಲಿಯ ಕಚೇರಿಗಳಲ್ಲಿ ಕವಡೆಕಾಸಿನಷ್ಟು ಕಿಮ್ಮತ್ತಿಲ್ಲ. ತೆರಿಗೆದಾರರು ನಗರ ನಿವಾಸಿಗಳು ಭಿಕ್ಷುಕನಿಗಿಂತಲೂ ಕಟ್ಟ ಕಡೆ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

 

 

ಜನನಿಬಿಡು ಈ ರಸ್ತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ನ್ಯಾಯಾಧೀಶರುಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಪಂ ಸಭಾಂಗಣದಲ್ಲಿ ನಡೆಯುವ ಸಭೆ, ಸಮಾರಂಭ, ಸಂವಾದಗಳಿಗೆ ಇದೇ ರಸ್ತೆಯಲ್ಲೇ ಸಾಗಬೇಕಿದೆ. ಅತಿ ಮುಖ್ಯವಾಗಿ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ಇಂತಹ ಗಲೀಜು ಕೊಚ್ಚೆ ನೀರಿನ ಮೇಲೆ ನಿತ್ಯ ಓಡಾಡಬೇಕಿದ್ದು ಅನೇಕ ರೋಗಗಳಿಗೆ ದಾರಿ ಮಾಡಿಕೊಡಲಿದೆ.

ಸರ್ಕಾರಿ ವಿಜ್ಞಾನ ಕಾಲೇಜ್, ಸರ್ಕಾರಿ ಕಲಾ ಕಾಲೇಜ್, ಎರಡು ಕಾಲೇಜ್ ಗಳ ಸ್ನಾತಕೋತ್ತರ ಪದವಿ ಕಾಲೇಜ್ ಗಳ ವಿದ್ಯಾರ್ಥಿಗಳು, ಉಪನ್ಯಾಸಕರುಗಳು ಇದೇ ರಸ್ತೆಯ ಮೇಲೆ ಅನಿವಾರ್ಯವಾಗಿ ಓಡಾಟ ಮಾಡುತ್ತಿದ್ದಾರೆ.

ಜನನಿಬಿಡಾದ ಜಿಪಂ ರಸ್ತೆಯ ಮ್ಯಾನ್ ಹೋಲ್(ಡ್ರೈನೇಜ್) ಬ್ಲಾಕ್ ಆಗಿ ಐದಾರು ದಿನಗಳು ಕಳೆದರೂ ಈ ಬಗ್ಗೆ ಸ್ಥಳೀಯ ನಾಗರಿಕರು ಮೇಲಿಂದ ಮೇಲೆ ದೂರು ನೀಡಿದರೂ ಜಲಮಂಡಲಿ, ನಗರಸಭೆ ಅಧಿಕಾರಿಗಳು ದೂರಿಗೆ ಬಿಡಿಗಾಸಿನಷ್ಟು ಬೆಲೆ ನೀಡದೆ ದಿವ್ಯ ನಿರ್ಲಕ್ಷ್ಯ ತಾಳಿದ್ದಾರೆ. ಹೀಗಾಗಿ ಮೋರಿಯಿಂದ ಹಗಲಿರುಳು ಧಾರಾಕಾರವಾಗಿ ಕೊಚ್ಚೆ, ತ್ಯಾಜ್ಯ, ಗಲೀಜು ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ಇಲ್ಲಿ ಓಡಾಡುವವರಿಗೂ ಮತ್ತು ಸ್ಥಳೀಯರಿಗೂ ಬಹಳ ತೊಂದರೆಯಾಗಿ ಪರಿಣಮಿಸಿದೆ.

ಈ ಮೋರಿ ನೀರಿನ ಕೆಟ್ಟ ವಾಸನೆಯಿಂದ ಇಲ್ಲಿಯ ವಿವಿಧ ಹಾಸ್ಟೆಲ್ ಗಳ ನಿವಾಸಿಗಳಿಗೆ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ. ಅದರಲ್ಲಿಯೂ, ಕೊರೋನಾ ಮಹಾಮಾರಿಯ ಮೂರನೆಯ ಅಲೆ ಹರಡುತ್ತಿರುವ ಸಂದರ್ಭದಲ್ಲಿ ಇಂಥ ಹೊಲಸು ತ್ಯಾಜ್ಯ ನೀರಿನಿಂದ ಸೋಂಕು ಮತ್ತಷ್ಟು ಹರಡಲು ಮುಖ್ಯ ಕಾರಣವಾಗಬಹುದು. ಹರಿವ ನೀರಿನ ದುರ್ವಾಸನೆಯಿಂದ ಈಗ ರಸ್ತೆಯಲ್ಲಿ ಮೂಗು ಮುಚ್ಚಿ ಓಡಾಡುವ ಕಠಿಣ ಪರಿಸ್ಥಿತಿ ಎದುರಾಗಿದೆ.

ಸಂಬಂಧಿಸಿದ ಇಲಾಖೆಗಳಲ್ಲಿ ಸಾರ್ವಜನಿಕರ ದುಃಖ ದುಮ್ಮಾನದವದೂರುಗಳಿಗೆ ಅಧಿಕಾರಿಗಳು ಸ್ಪಂದಿಸದೆ ಅತ್ಯಂತ ಬೇಜವಾಬ್ದಾರಿ ಮತ್ತು ಬೇಕಾಬಿಟ್ಟಿ ಯಿಂದ ನಡೆದುಕೊಳ್ಳುತ್ತಿರುವುದು ಅತ್ಯಂತ ವಿಷಾದನೀಯವೇ ಸರಿ. ಜನರ ಕೆಲಸ ಸರ್ಕಾರದ ಕೆಲಸವೆಂಬ ಘೋಷಣೆಗೆ ಸರ್ಕಾರಿ ಇಲಾಖೆಗಳಲ್ಲಿ ಕವಡೆ ಕಾಸಿಗೂ ಬೆಲೆ ಸಿಗುತ್ತಿಲ್ಲ. ಒಂದು ಮೋರಿ ಸರಿ ಮಾಡಿಸಿಕೊಳ್ಳಲು ನಾಗರಿಕರು ಇಲಾಖೆಗಳಿಗೆ ಹತ್ತಾರು ಬಾರಿ ದೂರವಾಣಿ ಮಾಡಿ ಕಂಪ್ಲೇಂಟ್ ನೀಡಬೇಕಾಗಿರುವುದು ಅದೆಷ್ಟು ನೋವಿನ ಸಂಗತಿಯಾಗಿದೆ. ಮ್ಯಾನ್ ಹೋಲ್ ನಿಂದ ಅರಿಯುವ ಈ ತ್ಯಾಜ್ಯ ನೀರು ಪರಿಸರ ಮಾಲಿನ್ಯಕ್ಕೂ ಕಾರಣವಾಗಿದ್ದು, ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ.

ಮೋದಿಜಿಯವರ ಸ್ವಚ್ಛ ನಿರ್ಮಲ ಅಭಿಯಾನದ ಘೋಷಣೆಗೆ ನಗರದ ಹೃದಯ ಭಾಗದಲ್ಲಿನ ನಗರಸಭೆ, ಜಲಮಂಡಳಿಗಳಲ್ಲಿ ಬಿಡಿಗಾಸಿನಷ್ಟು ಬೆಲೆಯಿಲ್ಲದಂತಾಗಿದೆ. ಈಗಲಾದರೂ ನಗರಸಭೆ, ಜಲಮಂಡಲಿಯ ಹಿರಿಯ ಉನ್ನತ ಅಧಿಕಾರಿಗಳು ಈ ಸಮಸ್ಯೆಯ ಕಡೆ ಗಮನ ಹರಿಸಿ ಕೆಟ್ಟ ಒಳಚರಂಡಿಯಿಂದ ಉದ್ಭವಿಸಿರುವ ಸಮಸ್ಯೆಯನ್ನು ಬಗೆಹರಿಸಬೇಕಾದದ್ದು ಅತ್ಯಂತ ಜರೂರು ಕೆಲಸವಾಗಿದೆ.

[t4b-ticker]

You May Also Like

More From Author

+ There are no comments

Add yours