ಹೊಸದುರ್ಗ: ಕಾಡುಗೊಲ್ಲ ಜನಾಂಗವು (Wild race)
ತನ್ನದೇ ಆದ ಕಟ್ಟುಪಾಡುಗಳೊಂದಿಗೆ ಇಂದಿಗೂ ಸಹ ನಾಗರಿಕ ಸಮಾಜದಿಂದ ದೂರ ಉಳಿದು ಬದುಕುತ್ತಿದೆ. ಇಂತಹ ಬುಡಕಟ್ಟು ಸಂಸ್ಕೃತಿಯನ್ನು ಹೊಂದಿರುವ ಕಾಡುಗೊಲ್ಲ ಜನಾಂಗ ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ತುಂಬಾ ಹಿಂದುಳಿದಿದ್ದು, ಕೂಡಲೇ ಕಾಡುಗೊಲ್ಲ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಸೋಮವಾರ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ಒತ್ತಾಯಿಸಲಾಯಿತು.
ಪ್ರತಿಭಟನೆಯನ್ನು ನೇತೃತ್ವ ವಹಿಸಿ ತಾಲೂಕು ಕಾಡುಗೊಲ್ಲ ಸಂಘದ ಅಧ್ಯಕ್ಷ ಟಿ. ರವೀಂದ್ರ ಮಾತನಾಡಿ, ರಾಜ್ಯದ್ಯಂತ ಕಾಡುಗೊಲ್ಲ ಜನಾಂಗ ಹಲವು ದಶಕಗಳಿಂದಲೂ ನಮ್ಮನ್ನು ಪರಿಶಿಷ್ಟ ಪಂಗಡ ಮೀಸಲಾತಿ ಪಟ್ಟಿಗೆ ಸೇರ್ಪಡೆ ಮಾಡಬೇಕೆಂದು ಪ್ರತಿಭಟನೆ ಮೂಲಕ ಒತ್ತಾಯ ಸರ್ಕಾರಗಳಿಗೆ ಮಾಡಲಾಗುತ್ತಿದೆ. ಆದರೆ, ಈ ವಿಷಯದಲ್ಲಿ ಸರ್ಕಾರಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಬೇಸರದ ಸಂಗತಿಯಾಗಿದೆ. ಕೂಡಲೇ ಕಾಡುಗೊಲ್ಲರನ್ನು ಎಸ್ಟಿ ಪಟ್ಟಿಗೆ ಸೇರ್ಪಡೆ ಮಾಡಬೇಕು. ಅಲೆಮಾರಿ ಮತ್ತು ಅರೆ ಅಲೆಮಾರಿ ಪಟ್ಟಿಗೆ ಸೇರಿಸಬೇಕು. ಕೇಂದ್ರ ಸರ್ಕಾರದ ಇತರೆ ಹಿಂದುಳಿದ ಜಾತಿಗಳು ಮೀಸಲಾತಿ ಪಟ್ಟಿಯಲ್ಲಿ ಕಾಡುಗೊಲ್ಲ ಜನಾಂಗವನ್ನು ಸೇರ್ಪಡೆ ಮಾಡಲು ಶಿಫಾರಸ್ಸು ಮಾಡಬೇಕು. ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರು ಹಾಗೂ ಇತರ ನಿರ್ದೇಶಕರು ಮತ್ತು ಸದಸ್ಯರನ್ನು ಕೂಡಲೇ ನೇಮಕ ಮಾಡಬೇಕು. ಜಾತಿ ಮತ್ತು ಆದಾಯ ಹಾಗೂ ಸಿಂಧುತ್ವ ಪ್ರಮಾಣ ಪತ್ರಗಳನ್ನು ವಿಳಂಬವಿಲ್ಲದೆ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ತಾಲೂಕು ಕಾಡುಗೊಲ್ಲ ಸಂಘದ ಗೌರವಾಧ್ಯಕ್ಷ ರಾಮಣ್ಣ, ಜಿಲ್ಲಾ ಕಾಂಗ್ರೆಸ್ ಒಬಿಸಿ ಘಟಕದ ಕಾರ್ಯದರ್ಶಿ ಎಂ.ಮೂರ್ತಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ್, ತಾಲೂಕು ಕಾಡುಗೊಲ್ಲ ಸಂಘದ ಉಪಾಧ್ಯಕ್ಷರಾದ ರಾಮಲಿಂಗಪ್ಪ, ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿಗಳಾದ ಕರಿಯಪ್ಪ, ಯಶವಂತ, ಕಾರ್ಯದರ್ಶಿ ಚಿತ್ತಪ್ಪ, ಯುವ ಮುಖಂಡರಾದ ಶ್ರೀನಿವಾಸ ಸಣ್ಣಕಿಟ್ಟದಹಳ್ಳಿ, ಈಶ್ವರ್ ಮತ್ತು ಅಂಜನ್ ಕುಮಾರ್ ಸೇರಿದಂತೆ ಇತರ ಮುಖಂಡರು ಹಾಗೂ ಸಮುದಾಯದ ನೂರಾರು ಬಂಧುಗಳು ಪಾಲ್ಗೊಂಡಿದ್ದರು.
ಬಾಕ್ಸ್ :
*ಕಾಂತರಾಜ್ ವರದಿಯನ್ನು ಅನುಷ್ಠಾನಗೊಳಿಸಿ.*
ಬುಡಕಟ್ಟು ಸಂಸ್ಕೃತಿಯನ್ನು ಹೊಂದಿರುವ ಕಾಡುಗೊಲ್ಲ ಸಮುದಾಯ ರಾಜ್ಯದ 12 ಜಿಲ್ಲೆಗಳಲ್ಲಿ, 40 ತಾಲೂಕುಗಳಲ್ಲಿ, 1250ಕ್ಕೂ ಹೆಚ್ಚಿನ ಹಟ್ಟಿಗಳಲ್ಲಿ ವಾಸವಾಗಿದೆ. ನಮ್ಮ ಸಮುದಾಯ ಎಲ್ಲಾ ಕ್ಷೇತ್ರಗಳಲ್ಲಿಯೂ ಹಿಂದುಳಿದೆ. ರಾಜ್ಯದ 6 ಜಿಲ್ಲೆಗಳಲ್ಲಿ ಕಾಡುಗೊಲ್ಲ ಸಮುದಾಯ ಚುನಾವಣೆಯಲ್ಲಿ ನಿರ್ಣಾಯಕವಾಗಿದೆ. ಆದರೆ, ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದೆ ಕಡೆಗಣನೆ ಮಾಡುತ್ತಿರುವುದು ಬೇಸರ ತರಿಸಿದೆ. ಸರ್ಕಾರ ಶೀಘ್ರವೇ ಹಿಂದುಳಿದ ವರ್ಗಗಳ ಆಯೋಗದ ನಿಕಟಪೂರ್ವ ಅಧ್ಯಕ್ಷರಾದ ಡಾ. ಕಾಂತರಾಜು ವರದಿಯನ್ನು ಅನುಷ್ಠಾನಗೊಳಿಸಬೇಕು. ಇದರಿಂದಾಗಿ ಹಿಂದುಳಿದಿರುವ ಕಾಡುಗೊಲ್ಲ ಸಮಾಜಕ್ಕೆ ರಾಜಕೀಯವಾಗಿ ಪ್ರಾತಿನಿಧ್ಯ ಕಲ್ಪಿಸಬೇಕು.
ಶ್ರೀನಿವಾಸ್ ಸಣ್ಣಕಿಟ್ಟದಹಳ್ಳಿ
ಯುವಮುಖಂಡರು, ಕಾಡುಗೊಲ್ಲ ಸಮಾಜ, ಹೊಸದುರ್ಗ
+ There are no comments
Add yours