ಸಮಾಜದ ಹಿತಕ್ಕಾಗಿ ನಿರಂತರ ಶ್ರಮಿಸುವ ಪತ್ರಿಕಾ ವೃತ್ತಿಯನ್ನು ಎಲ್ಲಾರೂ ಗೌರವಿಸೋಣ: ಟಿ.ರಘುಮೂರ್ತಿ

 

 

 

 

ಚಳ್ಳಕೆರೆ: ಸರ್ಕಾರದ ಆಡಳಿತ ಮತ್ತು  ಜನರ ನಡುವೆ  ಸ್ನೇಹ ಸೇತುವೆಯಾಗಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವ ಪತ್ರಕರ್ತರ ಕಾರ್ಯ ಶ್ಲಾಘನೀಯ. ತಮ್ಮ ಎಲ್ಲಾ ತೊಂದರೆಗಳನ್ನು ಬದಿಗೊತ್ತಿ ಸಮಾಜದ ಹಿತಕ್ಕಾಗಿ ನಿರಂತರ ಶ್ರಮಿಸುವ ಪತ್ರಿಕಾ ವೃತ್ತಿಯ ಗೌರವ, ಘನತೆಯನ್ನು ಗೌರವಿಸುವ ಕೆಲಸ ಎಲ್ಲರಿಂದ ಆಗಬೇಕೆಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು. 
ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಪತ್ರಿಕಾದಿನಾಚರಣೆ (Press Day)
ಮತ್ತು ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಗಿಡಕ್ಕೆ ನೀರುಎರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು. 
ಕಳೆದ ಹಲವಾರು ವರ್ಷಗಳಿಂದ ಪತ್ರಕರ್ತರ ಸಮಸ್ಯೆಗಳನ್ನು ಹತ್ತಿರದಿಂದ ನೋಡಿ ಸಾಧ್ಯವಾದಷ್ಟು ಮಟ್ಟಿಗೆ ನಾನು ಅವುಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್, ಯಾವುದೇ ತಾರತಮ್ಯವಿಲ್ಲದೆ ಸ್ಥಳೀಯ ಹಾಗೂ ರಾಜ್ಯಮಟ್ಟದ ಪತ್ರಿಕೆಗಳಿಗೆ ಸರ್ಕಾರದ ಜಾಹೀರಾತು, ಸ್ಥಳೀಯ ಪತ್ರಕರ್ತರಿಗೆ ನಿವೇಶನ, ಮನೆ ಮುಂತಾದ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಲ್ಲದೆ, ಮುಖ್ಯಮಂತ್ರಿಗಳ ಮೇಲು ಒತ್ತಡ ಹೇರುವ ಭರವಸೆ ನೀಡಿದರು. 
ನಮ್ಮದೇ ಸರ್ಕಾರ ರಾಜ್ಯದಲ್ಲಿ ಆಡಳಿತದಲ್ಲಿ ಇದ್ದು ಪತ್ರಕರ್ತರ ಸಮಸ್ಯೆಗಳಿಗೆ ನಾನು ಸಹ ಸೇತುವೆ ಆಗಿ ಕೆಲಸ ಮಾಡುತ್ತೇನೆ. ನನ್ನ ಗಮನಕ್ಕೆ ಬಂದಂತಹ ಎಲ್ಲಾ ವನ್ನು ನನ್ನ ಹಂತದಲ್ಲಿ  ಸರಿ ಮಾಡುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದೇನೆ. ಮುಂದೆ ಸಹ ಎಲ್ಲಾರ ಜೊತೆ ಏನೇ ಸಮಸ್ಯೆ ಬಂದರು ಜೊತೆಯಾಗಿ ನಿಲ್ಲುತ್ತೇನೆ ಎಂದು ತಿಳಿಸಿದರು. 
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ದಿನೇಶ್‌ಗೌಡಗೆರೆ, ಪತ್ರಕರ್ತರು ಒಂದೇ ಕುಟುಂಬದ ಸದಸ್ಯರು ಅಲ್ಪಸ್ವಲ್ಪ ಬೇದಭಾವವಿದ್ದರೂ ವೃತ್ತಿ ನಿರ್ವಹಣೆ ವಿಚಾರದಲ್ಲಿ ಯಾರಲ್ಲೂ ತಾರತಮ್ಯವಿಲ್ಲ. ಡಿ.ವಿ.ಗುಂಡಪ್ಪನವರು ಸ್ಥಾಪಿಸಿದ ಕಾರ್ಯನಿರತರ ಪತ್ರಕರ್ತರ ಸಂಘ ೯೨ರ ವರ್ಷಕ್ಕೆ ಕಾಲಿಟ್ಟಿದೆ. ಆದರೂ ರಾಜ್ಯ ಸರ್ಕಾರ ಗ್ರಾಮೀಣ ಭಾಗದ ಪತ್ರಕರ್ತರ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ತೃಪ್ತಿಕಾರವಾದ ಕಾರ್ಯನಿರ್ವಹಿಸಿಲ್ಲ. ಶಾಸಕರು ಈ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸುವಂತೆ ಮನವಿ ಮಾಡಿದರು. 
ತಾಲ್ಲೂಕು ಪತ್ರಿಕಾ ಸಂಘದ ಉಪಾಧ್ಯಕ್ಷ ಕರ‍್ಲಕುಂಟೆ ತಿಪ್ಪೇಸ್ವಾಮಿ ಎಲ್ಲರನ್ನೂ ಸ್ವಾಗತಿಸಿ, ಸ್ಥಳೀಯ ಪತ್ರಕರ್ತರ ಬಗ್ಗೆ ಹಾಗೂ ಅವರ ಕಾರ್ಯದ ಬಗ್ಗೆ ಶಾಸಕರಿಗೆ ಅಪಾರವಾದ ಗೌರವವಿದೆ. ಎಲ್ಲಾ ಪತ್ರಕರ್ತರನ್ನು ಗೌರವಿಸುವ ಗುಣ ಅವರಲ್ಲಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಎಲ್ಲಾ ಪತ್ರಕರ್ತರ ಪರವಾಗಿ ಮನವಿ ಮಾಡುವೆ ಎಂದರು. 
ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ  ಪರಿಷತ್ ಸದಸ್ಯ, ಜಿಲ್ಲಾ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತರು, ಹಿರಿಯ ಪತ್ರಕರ್ತ  ಎಂ.ಎನ್.ಅಹೋಬಲಪತಿ ಮಾತನಾಡಿ, ಪತ್ರಕರ್ತರ ಸಂಘವನ್ನು ಸಂಸ್ಥಾಪಿಸಿದ ಡಿ.ವಿ.ಗುಂಡಪ್ಪನವರ ಬಗ್ಗೆ ಎಲ್ಲರಿಗೂ ಅಪಾರ ಗೌರವವಿದೆ. ಆದರೆ, ಇದೇ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಹ ಬಹಿಷ್ಕಾರ ಭಾರತ, ಸತ್ಯಾನ್ವೇಷಣೆ, ಮೂಕನಾಯಕ ಎಂಬ ಮೂರು ಪತ್ರಿಕೆಗಳನ್ನು ಪ್ರಕಟಿಸಿ ಅವುಗಳ ಮೂಲಕ ಜನರ ಜಾಗೃತಿ ಮೂಡಿಸಿದ್ದು, ಅವರ ಭಾವಚಿತ್ರಕ್ಕೂ ಅನುವು ಮಾಡಿಕೊಡುವಂತೆ ಮನವಿ ಮಾಡಿದರು. ಪತ್ರಕರ್ತರಿಗೆ ಸೌಲಭ್ಯ ನೀಡುವ ವಿಚಾರದಲ್ಲಿ ಕಡೆಪಕ್ಷ ಮಾಧ್ಯಮದಲ್ಲಿ ೧೦ ವರ್ಷ ಸೇವೆ ಮಾಡಿದವರಿಗೆ ಆದ್ಯತೆ ನೀಡಬೇಕು ಎಂದರು. 
ಮತ್ತೊರ್ವ ರಾಷ್ಟ್ರೀಯ  ಮಂಡಳಿ ಸದಸ್ಯ ಸಿ. ಹೆಂಜಾರಪ್ಪ ಮಾತನಾಡಿ, ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪತ್ರಿಕೆಗಳಿಗೆ ಮಾತ್ರ ವಿಶೇಷ ಜಾಹೀರಾತು ನೀಡುವುದನ್ನು ತಡೆಯಲಾಗಿದೆ. ಯಾವುದೇ ತಾರತಮ್ಯವಿಲ್ಲದೆ ರಾಜ್ಯ, ಪ್ರಾದೇಶಿಕ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪತ್ರಿಕೆ ಸರ್ಕಾರದಿಂದ ಜಾಹೀರಾತು ಕಡೆಪಕ್ಷ ತಿಂಗಳಿಗೆ ಎರಡ್ಮೂರಾದರೂ ನೀಡಬೇಕೆಂದು ಮನವಿ ಮಾಡಿದರು. 
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪಿ.ತಿಪ್ಪೇಸ್ವಾಮಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ, ಪತ್ರಕರ್ತರು ಪ್ರಾಮಾಣಿಕರು ಮತ್ತು ಸತ್ಯವನ್ನು ಪ್ರತಿಪಾದಿಸುವ ಮುಂಚೂಣಿ ಶಿಸ್ತಿನ ಸಿಪಾಯಿಗಳು. ಪೊಲೀಸರಂತೆ ಅವರೂ ಸಹ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಾರೆ. ಆದರೆ, ಸರ್ಕಾರ ಇವರ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲವೆಂದರು. ಡಿವೈಎಸ್ಪಿ ಟಿ.ಬಿ.ರಾಜಣ್ಣ ಮಾತನಾಡಿ, ಪೊಲೀಸ್ ಮತ್ತು ಪತ್ರಕರ್ತರು ಸಮಾಜವನ್ನು ತಿದ್ದುವ, ಪರಿವರ್ತಿಸುವ ಗುರುತರ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಬಂದಿದ್ದಾರೆಂದರು. 
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಸಿದ್ದಯ್ಯನಕೋಟೆಯ ಬಸವಲಿಂಗಸ್ವಾಮೀಜಿ ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಟಿ.ಜೆ.ತಿಪ್ಪೇಸ್ವಾಮಿ ಮಾತನಾಡಿ, ಚಳ್ಳಕೆರೆ ಕ್ಷೇತ್ರದಲ್ಲಿ ಶಾಸಕರು ಅಭಿವೃದ್ದಿ ಕಾರ್ಯಕ್ರಮದ ಮೂಲಕ ಖ್ಯಾತಿಯಾಗಿದ್ಧಾರೆ. ಅದೇ ರೀತಿ ಪತ್ರಕರ್ತರು ಕಳೆದ ಸುಮಾರು ೩೦ ವರ್ಷಗಳಿಂದ ಯಾವುದೇ ಸೌಲಭ್ಯವಿಲ್ಲದೆ ಸೇವೆ ಸಲ್ಲಿಸುತ್ತಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಶಾಸಕರು ರಾಜ್ಯಕ್ಕೆ ಮಾದರಿಯಾಗಬೇಕೆಂದರು. 
ಕಾರ್ಯಕ್ರಮದಲ್ಲಿ ಡಾ.ಬಿ.ಚಂದ್ರನಾಯ್ಕ, ಪಿ.ತಿಪ್ಪೇಸ್ವಾಮಿ,  ನಾವೆಲ್ಲಾ ಮಹೇಶ್, ಗೋಪನಹಳ್ಳಿ ಶಿವಣ್ಣ, ಅಪ್ಪುವೀರೇಶ್, ಲಕ್ಷö್ಮಣ್‌ಪಾಳೇಗಾರ, ಜಿಲ್ಲಾ ಖಜಾಂಚಿ ಡಿ.ಕುಮಾರಸ್ವಾಮಿ, ಜೆ.ಮಂಜುನಾಥ, ಎಚ್.ಟಿ.ಮಂಜುನಾಥ ಮುಂತಾದವರು ಸನ್ಮಾನಿಸಿದರು. ರೈತ ಸಂಘದ ಹಿರಿಯ ಮುಖಂಡ ರೆಡ್ಡಿಹಳ್ಳಿವೀರಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದಕುಮಾರ್, ಪತ್ರಕರ್ತರಾದ ಬೊಮ್ಮಲಿಂಗಪ್ಪ, ರಾಮಾಂಜನೇಯ, ಬೆಳಗೆರೆ ಸುರೇಶ್, ಚಿದಾನಂದಮೂರ್ತಿ, ಗಂಗಾಧರ, ಜೆ.ತಿಮ್ಮಯ್ಯ, ಭಾರತಿಚಿತ್ತಯ್ಯ, ಎಸ್‌ಟಿಡಿ ರಾಜು, ಎಚ್.ಶಿವಮೂರ್ತಿ, ಕೆ.ಚಿತ್ತಯ್ಯ, ಬಿ.ಲೋಕೇಶ್ ಉಪಸ್ಥಿತರಿದ್ದರು. 

ಬಾಕ್ಸ್  

ಪತ್ರಕರ್ತರ ವೃತ್ತಿ ಅತ್ಯಂತ ಪವಿತ್ರವಾದದ್ದು, ಜನ ಮತ್ತು ಸಮಾಜದ ಹಿತವನ್ನು ಕಾಪಾಡುವ ಹೊಣೆಗಾರಿಕೆ ಹೊತ್ತ ಪತ್ರಕರ್ತರ ಕಾರ್ಯ ವಿಶೇಷತೆಯಿಂದ ಕೂಡಿದೆ . ವೃತ್ತಿಯ ಘನತೆ ಮತ್ತು ಮೌಲ್ಯವನ್ನು ಎತ್ತಿಹಿಡಿಯಲು ಪತ್ರಕರ್ತರು ಮುಂದಾಗಬೇಕು. 

ಟಿ.ರಘುಮೂರ್ತಿ 

ಶಾಸಕರು ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ 

[t4b-ticker]

You May Also Like

More From Author

+ There are no comments

Add yours