ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧ: ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು

 

 

 

 

ಚಿತ್ರದುರ್ಗ,ಜುಲೈ05:
ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ಬದ್ಧವಾಗಿದ್ದು, ಆರೋಗ್ಯ, ಶಿಕ್ಷಣ ಹಾಗೂ ಮೂಲಸೌಕರ್ಯಗಳಿಗೆ ರಾಜ್ಯ ಸರ್ಕಾರ ಮೊದಲ ಆದ್ಯತೆ ನೀಡಲಿದೆ ಎಂದು ಸಮಾಜ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಹೇಳಿದರು.
ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿಯಲ್ಲಿ ಸೋಮವಾರ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ರಾಮಗಿರಿ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಿ ಇಲ್ಲಿನ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲಾಗುತ್ತಿದೆ. ಇದರ ಜೊತೆಗೆ ಹೊಳಲ್ಕೆರೆ ಶಾಸಕರಾದ ಎಂ.ಚಂದ್ರಪ್ಪ ಅವರು ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ಬಡವರಿಗೆ ಆಹಾರಧಾನ್ಯಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದರು.
ಮುಂಬರುವ ದಿನಗಳಲ್ಲಿ ಮಧ್ಯಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಲು ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, ಈಗಾಗಲೇ ಕಾಮಗಾರಿ ಪ್ರಾರಂಭವಾಗಿದೆ. ಹೊಳಲ್ಕೆರೆ ಭಾಗದಲ್ಲಿ ಸುಮಾರು 90 ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಹೇಳಿದರು.
ಗಂಗಾಕಲ್ಯಾಣ ಫಲಾನುಭವಿ ಖಾತೆಗೆ ಹಣ: ಗಂಗಾಕಲ್ಯಾಣ ಯೋಜನೆಯಡಿ ವೈಯಕ್ತಿಕ ಕೊಳವೆಬಾವಿ ಕೊರೆಸಲು ಫಲಾನುಭವಿ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಬಿ.ಶ್ರೀರಾಮುಲು ತಿಳಿಸಿದರು.
ಈ ಹಿಂದೆ ಗಂಗಾಕಲ್ಯಾಣ ಯೋಜನೆಯಡಿ ವೈಯಕ್ತಿಕ ಕೊಳವೆಬಾವಿ  ಕೊರೆಯಿಸಲು ಏಜೆನ್ಸಿಗಳಿಗೆ ಹಣ ಬಿಡುಗಡೆ ಮಾಡಿ ಏಜೆನ್ಸಿಗಳಿಂದ ಕೊಳವೆಬಾವಿ ಕೊರೆಯಿಸಲಾಗುತ್ತಿತ್ತು.. ಆದರೆ ಇನ್ನೂ ಮುಂದೆ ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ನೇರವಾಗಿ ಅವರ ಖಾತೆಗೆ ಹಣ ಬಿಡುಗಡೆ ಮಾಡಲು ತೀರ್ಮಾನಕೈಗೊಳ್ಳಲಾಗಿದೆ. ಇನ್ನೂ 15 ದಿನಗಳೊಳಗೆ ಫಲಾನುಭವಿಗಳ ಖಾತೆಗೆ ಹಣ ಬಿಡುಗಡೆ ಮಾಡುತ್ತಿದ್ದು, ಫಲಾನುಭವಿಗಳು ಕೊಳವೆಬಾವಿ ಕೊರೆಯಿಸಿಕೊಳ್ಳಬಹುದು ಎಂದು ಸಚಿವರು ತಿಳಿಸಿದರು.
ಹೊಳಲ್ಕೆರೆ ಶಾಸಕರು ಹಾಗೂ ಕೆಎಸ್‍ಆರ್‍ಟಿಸಿ ನಿಗಮದ ಅಧ್ಯಕ್ಷರಾದ ಎಂ.ಚಂದ್ರಪ್ಪ ಮಾತನಾಡಿ, ಕೋವಿಡ್-19 ಕಾರಣದಿಂದಾಗಿ ರಾಮಗಿರಿ ಆಸ್ಪತ್ರೆ ಉದ್ಘಾಟನೆ ಮಾಡಲು ಸಾಧ್ಯವಾಗಲಿಲ್ಲ. ಆದರೆ ಈದಿನ ಸಚಿವರಾದ ಬಿ.ಶ್ರೀರಾಮುಲು ಉದ್ಘಾಟನೆ ನೆರವೇರಿಸಿದ್ದಾರೆ. ಕಳೆದ ಬಾರಿ ಶಾಸಕನಾದ ಸಂದರ್ಭದಲ್ಲಿ ತುಪ್ಪದಹಳ್ಳಿ, ಶಿವಗಂಗ, ಮಲ್ಲಾಡಿಹಳ್ಳಿ, ಗೌಡಿಹಳ್ಳಿ, ಎನ್.ಜಿ.ಹಳ್ಳಿಯಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಕಟ್ಟಿಸಲಾಗಿದೆ.  ರಾಮಗಿರಿ ಗ್ರಾಮದಲ್ಲಿ ಸುಮಾರು 3 ಕೋಟಿ ವೆಚ್ಚದಲ್ಲಿ ಯಾವುದೇ ಸಿಟಿಗಿಂತ ಕಡಿಮೆ ಇಲ್ಲದಂತೆ ಸರ್ಕಲ್‍ಅನ್ನು ಅಭಿವೃದ್ದಿ ಪಡಿಸಲಾಗಿದೆ ಎಂದರು.
ಕ್ಷೇತ್ರದ 300 ಹಳ್ಳಿಗಳಿಗೂ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದಕ್ಕಾಗಿ 276 ಕೋಟಿ ಅನುದಾನ ಮಂಜೂರಾತಿ ಮಾಡಿಸಿ ವಾಣಿವಿಲಾಸ ಜಲಾಶಯದಿಂದ ನೀರು ತರುವ ಕೆಲಸ ಇನ್ನೂ ಒಂದು ತಿಂಗಳಲ್ಲಿ ಪ್ರಾರಂಭವಾಗಲಿದೆ. ಎರಡು ವರ್ಷದೊಳಗೆ ಎಲ್ಲರ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು. ಇದರ ಜೊತೆಗೆ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಪೈಪ್‍ಲೈನ್ ಹಾಕುವ ಕಾರ್ಯ ಶೇ.90ರಷ್ಟು ಮುಗಿದಿದೆ ಎಂದು ಹೇಳಿದರು.
ಇದಲ್ಲದೆ 250 ಕೋಟಿ ವೆಚ್ಚದಲ್ಲಿ ಕೆ.ಪಿ.ಟಿ.ಸಿ.ಎಲ್.ನಿಂದ ಕೋಟೆಹಾಳ್ ಸಮೀಪ ವಿತರಣಾ ಕೇಂದ್ರವನ್ನು ಸ್ಥಾಪಿಸಲಾಗುತ್ತಿದ್ದು ಇಡೀ ತಾಲ್ಲೂಕಿಗೆ ಮುಂದಿನ ದಿನಗಳಲ್ಲಿ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ; ರಂಗನಾಥ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ;ಜಯಸಿಂಹ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ರಾಜಶೇಖರ್, ಪುರಸಭೆ ಅಧ್ಯಕ್ಷರಾದ ಅಶೋಕ್, ಉಪಾಧ್ಯಕ್ಷರಾದ ರಮೇಶ್, ಸದಸ್ಯರಾದ ಮುರುಗೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

 

[t4b-ticker]

You May Also Like

More From Author

+ There are no comments

Add yours