ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡಲು ಬದ್ಧ- ಸಂತೋಷ್ ಲಾಡ್

 

 

 

 

ಚಿತ್ರದುರ್ಗ: ರಾಜ್ಯದಲ್ಲಿ ಅಸಂಘಟಿತ ವಲಯದ ವ್ಯಾಪ್ತಿಯಲ್ಲಿ ಬರುವ ಕಾರ್ಮಿಕರಿಗಾಗಿ ಸೂಕ್ತ ಕಾನೂನು ರೂಪಿಸಿ ಸಾಮಾಜಿಕ ಭದ್ರತೆ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ (Santosh Lad) ಅವರು ಭರವಸೆ ನೀಡಿದರು.

 

 

ಕಾರ್ಮಿಕ ಇಲಾಖೆ ವತಿಯಿಂದ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಮಿಕ ಸಂಘಟನೆಗಳು ಹಾಗೂ ಉದ್ಯಮದಾರರೊಂದಿಗಿನ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಪ್ರಸ್ತುತ ಸುಮಾರು 6500 ಕೋಟಿ ರೂ. ಅನುದಾನ ಲಭ್ಯವಿದ್ದು, ಈ ಅನುದಾನ ಅರ್ಹ ಫಲಾನುಭವಿಗಳ ಬದುಕು ಗಟ್ಟಿಗೊಳ್ಳಲು ಹಾಗೂ ಅವರು ಸ್ವಾಭಿಮಾನದಿಂದ ಜೀವನ ಸಾಗಿಸುವಂತಾಗಲು ಸದ್ಬಳಕೆಯಾಗಬೇಕು.  ಕಟ್ಟಡ ಕಾರ್ಮಿಕರಲ್ಲದವರೂ ಕೂಡ ಸೌಲಭ್ಯದ ಆಸೆಗಾಗಿ ಬೋಗಸ್ ನೊಂದಣಿ ಮಾಡಿಸಿರುವ ಅಂಶ ಎಲ್ಲರಿಗೂ ತಿಳಿದಿದೆ.  ಇಂತಹ ಬೋಗಸ್ ಕಾರ್ಡ್‍ಗಳನ್ನು ಪರಿಶೀಲಿಸಿ ರದ್ದುಪಡಿಸಬೇಕೆಂಬುದು ರಾಜ್ಯದ ಎಲ್ಲ ಕಾರ್ಮಿಕ ಸಂಘಟನೆಗಳ ಒಕ್ಕೊರಲ ಮನವಿಯಾಗಿದೆ.  ಇಂತಹ ಬೋಗಸ್ ನೊಂದಣಿಯನ್ನು ತಡೆಯುವ ಉದ್ದೇಶದಿಂದಲೇ ಜಿಯೋ ಮ್ಯಾಪಿಂಗ್ ತಂತ್ರಾಂಶವನ್ನು ರೂಪಿಸುತ್ತಿದ್ದು, ಮೂರ್ನಾಲ್ಕು ತಿಂಗಳಲ್ಲಿ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕುವ ವ್ಯವಸ್ಥೆ ಮಾಡಲಾಗುವುದು.  ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿನ ಸೌಲಭ್ಯದಡಿ ವಿದ್ಯಾರ್ಥಿ ವೇತನಕ್ಕಾಗಿಯೇ 13 ಲಕ್ಷ ಅರ್ಜಿಗಳು ಬಂದಿವೆ.  ಮದುವೆಯಾಗಿ 07 ವರ್ಷವಾಗಿದ್ದಂತಹವರೂ ಕೂಡ ಮದುವೆ ಧನಸಹಾಯಕ್ಕಾಗಿ ಅರ್ಜಿ ಸಲ್ಲಿಸುತ್ತಾರೆ, ಈ ರೀತಿ ದುರುಪಯೋಗದ ಅನೇಕ ಸಂಗತಿಗಳು ಬೆಳಕಿಗೆ ಬರುತ್ತಿವೆ.  ಕಾರ್ಮಿಕ ಸಂಘಟನೆಗಳು ಕಾರ್ಮಿಕರ ಮಕ್ಕಳಿಗಾಗಿ ಅಂಗನವಾಡಿ, ಶಾಲೆಗಳನ್ನು ಕಟ್ಟಿ ಎಂದು ಬೇಡಿಕೆ ಸಲ್ಲಿಸುತ್ತಾರೆ, ಆದರೆ ಇದು ಕಾರ್ಮಿಕ ಇಲಾಖೆಯ ಕೆಲಸ ಅಲ್ಲ, ಇದಕ್ಕಾಗಿ ಮಂಡಳಿಯ ಹಣ ಖರ್ಚು ಮಾಡುವುದು ಸರಿಯಲ್ಲ ಎಂದರು. ಕಾರ್ಮಿಕರ ಕನಿಷ್ಟ ವೇತನವನ್ನು ಹೆಚ್ಚಿಸಲು ಚಿಂತನೆ ನಡೆಸಿದ್ದು, ನಮ್ಮ ಸರ್ಕಾರ ಬಡವರ ಪರವಾಗಿದ್ದು, ಬಡವರಿಗಾಗಿಯೇ ಯೋಜನೆ ರೂಪಿಸುತ್ತೇವೆ, ಆದರೆ ಸ್ವಲ್ಪ ಸಮಯಾವಕಾಶ ನೀಡಬೇಕು ಎಂದರು.
ಇದನ್ನೂ ಓದಿ: ವಿವಿಧ ನಿಗಮಗಳ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ರಾಜ್ಯದಿಂದ 43 ವಿವಿಧ ಕ್ಷೇತ್ರಗಳು ಹಾಗೂ ಕೇಂದ್ರದ 397 ಕ್ಷೇತ್ರಗಳನ್ನು ಅಸಂಘಟಿತ ಕಾರ್ಮಿಕ ವಲಯವೆಂದು ಪರಿಗಣಿಸಲಾಗಿದೆ.  ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕ ವಲಯ ವ್ಯಾಪ್ತಿಯ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡಲು ಕ್ರಮ ವಹಿಸಲಾಗಿದ್ದು, ಆಟೋ ಚಾಲಕರು, ವಾಣಿಜ್ಯ ವಾಹನಗಳ ವಾಹನ ಚಾಲಕರು, ಗ್ಯಾರೇಜ್‍ಗಳ ಕಾರ್ಮಿಕರು ಸೇರಿದಂತೆ ರಾಜ್ಯದ ಸುಮಾರು 40 ರಿಂದ 50 ಲಕ್ಷ ಜನರಿಗೆ ಸಾಮಾಜಿಕ ಭದ್ರತೆ ಕಲ್ಪಿಸಲು ಯೋಜನೆ ರೂಪಿಸಲಾಗುತ್ತಿದೆ.  ಸಿನಿಮಾ ಮಂದಿರಗಳಲ್ಲಿನ ಕಾರ್ಮಿಕರಿಗೆ ಪ್ರತಿ ಟಿಕೆಟ್‍ಗೆ ಇಂತಿಷ್ಟು ಎಂದು ಸೆಸ್ ಸಂಗ್ರಹಿಸಿ, ಈ ಮೊತ್ತಕ್ಕೆ ಸರ್ಕಾರದ ಹಣವನ್ನೂ ಸೇರಿಸಿ, ಸಿನಿಮಾ ಮಂದಿರ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸಲಾಗುವುದು, ಆಸ್ತಿ ತೆರಿಗೆಯಲ್ಲೂ ಶೇ. 06 ರಷ್ಟು ಕಾರ್ಮಿಕರ ಕಲ್ಯಾಣಕ್ಕೆ ಸೆಸ್ ಸಂಗ್ರಹಿಸಲು ಯತ್ನಿಸಲಾಗುತ್ತಿದ್ದು,  ಹೋಟೆಲ್ ಕಾರ್ಮಿಕರು, ಹಮಾಲರು ಮುಂತಾದ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ದೊರಕಿಸಲು ಸೂಕ್ತ ಕಾನೂನು ರೂಪಿಸಲಾಗುವುದು ಎಂದು ಸಚಿವರು ಹೇಳಿದರು.
ಇದನ್ನೂ ಓದಿ: ಹೊಸ ನ್ಯಾಯಬೆಲೆ ಅಂಗಡಿಗೆ ಅರ್ಜಿ
ಕಟ್ಟಡ ಕಾಮಿಕರ ಸಂಘದ ಸುರೇಶ್ ಬಾಬು ಮಾತನಾಡಿ, ಸಿನಿಮಾ ಚಿತ್ರಮಂದಿರ ಕಾರ್ಮಿಕರಿಗೆ ಯಾವುದೇ ಭದ್ರತೆ ಇಲ್ಲ, ಅದೇ ರೀತಿ ಎಪಿಎಂಸಿ ಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕೂಡ ಸೇವಾ ಭದ್ರತೆ ಇಲ್ಲ, ಸೂಕ್ತ ಕಾನೂನು ತಿದ್ದುಪಡಿಗೊಳಿಸಿ ಸೇವಾಭದ್ರತೆ ಕಲ್ಪಿಸುವಂತೆ ಹಾಗೂ ಸ್ಥಗಿತಗೊಂಡಿರುವ ಸ್ಕಾಲರ್‍ಶಿಪ್ ಬಿಡುಗಡೆ ಮಾಡುವಂತೆ ಕೋರಿದರು.
ಶಫಿ ಉಲ್ಲಾ ಮಾತನಾಡಿ, ಬೋಗಸ್ ಕಾರ್ಡ್ ನೊಂದಣಿ ತಡೆಗಟ್ಟಬೇಕು, ಇಲ್ಲದಿದ್ದರೆ ನಿಜವಾದ ಕಾರ್ಮಿಕರಿಗೆ ಅನ್ಯಾಯವಾದಂತಾಗುತ್ತದೆ.  ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಮಂಡಳಿ ರೂಪಿಸಿ ಗುರುತಿನ ಕಾರ್ಡ್ ನೀಡಬೇಕು ಎಂದರು.
ಗೌಸ್ ಪೀರ್ ಮಾತನಾಡಿ, ಕಟ್ಟಡ ಕಾರ್ಮಿಕರ ವಿವಾಹ ಧನ ಸಹಾಯ ಮೊತ್ತ ಸಮರ್ಪಕವಾಗಿ ಬಿಡುಗಡೆ ಆಗುತ್ತಿಲ್ಲ, ಲ್ಯಾಪ್‍ಟಾಪ್ ನೀಡುವ ಯೋಜನೆಯಡಿ 3500 ಅರ್ಜಿಗಳು ಸ್ವೀಕೃತಗೊಂಡಿದ್ದು, ಕೇವಲ 150 ಜನರಿಗೆ ಮಾತ್ರ ಲ್ಯಾಪ್‍ಟಾಪ್ ನೀಡಲಾಗಿದೆ, ಆದರೆ ಲ್ಯಾಪ್‍ಟಾಪ್ ಯೋಜನೆಯ ಬದಲು ಕಾರ್ಮಿಕರ ಹಿತಕ್ಕಾಗಿ ಬೇರೆ ಯೋಜನೆ ರೂಪಿಸಬಹುದಿತ್ತು, ಕಾರ್ಮಿಕರ ಆರೋಗ್ಯ ಚಿಕಿತ್ಸೆಗಾಗಿ ಜಿಲ್ಲೆಗೊಬ್ಬರು ಡಾಕ್ಟರ್ ನೇಮಿಸಬೇಕು, ಬೋಗಸ್ ಕಾರ್ಡ್‍ಗಳನ್ನು ಗುರುತಿಸಿ, ರದ್ದುಪಡಿಸಬೇಕು ಎಂದು ಮನವಿ ಮಾಡಿದರು.
ಉಳಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಬೋಗಸ್ ಕಾರ್ಡ್‍ಗಳನ್ನು ಸೃಷ್ಟಿಸಿ ಸೌಲಭ್ಯ ದುರುಪಯೋಗ ಪಡಿಸಿಕೊಂಡವರ ಮೇಲೆ ಕ್ರಮ ಕೈಗೊಳ್ಳಬೇಕು, ಇದಕ್ಕೆ ಸಹಕರಿಸಿದಂತಹ ಕಾರ್ಮಿಕ ಸಂಘಟನೆಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು.  ಹಮಾಲಿಗಳಿಗೆ ಕನಿಷ್ಟ ವೇತನ ಜಾರಿಯಾಗಬೇಕು, ಅಲ್ಲದೆ ವಸತಿ ರಹಿತ ಹಮಾಲಿಗಳಿಗೆ ಮನೆ ನೀಡಬೇಕು, ಸ್ಲಂ ಬೋರ್ಡ್ ಮೂಲಕ ಒದಗಿಸಿದ ಮನೆಗಳಿಗೆ ಹಣ ಪಾವತಿಯಾಗಿಲ್ಲ, ಹೆರಿಗೆ ಭತ್ಯೆಯನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುವಂತಾಗಬೇಕು, ವಲಸೆ ಕಾರ್ಮಿಕರಿಗೆ ಈ ಹಿಂದೆ ನೀಡಲಾಗುತ್ತಿದ್ದ ಕೆಎಸ್‍ಆರ್‍ಟಿಸಿ ಉಚಿತ ಬಸ್ ಪಾಸ್ ಅನ್ನು ಸ್ಥಗಿತಗೊಳಿಸಲಾಗಿದ್ದು, ಇದನ್ನು ಪುನರಾರಂಭಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಕಾರ್ಮಿಕ ಇಲಾಖೆ ಆಯುಕ್ತ ಗೋಪಾಲಕೃಷ್ಣ, ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಭಾರತಿ, ಕಾರ್ಮಿಕ ಇಲಾಖೆ ವಲಯದ ಹೆಚ್ಚುವರಿ ಆಯುಕ್ತ ಮಂಜುನಾಥ್, ಕಾರ್ಖಾನೆ ಮತ್ತು ಬಾಯ್ಲರ್ ವಿಭಾಗದ ನಿರ್ದೇಶಕ ಶ್ರೀನಿವಾಸ್, ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸೇರಿದಂತೆ ಇತರ ಅಧಿಕಾರಿಗಳು,  ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ಉದ್ಯಮಿಗಳು ಉಪಸ್ಥಿತರಿದ್ದರು.
[t4b-ticker]

You May Also Like

More From Author

+ There are no comments

Add yours