ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ದಿಢೀರ್ ಭೇಟಿ ಮತ್ತು ಪರಿಶೀಲನೆ

 

 

 

 

ಚಿತ್ರದುರ್ಗ:ಮಂಗಳವಾರ ಚಿತ್ರದುರ್ಗ ಜಿಲ್ಲೆಗೆ ಆಗಮಿಸಿದ್ದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ ಜಿಲ್ಲೆಯ ವಿವಿದೆಡೆ ಭೇಟಿನೀಡಿ ಪರಿಶೀಲನೆ ನಡೆಸಿದರು.

ಬೆಳಗ್ಗೆ 10 ಗಂಟೆಗೆ ನಗರದ ಹೊರವಲಯದಲ್ಲಿರುವ ವೆಂಕಟೇಶ್ವರ ಬಡಾವಣೆಯಲ್ಲಿರುವ ಅಂಗನವಾಡಿಗೆ ದಿಢೀರ್ ಭೇಟಿನೀಡಿರು. ದಾಖಲೆ ಪರಿಶೀಲಿಸಿದಾಗ ಒಟ್ಟು 23 ಮಕ್ಕಳು ದಾಖಲಾಗಿದ್ದರೂ ಭೇಟಿಯ ಸಮಯದಲ್ಲಿ ಅಂಗನವಾಡಿಯಲ್ಲಿ ಕೇವಲ ನಾಲ್ಕು ಮಕ್ಕಳು ಹಾಜರಿದ್ದರು. ಅಲ್ಲದೆ ಮಾರ್ಚ್ 7 ನೇ ತಾರೀಖಿನಿಂದ ಮಕ್ಕಳ ಹಾಜರಾತಿ ಹಾಕಿಲ್ಲದಿರುವುದು ಕಂಡುಬಂದಿತು. ಅಡುಗೆ/ ದಾಸ್ತಾನು ಕೊಠಡಿಗೆ ಭೇಟಿನೀಡಿದಾಗ ಯಾವುದೇ ಅಡುಗೆ ಸಾಮಗ್ರಿ ಕಾಣಲಿಲ್ಲ, ಈ ಬಗ್ಗೆ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ರಂಗಮ್ಮನವರನ್ನು ಪ್ರಶ್ನಿಸಿದಾಗ ಫೆಬ್ರವರಿ ತಿಂಗಳಿಂದ ಈ ವರೆಗೂ ಅಂಗನವಾಡಿಗೆ ಪಡಿತರ ವಿತರಣೆಯಾಗಿಲ್ಲ, ಅಕ್ಕಪಕ್ಕದ ಮನೆಯಿಂದ ಧವಸ ಧಾನ್ಯ ಪಡೆದು ಮಕ್ಕಳಿಗೆ ಆಹಾರ ವಿತರಣೆ ಮಾಡುತ್ತಿರುವುದಾಗಿ ತಿಳಿಸಿದರು. ಶೌಚಾಲಯಕ್ಕೆ ನೀರಿನ ನಲ್ಲಿ ಇಲ್ಲದೆ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದು ಕಂಡುಬಂದಿತು. ಈ ಸಂಬಂಧ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಮುಂದಿನ ವಿಚಾರಣೆ ನಡೆಸುವುದಾಗಿ ಸದಸ್ಯರು ತಿಳಿಸಿದರು.

 

 

ನಂತರ ಹಿರಿಯೂರಿನ ಐಮಂಗಲ ಗ್ರಾಮದ ಅಂಗನವಾಡಿಗೆ ಭೇಟಿನೀಡಿ ಪರಿಶೀಲಿಸಲಾಗಿ ಅಲ್ಲಿ ಅಂಗನವಾಡಿ ಶಿಥಿಲಗೊಂಡಿದ್ದು, ಮಳೆ ಬಂದಾಗ ರಸ್ತೆಯ ನೀರೆಲ್ಲಾ ಅಂಗನವಾಡಿ ಸೇರುವುದಾಗಿ ಅಲ್ಲಿನ ಕಾರ್ಯಕರ್ತೆ ತಮ್ಮ ಅಳಲನ್ನು ತೋಡಿಕೊಂಡರು. ಬಾಲವಿಕಾಸ ಸಮಿತಿಯ ನಡಾವಳಿ, ದಾಸ್ತಾನು ವಹಿ, ಹಾಜರಾತಿ ಪುಸ್ತಕ ಹೀಗೆ ಹಲವು ದಾಖಲೆಗಳನ್ನು ಪರಿಶೀಲನೆ ನಡೆಸಿ ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಿವರಣೆ ಪಡೆಯುವುದಾಗಿ ತಿಳಿಸಿದರು.

ಐಮಂಗಲ ಗ್ರಾಮ ಪಂಚಾಯ್ತಿಗೆ ಭೇಟಿನೀಡಿದ ಸದಸ್ಯರು ಮಹಿಳೆ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿಯ ದಾಖಲೆಗಳನ್ನು ಪರಿಶೀಲಿಸಿದರು. ಮಕ್ಕಳ ಹಕ್ಕುಗಳ ಗ್ರಾಮ ಸಭೆ ನಡೆಸಿರುವ ಬಗ್ಗೆ ಮಾಹಿತಿ ಪಡೆದರು. ಸದರಿ ಪಂಚಾಯ್ತಿಯಲ್ಲಿ ಹಿಂದಿನ ವರ್ಷಗಳಲ್ಲಿ ಮಕ್ಕಳ ಗ್ರಾಮ ಸಭೆ ನಡೆಸಿದ ಬಗ್ಗೆ ಯಾವುದೇ ದಾಖಲೆಗಳನ್ನು ನಿರ್ವಹಿಸಿಲ್ಲದಿರುವುದನ್ನು ಗಮನಿಸಿದರು. ನಿಯಮಾನುಸಾರ ತಮ್ಮ ವ್ಯಾಪ್ತಿಯಲ್ಲಿನ ಮಕ್ಕಳ ಅಂಕಿಸಂಕಿಗಳನ್ನು ಸಂಗ್ರಹಿಸಿಲ್ಲದಿರುವುದು, ಮಕ್ಕಳ ಸಹಾಯವಾಣಿ ಸಂಖ್ಯೆ ಪ್ರದರ್ಶಿಸದಿರುವುದು ಹಾಗೂ ಗ್ರಾಮ ಪಂಚಾಯ್ತಿ ಮಟ್ಟದ ಶಿಕ್ಷಣ ಕಾರ್ಯಪಡೆ ರಚಿಸದೇ ಇದ್ದರೂ ಈ ಎಲ್ಲವನ್ನೂ ಮಾಡಿರುವ ಬಗ್ಗೆ ಆಯೋಗಕ್ಕೆ ತಪ್ಪು ಮಾಹಿತಿ ನೀಡಿರುವುದನ್ನು ಗಮನಿಸಿ ಆಕ್ಷೇಪ ವ್ಯಕ್ತಪಡಿಸಿದರು.

ತದನಂತರ ಐಮಂಗಲ ಪೊಲೀಸ್ ಠಾಣೆಗೆ ಭೇಟಿನೀಡಿ ಪರಿಶೀಲಿಸಿದ ಡಾ.ತಿಪ್ಪೇಸ್ವಾಮಿ ಕೆ.ಟಿ. ಮಕ್ಕಳ ವಿಶೇಷ ಪೊಲೀಸ್ ಘಟಕದ ಕಾರ್ಯವೈಖರಿ, ಮಕ್ಕಳ ಪ್ರಕರಣಗಳ ರಿಜಿಸ್ಟರ್, ತೆರೆದ ಮನೆ ಕಾರ್ಯಕ್ರಮ ಅನುಷ್ಠಾನದ ದಾಖಲೆಗಳನ್ನು ಪರಿಶೀಲಿಸಿದರು. ಬಾಲ ನ್ಯಾಯ ಕಾಯಿದೆಯನುಸಾರ ಸದರಿ ಘಟಕ ಕೆಲಸ ಮಾಡುತ್ತಿರುವುದಕ್ಕೆ ಅಭಿನಂದಿಸಿದರು. ಅಲ್ಲದೆ ಸದರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮಕ್ಕಳ ಜೊತೆಗೆ ಪೊಲೀಸ್ ಇಲಾಖೆ ತೆರೆದ ಮನೆ ಕಾರ್ಯಕ್ರಮದ ಮೂಲಕ ಮತ್ತಷ್ಟು ಕ್ರಿಯಾಶೀಲವಾಗಿ ತೊಡಗಿಕೊಂಡು ಮಕ್ಕಳ ರಕ್ಷಣೆಗೆ ಕಾರ್ಯನಿರ್ವಹಿಸಲು ಸೂಚಿಸಿದರು.

ಭೇಟಿಯ ಸಮಯದಲ್ಲಿ ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ  ಸವಿತಾ ಹಾಗೂ ಸಿಬ್ಬಂಧಿಗಳು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours