ಹಸಿರು ಪರಿಸರ ರಹಿತ ಮನುಷ್ಯ ಶೂನ್ಯ :ಸ್ವಾಮೀಜಿ ವೃಂದ

 

 

 

 

ಜಾಗತಿಕ ತಾಪಮಾನ ಏರಿಕೆ ಜಾಗತಿಕ ಎಚ್ಚರಿಕೆ ಪ್ರಜ್ಞೆಯೊಂದಿಗೆ ಮನುಷ್ಯ ಬದುಕಬೇಕಿದೆ. ಹಸಿರು ಪರಿಸರ ರಹಿತ ಮನುಷ್ಯ ಶೂನ್ಯ. ಎಂದು ಯೋಗವನ ಬೆಟ್ಟದ ಅಧ್ಯಕ್ಷರಾದ ಡಾ.ಬಸವ ಕುಮಾರ್ ಸ್ವಾಮೀಜಿ ಹೇಳಿದರು.

ನಗರದ ಹೊರವಲಯದಲ್ಲಿರುವ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠದಲ್ಲಿ ಪರಿಸರ ದಿನಾಚರಣೆ ಪ್ರಯುಕ್ತ ಸಸಿಗಳನ್ನು ನೆಟ್ಟು ಮಾತನಾಡಿದ ಅವರು ಮನುಷ್ಯನಂತೆ ಸಸ್ಯ ಸಂಕುಲಗಳು ಬದುಕುತ್ತೀವೆ. ನಾವು ಬೆಳೆಸದಿದ್ದರೆ ಅವುಗಳು ಬೆಳೆಯುತ್ತವೆ. ಬೆಳೆದ ಜಾಗದಲ್ಲಿ ಮನುಷ್ಯ ಕೈಗಾರಿಕೆ ರಸ್ತೆ ಭವ್ಯ ಬಂಗಲೆಗಳನ್ನು ನಿರ್ಮಿಸಿಕೊಳ್ಳುತ್ತಾನೆ.ಆದರೆ ಮನುಷ್ಯನಂತೆ ಗಿಡಮರಗಳು ತನ್ನ ಬದುಕಿಗಾಗಿ ಪ್ರತಿಭಟಿಸುವುದಿಲ್ಲ, ಹೋರಾಡುವುದಿಲ್ಲ, ಅದರ ರೋದನೆ ನಮಗೆಲ್ಲಿ ಅರ್ಥವಾಗಬೇಕು? ಮರಗಿಡಗಳ ಕಣ್ಣೀರು ಕಾಣದಿರಬಹುದು. ಗರಗಸದ ಒಂದೊಂದು ಕೊರತೆ ಮರದ ನರನಾಡಿಗಳು ಹರಿಯುವಾಗ ತಾಯ ಗರ್ಭದ ಕರುಳಬಳ್ಳಿ ಕಿತ್ತಂತೆ ನೊಂದುಕೊಳ್ಳುತ್ತವೆ. ಎಷ್ಟೋ ವನಮೂಲಿಕೆಗಳ ಅರಿವು ನಮಗಿಲ್ಲ. ನಾವ್ಯಾರೂ ತುಂಬಲಾರದ ಬಣ್ಣಗಳು ಹೂವುಗಳಲ್ಲಿ ಅಡಗಿದೆ. ನವರಸಗಳಿಂದ ಹಣ್ಣುಗಳು ಬೀಗುತ್ತವೆ. ಇಂತಹ ಪರಿಸರ ಮನುಷ್ಯನಿಗೆ ಅವಶ್ಯಕ ಮತ್ತು ಅಗತ್ಯ. ಗಿಡಮರಗಳಿಲ್ಲದ ಜೀವನವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಜೀವನಶೈಲಿ ವರ್ತನೆಗಳು ಇಡೀ ಪರಿಸರವನ್ನು ಕಲುಷಿತಗೊಳಿಸುವೆ. ಇದರ ರಕ್ಷಣೆ ನಮ್ಮ ಕರ್ತವ್ಯ ಮತ್ತು ಹೊಣೆಗಾರಿಕೆ. ಗಣಿಗಾರಿಕೆಗಳು ಪರಿಸರವನ್ನು ಕೊಲ್ಲುತ್ತಿವೆ. ಆ ನಿಟ್ಟಿನಲ್ಲಿ ಸರಕಾರ ಕಠಿಣ ಕಾನೂನುಗಳನ್ನು ರೂಪಿಸಬೇಕು. ದೇವರು ನಮಗೆ ಹಚ್ಚಹಸಿರಿನ ಪ್ರಶಾಂತ ವಾತಾವರಣ  ಶುದ್ಧಗಾಳಿ ಬೆಳಕು ನೀರು ಭೂಮಿಯನ್ನು ನೀಡಿದ್ದಾನೆ. ಅದರ ಶುದ್ಧತೆ ಕಾಪಾಡಿಕೊಳ್ಳುವುದೇ ಪರಿಸರ ದಿನಾಚರಣೆಯ ಮಹತ್ವವಾಗಿದೆ ಎಂದು ತಿಳಿಸಿದರು.

 

 

ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ ಆಮ್ಲಜನಕದ ಮಹತ್ವ ಕೋರೋನಾ ಕಾಲದಲ್ಲಿ ಅರಿವಾಗುತ್ತಿದೆ. ಒಂದು ವೃಕ್ಷ ಕನಿಷ್ಠ ಮೂರರಿಂದ ನಾಲ್ಕು ಸಾವಿರ ಮಾನವ, ಪ್ರಾಣಿ, ಪಕ್ಷಿಗಳು ಉಸಿರಾಡುವಷ್ಟು ಧಾರೆ ಎರೆಯುತ್ತದೆ. ಆದರೆ ಮಾನವ ಅಭಿವೃದ್ಧಿಯ ಮುಖವಾಡದಲ್ಲಿ ಅರಣ್ಯ,ವೃಕ್ಷ ಹಸಿರು ಪರಿಸರ ನಾಶದೊಂದಿಗೆ ತನ್ನ ವಿನಾಶವನ್ನು ಆಮಂತ್ರಣಗೈಯುತ್ತಿದ್ದಾನೆ. ನಮ್ಮ ಜೀವನ ಶೈಲಿಯಿಂದಾಗಿಯೇ ಇಂದು ಸಾಕಷ್ಟು ಪರಿಸರ ನಾಶವು  ಸಂಭವಿಸುತ್ತಿದ್ದು, ಪರಿಸರ ಸ್ನೇಹಿಯಾಗಿ ಬದುಕುವ ವಿಧಾನವನ್ನು ಕರಗತ ಮಾಡಿಕೊಳ್ಳಬೇಕು ಎಂದು ಹೇಳಿದರು. ಈ ಭೂಮಿಯು ಪ್ರತಿಯೊಬ್ಬರ ಅವಶ್ಯಕತೆಗಳನ್ನು ಪೂರೈಸುವಷ್ಟು ಶಕ್ತವಾಗಿದೆಯೇ
ಹೊರತು ಪ್ರತಿಯೊಬ್ಬರ ದುರಾಸೆಯನ್ನಲ್ಲ. ಸೃಷ್ಟಿಯ ಕಿರೀಟ ಎನಿಸಿಕೊಂಡ ಮನುಷ್ಯ ದೇವರ ಸೃಷ್ಟಿಯ ಭಾಗವಾದ ಹಸಿರು ಪರಿಸರವನ್ನು ರಕ್ಷಿಸುವ ಹೊಣೆ ಹೊರಬೇಕು. ನೆಲ, ಜಲ, ವಾಯು, ಆಕಾಶ, ಬೆಟ್ಟ ಗುಡ್ಡ, ಕಾಡು ಮೇಡುಗಳು, ಕೆರೆಕಟ್ಟೆ, ನದಿ ಸರೋವರ, ಸಸ್ಯರಾಶಿ, ಪ್ರಾಣಿವರ್ಗ ಇವುಗಳನ್ನೆಲ್ಲಾ ಒಳಗೊಂಡ ಪರಿಸರ ಜೀವಿಗಳ ಹಾಗೂ ಮಾನವನ ಅಸ್ತಿತ್ವಕ್ಕೆ ಆಧಾರ ಮತ್ತು ಬದುಕಿಗೆ ಆಸರೆ. ಇವುಗಳ ರಕ್ಷಣೆ ಹಾಗೂ ಸಮತೋಲನ ಮುಖ್ಯೋದ್ಯೇಶವೇ ಪರಿಸರ ದಿನಾಚರಣೆ ಮಹತ್ವವಾಗಿದೆ ಎಂದು ತಿಳಿಸಿದರು.

ಮಡಿವಾಳ ಗುರುಪೀಠದ ಜಗದ್ಗುರು ಶ್ರೀ ಬಸವ ಮಾಚಿದೇವ ಸ್ವಾಮೀಜಿ ಮಾತನಾಡಿ
ವಿಶ್ವಪರಿಸರ ದಿನವೆಂದರೆ ಎಂದಿನಂತೆ ಗಿಡ ನೆಡುವುದು. ಪರಿಸರ ಉಳಿಸುವ ಕುರಿತು ಎರಡು ಮಾತನಾಡುವುದು ಮಾತ್ರವೇ ಆಗಬಾರದು. ಈ ನಿಟ್ಟಿನಲ್ಲಿ ಪ್ರೀತಿ,
ಶ್ರದ್ದೆ ಮತ್ತು ನಿಷ್ಠೆಯಿಂದ ಹಸಿರು ಪರಿಸರ ಸಂರಕ್ಷಣೆಗೆ ನಾವು ಪಣತೊಡುವ ಅಗತ್ಯವಿದೆ. ನಮ್ಮ ಈ ಪ್ರಾಮಾಣಿಕ ಪ್ರಯತ್ನ ಮುಂದಿನ ಪೀಳಿಗೆಗೆ ಸಹಕರವಾಗಲಿ. ಸಹಸ್ರಾರು
ವರ್ಷಗಳಿಂದ ಪ್ರಕೃತಿಯು ನಮ್ಮ ಹಿತ ಕಾಪಾಡುತ್ತಿರುವಂತೆ ನಮ್ಮಿಂದಲೂ ಅದು ಪ್ರಾಮಾಣಿಕ ಬದ್ಧತೆಯನ್ನು ಬೇಡುತ್ತಿದೆ. ಅದರ ಬೇಡಿಕೆಯನ್ನು ಪೂರೈಸುವ ಜವಾಬ್ದಾರಿ ಪ್ರಕೃತಿಯನ್ನು ಅವಲಂಬಿಸಿರುವ ನಮ್ಮೆಲ್ಲರ ಹೊಣೆಗಾರಿಕೆಯಾಗಲಿ ಎಂದು ತಿಳಿಸಿದರು.

ಮೇದಾರ ಗುರುಪೀಠದ ಶ್ರೀ ಇಮ್ಮಡಿ ಬಸವ ಕೇತೇಶ್ವರ ಸ್ವಾಮೀಜಿ ಮಾತನಾಡಿ ಇವತ್ತು ಪರಿಸರ ದಿನಾಚರಣೆ. ಸಂತಸಪಡುವ ದಿನವಲ್ಲ. ಕೋವಿಡ್-19 ವೈರಾಣು ಮಾನವಕುಲವನ್ನೆಲ್ಲ ಕಂಗೆಡಿಸಿದೆ. ಧಗೆ ಹೆಚ್ಚಿದೆ, ಇದು ಧರೆಹತ್ತಿ ಉರಿವ ಕಾಲ. ಮಾನವನ ದುರಾಶೆ ಭೂಮಿಯನ್ನ ಬಂಜರಾಗಿಸಿದೆ. ಮುಗಿಲು ಒಣಗಿದೆ. ಗಾಳಿ ವಿಷವಾಗಿದೆ. ಶುದ್ಧ ನೀರು, ಹಾಗೆಂದರೇನು? ಇದು ಇಂದಿನ ದುಸ್ಥಿತಿ! ಮನುಷ್ಯ ಮಾಡಿದ ಪಾಪಕೃತ್ಯಗಳೆಲ್ಲದರ ಪ್ರತಿಫಲ ಉಣ್ಣುತ್ತಿರುವವರು ಎಲ್ಲ ಜೀವರಾಶಿಗಳು. ಅವುಗಳ ಗೋಳು ಕೇಳುವವರಾರು? ‘ನೀನತ್ತುದಕೆ ತಕ್ಕುದ ಮಾಡುವ ಕೂಡಲಸಂಗಮದೇವಾ’ ಎಂಬಂತೆ ಅವುಗಳ ಅಳುವಿಗೆ, ಅಳಿವಿಗೆ ಕಾರಣರಾದ ನಾವು ಇನ್ನೆಷ್ಟು ಭೀಕರ ದಿನಗಳನ್ನು ಎದುರಿಸಬೇಕಾಗಿದೆಯೋ! ನೆನೆಸಿಕೊಂಡರೆ ಉಗಾಂಡ, ಇಥಿಯೋಫಿಯಾಗಳು ಕಣ್ಮುಂದೆ ಸುಳಿಯುತ್ತವೆ. ಅಲ್ಲಿನ ಪರಿಸ್ಥಿತಿ ಎಲ್ಲಿಯೂ ಯಾರಿಗೂ ಬಾರದಿರಲಿ. ಪರಿಸರ ದಿನಾಚರಣೆ ಕೇವಲ ಇಂದಿಗೆ ಸೀಮಿತವಾಗದೇ, ಭಾಷಣಗಳ ಭೂಷಣವಾಗದೇ ಗಿಡ, ಮರ, ಪ್ರಾಣಿ, ಪಕ್ಷಿಗಳಂತಹ ಜೀವ ವೈವಿಧ್ಯಗಳ ಜೊತೆ ಸಹಜೀವಿಗಳಾಗಿ ಬದುಕಲು ಸಂಕಲ್ಪಿಸೋಣ ಎಂದು ತಿಳಿಸಿದರು.

[t4b-ticker]

You May Also Like

More From Author

+ There are no comments

Add yours