ಮಕ್ಕಳು ಖುಷಿಯಾಗಿರುವುದು ಪೋಷಕರ ಪ್ರಮುಖ ಆದ್ಯತೆ. ತಮ್ಮ ಮಕ್ಕಳ ಮುಖದಲ್ಲಿ ನಗು ತರಿಸುವ ಉದ್ದೇಶದಿಂದ ಪೋಷಕರು ಮಕ್ಕಳಿಗೆ ಹೊಸ ಆಟಿಕೆಗಳನ್ನು ಖರೀದಿಸಿ ಕೊಡುತ್ತಲೇ ಇರುತ್ತಾರೆ. ಖರೀದಿಸಿ ತಂದ ಕೆಲವು ದಿನಗಳವರೆಗೆ, ಮಗು ಆ ಆಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತದೆ. ಆದರೆ ಕ್ರಮೇಣ ಆ ಆಟಿಕೆಗಳು ಮೂಲೆ ಸೇರುತ್ತವೆ. ಇಲ್ಲಿ ಒಂದು ಮುಖ್ಯವಾದ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಆಟಿಕೆಗಳು ಮಗುವಿನ ಬೆಳವಣಿಗೆಗೆ ಉತ್ತಮ ಮಾರ್ಗವೇ? ಈ ಪ್ರಶ್ಬೆಗೆ ತಜ್ಞರು ನೀಡುವ ಉತ್ತರ ‘ಇಲ್ಲ’. ಮಗುವಿನ ನಿಜವಾದ ಬೆಳವಣಿಗೆಯು ಅನುಭವ, ಅಭ್ಯಾಸ ಮತ್ತು ಕಲಿಕೆಯ ಅವಕಾಶಗಳಿಂದ ಬರುತ್ತದೆ. ಇದು ಅವರ ಆಲೋಚನೆ, ಕಲ್ಪನೆ ಮತ್ತು ಆತ್ಮವಿಶ್ವಾಸವನ್ನು ಬಲಪಡಿಸುತ್ತದೆ. ಮಕ್ಕಳ ಮನಶ್ಶಾಸ್ತ್ರಜ್ಞರು ಕೂಡಾ ಇದನ್ನೇ ಹೇಳುತ್ತಾರೆ.

ದುಬಾರಿ ಆಟಿಕೆಗಳ ಬದಲಿಗೆ ಸರಿಯಾದ ವಸ್ತುಗಳು ಮತ್ತು ಸಮಯವನ್ನು ಒದಗಿಸಿದರೆ, ಮಗುವು ಶೈಕ್ಷಣಿಕವಾಗಿ ಮಾತ್ರವಲ್ಲದೆ ಮಕ್ಕಳ ನಡವಳಿಕೆ, ನಿರ್ಧಾರ ತೆಗೆದುಕೊಳ್ಳುವುದರಲ್ಲಿ, ಆತ್ಮವಿಶ್ವಾಸದಲ್ಲೂ ಪ್ರಗತಿ ಸಾಧಿಸಬಹುದು. ಮಗುವಿನ ಮಾನಸಿಕ ಮತ್ತು ಭಾವನಾತ್ಮಕ ಬೆಳವಣಿಗೆಗೆ ಸಹಾಯ ಮಾಡುವ ಐದು ಉಡುಗೊರೆಗಳನ್ನು ಮಕ್ಕಳ ಮನಶ್ಶಾಸ್ತ್ರಜ್ಞರು ಸೂಚಿಸುತ್ತಾರೆ.
ಆಟಿಕೆ ಯಾವಾಗಲೂ ಸರಿಯಾದ ನಿರ್ಧಾರವಲ್ಲ ಏಕೆ?
ಆಟಿಕೆಗಳು ಮಕ್ಕಳನ್ನು ರಂಜಿಸುತ್ತವೆ. ನಿಜ, ಆದರೆ ಹೆಚ್ಚಿನ ಆಟಿಕೆಗಳು ಅಲ್ಪಾವಧಿಗೆ ಮಾತ್ರ ಸೀಮಿತ. ಮಕ್ಕಳು ಬಹಳ ಬೇಗನೆ ಬೋರ್ ಆಗುತ್ತಾರೆ, ಹಾಗಾಗಿ ಒಂದೇ ಟಾಯ್ ಹಿಡಿದು ಬಹಳ ದಿನ ಆಡುವುದು ಅವರಿಂದಲೂ ಸಾಧ್ಯವಿರುವುದಿಲ್ಲ. ಪರಿಣಾಮವಾಗಿ ಹೊಸ ಆಟಿಕೆಗೆ ಬೇಡಿಕೆ ಬರುತ್ತದೆ. ಮಕ್ಕಳು ಕೇಳಿದಾಗಲೆಲ್ಲಾ ಅಥವಾ ಹಠ ಹಿಡಿದಾಗಲೆಲ್ಲಾ ಅವರಿಗೆ ಟಾಯ್ಸ್ ತಂದು ಕೊಡುವ ಬದಲು ಅವರ ಕುತೂಹಲವನ್ನು ಉತ್ತೇಜಿಸುವ ಮತ್ತು ಅವರು ಸ್ವಂತವಾಗಿ ಕಲಿಯಲು ಅನುವು ಮಾಡಿಕೊಡುವ ವಸ್ತುಗಳನ್ನು ಒದಗಿಸುವುದು ಉತ್ತಮ ದಾರಿಯಾಗಿದೆ.
1. ಪುಸ್ತಕಗಳು ಮಗುವಿನ ಆತ್ಮೀಯ ಸ್ನೇಹಿತರಾಗಬಹುದು ಓದುವ ಅಭ್ಯಾಸವು ಆಲೋಚನಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮಕ್ಕಳ ಮನಶ್ಶಾಸ್ತ್ರಜ್ಞರ ಪ್ರಕಾರ, ಪುಸ್ತಕಗಳು ಮಕ್ಕಳಿಗೆ ನೀವು ನೀಡಬಹುದಾದ ಅತ್ಯಂತ ಉಪಯುಕ್ತ ಉಡುಗೊರೆಗಳಲ್ಲಿ ಒಂದಾಗಿದೆ. ಕಥೆಪುಸ್ತಕಗಳು, ಚಿತ್ರ ಪುಸ್ತಕಗಳು ಅಥವಾ ವಯಸ್ಸಿಗೆ ಸೂಕ್ತವಾದ ಪುಸ್ತಕಗಳು ಮಗುವಿನ ಭಾಷೆ, ಕಲ್ಪನೆ ಮತ್ತು ತಿಳುವಳಿಕೆಯನ್ನು ಸುಧಾರಿಸುತ್ತದೆ. ನಿಯಮಿತವಾಗಿ ಓದುವ ಮಕ್ಕಳು ಪ್ರಶ್ನೆಗಳನ್ನು ಕೇಳಲು ಹಿಂಜರಿಯುವುದಿಲ್ಲ. ಯಾವಾಗಲೂ ಹೊಸ ವಿಷಯಗಳನ್ನು ಕಲಿಯಲು ಸಿದ್ಧರಾಗಿರುತ್ತಾರೆ.
2. ದುಬಾರಿ ಉಡುಗೊರೆಗಳ ಬದಲು ಸ್ಮರಣೀಯ ಅನುಭವಗಳನ್ನು ನೀಡಿ ಹೊಸ ಸ್ಥಳಗಳು ಮತ್ತು ಚಟುವಟಿಕೆಗಳು ಬಹಳಷ್ಟು ಕಲಿಸುತ್ತವೆ. ನಿಮ್ಮ ಮಗುವನ್ನು ಮೃಗಾಲಯ, ವಸ್ತುಸಂಗ್ರಹಾಲಯ, ಉದ್ಯಾನವನ, ವಿಜ್ಞಾನ ಕೇಂದ್ರ ಅಥವಾ ನೇಚರ್ ವಾಕ್ಗೆ ಕರೆದೊಯ್ಯುವುದು ದುಬಾರಿ ಆಟಿಕೆಗಳಿಗಿಂತ ಹೆಚ್ಚು ಪ್ರಯೋಜನಕಾರಿಯಾಗಿದೆ. ಅಲ್ಲಿ, ಅವರು ತಮ್ಮ ಸುತ್ತಲಿನ ಪ್ರಪಂಚವನ್ನು ಹತ್ತಿರದಿಂದ ನೋಡುತ್ತಾರೆ. ಅನೇಕ ಹೊಸ ವಿಷಯಗಳನ್ನು ಕಲಿಯುತ್ತಾರೆ. ಹೊರಗೆ ಹೋಗುವುದು ಸಾಧ್ಯವಾಗದಿದ್ದರೆ, ಅಡುಗೆ ಮಾಡುವುದು, ತೋಟಗಾರಿಕೆ ಮಾಡುವುದು ಅಥವಾ ಮನೆಯಲ್ಲಿ ಒಟ್ಟಿಗೆ ಕರಕುಶಲ ಚಟುವಟಿಕೆ ಮಾಡುವುದು ಉತ್ತಮ ಪರ್ಯಾಯವಾಗಿದೆ. 3. ಹೊಸ ಕೌಶಲ್ಯಗಳು ಭವಿಷ್ಯವನ್ನು ಬಲಪಡಿಸುತ್ತವೆ ಪ್ರತಿ ಮಗುವಿನ ಆಸಕ್ತಿ ಬೇರೆ ಬೇರೆಯಾಗಿರುತ್ತದೆ. ಕೆಲವರಿಗೆ ಸಂಗೀತ ಕೇಳುವುದೆಂದರೆ ಇಷ್ಟವಾದರೆ, ಇನ್ನು ಕೆಲವರಿಗೆ ನೃತ್ಯ, ಚಿತ್ರಕಲೆ ಅಥವಾ ಚೆಸ್ ಆಡುವುದೆಂದರೆ ಇಷ್ಟವಾಗಿರಬಹುದು. ಕೆಲವರು ಕೋಡಿಂಗ್ ಅಥವಾ ಸಾರ್ವಜನಿಕ ಭಾಷಣದಂತಹ ಹೊಸ ಕೌಶಲ್ಯಗಳಲ್ಲಿ ಆಸಕ್ತಿ ಹೊಂದಿರಬಹುದು. ಅಂತಹ ಚಟುವಟಿಕೆಗಳು ಮಕ್ಕಳಿಗೆ ಹೊಸ ವಿಷಯಗಳನ್ನು ಕಲಿಸುವುದಲ್ಲದೆ, ಅವರ ಸಾಮರ್ಥ್ಯವನ್ನು ಅನ್ವೇಷಿಸಲು ಅವಕಾಶವನ್ನು ನೀಡುತ್ತದೆ. ಮಗುವು ಹೊಸ ಕೌಶಲ್ಯದಲ್ಲಿ ಉತ್ತಮ ಸಾಧನೆ ಮಾಡಿದಾಗ, ಅವರ ಆತ್ಮವಿಶ್ವಾಸ ಸ್ವಯಂಚಾಲಿತವಾಗಿ ಬೆಳೆಯುತ್ತದೆ. 4. ಬೋರ್ಡ್ ಆಟಗಳಿಂದ ಕಲಿಯಬಹುದು ತಂತ್ರ ಮತ್ತು ತಾಳ್ಮೆ ಆಟವಾಡುವುದರಿಂದ ಜೀವನಕ್ಕೆ ಅಗತ್ಯವಾದ ಕೌಶಲ್ಯಗಳು ಬೆಳೆಯುತ್ತವೆ. UNO, ಸೀಕ್ವೆನ್ಸ್, ಮೊನೊಪೊಲಿ ಅಥವಾ ಚೆಸ್ನಂತಹ ಬೋರ್ಡ್ ಆಟಗಳು ಕೇವಲ ಸಮಯ ಕಳೆಯುವ ಒಂದು ಮಾರ್ಗವಲ್ಲ. ಅವು ಮಕ್ಕಳಿಗೆ ಯೋಜನೆ ರೂಪಿಸಲು, ಸಕಾಲಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು, ಗೆಲುವು-ಸೋಲುಗಳನ್ನು ಸ್ವೀಕರಿಸಲು ಮತ್ತು ತಾಳ್ಮೆಯನ್ನು ಕಾಪಾಡಿಕೊಳ್ಳಲು ಕಲಿಸುತ್ತವೆ. ಕುಟುಂಬದೊಂದಿಗೆ ಈ ಆಟಗಳನ್ನು ಆಡುವುದರಿಂದ ಮಕ್ಕಳ ಸಾಮಾಜಿಕ ನಡವಳಿಕೆ ಕೂಡಾ ಸಕಾರಾತ್ಮಕವಾಗಿ ಬದಲಾಗುವುದು. 5. ಅತ್ಯಂತ ಅಮೂಲ್ಯವಾದ ಉಡುಗೊರೆಯೆಂದರೆ ಪೋಷಕರ ಸಮಯ ಮಗುವಿಗೆ ಹೆಚ್ಚು ಬೇಕಾಗಿರುವುದು ದುಬಾರಿ ವಸ್ತುಗಳಲ್ಲ, ಬದಲಾಗಿ ಅವರ ಪೋಷಕರೊಂದಿಗೆ ಕಳೆಯುವ ಸಮಯ ಎಂದು ತಜ್ಞರು ಹೇಳುತ್ತಾರೆ. ಮೊಬೈಲ್ ಫೋನ್ ಅಥವಾ ಇತರ ಚಟುವಟಿಕೆಗಳಿಲ್ಲದೆ ತಮ್ಮ ಮಗುವಿನೊಂದಿಗೆ ದಿನಕ್ಕೆ ಕೆಲವು ನಿಮಿಷಗಳನ್ನು ಕಳೆದರೂ ಸಹ, ಅವರು ಹೆಚ್ಚು ಸೆಕ್ಯೂರ್ಡ್ ಫೀಲ್ ಮಾಡುತ್ತಾರೆ. ಪ್ರತಿ ರಾತ್ರಿ ಊಟದ ನಂತರ ಅಥವಾ ಮಲಗುವ ಮುನ್ನ 20 ನಿಮಿಷಗಳ ಕಾಲ ಮಕ್ಕಳೊಂದಿಗೆ ಕಳೆಯಿರಿ. ಆ ಸಮಯದಲ್ಲಿ, ಮಗು ತನ್ನ ಶಾಲೆ, ಸ್ನೇಹಿತರು ಮತ್ತು ದಿನದ ಆಗುಹೋಗುಗಳ ಬಗ್ಗೆ ಕಥೆಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತದೆ. ಇದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ಅವರಿಗೂ ಸುಲಭವಾಗುತ್ತದೆ. 6. ಸಣ್ಣ ಅಭ್ಯಾಸಗಳೇ ದೊಡ್ಡ ವ್ಯತ್ಯಾಸವನ್ನುಂಟುಮಾಡುತ್ತವೆ ಮಕ್ಕಳ ಬೆಳವಣಿಗೆ ಅಂದರೆ ಕೇವಲ ಶಾಲೆ ಅಥವಾ ಟ್ಯೂಷನ್ ಅಲ್ಲ. ಮನೆಯ ವಾತಾವರಣ, ಪೋಷಕರ ನಡವಳಿಕೆ ಮತ್ತು ಸಣ್ಣ ದೈನಂದಿನ ಅಭ್ಯಾಸಗಳು ಸಹ ಅವರ ಆಲೋಚನೆಯ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ಮಕ್ಕಳಿಗೆ ಕಲಿಯಲು, ಪ್ರಶ್ನೆಗಳನ್ನು ಕೇಳಲು ಮತ್ತು ತಮ್ಮ ಅನಿಸಿಕೆ ಭಾವನೆಗಳನ್ನು ವ್ಯಕ್ತಪಡಿಸಲು ಸ್ವಾತಂತ್ರ್ಯವನ್ನು ನೀಡುವುದರಿಂದ ಅವರು ಹೆಚ್ಚು ಆತ್ಮವಿಶ್ವಾಸದಿಂದ ಇರಲು ಸಹಾಯವಾಗುತ್ತದೆ. ಆದ್ದರಿಂದ, ಮುಂದಿನ ಬಾರಿ ನೀವು ಹುಟ್ಟುಹಬ್ಬ ಅಥವಾ ವಿಶೇಷ ಸಂದರ್ಭಕ್ಕಾಗಿ ಉಡುಗೊರೆಯನ್ನು ಆರಿಸುವಾಗ, ಆಟಿಕೆಗಳ ಬಗ್ಗೆ ಮಾತ್ರ ಯೋಚಿಸಬೇಡಿ. ನಿಮ್ಮ ಮಗುವಿನ ವ್ಯಕ್ತಿತ್ವವನ್ನು ಬಲಪಡಿಸುವ ಮತ್ತು ಅವರಿಗೆ ಜೀವಮಾನದ ಪಾಠಗಳನ್ನು ಕಲಿಸುವ ವಸ್ತುಗಳನ್ನು ಆರಿಸಿ.



